ಮಂಗಳವಾರ, ಮೇ 11, 2021
20 °C

ಹನಿ ನೀರಾವರಿಯಲ್ಲೆ ಹಲವು ಬೆಳೆ

ವಿಶೇಷ ವರದಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನೀರಿನ ಸಮರ್ಥ ಬಳಕೆ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮಾದರಿಯನ್ನು ಅರಿಯಬೇಕಾದರೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕಕಲ್ಲಹಳ್ಳಿಗೆ ಬರಬೇಕು.ಹಳ್ಳಿಯ ತಮ್ಮ 6 ಎಕರೆ 30 ಗುಂಟೆ ಜಾಗದಲ್ಲಿ 50ರ ಹರೆಯದ ಟಿ.ಸಂಪತ್‌ಕುಮಾರ್ ವೈವಿಧ್ಯಮಯ ವ್ಯವಸಾಯ ಮಾಡು ತ್ತಿದ್ದಾರೆ. ಹನಿ ನೀರಾವರಿ ಪದ್ಧತಿಯೇ ಅಲ್ಲಿನ ಜೀವಾಳ.ಜೊತೆಗೆ ಸಾವಯವ ಪದ್ಧತಿಯ ಸಾರಥ್ಯವಿದೆ. ಬಾಳೆ, ಟೊಮೆಟೊ, ಸೂರ್ಯ ಕಾಂತಿ, ತೊಗರಿ, ರಾಗಿ, ಹಿಪ್ಪುನೇರಳೆ ಕೃಷಿ ನಾಲ್ಕಕ್ಕೂ ಹೆಚ್ಚು ವರ್ಷದಿಂದ ನಡೆಯುತ್ತಿದೆ.2 ಎಕರೆಯಲ್ಲಿ ಬೆಳೆದ ಬಾಳೆಯ ನಡುವೆ ಈಗ ಮಾವು ನಾಟಿ ಮಾಡಿದ್ದಾರೆ. ನುಗ್ಗೆ, ಗೆಣಸೂ ಬೆಳೆದಿದ್ದಾರೆ. ಅದಕ್ಕೂ ಮೊದಲು ಅಲ್ಲಿ ನೆಲಗಡಲೆ ಬೆಳೆಯಲಾಗಿತ್ತು. ಬಾಳೆ ಸಸಿ ತರಲು ಹೊಸೂರಿಗೆ ಹೋದಾಗ, ಸಾವಯವ ಪದ್ಧತಿ ಯಲ್ಲಿ ಬಾಳೆ ಬೆಳೆಯುವುದು ಕಷ್ಟ ಎಂದು ವ್ಯಾಪಾರಿಗಳು, ಇತರೆ ರೈತರು ಹೇಳಿದ್ದರು.ಬಾಳೆ ಗೊನೆ ಬಿಡುವುದಿಲ್ಲ ಎಂಬ ಮಾತೂ ಭಯ ಮೂಡಿಸಿತ್ತು. ಆದರೆ ಸಂಪತ್‌ಕುಮಾರ್ ಜಿ 9 ತಳಿಯ ಸಸಿಯನ್ನು ಬಿತ್ತಿದರು. ಮೊದಲನೇ ಕೊಯ್ಲಿನಲ್ಲಿ 30 ಟನ್ ಬಾಳೆ ದೊರಕಿತ್ತು! 3ನೇ ಕಟಾವಿನ ಹೊತ್ತಿಗೆ ಇನ್ನೂ ಹೆಚ್ಚಾಗಿದೆ.ಬಾಳೆ ತೋಟದ ಸುತ್ತಲೂ ಅವರು ದೊಡ್ಡಹುಲ್ಲು ಬೆಳೆಸಿದ್ದಾರೆ. ತೋಟದ ಅಂಚಿನಲ್ಲೆ ಬೃಹದಾಕಾರವಾಗಿ ಬೆಳೆಯುವ ಈ ಹುಲ್ಲು ಬೇರೆ ಗಿಡ, ಗರಿಕೆ ಹುಲ್ಲನ್ನು ತೋಟ ದೊಳಗೆ ಪ್ರವೇಶಿಸಲು ಬಿಡುವುದಿಲ್ಲ. ಇದ ರಕ್ಷಣೆಗೆ; ಮತ್ತೆ ಅದೇ ಹುಲ್ಲು ಮೇವಿಗೂ ಆಗುತ್ತದೆ. ಇದು ದೂರದೃಷ್ಟಿಯ ಫಲ.ತೋಟದ ಪಕ್ಕದ ಜಮೀನಿನಲ್ಲಿ ಅವರು ಬೆಳೆಸಿರುವ ಮೇವಿನ ಯಾವ ಕಡ್ಡಿಯನ್ನೂ ಬಿಡದೆ ಅವರ ಹಸುಗಳು ಮೇಯುತ್ತವೆ. ರಾಸಾಯನಿಕ ಬಳಸಿ ಬೆಳೆದ ಮೇವಿನ ಕಡ್ಡಿಗಳು ಗಟ್ಟಿಯಾಗಿರುತ್ತವೆ, ಆದರೆ ಸಾವಯವ ಪದ್ಧತಿಯಲ್ಲಿ ಬೆಳೆದ ಮೇವಿನ ಕಡ್ಡಿಗಳು ಹಸುಗಳಿಗೆ ರುಚಿಯಾಗಿರುತ್ತವೆ ಎಂಬುದು ಸಂಪತ್‌ಕುಮಾರ್ ಅವರ ನುಡಿ.

4 ನಾಟಿ ಹಸು, 1 ಎಮ್ಮೆಯನ್ನು ಸಾಕಿದ ಅವರು ನಾಟಿ ಹಸು ಗಳಿಗೆ ಹಿಂಡಿ, ಬೂಸ ಕೊಡುವುದಿಲ್ಲ. ಸಮೃದ್ಧಿ ಹಸಿರುಮೇವೇ ಅವಕ್ಕೆ ಪ್ರಮುಖ ಆಹಾರ.1.5 ಎಕರೆಯನ್ನು ಅವರು ಅರಣ್ಯ ವನ್ನಾಗಿಸಿದ್ದಾರೆ. ಅಲ್ಲಿ ಟೀಕ್, ಸಿಲ್ವರ್ ಓಕ್, ಹುಣಿಸೆ, ನೇರಳೆ, ಹೊಂಗೆ, ಬೇವು,ಜಾಲಿ,. ಊವರ್ಚಿ ಮರಗಳನ್ನು ಬೆಳೆಸಿದ್ದಾರೆ. ಇಡೀ ತೋಟದ ಸುತ್ತ ಅಲ್ಲಲ್ಲಿ ಬಿದಿರನ್ನು ಬೆಳೆಯ ಲಾಗಿದೆ.  2 ಎಕರೆಯಲ್ಲಿ ವಿ 1 ಹಿಪ್ಪು ನೇರಳೆ ತಳಿ ಬೆಳೆದಿದೆ. ಅವರೇ ರೇಷ್ಮೆ ಗೂಡನ್ನೂ ತಯಾರಿ ಸುತ್ತಾರೆ.

ಮತ್ತೊಂದೆಡೆ, ಒಂದೂ ಕಾಲು ಎಕರೆಯಲ್ಲಿ ಸೂರ್ಯಕಾಂತಿ ಬೆಳೆ ಹರಡಿಕೊಂಡಿದೆ. 20 ಕ್ವಿಂಟಾಲ್‌ಗಿಂತಲೂ ಹೆಚ್ಚು ತೂಗುವ ಸೂರ್ಯಕಾಂತಿಯನ್ನು ಕೊಳ್ಳಲೆಂದೇ ಬಾಗಲಕೋಟೆ, ರಾಯಚೂರಿನಿಂದ ವ್ಯಾಪಾರಿಗಳು ಸಂಪತ್‌ಕುಮಾರ್ ಮನೆಗೆ ಬರುತ್ತಾರೆ. 1 ಎಕರೆ 16 ಗುಂಟೆಯಲ್ಲಿ ತೊಗರಿಯನ್ನು ಬೆಳೆದಿದ್ದಾರೆ.2 ಬಾವಿ : ಇವೆಲ್ಲ ಸಾಧ್ಯವಾಗಿರುವುದು ಹನಿ ನೀರಾವರಿ ಪದ್ಧತಿಯಿಂದ ಎಂಬುದು ವಿಶೇಷ. ಜಮೀನಿನಲ್ಲಿರುವ ಎರಡು ಕೊಳವೆ ಬಾವಿಗಳ ಪೈಕಿ ಒಂದರಲ್ಲಿ 140 ಅಡಿಯಲ್ಲಿ ನೀರು ದೊರಕುತ್ತಿದೆ. ಮತ್ತೊಂದರಲ್ಲಿ 800 ಅಡಿ ಆಳಕ್ಕೆ ನೀರು ಇಳಿದಿದೆ. ದೊರಕುವಷ್ಟು ನೀರನ್ನೆ ನೆಚ್ಚಿಕೊಂಡ ಅವರು, ಸಹಾಯಧನ ಸೌಲಭ್ಯವನ್ನು ಪಡೆದು ಇಡೀ ಜಮೀನಿನಲ್ಲಿ ಹನಿನೀರಾವರಿ ಪದ್ಧತಿಯನ್ನು ಅಳವಡಿಸಿದ್ದಾರೆ.ಸಾವಯವ: ಅವರದು ಸಂಪೂರ್ಣ ಸಾವ ಯವ ಕೃಷಿ. ರಾಸಾಯನಿಕದ ಬದಲು ಅವರು ಬಳಸುತ್ತಿರುವುದು ಜೀವಾಮೃತ, ಘನ ಜೀವಾ ಮೃತ. ಅದರ ಜೊತೆಗೆ ವರ್ಷಕ್ಕೆ ಕನಿಷ್ಠ 20 ಟನ್ ಕೊಟ್ಟಿಗೆ ಗೊಬ್ಬರ ಮತ್ತು 10 ಟನ್ ಕಾಂಪೋಸ್ಟ್ ಗೊಬ್ಬರವನ್ನು ಬಳಸುತ್ತಾರೆ. ಡ್ರಂ ಸೀಡರ್‌ನಿಂದ ಬತ್ತ ಮತ್ತು ರಾಗಿ ಬಿತ್ತನೆ ಮಾಡುತ್ತಾರೆ. `ಇದೆಲ್ಲದ್ದರ ಪರಿಣಾಮವಾಗಿ ನಮ್ಮ ಜಮೀನಿನ ಫಲವತ್ತತೆ, ಮಣ್ಣಿನ ಗುಣಮಟ್ಟ ಹೆಚ್ಚಾಗಿದೆ.ಲಘು ಪೋಷ ಕಾಂಶಗಳು, ಎರೆಹುಳು ಅಭಿವೃದ್ಧಿ ಯಾಗಿವೆ. ಮಳೆ ನೀರು ವ್ಯರ್ಥವಾಗುವುದಿಲ್ಲ. ಕಸ ಕಡ್ಡಿಯನ್ನು ಹೊರಹಾಕದೆ ಹೊದಿಕೆ ಮಾಡುವುದರಿಂದ ಮಣ್ಣಿನ ತೇವಾಂಶವೂ ಒಣಗುವುದಿಲ್ಲ~ ಎನ್ನುತ್ತಾರೆ ಅವರು.ಇದೆಲ್ಲದ್ದರ ಜೊತೆಗೆ ಅವರು ಅಡುಗೆಗಾಗಿ ಗೋಬರ್ ಅನಿಲ ಘಟಕವನ್ನೂ ಕೂಡ ಮನೆ ಮುಂದೆ ಸ್ಥಾಪಿಸಿಕೊಂಡಿರುವುದು ವಿಶೇಷ.ಮನೆ ಬಳಕೆಯ ನೀರನ್ನೆ ಬಳಸಿ ಅವರು ಮನೆಯ ಅಂಗಳದಲ್ಲಿ ಅವರು 2 ಅಡಿಕೆ ಮರ, ಏಲಕ್ಕಿ ಗಿಡ, ಕರಿಬೇವು, ದಾಳಿಂಬೆ ಗಿಡಗಳನ್ನು ಕೂಡ ಬೆಳೆದಿದ್ದಾರೆ. 

ಅವರ ಮೊಬೈಲ್ ಸಂಖ್ಯೆ 9449161154 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.