ಶನಿವಾರ, ಜನವರಿ 18, 2020
27 °C

ಹಬ್ಬದ ಸಂಭ್ರಮಕ್ಕೆ ವರ್ತಕರ ಬರೆ: ಪರದಾಟ

ಪ್ರಜಾವಾಣಿ ವಾರ್ತೆ ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: `ಇವತ್ತ ಸಂಕ್ರಾಂತಿ ಹಬ್ಬ ಐತಿ ಅಂತ ಯಾದಗಿರಿ ಪ್ಯಾಟಿಗಿ ಬಂದೇವ್ರಿ. ಇಲ್ಲಿ ನೋಡಿದ್ರ ಒಂದೂ ಅಂಗಡಿ ತೆರದಿಲ್ರಿ. ಮಕ್ಕಳಿಗೆ, ಊರಿಂದ ಬಂದ ಮಂದಿಗೆ ಬಟ್ಟಿ, ಸೀರಿ ಖರೀದಿ ಮಾಡಾಕ ಅಂತ ಮುಂಜಾನೆನ ಎಲ್ಲ ಕೆಲಸ ಬಿಟ್ಟ ಬಂದೇವ್ರಿ. ಹಬ್ಬದ ಸಂತಿ ಖರೀದಿ ಮಾಡೋದ ಐತಿ. ಕಿರಾಣಿ ಅಂಗಡಿನೂ ತೆರದಿಲ್ರಿ. ಹಿಂಗಾದ್ರ ಹಬ್ಬ ಹೆಂಗ ಮಾಡೋಣ ಹೇಳ್ರಿ~ಭಾನುವಾರ ನಗರದಲ್ಲಿ ಗ್ರಾಹಕರು ಪರದಾಡಿದ ದೃಶ್ಯವಿದು. ಬೆಳಿಗ್ಗೆಯಿಂದಲೇ ನಗರದಲ್ಲಿ ಅಂಗಡಿಗಳೆಲ್ಲವೂ ಬಾಗಿಲು ಮುಚ್ಚಿದ್ದರಿಂದ ಹಬ್ಬದ ಸಂಭ್ರಮಕ್ಕೆ ತೆರೆ ಎಳೆಯಬೇಕಾಯಿತು. ಒಂದೆಡೆ ಮಕ್ಕಳು ಹೊಸ ಬಟ್ಟೆ ಬೇಕೆಂದು ಹಟ ಹಿಡಿದರೆ, ಅಂಗಡಿಯ ಬಾಗಿಲು ತೆರೆಯುವುದೇ ಇಲ್ಲ ಎಂಬ ಹಟ ವರ್ತಕರದ್ದು. ಮಕರ ಸಂಕ್ರಾಂತಿ ಹಬ್ಬಕ್ಕೆ ಬೇಕಿದ್ದ ಸಂತೆ, ಸಾಮಾನುಗಳ ಖರೀದಿ ಒಂದೆಡೆ ಇರಲಿ, ಮಕ್ಕಳು ಬೇಡಿದ ಬಟ್ಟೆಯನ್ನೂ ಕೊಡಿಸದಂತಹ ಸ್ಥಿತಿ ಪಾಲಕರದ್ದು.ಇಷ್ಟೆಲ್ಲ ಆಗಿರುವುದು ಕಾರ್ಮಿಕ ಇಲಾಖೆಯ ಅವೈಜ್ಞಾನಿಕ ನೀತಿಯಿಂದ. ಕಾರ್ಮಿಕ ಇಲಾಖೆಯ ಕಾಯ್ದೆ ಪ್ರಕಾರ ಅಂಗಡಿಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಅದೂ ಭಾನುವಾರವೇ ಆಗಬೇಕೆಂದಿಲ್ಲ. ಆದರೆ ಇಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ವರ್ತಕರ ಜೊತೆ ಸಮಾಲೋಚನೆ ನಡೆಸಿ, ಭಾನುವಾರವೇ ಮಾರುಕಟ್ಟೆಯ ಎಲ್ಲ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಇದರ ಪರಿಣಾಮವಾಗಿ ಗ್ರಾಹಕರು ಹಬ್ಬದ ದಿನವೇ ಪರದಾಡುವ ಪ್ರಸಂಗ ಎದುರಾಯಿತು. ಕಾರ್ಮಿಕ ಇಲಾಖೆಗೂ, ಅಂಗಡಿ ಬಂದ್ ಮಾಡಿದ ವರ್ತಕರಿಗೂ, ಹಳ್ಳಿಗಳಿಂದ ಬಂದಿದ್ದ ಗ್ರಾಹಕರು ಹಾಕಿದ ಹಿಡಿಶಾಪ ಅಷ್ಟಿಷ್ಟಲ್ಲ.`ಮುಂದಿನ ವಾರ ತಿಳಿತೈತಿ~

ಭಾನುವಾರ ಏಕಾಏಕಿ ಯಾದಗಿರಿಯ ಮಾರುಕಟ್ಟೆಯಲ್ಲಿ ಅಂಗಡಿಗಳು ಬಂದ್ ಇರುವುದನ್ನು ನೋಡಿದ ಗ್ರಾಹಕರು, ಅರೆಕ್ಷಣ ಯೋಚಿಸುವಂತಾಯಿತು. ಹಬ್ಬದ ದಿನ ಏನಾದರೂ ಬಂದ್ ಕರೆ ನೀಡಲಾಗಿದೆಯೇ ಎಂದು ಆಲೋಚಿಸಿದ್ದೂ ಆಯಿತು. ಆದರೆ ಕಾರ್ಮಿಕ ಇಲಾಖೆಯ ನೀತಿಯ ಅನುಗುಣವಾಗಿ ಈ ಬಂದ್ ಮಾಡಲಾಗಿದೆ ಎಂಬ ಮಾಹಿತಿ ತಿಳಿದ ಜನರು, `ಹಬ್ಬದ ದಿನಾನ ಇದ ಆಗಬೇಕೇನ್ರಿ~ ಎನ್ನುವ ಆಕ್ರೋಶ ವ್ಯಕ್ತಪಡಿಸಿದರು.ಭಾನುವಾರ ಎಲ್ಲೆಡೆ ಏಕಾಏಕಿ ಅಂಗಡಿಗಳನ್ನು ಬಂದ್ ಮಾಡಿದ್ದರ ಬಗ್ಗೆ ಕಾರ್ಮಿಕ ಇಲಾಖೆ ತಾಲ್ಲೂಕು ಅಧಿಕಾರಿ ನೀಡಿದ ಪ್ರತಿಕ್ರಿಯೆ ಆಶ್ಚರ್ಯ ಮೂಡಿಸುವಂತಿದೆ. ಭಾನುವಾರ ಅಂಗಡಿಗಳನ್ನು ಬಂದ್ ಮಾಡುವುದಾಗಿ ಜನರಿಗೆ ತಿಳಿಸಿಲ್ಲವಾದ್ದರಿಂದ ಪರದಾಡುವಂತಾಗಿದೆ. ಈ ಬಗ್ಗೆ ಮೊದಲೇ ತಿಳಿಸಿದ್ದರೆ, ಒಳ್ಳೆಯದಿತ್ತು ಎಂದು ಕೆಲ ಜನರು ಕೇಳಿದರು. ಇದಕ್ಕೆ ಉತ್ತರ ನೀಡಿದ ಕಾರ್ಮಿಕ ಇಲಾಖೆ ಅಧಿಕಾರಿ ಚವ್ಹಾಣ, `ಈ ವಾರ ಬಂದ್ ಮಾಡೇವ್ರಿ. ಮುಂದಿನ ವಾರದಿಂದ ಎಲ್ಲಾರಿಗೂ ತಿಳಿತೈತಿ ಬಿಡ್ರಿ. ಜನರಿಗ್ಯಾಕ ತಿಳಸಬೇಕ್ರಿ~ ಎಂದು ಹೇಳಿದರು.ಇದರಿಂದ ತೀವ್ರ ಆಕ್ರೋಶಗೊಂಡ ಗ್ರಾಹಕರು, ತಿಳಿದಾಗ ಅಂಗಡಿ ಬಂದ್ ಮಾಡಿದರೆ, ಹೇಗೆ ಎಂಬ ಪ್ರಶ್ನೆ ಮುಂದಿಟ್ಟಾಗ, `ಅದೆಲ್ಲ ವರ್ತಕರ ಸಂಘದ ನಿರ್ಧಾರ. ನಾವೇನೂ ಮಾಡಾಕ ಆಗುದುಲ್ರಿ~ ಎಂದು ಹೇಳಿ ಜಾರಿಕೊಂಡರು.ಮರೆಯಾದ ಸಂಭ್ರಮ

ಮಕರ ಸಂಕ್ರಾಂತಿ ಹಬ್ಬಕ್ಕಾಗಿ ತರಹೇವಾರಿ ತಿಂಡಿ, ಊಟಗಳನ್ನು ಮಾಡುವುದು ಈ ಭಾಗದಲ್ಲಿ ವಿಶೇಷ. ಆದರೆ ಭಾನುವಾರ ಅಂಗಡಿಗಳನ್ನು ಬಂದ್ ಮಾಡುವ ಬಗ್ಗೆ ಯಾವುದೇ ಸೂಚನೆ ಇಲ್ಲದ ಗ್ರಾಹಕರು, ಭಾನುವಾರ ಸಾಕಷ್ಟು ಪರದಾಡಬೇಕಾಯಿತು. ಅಗತ್ಯವಿರುವ ಕಿರಾಣಿ ಸಾಮಗ್ರಿಗಳು ಇಲ್ಲದೇ, ಇದ್ದುದರಲ್ಲಿಯೇ ಹಬ್ಬ ಮಾಡಬೇಕಾಯಿತು.ಇನ್ನೊಂದೆಡೆ ತಾಲ್ಲೂಕಿನ ಮೈಲಾಪುರದಲ್ಲಿ ಜಾತ್ರೆ ನಡೆಯುತ್ತಿದ್ದು, ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಭಾನುವಾರ ನಗರಕ್ಕೆ ಆಗಮಿಸಿದ ಈ ಭಕ್ತಾದಿಗಳಿಗೂ ಅಘೋಷಿತ ಬಂದ್‌ನ ಬಿಸಿ ತಟ್ಟಿತು.

ಒಂದೇ ದಿನ ಎಲ್ಲ ಅಂಗಡಿಗಳನ್ನು ಬಂದ್ ಮಾಡಿದರೆ ಹೇಗೆ? ಕಾರ್ಮಿಕರಿಗೆ ಒಂದು ದಿನ ರಜೆ ನೀಡಬೇಕಾದರೆ, ಸರದಿಯ ಪ್ರಕಾರ ಅಂಗಡಿಗಳಿಗೆ ರಜೆ ನೀಡಬೇಕು. ಆದರೆ ಎಲ್ಲ ಅಂಗಡಿಗಳನ್ನು ಒಂದೇ ಬಾರಿಗೆ ಬಂದ್ ಮಾಡಿದರೆ, ಜನರು ಗತಿ ಏನು? ಗ್ರಾಹಕರಿಂದಲೇ ವರ್ತಕರಿದ್ದಾರೆಯೋ ಅಥವಾ ವರ್ತಕರಿಂದ ಗ್ರಾಹಕರಿದ್ದಾರೆಯೋ? ಎಂಬುದೇ ತಿಳಿಯದಂತಾಗಿದೆ. ಮನಸ್ಸಿಗೆ ಬಂದಂತೆ ಅಂಗಡಿಗಳನ್ನು ಬಂದ್ ಮಾಡುತ್ತ ಹೊರಟರೆ, ಗ್ರಾಹಕರು ಯಾದಗಿರಿ ಮಾರುಕಟ್ಟೆಯಲ್ಲಿ ಖರೀದಿಯನ್ನೇ ಬಿಡಬೇಕಾದೀತು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಆಕ್ರೋಶ ವ್ಯಕ್ತಪಡಿಸುತ್ತಾರೆ.ಅಂಗಡಿಗಳಿಗೆ ಅನ್ವಯಿಸುವ ನಿಯಮ, ಹೊಟೆಲ್ ಮತ್ತು ಬಾರ್‌ಗಳಿಗೆ ಏಕೆ ಅನ್ವಯಿಸುವುದಿಲ್ಲ ಎಂದು ಪ್ರಶ್ನಿಸುವ ಭೀಮುನಾಯಕ, ರಾಜ್ಯದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ ಮುಂತಾದೆಡೆ ಇರದ ನಿಯಮಗಳು, ನೂತನ ಜಿಲ್ಲಾ ಕೇಂದ್ರವಾಗಿರುವ ಯಾದಗಿರಿಗೆ ಮಾತ್ರ ಸೀಮಿತವಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಯಾರ ಗಮನಕ್ಕೂ ತರದೇ ವರ್ತಕರು ಹಾಗೂ ಕಾರ್ಮಿಕ ಇಲಾಖೆ ಏಕಪಕ್ಷೀಯವಾಗಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಜನ ವಿರೋಧಿ. ಈ ಬಗ್ಗೆ ಕರವೇ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸುತ್ತಾರೆ.

 

ಪ್ರತಿಕ್ರಿಯಿಸಿ (+)