ಹದಗೆಟ್ಟ ರಸ್ತೆ: ಸಂಚಾರಕ್ಕೆ ಸಂಚಾಕರ

7

ಹದಗೆಟ್ಟ ರಸ್ತೆ: ಸಂಚಾರಕ್ಕೆ ಸಂಚಾಕರ

Published:
Updated:
ಹದಗೆಟ್ಟ ರಸ್ತೆ: ಸಂಚಾರಕ್ಕೆ ಸಂಚಾಕರ

ಸಿಂಧನೂರು: ನಗರದ ಕೋರ್ಟ್ ರಸ್ತೆಯಲ್ಲಿ ದಿನವೂ ಓಡಾಡುವ ಜನ ಅಕ್ಷರಶಃ ಜಿಗುಪ್ಸೆಗೊಂಡಿದ್ದಾರೆ. ಕಾರಣ ಈ ರಸ್ತೆಯ ದುರಾವಸ್ಥೆ. ಸಾಮಾನ್ಯ ದಿನಗಳಲ್ಲೇ ನಡೆದಾಡಲು ಕಷ್ಟವಾಗಿ­ರುವ ಈ ರಸ್ತೆ ಮಳೆಗಾಲದಲ್ಲಿ ತಾಳುವ ಅವಸ್ಥೆ ನಿಜಕ್ಕೂ ರೇಜಿಗೆ ತರಿಸುತ್ತದೆ.ಒಂದುವಾರದಿಂದ ಬಿಟ್ಟುಬಿಡದೆ ಮಳೆಯಾಗುತ್ತಿರು­ವು­ದರಿಂದ ನಗರದ ಬಹುತೇಕ ಒಳ­ರಸ್ತೆ­ಗಳು ಸಂಪೂರ್ಣ ಕೆಸರುಮಯವಾಗಿವೆ. ಆದರೆ ಮಹೆ­ಬೂಬ ಕಾಲೊನಿ, ಸುಟ್ಟ ಏರಿಯಾ ಸೇರಿದಂತೆ ನಾಲ್ಕು ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಕೋರ್ಟ್ ಪಕ್ಕದ ರಸ್ತೆ ಉಳಿದೆಲ್ಲ ರಸ್ತೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗಬ್ಬೆದ್ದಿದೆ.ರಸ್ತೆ ನಡುವೆ ಮೊಣಕಾಲು ಮಟ್ಟದ ದೊಡ್ಡ-ದೊಡ್ಡ ತಗ್ಗುಗಳು ಬಿದ್ದಿದ್ದು ಮಳೆ ಮತ್ತು ಚರಂಡಿ ನೀರು ನಿಂತು ಕಾಲಿಡಲು ಸಹ ಜಾಗವಿಲ್ಲದ ಮಟ್ಟಿಗೆ ಹಾಳಾಗಿದೆ. ಆರ್‌ಜಿಎಂ ಶಾಲೆ, ಜ್ಞಾನಜ್ಯೋತಿ ವಿಜ್ಞಾನ ಕಾಲೇಜು, ಆದಿತ್ಯ ಪದವಿಪೂರ್ವ ಕಾಲೇಜು, ಗಿರಿಜಾ ಮಹಿಳಾ ಕಾಲೇಜಿಗೆ ಹೋಗಲು ಇದೇ ರಸ್ತೆಯನ್ನು ಅವ­ಲಂಬಿ­ಸಿ­ರುವುದರಿಂದ ವಿದ್ಯಾರ್ಥಿಗಳು ಕೆಸರು ಮೆತ್ತಿಸಿಕೊಂಡೆ ಮುಂದೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.ರಸ್ತೆ ಬದಲಿಸಬೇಕಾದರೆ ನಗರ ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಮೂಲಕ ಸುತ್ತುವರಿದು ಹೋಗಬೇಕಾ­ಗಿದೆ. ಬರಿಗಾಲಲಿ ನಡೆಯುವುದಂತೂ ಅಸಾಧ್ಯದ ಮಾತು.ಎಚ್ಚೆತ್ತುಕೊಳ್ಳದ ನಗರಸಭೆ: ಮಳೆ ನಿಂತು 15 ದಿನಗಳಾದರೂ ಬದಲಾ­ಗದ ಈ ರಸ್ತೆಯ ದುಸ್ಥಿತಿಯ ಬಗ್ಗೆ ತೀವ್ರ ಬೇಸರ ಮತ್ತು ಅಸಹಾಯಕತೆಯನ್ನು ಒಟ್ಟೊಟ್ಟಿಗೆ ವ್ಯಕ್ತಪಡಿಸುವ ಸಾರ್ವ­ಜನಿಕರ ವ್ಯಥೆಯ ಬಗ್ಗೆ ನಗರಸಭೆ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.ಕಾರಣ ನಗರಸಭೆಯವರು ಈಗಲಾ­ದರೂ ಎಚ್ಚೆತ್ತು ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಿ ವಿದ್ಯಾರ್ಥಿಗಳು, ಸಾರ್ವ­ಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಕಾಲೇಜು ವಿದ್ಯಾರ್ಥಿ­ಗಳಾದ ಮಲ್ಲಿಕಾ ಚಳ್ಳೂರು, ಉಮೇಶ, ಶಾರದಾ, ಆಸಿಫಾ ಸುಲ್ತಾನ, ಬಸವರಾಜ ಪಿ., ನಾಗರಾಜ, ಮಂಜುನಾಥಗೌಡ ಮತ್ತಿತರರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry