ಹನಿ ನೀರಿಗೂ ಇಲ್ಲಿ ಹಾಹಾಕಾರ

7

ಹನಿ ನೀರಿಗೂ ಇಲ್ಲಿ ಹಾಹಾಕಾರ

Published:
Updated:
ಹನಿ ನೀರಿಗೂ ಇಲ್ಲಿ ಹಾಹಾಕಾರ

ಚನ್ನಪಟ್ಟಣ:  ಒಂದೆಡೆ ಚನ್ನಪಟ್ಟಣ ಉಪ ಚುನಾವಣೆಯ ಪ್ರಚಾರದ ಕಾವು ತಾರಕಕ್ಕೇರುತ್ತಿದ್ದರೆ, ಇತ್ತ ನೆತ್ತರು ಸುಡುವ ಬಿಸಿಲು, ಮೈಯೆಲ್ಲ ತೊಯ್ಯಿಸುವ ಬೆವರಿನ ಹಿಂಸೆಯ ನಡುವೆ ತಾಲ್ಲೂಕಿನ ಸಂತೆಮೊಗೇನಹಳ್ಳಿ ಗ್ರಾಮಸ್ಥರು ಕುಡಿವ ನೀರಿಗಾಗಿ ಪರದಾಡುತ್ತಿದ್ದಾರೆ. ಹನಿ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ.ಗ್ರಾಮದಲ್ಲಿ 500 ಮನೆಗಳಿವೆ. 1,550 ಮತದಾರರನ್ನು ಹೊಂದಿರುವ ಈ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕೊರೆಯಿಸಿರುವ 6 ಬೋರ್‌ವೆಲ್‌ಗಳು ವಿಫಲವಾದುದೇ ನೀರಿನ  ಸಮಸ್ಯೆ ತೀವ್ರಗೊಳ್ಳುವುದಕ್ಕೆ ಪ್ರಮುಖ ಕಾರಣ. ಜೊತೆಗೆ ಅಂತರ್ಜಲ ಮಟ್ಟ ಸಹ ಇಲ್ಲಿ ಕುಸಿದಿದೆ. ಹೀಗಾಗಿ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 800ರಿಂದ 900 ಅಡಿಗಳವರೆಗೂ ಕೊರೆದರೂ ನೀರು ಸಿಗುತ್ತಿಲ್ಲ.ಈಗ ಗ್ರಾಮಕ್ಕೆ ಮೋಹನ್‌ಕುಮಾರ್ ಹಾಗೂ ಎಂ.ಎನ್.ಆನಂದಸ್ವಾಮಿ ಅವರ ತೋಟದ ಬೋರ್‌ವೆಲ್‌ಗಳನ್ನೇ ಕುಡಿವ ನೀರಿಗಾಗಿ ಗ್ರಾಮ ಆಶ್ರಯಿಸಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆ ಗ್ರಾಮಸ್ಥರು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಗ್ರಾಮಸ್ಥರು ಇಷ್ಟೆಲ್ಲಾ ನೀರಿನ ಬವಣೆ ಎದುರಿಸುತ್ತಿದ್ದರು ಇಲ್ಲಿನ ಜನ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಸಮಸ್ಯೆ ಬಗೆಹರಿಸಿಕೊಡುವ ಪ್ರಯತ್ನಕ್ಕೆ ಕೈಹಾಕಿಲ್ಲ.ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಈ ಊರಿಗೆ ಇದುವರೆಗೂ ಯಾವೊಬ್ಬ ಪಕ್ಷದ ಅಭ್ಯರ್ಥಿಗಳು ಮತಯಾಚನೆಗೆ ಕಾಲಿರಿಸಿಲ್ಲ. ನೀರಿಗಾಗಿ ಹಾಹಾಕಾರ ಪಡುತ್ತಿರುವ ಈ ಜನತೆಯ ಆಕ್ರೋಶದ ಉರಿಗೆ ಅವರು ಸಹ ಹೆದರಿ ಸುಮ್ಮನಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಕೇಳಲು ಬರುತ್ತಿರುವ ಮುಖಂಡರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡು ವಾಪಸ್ಸು ಕಳುಹಿಸಿದ್ದಾರೆ.ನೀರು ಸಿಗದೆ ರೋಸಿಹೋಗಿರುವ ಗ್ರಾಮಸ್ಥರ ಆಕ್ರೋಶ ಮುಗಿಲು ಮುಟ್ಟಿದೆ. ‘ನಮ್ಮ ಸಮಸ್ಯೆ ಬಗೆಹರಿಸದೆ ಓಟು ಕೇಳೋಕೆ ಯಾರಾದರು ಬಂದರೆ ಗ್ರಹಚಾರ ಬಿಡಿಸ್ತೀವಿ ಸ್ವಾಮಿ’ ಅನ್ನುತ್ತಾರೆ ಗ್ರಾಮಸ್ಥೆ ನಿಂಗಮ್ಮ. ತೋಟದಲ್ಲಿನ ಮುಳ್ಳು, ಗಿಡಗುಂಟೆಗಳನ್ನು ತುಳಿಯುತ್ತಾ ಅಷ್ಟು ದೂರದಿಂದ ನೀರು ಹೊತ್ತು ತರುತ್ತಿರುವುದರ ಸಂಕಟದ ಸಿಟ್ಟು ನಿಂಗಮ್ಮನವರ ಮಾತಿನಲ್ಲಿ ಅಡಕವಾಗಿದೆ. ನೀರಿನ ಬವಣೆ ಅವರ ಮನಸ್ಸಿನಲ್ಲಿ ಆಕ್ರೋಶದ ಉರಿ ಹೊತ್ತಿಸಿದೆ.ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗ್ರಾಮದ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸ್ವಲ್ಪ ಕೂಡ ಕಾಳಜಿ ತೋರಿಸುತ್ತಿಲ್ಲ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಅವರ ಆಕ್ರೋಶದ ಕಿಚ್ಚು ಸಿಡಿಯುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಆಕ್ರೋಶ ಸ್ಫೋಟಗೊಳ್ಳುವ ಮುನ್ನ ಸಮಸ್ಯೆ ಬಗೆಹರಿಸದಿದ್ದಲ್ಲಿ ಜನಪ್ರತಿನಿಧಿಗಳನ್ನು ಗ್ರಾಮಸ್ಥರು ಅದ್ಯಾವ ಪರಿ ತರಾಟೆಗೆ ತೆಗೆದುಕೊಂಡು ಬೆವರಿಳಿಸಿ ಕಳಿಸುತ್ತಾರೋ ಎಂಬುದು ಸ್ವತಃ ಅವರಿಗೂ ತಿಳಿಯದು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry