ಹಫ್ತಾ ವಸೂಲಿಗೆ ಕೊನೆ

7

ಹಫ್ತಾ ವಸೂಲಿಗೆ ಕೊನೆ

Published:
Updated:

ಬೀದಿ ಬದಿ ವ್ಯಾಪಾರಿಗಳು ನಿರಾತಂಕವಾಗಿ ತಮ್ಮ ವ್ಯಾಪಾರ ವಹಿವಾಟು ಮುಂದುವರಿಸಲು ಅನುವು ಮಾಡಿಕೊಡುವ ಮಹತ್ವದ ಮಸೂದೆಯೊಂದನ್ನು ಲೋಕಸಭೆ ಅಂಗೀಕರಿಸಿದೆ. ‘ನಗರ ಪ್ರದೇಶಗಳ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಹಕ್ಕುಗಳ ರಕ್ಷಣಾ ಮಸೂದೆ’, ಯುಪಿಎ ಸರ್ಕಾರದ ಉಲ್ಲೇಖಾರ್ಹ ಉಪಕ್ರಮಗಳಲ್ಲಿ ಒಂದು ಎಂದರೂ ತಪ್ಪಿಲ್ಲ. ಏಕೆಂದರೆ ಫುಟ್‌ಪಾತ್‌ಗಳಲ್ಲಿ, ಸಂತೆ ಮೈದಾನಗಳಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸಿ ದಿನದ ಹೊಟ್ಟೆ ಹೊರೆದುಕೊಳ್ಳುವ ದೇಶದ ಸುಮಾರು ಒಂದು ಕೋಟಿ ಬಡ ಕುಟುಂಬಗಳಿಗೆ ಇದು ನಾನಾ ಬಗೆಯ ಕಿರುಕುಳದಿಂದ, ಅಭದ್ರತೆಯಿಂದ ರಕ್ಷಣೆ ನೀಡುತ್ತದೆ.ಅವರ ಬದುಕಿನ ಹಕ್ಕನ್ನು ಸಂರಕ್ಷಿಸಿ, ಸಾಮಾಜಿಕ ಭದ್ರತೆ ನೀಡುತ್ತದೆ. ಪೊಲೀಸರು ಹಾಗೂ ಆಯಾ ನಗರ ಅಥವಾ ಪಟ್ಟಣದ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಯು ಬೀದಿ ಬದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಸುವ, ಹಫ್ತಾ ವಸೂಲು ಮಾಡುವ ಅನಿಷ್ಟ ಪರಿಪಾಠಕ್ಕೆ ಇನ್ನು ಮುಂದೆ ಲಗಾಮು ಬೀಳಲಿದೆ. ಇಷು್ಟು ದಿನ ಈ ವ್ಯಾಪಾರಿಗಳು ತಮ್ಮ ಚಿಕ್ಕಪುಟ್ಟ ವ್ಯಾಪಾರ, ವಹಿವಾಟು ನಡೆಸುವುದಕ್ಕಾಗಿ ಯಾವುದೇ ಬಗೆಯ ಪರವಾನಗಿ ಪಡೆಯಲು ಅವಕಾಶವೇ ಇರಲಿಲ್ಲ. ಇದನ್ನೇ ನೆಪ ಮಾಡಿಕೊಂಡು ಅವರನ್ನು ಸುಲಿಗೆ ಮಾಡಲಾಗುತ್ತಿತ್ತು. ಲಂಚ ಕೊಡದಿದ್ದರೆ ಈ ಬಡಪಾಯಿಗಳನ್ನು ಠಾಣೆಗಳಿಗೆ ಕರೆದೊಯ್ಯುವುದನ್ನು, ಅವರ ಸರಕು ಸಾಮಗ್ರಿಗಳನ್ನು ಕಸಿದುಕೊಳ್ಳುವು ದನ್ನು ಎಲ್ಲೆಡೆ ಕಾಣಬಹುದಿತ್ತು. ಅದನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಒಂದು ಕಲಮನ್ನು ಈ ಮಸೂದೆಯಲ್ಲಿ ಅಳವಡಿಸಿರುವುದು ಐತಿಹಾಸಿಕ ಹೆಜ್ಜೆ.ಬೀದಿ ಬದಿ ವ್ಯಾಪಾರ ಎನ್ನುವುದು ಬಡವರ ಜೀವನೋಪಾಯದ ಮಾರ್ಗವಷ್ಟೇ ಅಲ್ಲ; ಅಸಂಖ್ಯಾತ ನಗರವಾಸಿಗಳಿಗೆ ಕೈಗೆಟಕುವ ದರದಲ್ಲಿ, ಸ್ಥಳದಲ್ಲಿ ಅಗತ್ಯವುಳ್ಳ ವಸ್ತು, ಸೇವೆಯನ್ನು ಒದಗಿಸುವ ವ್ಯವಸ್ಥೆಯೂ ಹೌದು. ಅದಕ್ಕೆ ಈ ಮಸೂದೆಯಿಂದ ಶಾಸನಬದ್ಧ ಸ್ಥಾನಮಾನ ದೊರೆಯಲಿದೆ.ಗೌರವಯುತವಾಗಿ ವ್ಯಾಪಾರ, ವಹಿವಾಟು ನಡೆಸುವುದು ಪ್ರತಿಯೊಬ್ಬ ಪ್ರಜೆಗೆ ಸಂವಿಧಾನವೇ ನೀಡಿದ ಹಕ್ಕು. ಆ ಹಕ್ಕಿನಿಂದ ವಂಚಿತವಾದ, ದನಿ ಯಿಲ್ಲದ ವರ್ಗ ಹೊಸ ಮಸೂದೆಯ ಪರಿಣಾಮವಾಗಿ ಇನ್ನು ಶೋಷಣೆಗೆ ತಲೆಯೊಡ್ಡುವ ಅಗತ್ಯವಿಲ್ಲ. ಈಗಾಗಲೇ ವಹಿವಾಟು ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಕಾನೂನುಬದ್ಧ ಪರವಾನಗಿ ನೀಡುವ ವ್ಯವಸ್ಥೆ ಮಸೂದೆಯಲ್ಲಿದೆ.ಅದಕ್ಕಾಗಿ ಪ್ರತಿಯೊಂದು ನಗರ, ಪಟ್ಟಣಗಳಲ್ಲಿ  ‘ಪಟ್ಟಣ ವ್ಯಾಪಾರ ಸಮಿತಿ’ ಅಸ್ತಿತ್ವಕ್ಕೆ ಬರಲಿದೆ. ಅದು ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಗೂ ನಿಯಮಕ್ಕೆ ಒಳಪಟ್ಟು ಪರವಾನಗಿ ನೀಡುವುದು, ಅವರು ವ್ಯಾಪಾರ ನಡೆಸುವ ಪ್ರದೇಶವನ್ನು ಗೊತ್ತುಪಡಿಸುವುದು ಸಮಿತಿಯ ಕಾರ್ಯ. ಸಮಿತಿಯಿಂದ ಅನ್ಯಾಯವಾದರೆ ದೂರು ನೀಡುವ ವ್ಯವಸ್ಥೆಯೂ ಇದೆ. ಆದರೆ, ಬೀದಿ ಬದಿ ವ್ಯಾಪಾರಕ್ಕೆ ಮಾನ್ಯತೆ ನೀಡುವುದರಿಂದ   ಫುಟ್‌ಪಾತ್‌ ಬಳಸುವ ಪಾದಚಾರಿಗಳಿಗೆ ಯಾವುದೇ ಅನನುಕೂಲ ಆಗದಂತೆ ನೋಡಿಕೊಳ್ಳುವ ಹೊಣೆಯೂ ಸರ್ಕಾರದ ಮೇಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry