ಹದಿವಯಸ್ಕರ ಮನಃ ಪರಿವರ್ತನೆಗೆ ಯೋಜನೆ

7

ಹದಿವಯಸ್ಕರ ಮನಃ ಪರಿವರ್ತನೆಗೆ ಯೋಜನೆ

Published:
Updated:

ನವದೆಹಲಿ (ಪಿಟಿಐ): ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಕುರಿತು ಹದಿಹರೆಯದ ಯುವಕರ ಮನದಲ್ಲಿರುವ ಭಾವನೆಗಳನ್ನು ಬದಲಾಯಿಸುವಂತಹ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.ಹೊಸ ಯೋಜನೆಯ ಕುರಿತು ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಕೃಷ್ಣಾ ತಿರತ್, `ಶೀಘ್ರದಲ್ಲಿ ಈ ಯೋಜನೆಯ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ಇಡಲಾಗುತ್ತದೆ' ಎಂದು ಹೇಳಿದ್ದಾರೆ.`ಪ್ರಸ್ತುತ ಹದಿಹರೆಯದ ಯುವತಿಯರ ಸಬಲೀಕರಣಕ್ಕಾಗಿ ಜಾರಿಯಲ್ಲಿರುವ ರಾಜೀವ್‌ಗಾಂಧಿ ಹದಿಹರೆಯದ ಯುವತಿಯರ ಸಬಲೀಕರಣ  (ಆರ್‌ಜಿಎಸ್‌ಇಎಜಿ) ಯೋಜನೆಯ ಮಾದರಿಯಲ್ಲಿಯೇ ಇದನ್ನೂ ರೂಪಿಸಲಾಗುವುದು' ಎಂದರು.ಬಾಲ್ಯದಿಂದ ಯೌವನಕ್ಕೆ ಬದಲಾಗುವ ಸಂದರ್ಭದಲ್ಲಿ ಬಾಲರಿಗೆ ಇಂಥ ಶಿಕ್ಷಣ ಅವಶ್ಯಕತೆ ಇದೆ ಎಂಬುದನ್ನು ಮನಗಂಡಿರುವ ಸರ್ಕಾರ, ಈ ಹೊಸ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.ಲೋಕಸಭಾ ಅಧ್ಯಕ್ಷೆ ಮೀರಾಕುಮಾರ್ ಕಚೇರಿಯಲ್ಲಿ ನಡೆದ ಸಂಸದೆಯರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಕೃಷ್ಣಾ ತಿರತ್, ಹೊಸ ಯೋಜನೆ  ಕುರಿತು ಮಾಹಿತಿ ನೀಡಿದರು.11-18ರ ವಯೋಮಾನದ ಬಾಲಕರನ್ನು ಗುರಿಯಾಗಿಟ್ಟುಕೊಂಡು ಈ ಹೊಸ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಈ ಪ್ರಯತ್ನದಿಂದ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಪ್ಪುಗಾಜು ನಿಷೇಧ: ಭವಿಷ್ಯದಲ್ಲಿ ಇಂತಹ ಕೃತ್ಯ ನಡೆಯದಂತೆ ತಡೆಯಲು ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರಪ್ರಕಟಿಸಿದೆ.

ರಾಜ್ಯಸಭೆಯಲ್ಲಿ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು.ಬಸ್‌ಗಳನ್ನು ರಾತ್ರಿ ವೇಳೆ ಮಾಲೀಕರ ಬಳಿ ಬಿಡಬೇಕು. ಚಾಲಕರು ವಾಹನಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ಛಾಯಾಚಿತ್ರ ಸಹಿತ ಚಾಲಕರ ಗುರುತಿನ ಚೀಟಿ, ಪರವಾನಗಿ ಹಾಗೂ ಮೊಬೈಲ್ ಸಂಖ್ಯೆಯನ್ನು ಬಸ್‌ನಲ್ಲಿ ಪ್ರದರ್ಶಿಸಬೇಕು. ಸಹಾಯವಾಣಿ ಸಂಖ್ಯೆಯನ್ನು ದಪ್ಪ ಅಕ್ಷರಗಳಲ್ಲಿ ಪ್ರದರ್ಶಿಸಬೇಕು. ಪೊಲೀಸರಿಗೆ ರಾತ್ರಿ ವೇಳೆ ಗಸ್ತು ತಿರುಗಲು ಮತ್ತಷ್ಟು ವಾಹನ ನೀಡಬೇಕು ಎಂದು ಸೂಚಿಸಿದರು.ಜಯಾ ಬಚ್ಚನ್, ಟಿ.ಶಿವ, ಡೆರೆಕ್ ಒಬ್ರೈನ್ ಹಾಗೂ ವೆಂಕಯ್ಯ ನಾಯ್ಡು  ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಶಿಂಧೆ ಸರ್ಕಾರ ಸೂಚಿಸಿರುವ ಮಾರ್ಗದರ್ಶಿ ಸೂತ್ರ ಪ್ರಕಟಿಸಿದರು. ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಲೋಕಸಭೆಯಲ್ಲಿ ಮಸೂದೆ ಮಂಡಿಸಲಾಗಿದೆ. ಇಂತಹ ಅಪರಾಧಗಳಿಗೆ ಶಿಕ್ಷೆಯನ್ನು ಜೀವಾವಧಿಯವರೆಗೆ ವಿಸ್ತರಿಸಲು ಅವಕಾಶವಿದೆ ಎಂದರು.ರಾಜಕೀಯ ಬೆರೆಸಬೇಡಿ: ಶೀಲಾ ದೀಕ್ಷಿತ್

ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳಲ್ಲಿ `ರಾಜಕೀಯ ಬೆರೆಸಬೇಡಿ' ಎಂದು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಖಂಡನೆ, ಪ್ರತಿಭಟನೆಗಳು ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, `ಘಟನೆ ಬಗ್ಗೆ ನಮಗೂ ನೋವಿದೆ. ಆದರೆ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ರಾಜಕೀಯ ಬೆರೆಸುವುದು ಬೇಡ' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆ ಕುರಿತು ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿಯವರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಅವರು, `ನಡೆದಿರುವ ಘಟನೆಗೆ ಕಾಂಗ್ರೆಸ್ ಅಧ್ಯಕ್ಷರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅವರಿಗೇ ತಿಳಿದಿರುವಂತೆ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತದೆ. ಅಧ್ಯಕ್ಷರು ಏನು ಸೂಚನೆ ನೀಡಿದ್ದಾರೋ, ಅವೆಲ್ಲವನ್ನು ನಮ್ಮ ಸರ್ಕಾರ ಪಾಲಿಸುತ್ತದೆ. ಹಾಗಾಗಿ ಮುಂದೆ ಇಂಥ ಘಟನೆ ಸಂಭವಿಸುವುದಿಲ್ಲ' ಎಂದು ಭರವಸೆ ನೀಡಿದರು.`ಘಟನೆ ಕುರಿತು ನಿಖರವಾದ ಮಾಹಿತಿಗಳು ಲಭ್ಯವಾಗಿವೆ. ಈ ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯದಲ್ಲಿ ಶೀಘ್ರದಲ್ಲೇ ಇತ್ಯರ್ಥಗೊಳಿಸಲಾಗುವುದು' ಎಂದು ದೀಕ್ಷಿತ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry