ಹಬ್ಬ ಆಚರಣೆ: ಭೂಸ್ವಾಧೀನ ಕಾರ್ಯ ಸ್ಥಗಿತ

ಶನಿವಾರ, ಜೂಲೈ 20, 2019
28 °C

ಹಬ್ಬ ಆಚರಣೆ: ಭೂಸ್ವಾಧೀನ ಕಾರ್ಯ ಸ್ಥಗಿತ

Published:
Updated:

ಭುವನೇಶ್ವರ: ರಾಜ್ಯದಾದ್ಯಂತ ಮೂರು ದಿನಗಳವರೆಗೆ ಆಚರಿಸುವ ಸ್ಥಳೀಯ ಜನಪ್ರಿಯ `ರಾಜ~ ಹಬ್ಬದ ಕಾರಣ ಈ ತಿಂಗಳ 17ರವರೆಗೆ ದಕ್ಷಿಣ ಕೊರಿಯಾದ ಪೋಸ್ಕೊ ಬೃಹತ್ ಉಕ್ಕು ಯೋಜನೆಗೆ ಈಗ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಸ್ಥಳೀಯ ಆಡಳಿತ ನಿರ್ಧರಿಸಿದೆ. ಇದರಿಂದಾಗಿ ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಧಿನ್ಕಿಯಾ ಪಂಚಾಯತ್‌ನಲ್ಲಿ ಸದ್ಯಕ್ಕೆ ಶಾಂತಿಯುತ ವಾತಾವರಣ ಮರಳಿದೆ.ಪೋಸ್ಕೊ ಪ್ರತಿರೋಧ್ ಸಂಗ್ರಾಮ ಸಮಿತಿ (ಪಿಪಿಎಸ್‌ಎಸ್)  ಜೂನ್ 17ರ ನಂತರ ಹೋರಾಟ ತೀವ್ರಗೊಳಿಸುವುದಾಗಿ ಈಗಾಗಲೇ ಪ್ರಕಟಿಸಿದ್ದರೆ, ಜಗತ್‌ಸಿಂಗ್‌ಪುರ ಜಿಲ್ಲಾಡಳಿತವು ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂಬ ಇಂಗಿತ ನೀಡಿದೆ. ಕಾಂಗ್ರೆಸ್‌ನ, ವಿಶೇಷವಾಗಿ ಪರಿಸರ ಸಚಿವ ಜೈರಾಮ್ ರಮೇಶ್ ಬೆಂಬಲ ಹೋರಾಟಗಾರರ ನೈತಿಕ ಸ್ಥೈರ್ಯ ಹೆಚ್ಚಿಸಿದೆ.ರಮೇಶ್ ಅವರು ಭಾನುವಾರ ರಾಜ್ಯ ಸರ್ಕಾರಕ್ಕೆ ಕಳುಹಿಸಿದ ಪತ್ರದಲ್ಲಿ, ಭೂಸ್ವಾಧೀನವನ್ನು ಬಲವಂತದಿಂದ ಅಥವಾ ಪೊಲೀಸ್ ಪಡೆ ನೆರವಿನಿಂದ ವಶಪಡಿಸಿಕೊಳ್ಳಬಾರದು ಎಂದು ಸೂಚಿಸಿದ್ದರು.ಕಾಂಗ್ರೆಸ್‌ನ ರಾಜ್ಯ ಘಟಕವು ಈಗಾಗಲೇ ಹೋರಾಟನಿರತ ಗ್ರಾಮಸ್ಥರ ಬೆಂಬಲಕ್ಕೆ ನಿಂತಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಮತ್ತು ಒಡಿಶಾ ಉಸ್ತುವಾರಿ ವಹಿಸಿರುವ ಜಗದೀಶ್ ಟೈಟ್ಲರ್ ಮತ್ತು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀಕಾಂತ್ ಜೆನಾ ಅವರು ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.ಪೊಲೀಸ್ ಪಡೆ ಬಳಸಿಲ್ಲ- ಪೋಸ್ಕೊ ಯೋಜನೆಗಾಗಿ ಪರದೀಪ್ ಬಳಿ ಪೊಲೀಸರ ಉಸ್ತುವಾರಿಯಲ್ಲಿ ಬಲವಂತದಿಂದ ಭೂಮಿ ವಶಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸೋಮವಾರ ಅಸಂಬದ್ಧ ಎಂದು ತಳ್ಳಿ ಹಾಕಿದ್ದಾರೆ. `ಶಾಂತಿಯುತ ಕೈಗಾರೀಕರಣ~ದಲ್ಲಿ ತಮ್ಮ ಸರ್ಕಾರಕ್ಕೆ ನಂಬಿಕೆ ಇರುವುದರಿಂದ ಭೂಸ್ವಾಧೀನಕ್ಕೆ ಒತ್ತಾಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry