ಬುಧವಾರ, ನವೆಂಬರ್ 20, 2019
20 °C

ಹನುಮಸಾಗರ; ಕುಡಿಯುವ ನೀರಿಗೆ ಕಟ್ಟುನಿಟ್ಟಿನ ಕ್ರಮ

Published:
Updated:

ಹನುಮಸಾಗರ:ಇಲ್ಲಿನ ವಿವಿಧ ಬಡವಾಣೆಗಳಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕಲುಷಿತವಾಗಿವೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಹಾಗೂ ಆರೋಗ್ಯ ಇಲಾಖೆಯ ಸಲಹೆಯ ಮೇರೆಗೆ ಇಲ್ಲಿನ ಗ್ರಾಮ ಪಂಚಾಯಿತಿ ಕುಡಿಯುವ ನೀರಿಗಾಗಿ ತುರ್ತು ಕ್ರಮ ಕೈಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಾರ್ವಜನಿಕರಿಂದ ಬಹು ದಿನಗಳಿಂದ ಕೇಳಿ ಬರುತ್ತಿದ್ದ ದೂರಿನ ಮೇರೆಗೆ ಸರ್ಕಾರಿ ವೈದ್ಯಾಧಿಕಾರಿ ಡಾ.ಷಣ್ಮಖ ಕಾಪ್ಸೆ ಮತ್ತು ಸಿಬ್ಬಂದಿ ಬುಧವಾರ ವಿವಿಧ ವಾರ್ಡಗಳಿಗೆ ಭೇಟಿ ನೀಡಿ ಅಲ್ಲಿಗೆ ಪೂರೈಕೆಯಾಗುವ ಕುಡಿಯುವ ನೀರನ್ನು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ 7ನೇ ವಾರ್ಡಿನ ಸಾರ್ವಜನಿಕರು ಚರಂಡಿಯ ನೀರು ಕುಡಿಯುವ ನೀರಿನ ಕೊಳವೆಗಳಿಗೆ ಸೇರ್ಪಡೆಯಾಗುತ್ತದೆ ಎಂದು ದೂರಿದರು.ಈ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆದು ಗ್ರಾಮ ಪಂಚಾಯಿತಿಗೆ ಪತ್ರ ಬರೆಯಲಾಗಿದೆ.

 ಪ್ರತಿಯೊಂದು ವಾರ್ಡಗಳಿಗೆ ಪೂರೈಕೆಯಾಗುವ ನಲ್ಲಿಗಳ ನೀರಿನ ಸ್ಯಾಂಪಲ್‌ಗಳನ್ನು ಕಳಿಸಲು ತಿಳಿಸಲಾಗಿದೆ, ಕೆಲವೊಂದು ಕಡೆ ಚರಂಡಿಗಳಲ್ಲಿ ಹಾಯ್ದು ಹೋಗಿರುವ ಕೊಳವೆಗಳು ಒಡೆದಿವೆ.ನೀರಿನ ಹರಿಯುವಿಕೆ ನಿಂತಾಗ ಚರಂಡಿಯ ಕೊಳಚೆ ನೀರು ಕೊಳವೆಗಳಲ್ಲಿ ಶೇಖರಣೆಗೊಂಡು ಅದೇ ನೀರು ಮಾರನೇ ದಿನ ಕೊಳವೆಗಳ ಮೂಲಕ ಕುಡಿಯುವ ನೀರಿನೊಂದಿಗೆ ಸೇರಿ ಹರಿದು ಬರುವ ಸಾಧ್ಯತೆ ಇದೆ, ಕೂಡಲೆ ಅಂತಹ ಕೊಳವೆಗಳನ್ನು ಬದಲಾಯಿಸಲು ತಿಳಿಸಲಾಗಿದೆ ಎಂದು ಡಾ.ಷಣ್ಮಖ ಕಾಪ್ಸೆ ಹೇಳಿದರು.ಅಲ್ಲದೆ ತಗ್ಗುಗಳಲ್ಲಿ ನೀರು ನಿಂತಿದ್ದರೆ ಕೂಡಲೇ ಮುಚ್ಚಿಸಬೇಕು, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಕ್ರಮಕೈಗೊಳ್ಳಬೇಕು, ತೊಳಯದೇ ಇರುವ ನೀರಿನ ಮೇನ್ ಟ್ಯಾಂಕ್ ಹಾಗೂ ಸಿಸ್ಟರ್ನ ಟ್ಯಾಂಕುಗಳನ್ನು ಸ್ವಚ್ಛಗೊಳಿಸಬೇಕು ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಕುದಿಸಿ, ಶೋಧಿಸಿ ಕುಡಿಯಬೇಕು ಎಂದು ಸಲಹೆ ನೀಡಿದ್ದಾರೆ. ಈ ವಿಷಯ ಕುರಿತು ಗ್ರಾಮ ಪಂಚಾಯಿತಿ ನೀರಗಂಟಿಗಳ ತುರ್ತು ಸಭೆ ಕರೆದು ಲೀಕೇಜ್ ಪೈಪ್‌ಗಳನ್ನು  ಹಾಗೂ ಚರಂಡಿಗಳಲ್ಲಿ ಹಾಯ್ದು ಹೋಗಿರುವ ಕೊಳವೆಗಳನ್ನು ಗುರುತಿಸಿ ಕೂಡಲೆ ಬದಲಾಯಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ ನೀರಿನ ಮೇನ್ ಟ್ಯಾಂಕ್ ಹಾಗೂ ಸಿಸ್ಟರ್ನ ಟ್ಯಾಂಕುಗಳನ್ನು ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಲು ಕ್ರಮ ಕೈಕೊಳ್ಳಲಾಗಿದೆ ಎಂದು ಉಪಾಧ್ಯಕ್ಷ ಪ್ರಹ್ಲಾದ ಕಟ್ಟಿ ಹಾಗೂ ಪಿಡಿಓ ಗೀತಾ ಅಯ್ಯಪ್ಪ ಪತ್ರಕರ್ತರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)