ಬುಧವಾರ, ಮೇ 25, 2022
22 °C

ಹಫ್ತಾ ವಸೂಲಿ: ವರ್ತಕರಿಗೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: `ಹಫ್ತಾ ವಸೂಲಿಗಾರರ ಕಾಟದಿಂದ ನಗರದಲ್ಲಿ ವರ್ತಕರು ವ್ಯಾಪಾರ ಮಾಡುವುದೇ ಕಷ್ಟವಾಗಿದೆ. ವರ್ತಕರಿಗೆ ರಕ್ಷಣೆ ನೀಡುವಂತೆ ಡಿವೈಎಸ್‌ಪಿ, ಶಾಸಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು~ ಎಂದು ಕೆ.ಟಿ.ವೆಂಕಟಾಚಲಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು `ವಿಜಯದಶಮಿ ಹಬ್ಬದ ದಿನ ರಾಜಸ್ತಾನ್ ಮೂಲದ ವರ್ತಕ ರಮೇಶ್‌ಕುಮಾರ್(22) ಎಂಬಾತ ಹಫ್ತಾ ನೀಡಲು ನೀರಾಕರಿಸಿದ್ದಕ್ಕಾಗಿ ದುಷ್ಕರ್ಮಿಗಳು ಕುತ್ತಿಗೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಈ ಘಟನೆ ನಂತರ ನಗರದಲ್ಲಿ ವರ್ತಕರು ಅಂಗಡಿಯಲ್ಲಿ ಸಂಜೆ ವೇಳೆ ವ್ಯಾಪಾರ ಮಾಡುವುದೇ ಕಷ್ಟವಾಗಿದೆ. ಸಾರ್ವಜನಿಕರು ಅಂಗಡಿಗಳಿಗೆ ಬರಲು ಸಹ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.ನಗರದ ಮುಖ್ಯ ರಸ್ತೆಯಲ್ಲಿದ್ದ ಪೊಲೀಸ್ ಠಾಣೆಯನ್ನು ಡಿಕ್ರಾಸ್‌ಗೆ ಸ್ಥಳಾಂತರಿಸಿದ ನಂತರ ಹಳೇ ಪೊಲೀಸ್ ಠಾಣೆ ಇದ್ದ ಕಟ್ಟಡದಲ್ಲಿ ಯಾವೊಬ್ಬ ಪೊಲೀಸ್ ಪೇದೆಯೂ ಇಲ್ಲ. ಇದರಿಂದ ನಗರದಲ್ಲಿ ಪುಂಡರ ಕಾಟ ಮಿತಿಮೀರಿದೆ. ಈ ಕೂಡಲೆ ನಗರದ ಮುಖ್ಯರಸ್ತೆಯಲ್ಲಿದ್ದ ಪೊಲೀಸ್ ಠಾಣೆಗೆ ಪೊಲೀಸರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.

ಜವಳಿ ವರ್ತಕರ ಸಂಘದ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, `ನಗರದ ಹೊರವಲಯದಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾದ ನಂತರ ನಗರದ ಹಳೇ ಬಸ್ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿದೆ. ಹೀಗಾಗಿ ಸಂಜೆ ವೇಳೆ ಪೊಲೀಸರ ಗಸ್ತು ಹೆಚ್ಚಿಸಬೇಕು. ರಸ್ತೆ ವಿಸ್ತರಣೆಯನ್ನು ಪೂರ್ಣಗೊಳಿಸದೆ ಮುಖ್ಯ ರಸ್ತೆಯಲ್ಲಿ ವ್ಯಾಪಾರಸ್ತರಿಗೆ ತುಂಬಾ ತೊಂದರೆಯಾಗಿದೆ. ನಗರದ ಮುಖ್ಯರಸ್ತೆ ಅತ್ಯಂತ ಹದಗೆಟ್ಟಿದೆ. ಇದರಿಂದ ವ್ಯಾಪಾರಿಗಳು ತೊಂದರೆಪಡುವಂತಾಗಿದೆ. ನಗರ ಸಭೆಯಲ್ಲಿ ಅಭಿವೃದ್ಧಿ ಪರ ಕಾಳಜಿ ಇಲ್ಲದ ಸದಸ್ಯರಿಂದಾಗಿ ಇಂದು ಇಡೀ ನಗರ ಹಳ್ಳಗಳಿಂದ ಕೂಡಿದೆ. ಒಳಚರಂಡಿ ಕಾಮಗಾರಿ ಆರಂಭವಾಗಿ ಎರಡುವರೆ ವರ್ಷವಾಗಿದ್ದರೂ ಸಹ ಇನ್ನು ಕಾಮಗಾರಿ ಕುಂಟುತ್ತಲೇ ಸಾಗಿದೆ~ ಎಂದು ಆರೋಪಿಸಿದರು.ಔಷಧಿ ವ್ಯಾಪಾರಿಗಳ ಸಂಘದ ಜಿಲ್ಲಾ ಮುಖಂಡ ಗೋವಿದರಾಜು ಮಾತನಾಡಿ, ವರ್ತಕರ ವಿವಿಧ ಸಮಸ್ಯೆಗಳ ಕುರಿತು ಅ.18 ರಂದು ಸಂಜೆ 6ಕ್ಕೆ ನಗರದ ದಿನಸಿ ವರ್ತಕರ ಸಂಘದ ಕಚೇರಿಯಲ್ಲಿ ವಿವಿಧ ವರ್ತಕರ ಸಂಘಟನೆಗಳ ಪದಾಧಿಕಾರಿಗಳ ಮುಖಂಡರ ಸಭೆ ನಡೆಯಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ದಿನಸಿ ವರ್ತಕರ ಸಂಘದ ಕಾರ್ಯದರ್ಶಿ ಕೆ.ಎಚ್.ಪ್ರಸನ್ನ ಮುಂತಾದವರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.