ಶನಿವಾರ, ಆಗಸ್ಟ್ 24, 2019
21 °C

ಹನ್ನೆರಡಾಣೆ ಪಾಪರ್ ಚೀಟಿ

Published:
Updated:

ಜುಲೈ 29ರ ಸಂಚಿಕೆಯಲ್ಲಿ `ರೂ 54 ಕೋಟಿ ನುಂಗಿದ ಕಂಪೆನಿಯೇ ಮಾಯ'ವಾದ ವರದಿ ಓದಿದಾಗ ನನಗೆ ಸ್ವಾತಂತ್ರ್ಯಪೂರ್ವದಲ್ಲಿ ವ್ಯಾಪಾರಿಗಳು ಸಾಧಾರಣವಾಗಿ ಉಪಯೋಗಿಸು ತ್ತಿದ್ದ ಒಂದು ಮೋಸದ ಉಪಾಯ ಜ್ಞಾಪಕಕ್ಕೆ ಬಂತು. ಆ ದಿನಗಳಲ್ಲಿ ಜೋರಾಗಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿ ಕುರಿತಂತೆ ಇದ್ದಕ್ಕಿದ್ದಂತೆ `ಪಾಪರ್ ಆದನಂತೆ, ಜಪ್ತಿ ಮಾಡಿದರೆ ಏನೂ ಸಿಕ್ಕಲಿಲ್ಲವಂತೆ' ಎಂಬ ಸುದ್ದಿ ಕೇಳಿಬರುತ್ತಿತ್ತು.ಆದರೆ ಊರವರಿಗೆ ನಿಜವಾದ ವಿಷಯ ತಿಳಿದಿರುತ್ತಿತ್ತು. ಆ ವ್ಯಾಪಾರಿ ಒಮ್ಮೆಗೇ ಸಾಕಷ್ಟು ಸಾಲ ಸೋಲ ಮಾಡಿ ತನ್ನ ವ್ಯಾಪಾರವನ್ನು ವೃದ್ಧಿಸುತ್ತಿದ್ದ. ಬಂದ ಲಾಭವನ್ನೆಲ್ಲಾ ಬೆಳ್ಳಿ ಗಟ್ಟಿಯಾಗಿ ಬದಲಾಯಿಸಿ ಮಡಕೆಯಲ್ಲೋ, ಬಿಸ್ಕತ್ ಡಬ್ಬಿಯಲ್ಲೋ ತುಂಬಿ ಗೊತ್ತಾದ ಜಾಗದಲ್ಲಿ ಹುಗಿಯುತ್ತಿದ್ದ. ನಂತರ ತನ್ನ ಹಳೆಯ ಮನೆಗೆ ಬೆಂಕಿ ಬಿತ್ತು ಎಂತಲೋ, ವ್ಯಾಪಾರದಲ್ಲಿ ನಷ್ಟವಾಯಿತು, ಸುಸ್ತಿದಾರರು ಹಣ ಕೊಟ್ಟಿಲ್ಲ ಎಂತಲೋ ಹುಯಿಲೆಬ್ಬಿಸಿ ಕೋರ್ಟಿನ ಮೊರೆ ಹೋಗುತ್ತಿದ್ದ.ಇನ್‌ಸಾಲ್ವೆನ್ಸಿ ಪಡೆದುಕೊಳ್ಳುತ್ತಿದ್ದ. ಅವನಿಗೆ ಸಾಲ ಕೊಟ್ಟವರು ಕೋರ್ಟಿಗೆ ಹೋದರೂ ಅವನಿಗೆ ಕೋರ್ಟಿನ ರಕ್ಷಣೆ ಸಿಗುತ್ತಿತ್ತು. ಸಾಲ ಕೊಟ್ಟವರಿಗೆ ಕಿಲುಬು ಕಾಸು ಸಿಗುತ್ತಿತ್ತು. ಆ ವ್ಯಾಪಾರಿ ಬೇರೆ ಹೆಸರಿನಲ್ಲಿ ನಂತರ ಹೊಸ ವ್ಯಾಪಾರ ಮಾಡುತ್ತಿದ್ದ. ಊರವರು ಇದನ್ನು `ಹನ್ನೆರಡಾಣೆ ಪಾಪರ್ ಚೀಟಿ' ಎನ್ನುತ್ತಿದ್ದರು. ತಮಾಷೆ ಮಾಡುತ್ತಿದ್ದರು. ಬಹುಶಃ ಆಗ್ಗೆ ಇನ್‌ಸಾಲ್ವೆನ್ಸಿಗೆ ತಗಲುತ್ತಿದ್ದ ವೆಚ್ಚ ಹನ್ನೆರಡಾಣೆ.

 

Post Comments (+)