ಹದವಾದ ಭೂಮಿ, ಮಳೆ ಸುರಿಸದ ಮೋಡ

ಶುಕ್ರವಾರ, ಜೂಲೈ 19, 2019
26 °C

ಹದವಾದ ಭೂಮಿ, ಮಳೆ ಸುರಿಸದ ಮೋಡ

Published:
Updated:

ಗೌರಿಬಿದನೂರು:  ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಜಮೀನುಗಳನ್ನು ಹದಗೊಳಿಸಿ ಬಿತ್ತನೆ ಕಾರ್ಯಕ್ಕೂ ಸಿದ್ಧತೆ ನಡೆಸಿದ್ದಾರೆ. ರೈತರ ಮೊಗದಲ್ಲಿ ನಗು ಅರಳಿದೆ. ಆದರೆ ಗೌರಿಬಿದನೂರು ತಾಲ್ಲೂಕಿನ ರೈತರಲ್ಲಿ ಮಾತ್ರ ನಿರಾಶಾಭಾವ ಆವರಿಸಿಕೊಂಡಿದೆ.

 ನೆರೆಯ ತಾಲ್ಲೂಕುಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ತಮ್ಮ ತಾಲ್ಲೂಕಿನಲ್ಲಿ ಮಳೆ ಕೂಡ ಆಗುತ್ತಿಲ್ಲವೆಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.  ಮೇ ತಿಂಗಳಲ್ಲಿ ಸ್ವಲ್ಪ ಮಳೆಯಾದಾಗ ಹರ್ಷಗೊಂಡಿದ್ದ ರೈತರು ಜಮೀನುಗಳಿಗೆ ತೆರಳಿ, ಎರಡು-ಮೂರು ಬಾರಿ ಉಳುಮೆ ಮಾಡಿದ್ದರು. ಕೊಟ್ಟಿಗೆ ಗೊಬ್ಬರ ಜಮೀನಿಗೆ ಚೆಲ್ಲಿ ಬಿತ್ತನೆಗಾಗಿ ಕಾಯುತ್ತಿದ್ದರು. ಆದರೆ ಸಕಾಲಕ್ಕೆ ಮಳೆ ಬಾರದೇ ರೈತರು ಕಂಗಾಲಾಗಿದ್ದಾರೆ.

`ಪಕ್ಕದ ಎಲ್ಲ ತಾಲ್ಲೂಕುಗಳಲ್ಲೂ ಮಳೆಯಾಗಿದೆ. ಆದರೆ ನಮ್ಮ ತಾಲ್ಲೂಕಿನ ಗ್ರಾಮಗಳಲ್ಲಿಯೇ ಮಳೆಯಾಗಿಲ್ಲ. ಭಾನುವಾರ ಸುರಿದ ತುಂತುರು ಮಳೆಯು ಸ್ವಲ್ಪ ಆಶಾಕಿರಣ ಮೂಡಿಸಿತ್ತು. ಆದರೆ ಈಗ ಮಳೆಯಿಲ್ಲದೇ ನಮಗೆ ತುಂಬ ಬೇಸರವಾಗಿದೆ~ ಎಂದು ರೈತರು ಹೇಳಿದರು.`ಭಾನುವಾರ ರಾತ್ರಿ ತುಂತುರು ಮಳೆಯಾಯಿತಾದರೂ ಬಿತ್ತನೆ ಮಾಡುವುದಕ್ಕೆ ಜಮೀನಿನಲ್ಲಿ ಸಾಕಷ್ಟು ತೇವಾಂಶವಿಲ್ಲ.ತಾಲ್ಲೂಕಿನಾದ್ಯಂತ ಬಿತ್ತನೆ ಕಾರ್ಯ ನಡೆದೇ ಇಲ್ಲ. ನೆಲಗಡಲೆ ಬಿತ್ತನೆ ಮಾಡಲು ಬೀಜ ಸುಲಿಯುತ್ತಿದ್ದಾರೆ.

ನೆಲಗಡಲೆ, ತೊಗರಿ, ಅವರೆ,  ಕೆಂಪು ಜೋಳ, ಹುಚ್ಚೇಳು, ರಾಗಿ , ಮೆಕ್ಕೆ ಜೋಳ ಮುಂತಾದವುಗಳನ್ನು ಮಿಶ್ರ ಬೆಳೆಯಾಗಿ ಬಿತ್ತನೆ ಮಾಡುವುದಕ್ಕೆ ಜುಲೈ ಮೊದಲನೇ ವಾರ ಸಕಾಲವಾದದ್ದು.ಆದರೆ ಮಳೆಯೇ ಆಗದೇ ನಮಗೆ ಬಿತ್ತನೆ ಮಾಡಲಿಕ್ಕೆ ಆಗಿಲ್ಲ. ಇನ್ನೂ ಹತ್ತು-ಹದಿನೈದು ದಿನಗಳೊಳಗೆ ಮಳೆಯಾದರೂ ಯಾವುದೇ ರೀತಿಯಲ್ಲೂ ಪ್ರಯೋಜನವಾಗಲ್ಲ.ತಡವಾಗಿ ಬಿತ್ತನೆ ಮಾಡುವುದರಿಂದ ಉತ್ತಮ ಇಳುವರಿ ನಿರೀಕ್ಷಿಸಲು ಆಗುವುದಿಲ್ಲ~ ಎಂದು ರೈತ ಸುರೇಶ್‌ಬಾಬು `ಪ್ರಜಾವಾಣಿ~ಗೆ ತಿಳಿಸಿದರು.`ತಾಲ್ಲೂಕಿನಲ್ಲಿ  ರೈತರು ಬಿತ್ತನೆ ಮಾಡಲು ಜಮೀನುಗಳನ್ನು ಸಿದ್ಧಪಡಿಸಿಕೊಂಡು ಮಳೆಗಾಗಿ ಎದುರು ನೋಡುತ್ತಿದ್ದಾರೆ.  ಮುನಿಸಿಕೊಂಡಿರುವ ಮಳೆರಾಯನ ಓಲೈಕೆಗೆ ಗ್ರಾಮಗಳಲ್ಲಿ ವಿವಿಧ ರೀತಿಯ ಪೂಜೆಗಳನ್ನು ಮಾಡುತ್ತಿದ್ದಾರೆ. ಇತ್ತ ಮಳೆ ಬರುತ್ತಿಲ್ಲ, ಅತ್ತ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ.`ಮನೆಗಳಲ್ಲಿ ಆಹಾರಧಾನ್ಯಗಳು ಖಾಲಿಯಾಗಿದ್ದು, ಜಾನುವಾರುಗಳು ಮೇವು ಇಲ್ಲದೇ ಪರಿತಪಿಸುತ್ತಿವೆ.

ಅಲ್ಪಸ್ವಲ್ಪ ಉಳಿದಿರುವ ಹಣದಲ್ಲೇ ಗಂಜಿ ಮಾಡಿಕೊಂಡು ತಿನ್ನುತ್ತಿದ್ದೇವೆ. ಮೇವು ಬ್ಯಾಂಕ್‌ಗಳು ಸಹ ಸ್ಥಾಪನೆಯಾಗಿಲ್ಲ. ನಮ್ಮ ಜೀವನವೇ ದುರ್ಬರವಾಗಿರುವಾಗ ಜಾನುವಾರುಗಳ ಸಾಕಣೆ ಇನ್ನೂ ಕಷ್ಟಕರವಾಗಿದೆ~ ಎಂದು  ದ್ಯಾವರಹಳ್ಳಿಯ ರೈತ ಮೈಲಾರಪ್ಪ ನೊಂದು ನುಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry