ಹನಿ ನೀರಾವರಿಯಲ್ಲಿ ಹಬ್ಬಿದ ಕಬ್ಬು!

7

ಹನಿ ನೀರಾವರಿಯಲ್ಲಿ ಹಬ್ಬಿದ ಕಬ್ಬು!

Published:
Updated:

ಕೋಲಾರ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಹನಿ ನೀರಾವರಿಯಲ್ಲಿಯೇ ಹಬ್ಬಿದೆ ಕಬ್ಬಿನ ಬೆಳೆ. ಸಹಸ್ರಾರು ಕೆರೆಗಳೆಲ್ಲ ಬಹುತೇಕ ಬತ್ತಿದ್ದು, ಅಂತರ್ಜಲ ಸಾವಿರಾರು ಅಡಿಗೆ ಕುಸಿದಿರುವ ಜಿಲ್ಲೆಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಯೂ ಕಬ್ಬು ಬೆಳೆಯಬಹುದು ಎಂಬುದನ್ನು ಪಾರ್ಶ್ವಗಾನಹಳ್ಳಿಯ ರೈತ ಕುಟುಂಬವೊಂದು ಮಾಡಿ ತೋರಿಸಿದೆ.ಮಾವಿನ ಬೇರಿಗೆ ಬಾಟಲಿಯಲ್ಲಿ ನೀರು ಹನಿಸುವ ಪದ್ಧತಿಯನ್ನು ಅನುಸರಿಸುವ ರೈತರ ಪಡೆಯೂ ಇತ್ತೀಚೆಗೆ ತಾಲ್ಲೂಕಿನ ನೆನಮನಹಳ್ಳಿಯಲ್ಲಿ ಹುಟ್ಟಿಕೊಂಡಿದೆ. ಈಗ ಆ ಸಾಲಿಗೆ ಪಾರ್ಶ್ವಗಾನಹಳ್ಳಿ ಸೇರಿಕೊಂಡಿದೆ.

 

ಹನಿ ಹನಿ ನೀರನ್ನೂ ಲೆಕ್ಕಾಚಾರ ಮಾಡಿ ಬೆಳೆದ ಕಬ್ಬು ಕಂಗೊಳಿಸುತ್ತಿದೆ ಎಂಬುದೇ ವಿಶೇಷ. ನೀರು ಹಾಯಿಸಿ ಬೆಳೆದ ಕಬ್ಬಿಗಿಂತಲೂ ಎತ್ತರ ಮತ್ತು ಬಲಿಷ್ಠವಾದ 12-13 ಅಡಿಯ ಕಬ್ಬಿನ ತೋಟ ಸುತ್ತಮುತ್ತಲಿನ ಹಳ್ಳಿಗರನ್ನು ಚಕಿತಗೊಳಿಸುತ್ತಿದೆ.ಜಿಲ್ಲೆಯ ಬಹಳಷ್ಟು ರೈತರು ನೀರಿನ ಕೊರತೆಯ ಬಗ್ಗೆ ದೂರು- ದುಮ್ಮಾನಗಳನ್ನು ಹೇಳಿ ವಿಷಾದಮುಖಿಗಳಾಗುತ್ತಿರುವ ಹೊತ್ತಿನಲ್ಲೆ `ಒಂದೊಂದು ಹನಿಯೂ ಮುಖ್ಯ~ ಎಂದು ಭಾವಿಸಿ ಅದನ್ನು ರೈತ ಸಹೋದರರಾದ ಕೆಂಪಣ್ಣ, ಮೆಣಸಪ್ಪ, ರಾಮಪ್ಪ ಸದ್ಬಳಕೆ ಮಾಡಿಕೊಂಡಿದ್ದಾರೆ.ಹಳ್ಳಿಯ ಸುತ್ತಮುತ್ತ ಇರುವ ತಮ್ಮ 30 ಎಕರೆ ಜಮೀನಿನಲ್ಲಿ ಕಬ್ಬಿನ ಜೊತೆಗೆ ಆಲೂಗೆಡ್ಡೆ, ಟೊಮೆಟೊ, ಹೂ ಕೋಸು, ಹಿಪ್ಪುನೇರಳೆ, ಮಾವು ಬೆಳೆಯುತ್ತಿದ್ದಾರೆ. ಅವರಿಗೆ ಸೇರಿದ ಕೊಳವೆ ಬಾವಿಗಳೂ ಆಶಾದಾಯಕವಾಗೇನಿಲ್ಲ.ಆದರೂ, ಹೊಸ ಪ್ರಯೋಗವಾಗಿ 10 ಗುಂಟೆಯಷ್ಟು ಜಮೀನಿನಲ್ಲಿ 10 ತಿಂಗಳ ಹಿಂದೆಯೇ ಹನಿ ನೀರಾವರಿ ಪದ್ಧತಿಯಲ್ಲಿ ಕಬ್ಬನ್ನು ನಾಟಿ ಮಾಡಿದ್ದರು. ಸುಮಾರು 2 ಕಿಮೀ ದೂರದಲ್ಲಿರುವ ಕೊಳವೆ ಬಾವಿಯಿಂದ ನೀರು ಹನಿಸಿದ್ದರು. 10 ವರ್ಷದಿಂದಲೂ ಕಟ್ಟಿದ ನೀರಿನಲ್ಲಿ (ನೀರನ್ನು ನಿಲ್ಲಿಸಿ) ಕಬ್ಬನ್ನು ಬೆಳೆದು ಅವರಿಗೆ ಸಾಕಾಗಿತ್ತು. ಆದರೂ ಕಬ್ಬು ಬೆಳೆಯುವುದನ್ನು ನಿಲ್ಲಿಸಬಾರದು ಎಂಬ ಅವರ ನಿರ್ಧಾರಕ್ಕೆ ನೆರವಾಗಿದ್ದು ಹನಿ ನೀರಾವರಿ ಪದ್ಧತಿ.`ನಿಲ್ಲಿಸಿದ ನೀರು ಬೇರಿಗೆ ಇಳಿಯುವುದು ನಿಧಾನ. ಹಾಕಿದ ನೀರೆಲ್ಲವೂ ಬೇರಿಗೆ ಹೋಗುವುದೂ ಇಲ್ಲ. ಆದರೆ ಹನಿ ನೀರಾವರಿಯಲ್ಲಿ ಲೆಕ್ಕಾಚಾರವಾಗಿ ನೀರನ್ನು ಉಳಿಸಬಹುದು, ಬಳಸಬಹುದು. ಏಕೆಂದರೆ ಇದರಲ್ಲಿ ನೀರೆಲ್ಲವನ್ನು ಬೇರು ಹೀರಿಕೊಳ್ಳುತ್ತದೆ~ ಎಂಬುದು ಹಿರಿಯರಾದ ಕೆಂಪಣ್ಣನವರ ಅನುಭವದ ನುಡಿ.`ನಾಟಿ ಮಾಡಿದ ಹದಿನೈದೇ ದಿನಕ್ಕೆ ಮೊಳಕೆ ಸಲೀಸಾಗಿ ಬಂತು. ನೀರು ಕಟ್ಟಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ನೆಲ ಮೆತ್ತಗಾಗಿ ಕುಸಿಯುತ್ತಿತ್ತೇ ಹೊರತು ಮೊಳಕೆ ಬೇಗ ಬರುತ್ತಿರಲಿಲ್ಲ. ಆದರೆ ಈ ಬಾರಿ ಹಾಗೆ ಆಗಲಿಲ್ಲ~ ಎಂದು ಅವರ ಸಹೋದರ ಮೆಣಸಪ್ಪ ಹೇಳುತ್ತಾರೆ.ನೀರು ಕಟ್ಟಿ ಬೆಳೆಸುತ್ತಿದ್ದಾಗ ಬೇರು ವಿಪರೀತ ಆಳಕ್ಕೆ ಹೋಗುತ್ತಿತ್ತು. ಪರಿಣಾಮವಾಗಿ ಕಬ್ಬು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ. ಆದರೆ ಈ ಬಾರಿ ಇಷ್ಟೊಂದು ಎತ್ತರ, ದಪ್ಪ ಕಬ್ಬು ಬೆಳೆಯುತ್ತದೆ ಎಂದು ನಿರೀಕ್ಷಿಸಿಯೇ ಇರಲಿಲ್ಲ ಎಂದು ಮತ್ತೊಬ್ಬ ಸಹೋದರ ರಾಮಪ್ಪ ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸುತ್ತಾರೆ.ನಿರೀಕ್ಷೆ ಮೀರಿ ಬಲಿಷ್ಠವಾಗಿ, ಎತ್ತರವಾಗಿ ಬೆಳೆದ ಕಬ್ಬಿನ ಬೆಳೆ ನೆಲ ಮಟ್ಟಕ್ಕೆ ಬಾಗಿದೆ. ಹೀಗಾಗಿ ಈ ಸಹೋದರರು ಎರಡು ದಿನ ಶ್ರಮಪಟ್ಟು ಕೋಲುಗಳನ್ನು ಕಟ್ಟಿ ಅವುಗಳನ್ನು ದಾರದಿಂದ ಕಬ್ಬಿಗೆ ಬಿಗಿದು ಎತ್ತಿ ನಿಲ್ಲಿಸಿದ್ದಾರೆ. ಕಬ್ಬು ಬೆಳೆಸಲು ತಿಪ್ಪೆಯ ಗೊಬ್ಬರವನ್ನಷ್ಟೇ ಬಳಸಿದ್ದಾರೆ ಎಂಬುದೂ ವಿಶೇಷ.

 

ಸುಮಾರು 80 ಕುರಿ ಮತ್ತು 5 ಹಸುಗಳ ಗೊಬ್ಬರದಿಂದ ಕಬ್ಬು ಫಲವತ್ತಾಗಿ ಹಬ್ಬಿ ನಿಂತಿದೆ. ಶೀಘ್ರ ಕಟಾವು ಮಾಡಲು ಸಿದ್ಧತೆ ನಡೆದಿದೆ. ಸುಮಾರು 15 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಹೆಚ್ಚು ಲಾಭದ ನಿರೀಕ್ಷೆಯೂ ಅವರಲ್ಲಿದೆ.ಆಲೂಗೆಡ್ಡೆ, ಹಿಪ್ಪುನೇರಳೆ ಸೇರಿದಂತೆ ಕೆಲವು ಬೆಳೆಗಳನ್ನು ಈ ಸಹೋದರರು 2 ವರ್ಷದಿಂದ ಹನಿ ನೀರಾವರಿ ಪದ್ಧತಿಯಲ್ಲೆ ಬೆಳೆಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹನಿ ನೀರಾವರಿ ಬಳಸಿ ಬೆಳೆದ ಕಬ್ಬು ಅವರಲ್ಲಿ ಸಂತಸ ಮೂಡಿಸಿದೆ. `ಹನಿ ನೀರಾವರಿಯೇ ಈ ಕಾಲಕ್ಕೆ ಬೆಸ್ಟು~ ಎಂದು ಈ ಸಹೋದರರು ಒಕ್ಕೊರಲಿನಲ್ಲಿ ಹೇಳುತ್ತಿದ್ದಾರೆ.

ಅವರ ಸಂಪರ್ಕಕ್ಕೆ: 97419 02640 (ರಾಮಪ್ಪ), 94810 56444 (ಕೆಂಪಣ್ಣ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry