ಹಬ್ಬಗಳ ಕಾಲ-ತುಟ್ಟಿಯಾಗಲಿರುವ ಚಿನ್ನ?

7
ಆಮದು ಸುಂಕ ಏರಿಕೆ; ಕಳ್ಳಸಾಗಣೆ ಭೀತಿ

ಹಬ್ಬಗಳ ಕಾಲ-ತುಟ್ಟಿಯಾಗಲಿರುವ ಚಿನ್ನ?

Published:
Updated:

ನವದೆಹಲಿ(ಐಎಎನ್‌ಎಸ್): ಹಣಕಾಸು ಮಾರುಕಟ್ಟೆ ಚೇತರಿಕೆಯಿಂದ ಸದ್ಯದ ಮಟ್ಟಿಗೆ ಚಿನ್ನದ ಬೆಲೆ ಇಳಿಕೆ ಕಂಡಿರಬಹುದು. ಆದರೆ, ಪೂರೈಕೆ ಕಡಿಮೆ ಇರುವುದರಿಂದ ಈ ಬಾರಿ ಹಬ್ಬಗಳು ಮತ್ತು ಮದುವೆ ಕಾಲದಲ್ಲಿ ಚಿನ್ನ ಮತ್ತೆ ಗಗನಕ್ಕೇರುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಚಿನಿವಾರ ಪೇಟೆ ಮೂಲಗಳು ಹೇಳಿವೆ.`ಚಾಲ್ತಿ ಖಾತೆ ಕೊರತೆ'(ಸಿಎಡಿ) ತಗ್ಗಿಸಲು ಕೇಂದ್ರ ಸರ್ಕಾರ ಚಿನ್ನದ ಆಮದು ಸುಂಕ ಹೆಚ್ಚಿಸಿದೆ. ಇನ್ನೊಂದೆಡೆ ಚಿನ್ನ ವಹಿವಾಟಿನ ಮೇಲೆ `ಆರ್‌ಬಿಐ' ಹಲವು ನಿರ್ಬಂಧಗಳನ್ನು ಹೇರಿದೆ. ಇದರಿಂದ ಮಾರುಕಟ್ಟೆಗೆ ಚಿನ್ನದ ಪೂರೈಕೆ ಕಡಿಮೆಯಾಗಿದ್ದು ಬೇಡಿಕೆ-ಪೂರೈಕೆ ನಡುವಿನ ಅಂತರ ಹೆಚ್ಚಿದೆ. ಇತ್ತೀಚಿನ ಅಮೆರಿಕ -ಸಿರಿಯಾ ಬಿಕ್ಕಟ್ಟು ಕೂಡ ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಹೆಚ್ಚುವಂತೆ ಮಾಡಿದೆ. ಈ ಎಲ್ಲ ಪ್ರತಿಕೂಲ ಸಂಗತಿಗಳು ದೇಶೀಯ ಮಾರುಕಟ್ಟೆಗೆ ಯಾವಾಗ ಬೇಕಾದರೂ ನಕಾರಾತ್ಮಕವಾಗಿ ಅಪ್ಪಳಿಸಬಹುದು ಎಂದು ದೆಹಲಿ ಮೂಲದ ಚಿನ್ನಾಭರಣ ವರ್ತಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.ಕಳೆದ ವಾರಾಂತ್ಯದಲ್ಲಿ ದೆಹಲಿಯಲ್ಲಿ ಚಿನ್ನದ ಧಾರಣೆ 10 ಗ್ರಾಂಗಳಿಗೆರೂ34,600ಕ್ಕೆ ಏರಿದೆ. ಆದರೆ, ನಂತರ ಎರಡು ದಿನಗಳಲ್ಲಿರೂ2,200ರಷ್ಟು ಕುಸಿತ ಕಂಡಿದೆ. ಸದ್ಯರೂ30,500 ಮಟ್ಟಕ್ಕೆ ತಗ್ಗಿದೆ.`ಸದ್ಯ ಚಿನ್ನದ ಬೇಡಿಕೆ ಸಾಮಾನ್ಯ ಮಟ್ಟದಲ್ಲಿಯೇ ಇದೆ. ಆದರೆ, ಹಬ್ಬಗಳು ಮತ್ತು ಮದುವೆ ಕಾಲ ಆರಂಭವಾಗುತ್ತಿದ್ದಂತೆ ಬೇಡಿಕೆ ಇನ್ನಷ್ಟು ಹೆಚ್ಚಲಿದೆ. ಷೇರುಪೇಟೆ ಕುಸಿತ ಕಂಡರೆ, ಹೂಡಿಕೆದಾರರಿಂದಲೂ ದಿಢೀರ್ ಬೇಡಿಕೆ ವ್ಯಕ್ತವಾಗುತ್ತದೆ. ಮಾರುಕಟ್ಟೆ ಹೇಗೆ ವರ್ತಿಸಲಿದೆ ಎಂದು ಹೇಳುವುದು ಕಷ್ಟ. ಚಿನ್ನದ ಪೂರೈಕೆಯಂತೂ ಕಡಿಮೆ ಇದೆ' ಎನ್ನುತ್ತಾರೆ ಅಖಿಲ ಭಾರತ ಚಿನ್ನಾಭರಣ ವರ್ತಕರ ಸಂಘದ ನಿರ್ದೇಶಕ ಹರ್ಷದ್ ಅಜ್ಮೆರಾ.`ಸರ್ಕಾರ ಆಗಸ್ಟ್‌ನಲ್ಲಿ ಚಿನ್ನದ ಆಮದು ಸುಂಕವನ್ನು ಶೇ 10ಕ್ಕೆ ಹೆಚ್ಚಿಸಿದ ನಂತರ ಆಮದು ಗಣನೀಯವಾಗಿ ಇಳಿಕೆ ಕಂಡಿದೆ. ಸ್ಥಳೀಯ ವರ್ತಕರಿಂದಲೂ, ಹೂಡಿಕೆದಾರರಿಂದಲೂ ಚಿನ್ನದ ಬೇಡಿಕೆ ಹೆಚ್ಚಿದೆ. ಹಬ್ಬಗಳು ಸಾಲು ಆರಂಭವಾಗುತ್ತಿದ್ದಂತೆಯೇ ಬೆಲೆ ಮತ್ತೆ ಏರಿಕೆ ಕಾಣಬಹುದು' ಎಂದು  ದೆಹಲಿ ಮೂಲದ ಚಿನ್ನಾಭರಣ ವರ್ತಕರ ಸಂಘದ ಮಾಜಿ ಅಧ್ಯಕ್ಷ ಬಚ್ಚರಾಜ್ ಬಮಲ್ವಾ ಅಭಿಪ್ರಾಯಪಟ್ಟಿದ್ದಾರೆ.`ಸದ್ಯ ಚಿನಿವಾರ ಪೇಟೆಯಲ್ಲಿ 20 ವರ್ಷಗಳ ಹಿಂದಿನ ಸ್ಥಿತಿ ಇದೆ. ಆಗ  ಬೆಲೆ ಏರಿಕೆ ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ. 1962ರ ಚಿನ್ನ ನಿಯಂತ್ರಣ ಕಾಯ್ದೆಯಿಂದ ಚಿನ್ನದ ಕಳ್ಳಸಾಗಣೆ ಹೆಚ್ಚಿತ್ತು. ಆದರೆ, 1992ರಲ್ಲಿ ಸರ್ಕಾರ ಈ ಕಾಯ್ದೆಯನ್ನು ರದ್ದುಪಡಿಸಿ, ಚಿನ್ನ ಆಮದು ಮುಕ್ತಗೊಳಿಸಿತ್ತು. ಇದೀಗ ಮತ್ತೆ ಆಮದು ಸುಂಕ ಏರಿಕೆಯಿಂದ ಕಳ್ಳಸಾಗಣೆಗೆ ಅವಕಾಶ ಲಭಿಸಿದೆ. ಬೆಲೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ' ಎನ್ನುತ್ತಾರೆ ಮೀನಾವಾಲ ಜ್ಯುವೆಲರ್ಸ್‌ನ ಮುಖ್ಯಸ್ಥ ಅಶೋಕ್ ಮೀನಾವಾಲ.`ಸಿಎಡಿ' ಹೊರೆ ಹೆಚ್ಚುತ್ತಿರುವುದು ತೈಲ ಆಮದು ಹೆಚ್ಚಳದಿಂದ. ತೈಲ ಆಮದು ತಗ್ಗಿಸಲು ಕ್ರಮ ಕೈಗೊಳ್ಳುವ ಬದಲು ಸರ್ಕಾರ ಚಿನಿವಾರ ಪೇಟೆ ಮೇಲೆ ಒತ್ತಡ ಹೇರುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.`ಆಮದು ನಿಯಂತ್ರಣದಿಂದ ಕಚ್ಚಾ ಸಾಮಗ್ರಿ ಕೊರತೆ ಉಂಟಾಗಿದೆ. ಇನ್ನೊಂದೆಡೆ ಚಿನ್ನದ ಕಳ್ಳಸಾಗಣೆ ಹೆಚ್ಚುತ್ತಿದೆ. ಗ್ರಾಹಕರ ಜತೆಗೆ ವರ್ತಕರೂ ಬಲಿಪಶುಗಳಾಗಿದ್ದಾರೆ' ಎನ್ನುತ್ತಾರೆ ಬಮಲ್ವಾ.`ಸರ್ಕಾರ ಶೀಘ್ರದಲ್ಲೇ ಚಿನ್ನದ ಆಮದು ನೀತಿಯಲ್ಲಿ ಒಂದಿಷ್ಟು ಪರಿಷ್ಕರಣೆಗಳನ್ನು ಪ್ರಕಟಿಸಲಿದೆ. ಜತೆಗೆ `ಆರ್‌ಬಿಐ'ನ ಹೊಸ ಮಾರ್ಗಸೂಚಿಯೂ ಪ್ರಕಟವಾಗಲಿದೆ. ಇದಕ್ಕಾಗಿ ಕಾಯುತ್ತಿದ್ದೇವೆ' ಎಂದು  ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರನ್ ಪಿ.ಆರ್.ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry