ಸೋಮವಾರ, ಮಾರ್ಚ್ 8, 2021
22 °C

ಹದಿನಾರು ವರ್ಷಗಳ ಬಳಿಕ ಸಿಕ್ಕಿಬಿದ್ದ ಶಂಕಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹದಿನಾರು ವರ್ಷಗಳ ಬಳಿಕ ಸಿಕ್ಕಿಬಿದ್ದ ಶಂಕಿತ

ಬೆಂಗಳೂರು: ಹುಬ್ಬಳ್ಳಿ, ಕಲಬುರ್ಗಿ ಹಾಗೂ ಬೆಂಗಳೂರಿನ ಚರ್ಚ್‌ಗಳಲ್ಲಿ 16  ವರ್ಷಗಳ ಹಿಂದೆ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ನಿಷೇಧಿತ ‘ದೀನ್‌ದಾರ್ ಚನ್ನಬಸವೇಶ್ವರ ಅಂಜುಮನ್ ಸಂಘಟನೆ’ ಸದಸ್ಯ ಶೇಖ್ ಅಮಿರ್ ಅಲಿ (36) ಎಂಬಾತನನ್ನು ಕೊನೆಗೂ ಪತ್ತೆ ಮಾಡಿದ್ದಾರೆ.ಈತನ ಬಂಧನಕ್ಕೆ ನಗರದ 1ನೇ ಎಸಿಎಂಎಂ ನ್ಯಾಯಾಲಯ ಇದೇ ಏಪ್ರಿಲ್ 8ರಂದು ವಾರಂಟ್ ಜಾರಿಗೊಳಿಸಿತ್ತು. ಅಲಿ ಹೈದರಾಬಾದ್‌ನಲ್ಲಿರುವ ಮಾಹಿತಿ ಸಂಗ್ರಹಿಸಿದ ಸಿಐಡಿ ಎಡಿಜಿಪಿ ಸಿ.ಎಚ್.ಪ್ರತಾಪ್‌ರೆಡ್ಡಿ ನೇತೃತ್ವದ ತಂಡ, ಭಾನುವಾರ ಆತನನ್ನು ಬಂಧಿಸಿ ನಗರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.ಸ್ಫೋಟಕ ಪೂರೈಸುತ್ತಿದ್ದ: ‘ಅಲಿಯ ಅಣ್ಣನು ನಲಗೊಂಡ ಜಿಲ್ಲೆಯ ಕ್ವಾರಿಗಳಿಗೆ ಬಂಡೆ ಸಿಡಿಸಲು ಸ್ಫೋಟಕಗಳನ್ನು ಪೂರೈಸುತ್ತಿದ್ದ. ಆತನಿಗೆ ತಿಳಿಯದೆ ಸ್ಫೋಟಕ ಕದಿಯುತ್ತಿದ್ದ ಅಲಿ,  ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ವಿಷಯ ತಿಳಿದುಕೊಂಡ ಪ್ರಕರಣದ ಪ್ರಮುಖ ಆರೋಪಿ ಶೇಖ್ ಹಶೀಂ, ತನಗೂ ಸ್ಫೋಟಕಗಳನ್ನು  ನೀಡುವಂತೆ ಕೋರಿದ್ದ’ ಎಂದು ಚಾರ್ಚ್‌ಶೀಟ್‌ನಲ್ಲಿದೆ.

‘ಅದರಂತೆ 2000ದ ಮೇ ತಿಂಗಳಲ್ಲಿ ನುಜ್ವದ್ ಪ್ರಾಂತ್ಯಕ್ಕೆ ತೆರಳಿದ್ದ ಅಲಿ, ಹಶೀಂನ ಸಹಚರರಾದ ಹಸನ್‌ ಜಾಮಾ, ಷಂಷು ಜಾಮಾ ಹಾಗೂ ಅಬ್ದುಲ್ ಖಾದರ್ ಗಿಲಾನಿ (ಮೂವರೂ ಸೋದರರು) ಎಂಬುವರಿಗೆ ಸ್ಫೋಟಕಗಳನ್ನು ತಲುಪಿಸಿದ್ದ.  ಅವರು ಅಲ್ಲಿನ ‘ಯುಸಿಫಿನಾ’ ಅಪಾರ್ಟ್‌ಮೆಂಟ್‌ ನಲ್ಲಿರುವ ಹಶೀಂನ ಫ್‌್ಲ್ಯಾಟ್‌ನಲ್ಲೇ ಬಾಂಬ್‌ಗಳನ್ನು ತಯಾರಿಸಿದ್ದರು.’‘ಬಳಿಕ ಮೂವರು ಸಹೋದರರು ಏಳು ಬಾಂಬ್‌ಗಳೊಂದಿಗೆ ಜೂನ್‌ 6ರಂದು ಬೆಂಗಳೂರಿಗೆ ಬಂದಿದ್ದರು. ಒಬ್ಬ ನಗರದಲ್ಲೇ ಉಳಿದರೆ, ಇನ್ನೊಬ್ಬ ಹುಬ್ಬಳ್ಳಿಗೆ, ಮತ್ತೊಬ್ಬ ಕಲಬುರ್ಗಿಗೆ ತೆರಳಿದ್ದ. ಈ ಮೂಲಕ ಮೂರು ದಿಕ್ಕುಗಳಲ್ಲಿರುವ ಸಂಘಟನೆಯ ಸದಸ್ಯರಿಗೂ ಬಾಂಬ್‌ಗಳನ್ನು ಪೂರೈಸಿದ್ದರು.’

‘ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದ ಶಂಕಿತರು, ಜೂನ್ 8ರಂದು ಕಲಬುರ್ಗಿಯ ಸೇಂಟ್ ಆನ್ಸ್ ಚರ್ಚ್‌ನಲ್ಲಿ ಹಾಗೂ ಹುಬ್ಬಳ್ಳಿಯ ಕೇಶ್ವಾಪುರದ ಸೇಂಟ್ ಜಾನ್ಸ್‌ ಲೂಥರ್ ಚರ್ಚ್‌ನಲ್ಲಿ ಸ್ಫೋಟಿಸಿದ್ದರು. ಮತ್ತೊಂದು ಗುಂಪು, ಬೆಂಗಳೂರಿನ ಜಗಜೀವನ್‌ರಾಮನಗರದ ಸೇಂಟ್ ಪೀಟರ್ ಪೌಲ್ ಚರ್ಚ್‌ನಲ್ಲಿ ಸ್ಫೋಟಿಸಿತ್ತು. ಮೂರೂ ಸ್ಫೋಟಗಳಲ್ಲಿ ಚರ್ಚ್‌ಗಳ ಕಟ್ಟಡಕ್ಕೆ ಹಾನಿಯಾಗಿದ್ದನ್ನು ಬಿಟ್ಟರೆ, ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ’ ಎಂದು ಚಾರ್ಚ್‌ಶೀಟ್‌ನಲ್ಲಿದೆ.ಅವರೇ ಸತ್ತರು: ‘ಅದೇ ದಿನ ಜಾಕೀರ್, ಸಿದ್ದಿಕಿ ಹಾಗೂ ಎಸ್‌.ಎಂ.ಇಬ್ರಾಹಿಂ ಎಂಬುವರ ಮತ್ತೊಂದು ಗುಂಪು, ಕಾರಿನಲ್ಲಿ ಬಾಂಬ್ ಹಾಗೂ ಸಿಡಿಮದ್ದುಗಳನ್ನು ಮಾಗಡಿ ರಸ್ತೆ ಮಾರ್ಗವಾಗಿ ಹೊತ್ತೊಯ್ಯುತ್ತಿತ್ತು. ಈ ವೇಳೆ ಕಾರಿನಲ್ಲಿದ್ದ ಸ್ಫೋಟಕ ಸ್ಫೋಟಗೊಂಡಿದ್ದರಿಂದ ಜಾಕೀರ್ ಹಾಗೂ ಸಿದ್ದಿಕಿ ಮೃತಪಟ್ಟಿದ್ದರು. ಗಾಯಗೊಂಡಿದ್ದ ಇಬ್ರಾಹಿಂನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಈ ಸಂದರ್ಭದಲ್ಲೇ ಆಂಧ್ರಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರದ ಚರ್ಚ್‌ಗಳಲ್ಲೂ ಸರಣಿ ಸ್ಫೋಟಗಳು ಸಂಭವಿಸಿದ್ದವು. ಪ್ರಕರಣದ ತೀವ್ರತೆ ಅರಿತ ಸರ್ಕಾರ, ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿತ್ತು. ಡಿವೈಎಸ್ಪಿ ವಿ.ಎಸ್.ಡಿಸೋಜಾ ನೇತೃತ್ವದ ತಂಡ, ಇಬ್ರಾಹಿಂ ನೀಡಿದ ಸುಳಿವು ಆಧರಿಸಿ ಅಂಜುಮನ್ ಸಂಘಟನೆಯ 28 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.ಅವರಲ್ಲಿ 22 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ವಿಶೇಷ ನ್ಯಾಯಾಲಯ, ನಾಲ್ವರನ್ನು ಆರೋಪ ಮುಕ್ತಗೊಳಿಸಿದೆ. ಉಳಿದಿಬ್ಬರು ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

ಐವರು ಪಾಕಿಸ್ತಾನದವರು

‘ಈ ಪ್ರಕರಣದಲ್ಲಿ ಪಾಕಿಸ್ತಾನದ ಐವರು ಶಂಕಿತರು ಸೇರಿ ಆರು ಮಂದಿ ತಲೆಮರೆಸಿಕೊಂಡಿದ್ದಾರೆ. ವಿಶೇಷ ತಂಡವು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದೆ. ಅಲಿಯನ್ನು ವಿಚಾರಣೆಗೆ ಒಳಪಡಿಸಿದಾಗ ಒಬ್ಬಾತನ ಹೆಸರು ವಹಾಬ್ ಎಂದು ಗೊತ್ತಾಗಿದೆ’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಏನಿದು ಅಂಜುಮನ್ ಸಂಘಟನೆ

‘19ನೇ ಶತಮಾನದ ಅಂತ್ಯದಲ್ಲಿ ಹಜರತ್ ಮೌಲಾನಾ ಸಿದ್ದಿಕಿ ಎಂಬುವರು  ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಒಗ್ಗೂಡಿ ಸಲು ಪ್ರಯತ್ನಿಸಿದ್ದರು. ರಾಮಾ ಯಣ, ಮಹಾಭಾರತ, ಕುರಾನ್, ವಚನ ಸಾಹಿತ್ಯ, ಪುರಾಣಗಳನ್ನೆಲ್ಲಾ ತಿಳಿದಕೊಂಡಿದ್ದ ಅವರು, ಒಂದು ಹಂತದಲ್ಲಿ ಮುಸ್ಲಿಂ ಧರ್ಮವೇ ಎಲ್ಲ ಧರ್ಮಗಳಿಗೂ ಮೂಲ ಎಂದು ವಾದಿಸಿದ್ದಲ್ಲದೆ, ತಾವು ಚನ್ನಬಸವೇ ಶ್ವರನ ಅವತಾರ ಎಂದೂ ಹೇಳಿಕೊಂಡಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.‘ಕನ್ನಡ ಹಾಗೂ ಉರ್ದು ಭಾಷೆಯಲ್ಲಿ ಹಲವು ಕೃತಿ ರಚಿಸಿದ್ದ ಸಿದ್ದಿಕಿ, 1924ರಲ್ಲಿ ‘ದೀನ್‌ದಾರ್ ಚನ್ನಬಸವೇಶ್ವರ ಅಂಜುಮನ್ ಸಂಘಟನೆ’ ಆರಂಭಿಸಿದ್ದರು. ಮೇಲ್ನೋಟಕ್ಕೆ ಶಾಂತಿ–ಸೌಹಾರ್ದವನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದರೂ, ಸಂಘಟನೆ ಸದಸ್ಯರು ರಹಸ್ಯವಾಗಿ ದೇಶದಲ್ಲಿ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.‘ಕ್ರಮೇಣ ಈ ಸಂಘಟನೆಯ ಉದ್ದೇಶಗಳು ಬದಲಾದವು. ದೇಶದಲ್ಲಿ ಜನಾಂಗೀಯ ದ್ವೇಷ ಬಿತ್ತುವುದು (ನಿಫಾಕ್), ಹಣ ಸುಲಿಗೆ ಮಾಡುವುದು (ಶೆರಿಯಾ) ಹಾಗೂ ಧರ್ಮ ಯುದ್ಧ ಮಾಡುವುದೇ (ಜಿಹಾದ್) ಇದರ ಪ್ರಮುಖ ಧ್ಯೇಯಗಳಾದವು.

‘ಹೀಗಾಗಿ 1948 ರಲ್ಲಿ ಸರ್ಕಾರ ಈ ಸಂಘಟನೆಯನ್ನು ನಿಷೇಧಿಸಿತ್ತು. ಬಳಿಕ ಹೈದರಾಬಾದ್‌ನಲ್ಲಿ ಆಶ್ರಮ ತೆರೆದ ಸಿದ್ದಿಕಿ, 1952ರಲ್ಲಿ ಕೊನೆಯುಸಿರೆಳೆದರು. ತಂದೆಯ ಸಾವಿನ ಬಳಿಕ ಸಿದ್ದಿಕಿ ಪುತ್ರ ಝಿಯಾ ಖಾನ್ ಪಾಕಿಸ್ತಾನಕ್ಕೆ ವಲಸೆ ಹೋದರು. ಈಗಲೂ ಝಿಯಾ ಹಾಗೂ ಅವರ ನಾಲ್ವರು ಪುತ್ರರು ತಂದೆಯ ಜನ್ಮದಿನದಂದು ಆ ಆಶ್ರಮಕ್ಕೆ ಬಂದು ಹೋಗುತ್ತಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.