ಸೋಮವಾರ, ಮೇ 23, 2022
21 °C

ಹಬ್ಬಗಳ ಜೊತೆ ಚಿತ್ರಗಳ ಧಮಾಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಮೂರು ತಿಂಗಳು ಹಬ್ಬಗಳ ಸಾಲೇ ಸಾಲು- ನವರಾತ್ರಿ ಕಳೆಯುತ್ತಿದ್ದಂತೆ ದೀಪಾವಳಿ, ಕ್ರಿಸ್ಮಸ್, ಹೊಸ ವರ್ಷದ ಸಡಗರ. ಹಬ್ಬಗಳ ಜೊತೆಯೇ ಬಾಲಿವುಡ್‌ನಲ್ಲಿ ಹೊಸ ಚಿತ್ರಗಳ ಬಿಡುಗಡೆಯ ಸಂಭ್ರಮ. ಈದ್ ಸಂದರ್ಭದಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್‌ನ ‘ದಬಾಂಗ್’ ಭರ್ಜರಿ ಯಶಸ್ಸಿನಿಂದ ಹಿಂದಿ ಚಿತ್ರರಂಗ ಇನ್ನೂ ಅಚ್ಚರಿಪಡುತ್ತಿರುವಾಗಲೇ ರಜನೀಕಾಂತ್‌ನ ‘ಎಂದಿರನ್’ (ರೋಬಾಟ್) ಒಟ್ಟಿಗೇ ವಿಶ್ವದ 3000 ಥಿಯೇಟರ್‌ಗಳನ್ನು ಅಪ್ಪಳಿಸಿತು. ಈ ಅಲೆಯಲ್ಲಿ ನೀಲಿ ಕಣ್ಣಿನ ಲವರ್‌ಬಾಯ್ ರಣಬೀರ್ ಕಪೂರ್- ಪ್ರಿಯಾಂಕಾ ಜೋಡಿಯ ‘ಅಂಜಾನಾ ಅಂಜಾನಿ’ ಕೊಚ್ಚಿಹೋಯಿತು.

ಮೊದಲೇ ದಿನಾಂಕ ಗೊತ್ತುಪಡಿಸಿಕೊಂಡಿದ್ದವರು ಈಗ ಚಿತ್ರವನ್ನು ಬಿಡುಗಡೆ ಮಾಡಲು ಹಿಂದೆಮುಂದೆ ನೋಡುವಂತೆ ಮಾಡಿದ್ದು ರಜನಿಯ ಈ ವೈಜ್ಞಾನಿಕ ಸಿನಿಮಾ. ಆದರೂ ರೀಲ್ ಜೋಡಿ, ನಿಜ ಜೀವನದ ದಂಪತಿ ರಿಶಿ ಕಪೂರ್- ನೀತು ಸಿಂಗ್ ಅಭಿನಯದ    ‘ದೋ ದುನಿ ಚಾರ್’ ತೆರೆಗೆ ಬಂದು ಹಾಗೂ ಹೀಗೂ ತೆವಳುತ್ತ ಸಾಗಿದೆ. ಸಂಜಯ್ ದತ್- ಇರ್ಫಾನ್ ಖಾನ್- ಕಂಗನಾ ರನೌತ್ ನಟಿಸಿದ ‘ನಾಕ್‌ಔಟ್’ ಕೂಡಾ ಬಿಡುಗಡೆಯಾಗಿದೆ. ‘ದಬಾಂಗ್’ ರೀತಿಯಲ್ಲೇ ಆ್ಯಕ್ಷನ್ ಚಿತ್ರವನ್ನು ಮರಳಿ ತೆರೆಗೆ ತಲುಪಿಸಿದ ಚಿತ್ರವಿದು. ಅಜಯ್ ದೇವಗನ್ ಕೂಡಾ ‘ಆಕ್ರೋಶ್’ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬಂದಿದ್ದಾನೆ. ರಣಬೀರ್ ಜೊತೆ ಪೈಪೋಟಿಗಿಳಿದಿರುವ ಇಮ್ರಾನ್ ಖಾನ್ ರಣಬೀರ್‌ನ ಮಾಜಿ ಗೆಳತಿ ದೀಪಿಕಾ ಪಡುಕೋಣೆ ಜೊತೆ ಅಭಿನಯಿಸಿದ ‘ಬ್ರೇಕ್ ಕೆ ಬಾದ್’ ಕೂಡಾ ಕ್ಯೂನಲ್ಲಿದೆ.

ಇವೆಲ್ಲವುಗಳ ಮಧ್ಯೆ ಸೀಕ್ವೆಲ್ ಮುಂದುವರಿದಿದೆ. ‘ಗೋಲ್‌ಮಾಲ್’ನ ಮೂರನೇ ಭಾಗ ನವೆಂಬರ್‌ನಲ್ಲಿ ಬಿಡುಗಡೆ ಕಾಣಲಿದೆ. ಅಜಯ್ ದೇವಗನ್- ಅರ್ಶದ್ ವಾರ್ಸಿ- ತುಷಾರ್ ಕಪೂರ್- ಕರೀನಾ ಕಪೂರ್ ಹಾಸ್ಯದ ಮೂಲಕ ರಂಜಿಸಲು ಕಾದಿದ್ದಾರೆ. ಅಕ್ಷಯ್‌ಕುಮಾರ್‌ನ ‘ಆ್ಯಕ್ಷನ್ ರಿಪ್ಲೇ’ ಚಿತ್ರವೂ ತೆರೆಗೆ ಬರಲು ಸಜ್ಜಾಗಿದೆ. ಇದು ಅದೇ ಹೆಸರಿನ ಗುಜರಾತಿ ನಾಟಕ. ಇದರಲ್ಲಿ ಐಶ್ವರ್ಯ ರೈ 70ರ ದಶಕದ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾಳೆ.

ಒಂದಿಷ್ಟು ಕುತೂಹಲ ಮೂಡಿಸಿರುವ ಚಿತ್ರವೆಂದರೆ ಹೃತಿಕ್- ಐಶ್ವರ್ಯ ರೈ ಜೋಡಿಯ ‘ಗುಜಾರಿಷ್’. ‘ಕೋಯಿ ಮಿಲ್‌ಗಯಾ’, ‘ಕ್ರಿಶ್’ ಮೊದಲಾದ ಆತನ ಹಿಂದಿನ ಚಿತ್ರಗಳಲ್ಲಿ ಒಂದಿಷ್ಟು ಸ್ಪೆಶಲ್ ಎಫೆಕ್ಟ್‌ಗಳಿದ್ದರೆ, ‘ಗುಜಾರಿಷ್’ನಲ್ಲಿ ಸ್ವತಃ ಹೃತಿಕ್ ಟ್ರಿಕ್‌ಗಳನ್ನು ಮಾಡಿದ್ದಾನಂತೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೃತಿಕ್‌ಗೆ ಉಕ್ರೇನ್ ಮೂಲದ ಜಾದೂಗಾರನಿಂದ ತರಬೇತಿ ಕೊಡಿಸಿದ್ದಾನಂತೆ. ಜೊತೆಗೆ ‘ಧೂಮ್-2’ನಲ್ಲಿ ಮಿಂಚಿದ್ದ ಐಶ್ವರ್ಯ- ಹೃತಿಕ್ ಜೋಡಿಯ ತೆರೆಯ ಮೇಲಿನ ರೋಮಾನ್ಸ್ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬುದು ಬನ್ಸಾಲಿಯ ಲೆಕ್ಕಾಚಾರ. ಬಹಳ ಕಾಲ ತಣ್ಣಗೆ ಕುಳಿತಿದ್ದ ರಾಂಗೋಪಾಲ್ ವರ್ಮಾನ ‘ರಕ್ತ ಚರಿತ್ರ’ ಈ ಶುಕ್ರವಾರವೇ ತೆರೆಗೆ ಬರಲಿದ್ದು ಅದರ ಸೀಕ್ವೆಲ್ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ವಿವೇಕ್ ಒಬೆರಾಯ್, ಕನ್ನಡಿಗ ಸುದೀಪ್ ನಟಿಸಿದ ಚಿತ್ರವಿದು.

ಕ್ರಿಸ್ಮಸ್‌ನಲ್ಲಿ ಚಿತ್ರ ಬಿಡುಗಡೆ ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ಕೋಲಾಹಲ ಎಬ್ಬಿಸುವ ಅಮೀರ್ ಖಾನ್ ಈ ಬಾರಿ ಮೌನವಾಗಿದ್ದಾನೆ. ಆದರೆ ಆ ಜಾಗವನ್ನು ಫರ್ಹಾ ಖಾನ್ ಗಿಟ್ಟಿಸಿಕೊಂಡಿದ್ದಾಳೆ. ‘ತೀಸ್ ಮಾರ್ ಖಾನ್’ ಕ್ರಿಸ್ಮಸ್ ಸಂದರ್ಭದಲ್ಲಿ ತೆರೆಗೆ ಬರಲಿದೆಯಂತೆ. ಒಂದು ಕಾಲದ ಸ್ನೇಹಿತ ಶಾರುಖ್ ಖಾನ್‌ನನ್ನು ಕೈಬಿಟ್ಟಿರುವ ಫರ್ಹಾ ಈಗ ಶಾರುಖ್‌ನ ವಿರೋಧಿ ಬಣದ ಅಕ್ಷಯ್ ಕುಮಾರ್‌ನನ್ನು ಹಾಕಿಕೊಂಡು ಈ ಚಿತ್ರ ತೆಗೆದಿದ್ದಾಳೆ. ಕತ್ರೀನಾ ಕೈಫ್ ಹಿಂದೆ ಕಿಮಿ ಕಾಟ್ಕರ್ ಕುಣಿದಿದ್ದ ‘ಜುಮ್ಮಾ ಚುಮ್ಮಾ ದೇ ದೇ’ ಹಾಡಿಗೆ ನರ್ತಿಸಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಲಿದ್ದಾಳಂತೆ. ಎಲ್ಲವೂ ಯೋಜನೆ ಪ್ರಕಾರ ನಡೆದರೆ 500 ಕೋಟಿ ರೂಪಾಯಿ ಮೇಲೆ ನಿಂತಿರುವ ಈ ಹಲವಾರು ಚಿತ್ರಗಳು ಹಣವನ್ನು ಬಾಚಿ ಬಾಚಿ ನಿರ್ಮಾಪಕರಿಗೆ ನೀಡಬೇಕು. ಆದರೆ ದೀಪಾವಳಿ ಪಟಾಕಿಯಂತೆ ಎಷ್ಟು ಚಿತ್ರಗಳು ಠುಸ್ ಎನ್ನುತ್ತಾವೋ, ಎಷ್ಟು ಸದ್ದು ಮಾಡುತ್ತಾವೋ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.