ಹಬ್ಬ ಆಚರಣೆ ಉಪನ್ಯಾಸಕ್ಕೆ ಸೀಮಿತವಾಗಿವೆ

7

ಹಬ್ಬ ಆಚರಣೆ ಉಪನ್ಯಾಸಕ್ಕೆ ಸೀಮಿತವಾಗಿವೆ

Published:
Updated:

ಮುನಿರಾಬಾದ್: ಈಚಿನ ದಿನಗಳಲ್ಲಿ ಹಬ್ಬ ಹರಿದಿನಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿವೆ. ಭಕ್ತಿ, ಶ್ರಧ್ಧೆ, ದೇವರು, ಅಧ್ಯಾತ್ಮ ಬರೀ ಉಪನ್ಯಾಸದ ಪದಗಳಾಗಿವೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ವಿಷಾದಿಸಿದರು.ಹುಲಿಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುಧವಾರ ಅವರು ಉಪನ್ಯಾಸ ನೀಡುತ್ತಿದ್ದರು. ಹಬ್ಬಗಳು ವ್ಯಕ್ತಿಯ ಮನಸ್ಸನ್ನು ಎತ್ತರಕ್ಕೇರಿಸುವ ಶಕ್ತಿ ಹೊಂದಿವೆ. ವ್ಯಕ್ತಿಯ ಉದ್ಧಾರ ಮತ್ತು ಅವನತಿ ಅವನ ಕೈಯಲ್ಲೇ ಇದೆ.ಯಾರು ಮನಸ್ಸನ್ನು ಗೆಲ್ಲುವ ಸಾಮರ್ಥ್ಯ ಹೊಂದಿರುತ್ತಾರೋ ಅವರು ಜಗತ್ತನ್ನು ಗೆಲ್ಲುತ್ತಾರೆ. ಆತ್ಮ ಎನ್ನುವುದು ಎಲ್ಲಾ ಶಕ್ತಿಗಳ ತವರು. ಬುದ್ಧಿ ಅದರ ಪ್ರತಿಫಲಿತ ಬೆಳಕು (ರಿಫ್ಲೆಕ್ಟೆಡ್ ಲೈಟ್) ಮಾತ್ರ.ಗೀತೆಯಲ್ಲಿ ಶ್ರೀಕೃಷ್ಣ `ನನ್ನನ್ನು ನೆನೆಯುವವನ ಶಕ್ತಿಯನ್ನು ಮೇಲ್ಸತರಕ್ಕೆ ಎತ್ತುತ್ತೇನೆ, ಅಜ್ಞಾನವನ್ನು ಹರಣ ಮಾಡುತ್ತೇನೆ~ ಎಂದು ಹೇಳಿದ್ದಾನೆ.ದಸರಾ ಹಬ್ಬದ ಆಚರಣೆಯ ಹಿನ್ನೆಲೆ ಶಕ್ತಿದೇವತೆಯ ಆರಾಧನೆ. ಪ್ರಪಂಚದ ಸೃಷ್ಟಿಗೆ ದೇವಿಯೇ(ಸ್ತ್ರೀ) ಕಾರಣ. ವೇದಾಂತದ ಪ್ರಕಾರ ರಾಮ, ಕೃಷ್ಣ ಇವರೆಲ್ಲ ದೇವರಲ್ಲ. ಏಕೆಂದರೆ ಇವರೆಲ್ಲ ನಶ್ವರ ಶರೀರ ಹೊಂದಿದ್ದವರು ಈಗ ಅವರಿಗೆ ಅಸ್ತಿತ್ವವಿಲ್ಲ. ವೇದಾಂತದ ಪ್ರಕಾರ ದೇವರೆಂದರೆ (ಸತ್‌ಚಿತ್‌ಆನಂದ) ಸಚ್ಚಿದಾನಂದ ಅಂದರೆ ಮಾಯೆ ಅಥವಾ ಶಕ್ತಿದೇವತೆ. ಏಕವಾಗಿದ್ದ ಮಾಯಾರೂಪಿ ಸಚ್ಚಿದಾನಂದ ಶಿವ ಒಂದು ಸಾರಿ ಬಹುವಾಗಬೇಕೆಂದು ಆಸೆಪಟ್ಟ. ಆನಂತರ ಸೃಷ್ಟಿಯಾಗಿದ್ದೇ ಪ್ರಪಂಚ ಅಥವಾ ಜೈವಿಕ ಜಗತ್ತು. ಯಾವುದು ಘಟಿಸುವುದಿಲ್ಲವೋ ಅದನ್ನು ಘಟಿಸುವಂತೆ ಮಾಡುವುದೇ ದೇವಿಯಶಕ್ತಿ. ದೇವಿಯ ಕೃಪೆಗೆ ಪಾತ್ರರಾಗಿ ನಿರಕ್ಷರಕುಕ್ಷಿಯಾಗಿದ್ದ ಕುರಿಗಾರ ಕಾಳಿದಾಸ ಪ್ರಕಾಂಡ ಪಂಡಿತನಾದ.ಪಾಮರನಾಗಿದ್ದ ರಾಮಕೃಷ್ಣ ಪರಮಹಂಸ ಪಂಡಿತನಾದ. ಯಾವುದು ಅಸಾಧ್ಯವೋ ಅದನ್ನು ಸಾಧ್ಯವಾಗಿಸುವುದೇ ಶಕ್ತಿ. ಅಂಥಹ ಶಕ್ತಿದೇವತೆಯ ಆರಾಧನೆಗೆ ಪ್ರಶಸ್ತ ಕಾಲವೇ ಶರನ್ನವರಾತ್ರಿ.

ಈ ಒಂಭತ್ತು ದಿನಗಳಲ್ಲಿ ದೇವಿಯ ಆರಾಧನೆ ಮಾಡಿ, ದೇವಿಯ ಆಶೀರ್ವಾದದಿಂದ ಆತ್ಮಶಕ್ತಿಯನ್ನು ಉನ್ನತೀಕರಿಸಿಕೊಂಡು ಸುಖ ಶಾಂತಿಯಿಂದ ಬಾಳಿ ಎಂದು ಉಪನ್ಯಾಸದಲ್ಲಿ ಹೇಳಿದರು. ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಚ್.ಕಾಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಸಿ,ಎಸ್.ಚಂದ್ರಮೌಳಿ ವೇದಿಕೆಯಲ್ಲಿದ್ದರು.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry