ಹನುಮ ಜಯಂತಿ: ರಥೋತ್ಸವ

7

ಹನುಮ ಜಯಂತಿ: ರಥೋತ್ಸವ

Published:
Updated:

ಕೃಷ್ಣರಾಜಪೇಟೆ: ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಹನುಮ ಜಯಂತಿ ಅಂಗವಾಗಿ ಮಂಗಳವಾರ ಆಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.ಅವಳಿ ಗ್ರಾಮ ಕುರ‌್ನೇನಹಳ್ಳಿ, ಸಮೀಪದ ದೊಡ್ಡಯಾಚೇನಹಳ್ಳಿ, ತೆರ‌್ನೇನಹಳ್ಳಿ, ಲಕ್ಷ್ಮೀಪುರ, ಮಡುವಿನಕೋಡಿ ಸೇರಿದಂತೆ ವಿವಿಧ ಗ್ರಾಮಗಳ ಜನರು ರಥೋತ್ಸವದಲ್ಲಿ ಸಡಗರ ಮತ್ತು ಸಂಭ್ರಮಗಳಿಂದ ಪಾಲ್ಗೊಂಡು, ರಥಕ್ಕೆ ಪೂಜೆ ಸಲ್ಲಿಸಿ, ಹಣ್ಣು ದವನ ಎಸೆದು ಪುನೀತ ಭಾವ ಹೊಂದಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ರಥವನ್ನು ಭಕ್ತರು ಎಳೆದು ತಂದರು. ಸೋಮನ ಕುಣಿತ, ಪಟಕುಣಿತ, ಪೂಜಾ ಕುಣಿತ, ವೀರಭದ್ರನ ಕುಣಿತ, ಹುಲಿವೇಷ ಸೇರಿದಂತೆ ವಿವಿಧ ಜನಪದ ಕಲಾಪ್ರಕಾರಗಳು ರಥೋತ್ಸವಕ್ಕೆ ಮೆರಗು ನೀಡಿದವು. ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಸೊಗಡಿನ ಎತ್ತಿನಗಾಡಿ ಓಟದ ಸ್ಪರ್ಧೆ ನೆರೆದಿದ್ದ ಜನರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.ಹನುಮ ಜಯಂತಿ

ಮದ್ದೂರು: ಸಮೀಪದ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಮಂಗಳವಾರ `ಹನುಮ ಜಯಂತಿ' ಅಂಗವಾಗಿ ವಿಶೇಷ ಪೂಜಾ ಉತ್ಸವ ನಡೆಯಿತು.ಬೆಳಿಗ್ಗೆ ಹನುಮಮೂರ್ತಿಗೆ ಅಭಿಷೇಕ ನಡೆಯಿತು. ನಂತರ ವಿಶೇಷ ಹೂವುಗಳಿಂದ ಮೂರ್ತಿಯನ್ನು ಅಲಂಕರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.ದೇಗುಲದ ಪ್ರಾಂಗಣದಲ್ಲಿ ಹನುಮ ಮೂರ್ತಿಯ ಉತ್ಸವ ಅಸಂಖ್ಯಾತ ಭಕ್ತರ ಉದ್ಘೋಷಗಳೊಂದಿಗೆ ನಡೆಯಿತು. ತಹಶೀಲ್ದಾರ್ ಎಂ.ಕೆ.ಸವಿತಾ, ಪ್ರಧಾನ ಅರ್ಚಕ ಎಚ್.ಎನ್.ಕೃಷ್ಣಚಾರಿ, ಅರ್ಚಕ ಪ್ರದೀಪ್ ಭಾಗವಹಿಸಿದ್ದರು.ಆಂಜನೇಯನಿಗೆ ವಿಶೇಷ ಪೂಜೆ

ಶ್ರೀರಂಗಪಟ್ಟಣ:
ಹನುಮ ಜಯಂತಿ ಅಂಗವಾಗಿ ಪಟ್ಟಣದ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯ, ಕೋದಂಡರಾಮ ಹಾಗೂ ಪಟ್ಟಾಭಿರಾಮ ಮಂದಿರಗಳಲ್ಲಿ ಮಂಗಳವಾರ ವಿಶೇಷ ಪೂಜೆಗಳು ನಡೆದವು.

ಐತಿಹಾಸಿಕ ಮೂಡಲಬಾಗಿಲು ಆಂಜನೇಯಸ್ವಾಮಿ ದೇಗುಲದಲ್ಲಿ ಬೆಳಗ್ಗೆ 7ರಿಂದಲೇ ಪೂಜೆಗಳು ಆರಂಭಗೊಂಡವು.ಮಧ್ಯಾಹ್ನದ ವೇಳೆಗೆ ದೇವಾಲಯಲ್ಲಿ ಹೆಚ್ಚು ಭಕ್ತರು ಕಂಡುಬಂದರು. ಎಳ್ಳುಬತ್ತಿ ಹಚ್ಚಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಾಲ್ಲೂಕಿನ ಹುಲಿಕೆರೆಯಲ್ಲಿರುವ ಪ್ರಸನ್ನ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಕೂಡ ವಿಶೇಷ ಪೂಜೆಗಳು ನಡೆದವು. ಸಮೀಪದ ಮಜ್ಜಿಗೆಪುರ, ಬೆಳಗೊಳ ಕೆಆರ್‌ಎಸ್, ಹೊಸಉಂಡವಾಡಿ ಇತರ ಗ್ರಾಮಗಳ ಜನರು ಆಗಮಿಸಿ ಪೂಜೆ ಸಲ್ಲಿಸಿದರು.ತಾಲ್ಲೂಕಿನ ಮರಳಾಗಾಲ ಬಳಿ ಇರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಶ್ರೀನಿವಾಸ ಅಗ್ರಹಾರ, ಮರಳಾಗಾಲ, ದೊಡ್ಡಪಾಳ್ಯ, ಗಂಜಾಂ ಇತರ ಗ್ರಾಮಗಳ ಜನರು ಭಾಗವಹಿಸಿದ್ದರು. ದೇವಾಲಯದ ಆವರಣದಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು. ತಾಲ್ಲೂಕಿನ ಅರಕೆರೆ, ಮಹದೇವಪುರ, ನಗುವನಹಳ್ಳಿ, ಪಾಲಹಳ್ಳಿ ಇತರ ಗ್ರಾಮಗಳ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಆಚರಣೆ ನಡೆಯಿತು.ಹನುಮ ಜಯಂತಿ ಆಚರಣೆ

ಕಿಕ್ಕೇರಿ
: ದೇವರ ಮೇಲೆ ನಂಬಿಕೆ ಇಟ್ಟು ಆರಾಧಿಸಿದಲ್ಲಿ ಮನಸ್ಸಲ್ಲಿರುವ ತಾಮಸ ಗುಣಗಳು ಮರೆಯಾಗಿ ಸುಖ ಶಾಂತಿ ನೆಲೆಸುತ್ತದೆ ಎಂದು ವರ್ತೂರು ಪ್ರಕಾಶ್ ಯುವ ಸೇನೆ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್ ಕಿವಿ ಮಾತನಾಡಿದರು.ಅವರು ಇಲ್ಲಿಯ ಪಂಚಮುಖಿ ಮಿತ್ರ ಬಳಗದವರು ಮಂಗಳವಾರ ಹಮ್ಮಿಕೊಂಡಿದ್ದ ಹನುಮ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅರ್ಚಕ ಗುಂಡಯ್ಯ, ಆದಿತ್ಯ, ವೆಂಕಟೇಶ್ ಕೋಟೆ ಅಂಜನೇಯ, ಗಣಪತಿ ಮೂರ್ತಿಗೆ ಕ್ಷೀರಾಭಿಷೇಕ, ಚಂದನಾಭಿಷೇಕ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಪರಮೇಶ್, ಸಂಘದ ವೆಂಕಟೇಶ್, ಯುವರಾಜ್, ಭಜನೆಮನೆ ಅಣ್ಣಯ್ಯ, ಅರ್ಚಕ ಗುಂಡಣ್ಣ, ಆದಿತ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry