ಹನಿ ಹನಿ ಪ್ರೇಮ್ ಕಹಾನಿ

7

ಹನಿ ಹನಿ ಪ್ರೇಮ್ ಕಹಾನಿ

Published:
Updated:

ಜೊತೆಯಲಿ, ಜೊತೆ.. ಜೊತೆಯಲಿ...ವಿಶಾಖಪಟ್ಟಣದ ರಾಜೇಶ್, ಬೆಂಗಳೂರಿನ ರಂಜನಿ. ಇಬ್ಬರಲ್ಲಿ ರಂಜನಿ ಹಿರಿಯರು. ಆದರೂ ಪ್ರೀತಿಗೆ ವಯಸ್ಸಿನ ಹಂಗೇಕೆ ಎನ್ನುತ್ತಾರೆ ರಾಜೇಶ್. `ನ ಉಮ್ರ ಕಿ ಸೀಮಾ ಹೋ.., ನ ಜನ್ಮ್ ಕಾ ಹೋ ಬಂಧನ್~ ಎಂಬಂತೆ. ಪ್ರೀತಿಗೆ ಹಣ, ಸುರಕ್ಷೆ, ಉದ್ಯೋಗ ಯಾವುದೂ ಗೌಣವಲ್ಲ. ಆದರೆ ಮನುಷ್ಯರು ಮುಖ್ಯ. ವಯಸ್ಸು-ಅಂತಸ್ತು ಜಾತಿಗಿಂತ ನಮ್ಮ ನಡುವಿನ ಬಾಂಧವ್ಯದ ಬಗ್ಗೆ ನಂಬಿಕೆ ಇರಬೇಕು.  ಯಾರದ್ದೇ ಬಿರುಮಾತುಗಳಿರಲಿ, ಕಟು ನುಡಿಗಳೇ ಇರಲಿ, ಅದ್ಯಾವುದೂ ನಮ್ಮ ಬಾಂಧವ್ಯದ ಮೇಲೆ ಪರಿಣಾಮ ಬೀರದು ಎಂಬ ನಂಬಿಕೆ ಇದ್ದಲ್ಲಿ ಆ ಪ್ರೀತಿ ನವನವೀನವಾಗಿರುತ್ತದೆ ಎನ್ನುತ್ತಾರೆ ರಂಜನಿ ಮತ್ತು ರಾಜೇಶ್.ರಾಜೇಶ್ ಮನಗೆದ್ದ ರಂಜನಿ, ಅವರ ಕುಟುಂಬದವರನ್ನೂ ಗೆದ್ದಿದ್ದಾರೆ. ಇವರು ನೀಡಿರುವ ಬೆಚ್ಚನೆಯ ಪ್ರೀತಿಯಿಂದಾಗಿ ರಾಜೇಶ್ ಸಹೋದರನ ಪ್ರೇಮ ವಿವಾಹಕ್ಕೆ ಯಾವ ಅಡೆತಡೆಗಳೂ ಬರಲಿಲ್ಲ. ಅವರು ಫಿಲಿಪ್ಪೀನ್ಸ್ ಕ್ರೈಸ್ತ ಹುಡುಗಿಯನ್ನು ಮದುವೆಯಾಗಿದ್ದಾರೆ.

 

ಜನುಮ ಜನುಮದ ಅನುಬಂಧ...ಪ್ರತಿ ಹುಡುಗಿಯೂ ತನ್ನ ಹುಡುಗನಲ್ಲಿ ಅಪ್ಪನ ವಾತ್ಸಲ್ಯವನ್ನೂ ಸಹೋದರನ ಪ್ರೀತಿಯನ್ನೂ ಹುಡುಕುತ್ತಾಳೆ. ಅದು ಸಾಕಷ್ಟು ಸಿಕ್ಕಾಗ, ಅಪ್ಪ ಸಹೋದರರಿಂದಲೂ ದೂರವಾಗುವುದಕ್ಕೆ ಹಿಂಜರಿಯುವುದಿಲ್ಲ ಎನ್ನುತ್ತ ಮಾತಿಗಿಳಿದಿದ್ದು ಸಪ್ನಾ.ಸಪ್ನಾ ಹೈದರಾಬಾದ್ ಮೂಲದ ಬ್ರಾಹ್ಮಣ ಹುಡುಗಿ. ಮದುವೆಯಾಗಿದ್ದು ತಮಿಳುನಾಡಿನ ತಿರುವನೆಲ್ವಿಯ ಡ್ಯಾನಿಯಲ್‌ನನ್ನು.ಇವರಿಬ್ಬರೂ ಯಾವತ್ತೂ ಕೈಹಿಡಿದು ಉದ್ಯಾನ ಸುತ್ತಲಿಲ್ಲ. ಇವರಿಬ್ಬರ ನಡುವೆ ಉಡುಗೊರೆಗಳ ವಿನಿಮಯವೂ ಆಗಲಿಲ್ಲ.  ಕಚೇರಿಯ ಸಾಂಗತ್ಯವೇ ಇವರಿಬ್ಬರ ನಡುವೆ ವಿಶೇಷ ಬಾಂಧವ್ಯ ಹುಟ್ಟುಹಾಕಿತ್ತು. ಆದರೆ ಸಪ್ನಾ ಪುಣೆಗೆ ಕೆಲಸ ಅರಸಿ ಹೊರಟರು. ಈ ವಿದಾಯವೇ ಅವರಿಬ್ಬರನ್ನೂ ಮತ್ತಷ್ಟು ಬೆಸೆದಿಟ್ಟಿತು.ಭಾಷೆಯ ಗೊಂದಲವಿತ್ತು. ಡ್ಯಾನಿಯಲ್‌ಗೆ ತಮಿಳು ಮಾತೃಭಾಷೆ. ಸಪ್ನಾಗೆ ತೆಲುಗು. ಇವರು ಶುದ್ಧ ಸಸ್ಯಾಹಾರಿ. ಮಾಂಸಾಹಾರವಿಲ್ಲದ ಊಟ ಮಾಡದ ಡ್ಯಾನಿಯಲ್. ಆದರೆ ಉತ್ತರ ಧೃವದಿಂ... ದಕ್ಷಿಣ ಧೃವಕ್ಕೂ ಚುಂಬಕ ಗಾಳಿಯ ಸೆಳವಿಗೆ ಸಿಕ್ಕಿದ್ದರು.ಯಾವುದೇ ಸಂದರ್ಭದಲ್ಲಿಯೂ ನಮ್ಮಂದಿಗೆ ಸಂಗಾತಿ ಇದ್ದಾರೆ ಎಂಬ ಆತಂಕ ರಹಿತ ನಂಬಿಕೆಯೊಂದು ಜೊತೆಗಿರಬೇಕು. ಯಾವುದೇ ಕ್ಷಣದಲ್ಲಿಯೂ ಈ ಬೆಸುಗೆಯಲ್ಲಿ ಬಿರುಕು ಬಾರದು ಎಂಬ ನಂಬಿಕೆ ಇರಬೇಕು. ಇವೇ ಭಾವನೆಗಳು ನಮ್ಮೆಲ್ಲ ಅಡೆತಡೆಗಳನ್ನೂ ಮೀರಿ, ಒಂದಾಗಿ ಬಾಳುವಂತೆ ಮಾಡಿದವು ಎನ್ನುತ್ತಾರೆ ಅವರು.ನಸುನಗುತ ಬಂದೇವ... ತುಸು ನಗುತ ಬಾಳೋಣಇದು ಜಮ್ಮು ಹುಡುಗಿ. ಕನ್ನಡಿಗ ಹುಡುಗ. ಬ್ರಾಹ್ಮಣ ಕನ್ಯೆ, ಪಠಾಣ್‌ಯುವಕನ ಪ್ರೇಮ ಕತೆ. ವೈದ್ಯಕೀಯ ಓದಿದ ಹುಡುಗಿ, ಎಂಜಿನಿಯರಿಂಗ್ ಹುಡುಗ. ಇವರಿಬ್ಬರಲ್ಲಿ ಯಾರೂ ಧರ್ಮವನ್ನು ಬಿಡಲಿಲ್ಲ. ಕುಟುಂಬವನ್ನೂ ಬಿಡಲಿಲ್ಲ. ಒಟ್ಟಾಗಿ ರಮ್‌ಜಾನ್‌ನ ಶೀರ್‌ಖುರ್ಮಾ ಸವಿಯುತ್ತಾರೆ. ದೀಪಾವಳಿಯ ದೀವಿಗೆಯನ್ನೂ ಬೆಳಗುತ್ತಾರೆ.ಭಾಷೆ, ರಾಜ್ಯ, ಧರ್ಮ ಎಲ್ಲವೂ ಬೇರೆ. ಆದರೂ ಅವರನ್ನು ಬೆಸೆದಿಟ್ಟಿರುವುದು ಪ್ರೀತಿ ಮಾತ್ರ. ವಿಭಿನ್ನ ಸಂಸ್ಕೃತಿಯ ಎರಡು ಜೀವಗಳು ಒಟ್ಟಾಗಿ ಬದುಕಲು ನಿರ್ಧರಿಸಿದಾಗ ರಾಜ್‌ಖಾನ್ ತಂದೆ ನೆರವಿಗೆ ನಿಂತರು.

 

ರಾಜ್ ಉನ್ನತ ಅಧ್ಯಯನಕ್ಕೆ ಇಂಗ್ಲೆಂಡ್‌ಗೆ ಹೋದಾಗ ವಾರಾಂತ್ಯದಲ್ಲಿ ತಮ್ಮ ಕುಟುಂಬದೊಡನೆ ಸಮಯ ಕಳೆಯಲು ಡಾ.ಚಾರುಗೆ ಅನುಕೂಲ ಮಾಡಿಕೊಟ್ಟರು. ಮದುವೆಯೆಂಬುದು ಮಕ್ಕಳಾಟವಲ್ಲ. ಅದೊಂದು ಸಂಸ್ಥೆ. ಪ್ರೀತಿ ಕೊನೆಯವರೆಗೂ, ಕೊನೆಯುಸುರಿನವರೆಗೂ ಇರುವಂತೆ ಮಾಡಲು ಸಂಸ್ಕೃತಿಯ ಪರಿಚಯ ಮಾಡಿಕೊಟ್ಟರು.ಅಂತಿಮ ತೀರ್ಮಾನ ಕೈಗೊಳ್ಳುವ ಮುನ್ನ ಎಲ್ಲ ರೀತಿಯಿಂದಲೂ ಚಾರುಗೆ ಸಿದ್ಧಗೊಳಿಸಿದ್ದರು ಅವರು ಎಂದು ನೆನಪಿಸಿಕೊಳ್ಳುತ್ತಾರೆ ರಾಜ್‌ಖಾನ್. ಯಾರೂ ಧರ್ಮಾಂತರಗೊಳ್ಳಲಿಲ್ಲ.

 

ನನ್ನ ದೈವವೂ ನಮ್ಮಂದಿಗೆ. ಚಾರು ದೇವರ ದಯೆಯೂ ನಮ್ಮಂದಿಗಿದೆ. ಧರ್ಮ ಬದಲಾವಣೆಯೆಂಬುದು ತಾತ್ಕಾಲಿಕ. ಪ್ರೀತಿಸುವಾಗ ಇವೆಲ್ಲವೂ ಗೌಣವಾಗಿದ್ದವು. ಬದುಕುವಾಗಲೂ ಅದು ನಮಗಿಂತ ದೊಡ್ಡದಾಗಬಾರದು. ಎಲ್ಲ ಧರ್ಮಗಳೂ ಹೇಳುವುದು ಸಹನೆಯನ್ನು. ಸಂಯಮವನ್ನು. ಉಳಿದದ್ದು ನಮ್ಮ ನಮ್ಮ ನಂಬಿಕೆ ಎನ್ನುತ್ತಾರೆ ಅವರು.ಚಾರು ಈಗಲೂ ಸಸ್ಯಾಹಾರಿ. ನಾವೂ ಸಹ ವಾರದ ಕೆಲದಿನಗಳಲ್ಲಿ ಕಡ್ಡಾಯವಾಗಿ ಸಸ್ಯಾಹಾರಿಗಳಾಗಿದ್ದೇವೆ. ನಮ್ಮ ಇಡಿಯ ಮನೆತನವೇ ಒಂದಾಗಿ ದೀಪಾವಳಿ ಆಚರಿಸುವಂತಾಗಿದೆ ಇದು ಪ್ರೀತಿಯಿಂದ ಮಾತ್ರ ಸಾಧ್ಯ.

 

ಉಳಿದಂತೆ ಸಾಕಷ್ಟು ಅಪಮಾನ, ಅವಮಾನಗಳನ್ನೂ ಎದುರಿಸಿದ್ದಿದೆ. ನಗುನಗುತ್ತಲೇ ಸ್ವೀಕರಿಸಿದ್ದೇವೆ. ಆದರೆ ಸ್ವೀಕಾರ್ಹ ಮನೋಭಾವ, ಸಂಯಮ ಹಾಗೂ ಸಹನೆ ಇಲ್ಲದಿದ್ದಲ್ಲಿ ಯಾವ ಬಾಂಧವ್ಯವೂ ಬದುಕುಳಿಯದು ಎಂಬುದು ಚಾರು-ರಾಜ್ ಕಂಡುಕೊಂಡ ಸತ್ಯ.ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?ಹೀಗೆ ಪ್ರಶ್ನಿಸುತ್ತಲೇ ಮಾತಿಗಿಳಿದವರು ಕಲಾವಿದ ಚಿ.ಸು. ಕೃಷ್ಣಶೆಟ್ಟಿ. ಅವರ ಸಂಗಾತಿ ನೃತ್ಯ ಪಟು ಅಂಜಲಿ. ಎಂಟು ವರ್ಷಗಳ ಸ್ನೇಹ ಒಡನಾಟವಿದ್ದರೂ ಪ್ರೇಮದ ಬಗ್ಗೆ ಏನೂ ಅನ್ನಿಸಿರಲಿಲ್ಲ.

 

ಸಂಗಾತಿಯ ಆಯ್ಕೆಯ ಪ್ರಶ್ನೆ ಬಂದಾಗ ಅಂಜಲಿಯ ಬಗ್ಗೆ ಮೊದಲು ಯೋಚಿಸಿದ್ದು. ನಂತರ ಅವರ ಕುಟುಂಬದವರೊಡನೆ ಸಮಾಲೋಚಿಸಿದ್ದು. ಮದುವೆಯ ನಂತರವೇ ಪ್ರೇಮ ಆರಂಭವಾಗಿದ್ದು.ಆದರೆ ಪ್ರೀತಿಗೆ ಚೌಕಟ್ಟಿಲ್ಲ. ಪ್ರೇಮಕ್ಕಿದೆ. ಪ್ರೇಮಕ್ಕೆ ಕಾವಿದೆ. ಪ್ರೀತಿ ಜುಳುಜುಳು ಹರಿಯುವ ನದಿ ಇದ್ದಂತೆ. ಅದು ಎಲ್ಲರನ್ನೂ ಸ್ವೀಕರಿಸುವ, ಎಲ್ಲವನ್ನೂ ಒಪ್ಪಿಕೊಳ್ಳುವ ಮನೋಭಾವ ಸೃಷ್ಟಿಸುತ್ತದೆ ಎನ್ನುತ್ತಾರೆ ಅವರು.ಪ್ರೀತಿಯ ವ್ಯಾಖ್ಯಾನ ಬದಲಾಗಬೇಕಿದೆ.  `ಮಿಲ್ಟ್~ ಸಂಸ್ಥೆಯೊಂದು ಈ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದೆ. `ಐ ಲವ್ ಯು~ ಎನ್ನುವುದು ಯುನಿವರ್ಸಲ್ ಆಗಬೇಕು. ವಿಶ್ವ ಪ್ರೇಮದೊಡನೆ ಒಂದಾಗುವುದೇ ಪ್ರೇಮ.ಇವರ ಸಂಗಾತಿ ಅಂಜಲಿಯದ್ದೂ ಇದೇ ಅಭಿಪ್ರಾಯ. ಮಾನವೀಯ ಸಂಬಂಧಗಳನ್ನು ಬೆಸೆಯುವುದೇ ಪ್ರೀತಿ. ಒಬ್ಬರನ್ನು ಹೊಂದುವುದು ಅಥವಾ ಪಡೆಯುವುದು ಅಲ್ಲವೇ ಅಲ್ಲ. ಆ ವ್ಯಕ್ತಿಯನ್ನು ಗೌರವಿಸುವುದು ಕಲಿಯಬೇಕು. ಆಗಲೇ ಪ್ರೇಮ ವೈಫಲ್ಯವಿರಲಿ, ಸಾಫಲ್ಯವಿರಲಿ ಅದನ್ನು ಸ್ವೀಕರಿಸುವ ಶಕ್ತಿ ದೊರೆಯುತ್ತದೆ.ಜೀವನೆವಲ್ಲ ಸುಂದರ ಬೆಸುಗೆ...ಪ್ರೀತಿಸುತ್ತೇವೆ ಅಂತ ಅನಿಸಿದ್ದೇ ಇಲ್ಲ. ಸ್ನೇಹಿತರಾಗಿಯೇ ಇದ್ದೆವು. ಇನ್ನು ಬಿಟ್ಟಿರಲಾರೆವು ಎನಿಸಿದಾಗ ಮದುವೆಯ ಬಗ್ಗೆ ಯೋಚಿಸಿದ್ದು. ಬೆಂಗಳೂರಿನ ಹುಡುಗಿ, ಮಂಗಳೂರಿನ ಹುಡುಗ. ಇಬ್ಬರೂ ಕಲಾವಿದರು. ಇಬ್ಬರಿಗೂ ಮುಖದೊಳಗಿನ ಗೆರೆಯ ಆಳ ಅರ್ಥವಾಗುವಷ್ಟು ಸ್ನೇಹ ಬೆಳೆದಿತ್ತು.ಪರಸ್ಪರ ಭಾವನೆಗೆ ಸ್ಪಂದಿಸುವ ಈ ಗುಣವೇ ಇಬ್ಬರನ್ನೂ ಸೆಳೆಯಿತು.  ಮದುವೆಗೆ ಯಥಾರೀತಿ ಕುಟುಂಬದ ವಿರೋಧ. ಆದರೆ ಇಬ್ಬರೂ ಕುಟುಂಬದವರಿಗೆ ನೀಡಿದ ಸುರಕ್ಷೆಯ ಭಾವದಿಂದಾಗಿ ಈಗ ನಮ್ಮದೇ ಕುಟುಂಬ ಮಾಡಿಕೊಳ್ಳುವಂತಾಯಿತು ಎನ್ನುತ್ತಾರೆ ಅವರು.ಇವರಿಗೆಲ್ಲ ವ್ಯಾಲೆಂಟೈನ್ಸ್ ಡೇ ಒಂದು ಸಂಭ್ರಮವೇ ಅಲ್ಲ. ಆದರೆ ಪ್ರತಿದಿನವನ್ನೂ ಪ್ರೀತಿಯ ದಿನವೆಂದೇ ಬದುಕುತ್ತಾರೆ. ಅವರೊಂದಿಗೆ ಅವರ ಪ್ರೀತಿಯೂ ಬದುಕುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry