ಮಂಗಳವಾರ, ಜನವರಿ 28, 2020
29 °C

ಹನಿಗವಿತೆ ಸಪ್ಪೆ, ಹಾಗಾದರೆ ತಿಂದದ್ದು ಬರಿ ಸಿಪ್ಪೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಎನ್ನುತ್ತಾರೆ ಬಹಳ ಜನ

ಹನಿಗವಿತೆಗಳು ಕಾವ್ಯವಲ್ಲ,

ತೆಳು, ಎರಡನೆಯ ಓದಿಗೇ ಸಪ್ಪೆ;

ಹಾಗಾದರೆ ಅವರು ತಿಂದದ್ದು ಬರಿಯ ಸಿಪ್ಪೆ~ಹನಿಗವಿತೆಗಳು ಕೇವಲ ಆ ಕ್ಷಣದ ಹಾಸ್ಯ ಚಟಾಕಿಗಳು ಮಾತ್ರ ಎಂದು ಟೀಕಿಸುವವರಿಗೆ ಕವಿ ಎಚ್. ಡುಂಡಿರಾಜ್ ಹನಿಗವಿತೆಯ ಮೂಲಕವೇ ಕೊಟ್ಟ ಪೆಟ್ಟಿನ ಉತ್ತರ ಇದು.ನಗರದ ನಯನ ಸಭಾಂಗಣದಲ್ಲಿ ಶನಿವಾರ ನಡೆದ `ಮನೆಯಂಗಳದಲ್ಲಿ ಮಾತುಕತೆ~ ಕಾರ್ಯಕ್ರಮದ 130 ನೇ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, `ಹನಿಗವಿತೆಗಳು ಕವಿಯ ಮಿತಿಯಲ್ಲ. ಹನಿಗವಿತೆಗಳ ಮೂಲಕವೂ ಗಂಭೀರ ಚಿಂತನೆಗೆ ತೊಡಗಲು ಸಾಧ್ಯವಿದೆ. ಕುವೆಂಪು, ದಿನಕರ ದೇಸಾಯಿ, ಅಕಬರ ಅಲಿ, ವಿ.ಜಿ.ಭಟ್ ನಂತರದ ಬಿ.ಆರ್. ಲಕ್ಷಣರಾವ್, ಎಚ್. ಎಸ್. ವೆಂಕಟೇಶಮೂರ್ತಿ ಮುಂತಾದ ಮಹತ್ವದ ಕವಿಗಳೂ ಹನಿಗವಿತೆಗಳನ್ನು ರಚಿಸಿದ್ದಾರೆ. ಆದರೆ ನವ್ಯದ ಸಂದರ್ಭದಲ್ಲಿ ಹನಿಗವಿತೆಗಳು ಕೇವಲ ನಗೆ ಚಟಾಕಿಗಳು ಮಾತ್ರ ಎಂದು ಜರೆಯುವವರು ಹೆಚ್ಚಾದರು. ನವ್ಯದ ಸಂದರ್ಭದಲ್ಲಿ ಅರ್ಥವಾಗದ ನವ್ಯ ಕಾವ್ಯದಿಂದ ಬಿಡಿಸಿಕೊಳ್ಳುವ ಪ್ರಯತ್ನವಾಗಿ ನಾನು ಬಂಡಾಯ ಕಾವ್ಯ ರಚನೆಯಲ್ಲಿ ತೊಡಗಿದೆ~ ಎಂದು ತಿಳಿಸಿದರು.`ಕೃಷಿಯನ್ನು ಅಧ್ಯಯನ ಮಾಡಿ, ಬ್ಯಾಂಕ್ ಉದ್ಯೋಗಿಯಾಗಿಯೂ, ಸಾಹಿತಿಯಾದವನು ನಾನು. ಬಾಲ್ಯದಿಂದಲೂ ಸಾಹಿತ್ಯದ ಆಸಕ್ತಿ ಇದ್ದರೂ, ಕೆಲಸದ ಕಾರಣಕ್ಕಾಗಿ ಕೃಷಿ ಪದವಿ ಓದಿದೆ. ಕಾಲೇಜು ದಿನಗಳಲ್ಲಿಯೇ ಸಾಹಿತ್ಯದ ಹುಚ್ಚು ಹತ್ತಿ ನಾಟಕಗಳನ್ನು ರಚಿಸಿದೆ. ರಂಗಭೂಮಿಯಲ್ಲಿ ಸಕ್ರಿಯನಾಗಿದ್ದ ದಿನಗಳಲ್ಲಿ ನಟನೂ ಆಗಿದ್ದೆ.ದೈಹಿಕವಾಗಿ ಕ್ಷೀಣನಾಗಿದ್ದ ನಾನು ಆಟದಲ್ಲಿ ಹಿಂದುಳಿದು ಪದಗಳ ಜೊತೆಗೆ ಆಡಲು ತೊಡಗಿದೆ. ನಾನು ಗಂಭೀರ ಎನ್ನುವಂಥಾ ಕವಿತೆಗಳನ್ನು ಬರೆದಿದ್ದರೂ ಜನರಿಗೆ ಇಷ್ಟವಾಗಿದ್ದು ಹನಿಗವಿತೆಗಳು. ಹೀಗಾಗಿ ನನ್ನನ್ನು ಹನಿಗವಿ ಎಂದೇ ಜನರು ಗುರುತಿಸುತ್ತಾರೆ. ಆದರೆ ನಾನು ಕೇವಲ ಹನಿಗವಿ ಮಾತ್ರ ಅಲ್ಲ~ ಎಂದು ನುಡಿದರು.`ಚಿಕ್ಕಂದಿನಿಂದಲೂ ಮನೆಯಲ್ಲಿ ಸಾಹಿತ್ಯದ ವಾತಾವರಣವಿತ್ತು. ಅಪ್ಪ ಅರ್ಚಕರಾಗಿದ್ದ ಕಾರಣ ಮನೆಯಲ್ಲಿ ಪಾರಾಯಣ, ಮಂತ್ರ ಪಠಣ ಸಾಮಾನ್ಯವಾಗಿತ್ತು. ನಂತರ ಪಿಯುಸಿ ಕಲಿಯಲು ಬೆಂಗಳೂರಿನ ಅಣ್ಣನ ಮನೆಗೆ ಬಂದಾಗ ಇಲ್ಲಿಯ ಸಾಹಿತ್ಯ ವಲಯದಿಂದ ಪ್ರೇರಣೆಗೊಂಡು ಸಾಹಿತ್ಯ ರಚನೆಗೆ ತೊಡಗಿದೆ. ದಿನಕರ ದೇಸಾಯಿ ಅವರ ಧಾಟಿಯಲ್ಲಿ ಚೌಪದಿಗಳ ರಚನೆಯಲ್ಲಿ ತೊಡಗಿದ್ದ ನನ್ನನ್ನು ಭಿನ್ನ ರೀತಿಯಲ್ಲಿ ಬರೆಯಲು ಪ್ರೇರೇಪಿಸಿದವರು ಸುಬ್ರಾಯ ಚೊಕ್ಕಾಡಿಯವರು~ ಎಂದು ಅವರು ತಮ್ಮ ಸಾಹಿತ್ಯ ರಚನೆಯ ಹಿನ್ನೆಲೆಯನ್ನು ನೆನೆಸಿಕೊಂಡರು.`ಪ್ರತಿಯೊಬ್ಬ ಸಾಹಿತಿಗೂ ಸಾಮಾಜಿಕ ಬದ್ಧತೆ ಇರಲೇಬೇಕು. ಎಲ್ಲವೂ ಸಮಾಜಕ್ಕಾಗಿಯೇ ಎಂಬ ಸತ್ಯವನ್ನು ಸಾಹಿತಿಗಳೂ ಅರಿಯಬೇಕು. ತಮ್ಮ ಬರಹ ತಮಗೆ ಮಾತ್ರ ಎಂಬ ಹಲವು ಸಾಹಿತಿಗಳ ಧೋರಣೆ ಸರಿಯಲ್ಲ. ಹನಿಗವಿತೆಗಳ ಬಗ್ಗೆ ಸರಿಯಾದ ಅಭಿಪ್ರಾಯ ಕನ್ನಡದಲ್ಲಿ ಮೂಡದ ಕಾರಣ ಹನಿಗವಿತೆ ಗಂಭೀರ ಪ್ರಕಾರವಲ್ಲ ಎಂದು ಹಲವರು ಅದರಿಂದ ವಿಮುಖರಾದರು. ಹನಿಗವಿತೆಗಳ ಶಕ್ತಿಯನ್ನು ಅರಿತು ಅದರ ಪ್ರಚಾರ ಹೆಚ್ಚಾಗುವ ಕಾರ್ಯಕ್ರಮಗಳು ಆಗಬೇಕು~ ಎಂದರು.ಸಭಿಕರೊಬ್ಬರು ಕೇಳಿದ ತಮ್ಮ ಹೆಸರಿನ ಹಿನ್ನೆಲೆಯನ್ನು ವಿವರಿಸಿದ ಅವರು, `ನನ್ನ ತಂದೆ ಗಣಪತಿಯ ಅರ್ಚಕರಾಗಿದ್ದರು. ಅವರು ಕಾಶಿಯಲ್ಲಿನ ಡುಂಡಿ ಗಣಪತಿಯ ಭಕ್ತರಾಗಿದ್ದ ಕಾರಣಕ್ಕೆ ಅವರು ನನ್ನ ಹೆಸರನ್ನು ಡುಂಡಿರಾಜ್ ಎಂದಿಟ್ಟರು. ಆದರೆ ಅನೇಕರು ನನ್ನನ್ನು ದುಂಡಿರಾಜ್ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. ನಾನು ದುಂಡಗಿಲ್ಲ, ನಾನು ದುಂಡಿರಾಜನೂ ಅಲ್ಲ~ ಎಂದು ಅವರು ಚಟಾಕಿ ಹಾರಿಸಿದರು.`ಪರಿಶ್ರಮ ಹಾಗೂ ಅಧ್ಯಯನ ಮಾತ್ರ ಒಳ್ಳೆಯ ಬರಹಗಾರನನ್ನು ರೂಪಿಸುತ್ತದೆ. ಹೊಸ ಬರಹಗಾರರು ಕೇವಲ ಜನಪ್ರಿಯತೆಯ ಜಾಡು ಹಿಡಿಯುವ ಬದಲು ತಮ್ಮ ಹಿಂದಿನ ಪರಂಪರೆಯನ್ನು ಅರಿತು, ನಂತರ ತಮ್ಮ ಮಾರ್ಗವನ್ನು ರೂಪಿಸಿಕೊಳ್ಳಬೇಕು~ ಎಂದು ಯುವ ಬರಹಗಾರರಿಗೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)