ಹನಿಗವನವೂ ಪರಿಣಾಮಕಾರಿ: ಕಂಬಾರ

7

ಹನಿಗವನವೂ ಪರಿಣಾಮಕಾರಿ: ಕಂಬಾರ

Published:
Updated:

ಬೆಂಗಳೂರು:  `ಪದ್ಯವು ಭಾಷೆಯ ಪರಿಶುದ್ಧವಾದ ರೂಪ. ಸಹೃದಯರಿಗೆ ರಸಾನುಭವವನ್ನು ನೀಡುವುದೇ ಸುಮಧುರ ಕಾವ್ಯವಾಗಿದೆ' ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.ಸ್ನೇಹ ಬುಕ್ ಹೌಸ್ ಮತ್ತು ಶುಭದ ಪ್ರಕಾಶನವು ನಗರದ ಯವನಿಕ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜರಗನಹಳ್ಳಿ ಶಿವಶಂಕರ್ ಅವರ `ವಚನ ಧ್ಯಾನ', `ಹೊಳೆ', `ಚಾತಕ' ಪುಸ್ತಕಗಳನ್ನು  ಬಿಡುಗಡೆ ಮಾಡಿ ಅವರು ಮಾತನಾಡಿದರು.`ದೀರ್ಘ ಪದ್ಯಗಳು ಮಾತ್ರ ಗಾಢವಾದ ಅರ್ಥವನ್ನು ನೀಡುತ್ತವೆ ಎಂದು ಹೇಳಲು ಬರುವುದಿಲ್ಲ. ಹನಿಗವನಗಳು ಕೂಡ ದೀರ್ಘ ಪದ್ಯಗಳಂತೆ ಪರಿಣಾಮಕಾರಿಯಾಗಿವೆ. ಸರ್ವಜ್ಞ, ಡಿವಿಜಿ ಮತ್ತು ದಿನಕರ ದೇಸಾಯಿ ಅವರ ಹನಿಗವನಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ' ಎಂದರು.`ಮನರಂಜನೆ, ವಿಡಂಬನೆಯು ಹನಿಗವನಗಳಲ್ಲಿ ಇರುವುದು ಸಾಮಾನ್ಯ. ಆದರೆ, ಜರಗನಹಳ್ಳಿ ಅವರ ಹನಿಗವಿತೆಗಳು ಇವೆರೆಡಕ್ಕಿಂತ ವಿಭಿನ್ನ ಮಾದರಿಯಲ್ಲಿವೆ. ಬದುಕಿನ ತೀವ್ರವಾದ ಗಾಢತೆಯನ್ನು, ಗಂಭೀರವಾದ ಚಿಂತನೆಯನ್ನು ಬೆರೆಸಿ ಹನಿಗವನಗಳನ್ನು ನಮ್ಮ ಮುಂದಿಟ್ಟಿದ್ದಾರೆ' ಎಂದು ಮೆಚ್ಚುಗೆ ಸೂಚಿಸಿದರು.ಲೇಖಕ ಎಚ್.ಎಸ್.ವೆಂಕಟೇಶಮೂರ್ತಿ, `ಕವಿತೆಗಳು ಮಡಿಕೆಗಟ್ಟಬೇಕು, ನೆರಿಗೆಯಾಗಬೇಕು ಆಗ ಸುಂದರವಾಗಿರುತ್ತವೆ. ದೀರ್ಘವಾದ ಪದ್ಯದಲ್ಲಿ ನಮ್ಮನ್ನು ಹಿಡಿದು ನಿಲ್ಲಿಸುವಂತಹ ಎರಡು ಸಾಲುಗಳೇ ಹನಿಗವನಗಳು' ಎಂದರು.`ಜರಗನಹಳ್ಳಿ ಅವರು ಹನಿಗವಿತೆಗಳಲ್ಲಿ ವಾಸ್ತವ ಅಂಶಗಳನ್ನು ಮನತಟ್ಟುವಂತೆ ಹೇಳಿದ್ದಾರೆ. ಅವರ ಹನಿಗವಿತೆಯೊಂದರಲ್ಲಿ `ಆವಗೆಯಲ್ಲಿ ಬೆಂದ ಮಡಕೆಗೆ, ಮನೆಯ ಒಲೆಯಲ್ಲಿಯೂ ಬೇಯುವುದು ತಪ್ಪಲಿಲ್ಲ' ಎಂಬಲ್ಲಿ ಹೆಣ್ಣಿನ ಶೋಷಣೆ ಬವಣೆಯನ್ನು ಸದ್ದಿಲ್ಲದೆ ನಮ್ಮ ಮುಂದೆ ತೆರೆದು ಇಡುತ್ತಾರೆ' ಎಂದು ಅವರು ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry