ಹಬ್ಬ ಮುಗಿಯಿತು; ಕಾವು ಇನ್ನೂ ಇದೆ...

7

ಹಬ್ಬ ಮುಗಿಯಿತು; ಕಾವು ಇನ್ನೂ ಇದೆ...

Published:
Updated:

ಸಾವಧಾನಕ್ಕೆ ಇನ್ನೊಂದು ಹೆಸರು ಗಣಪ. ಗೌಜಿ, ಸದ್ದುಗದ್ದಲವೇನಿದ್ದರೂ ಹಬ್ಬ ಆಚರಿಸುವವರದು. ಬೀದಿ ಬೀದಿಗಳಲ್ಲಿ ಪೂಜೆಗೊಂಡರೂ ಆರ್ಕೆಸ್ಟ್ರಾ, ಮೆರವಣಿಗೆ – ಕುಣಿತಗಳಿಗೆ ಕಾರಣನಾದರೂ ಗಣೇಶನದು ಸ್ಥಿತಪ್ರಜ್ಞೆ.ಭಾರತ ಕಥನ ಹೇಳಿದ ವ್ಯಾಸಮುನಿಗಷ್ಟೇ ಹೇಳುವ ಆತುರ, ತುರ್ತು; ಗಣಪನ ಪಾಲಿಗೋ ಅದನ್ನು ದಾಖಲಿಸುವುದು ನವಿಲುಗರಿ ಎತ್ತಿದಷ್ಟು ಹಗುರ, ತನ್ನ ಲೀಲಾವಿನೋದದ ಒಂದು ಭಾಗ. ಈ ಸಾವಧಾನ ಮತ್ತು ಆತುರ ಇವತ್ತಿನ ಬದುಕಿಗೆ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತವೆ ನೋಡಿ: ಸಾವಧಾನ ಎನ್ನುವುದು ನಮ್ಮೆಲ್ಲರ ಹಂಬಲ, ವೇಗ ಎನ್ನುವುದು ವಾಸ್ತವದ ಅನಿವಾರ್ಯತೆ.ಮಳೆಯ ನಂತರದ ಹನಿಗಳಂತೆ ಹಬ್ಬ ಮುಗಿದರೂ ಗಣಪನ ಗುಂಗು ಸುಲಭಕ್ಕೆ ಮುಗಿಯುವುದಿಲ್ಲ. ಒಂದು ಕೇರಿಯಲ್ಲಿ ಮುಳುಗುವ ಗಣಪ ಮತ್ತೊಂದು ಬೀದಿಯಲ್ಲಿ ಏಳುತ್ತಾನೆ. ಗಣಪನ ಜ್ವರದ ಕಾವು ರಾಜ್ಯೋತ್ಸವದವರೆಗೂ ಇರುವಂತಹದು. ಈ ಸಲದ ಹಬ್ಬವನ್ನೇ ನೋಡಿ– ಕೆರೆಕೊಳ್ಳಗಳಲ್ಲಿ ಜೀರ್ಣಗೊಂಡ ಹಾಗೂ ಪೂರಾ ಅರಗದೆ ಉಳಿದ ಸಾವಿರ ಸಾವಿರ ಗಣಪ ಮೂರ್ತಿಗಳ ಕುರುಹಿದ್ದರೂ ಉತ್ಸವದ ಸರತಿ ಮಾತ್ರ ಇನ್ನೂ ಇದೆ. ಭಕ್ತಿಯ ಮಾತು ಹೊರತುಪಡಿಸಿ ನೋಡುವುದಾದರೂ, ಈ ಗಣೇಶ ಸಂಭ್ರಮ ಒಂದಷ್ಟು ಜನರಿಗೆ ಅನ್ನದ ದಾರಿ ಆಗಿರುವುದಂತೂ ನಿಜ. ಆ ಕಾರಣದಿಂದಲೂ ಗಣೇಶ ಭಕ್ತವತ್ಸಲ!ಅಂಕದ ಪರದೆಯಾಚೆಗೆ ಸಾಗುತ್ತಿರುವಂತೆ ಕಾಣುವ ಬಣ್ಣದ ಗಣಪ ಒಂದೆಡೆ, ಇನ್ನೊಂದು ಬದಿಗೆ ಬಟ್ಟೆ ಮರೆತಂತೆ ಕಾಣಿಸುವ ಗಣಪ. ಹಬ್ಬದ ಸಂಭ್ರಮ ಮತ್ತು ನಂತರದ ನಿರ್ವಾತವನ್ನು ಧ್ವನಿಸುವಂತಿರುವ ಈ ಎರಡು ಮೂರ್ತಿಗಳ ನಡುವೆ ಬದುಕು ಹುಡುಕುತ್ತಿರುವಂತೆ ಕಾಣಿಸುತ್ತಿರುವ ಚೌಕಳಿ ಲುಂಗಿಧಾರಿ. ಬದುಕಿನ ಲೆಕ್ಕಾಚಾರವೂ ಇಷ್ಟೇ ಅಲ್ಲವೇ?ಗಣೇಶೋತ್ಸವದೊಂದಿಗೆ ಈಗ ಪರಿಸರ ಕಾಳಜಿ ತಳುಕು ಹಾಕಿಕೊಂಡಿದೆ. ಬಣ್ಣರಹಿತ ಗಣಪಂದಿರಿಗೂ ಬಲು ಬೇಡಿಕೆಯಿದೆ. ಹಾಗೆ ನೋಡಿದರೆ, ಮಣ್ಣಿನಿಂದ ರೂಪುಗೊಂಡು, ಮಣ್ಣಲ್ಲೇ ಲೀನವಾಗುವ, ನಿಜವಾದ ‘ಮಣ್ಣಿನ ಮಗ’ನಿಗೆ ಕೃತಕ ಸಿಂಗಾರವಾದರೂ ಯಾಕೆ ಬೇಕು? ತನ್ನನ್ನು ರೂಪಿಸಿದ ಕಲಾಕಾರರು ಮತ್ತು ಕಾರ್ಮಿಕರ ಬದುಕಿನಲ್ಲಿ ಇಲ್ಲದ ಬಣ್ಣಗಳನ್ನು ಗಣಪನಾದರೂ ಹೇಗೆ ಬಯಸಿಯಾನು?ಹೀಗೆ ಹಲವು ಜಿಜ್ಞಾಸೆಗಳಿಗೆ ಕಾರಣನಾಗುವ ಗಣಪತಿ ಮತ್ತು ಆತನ ಹಬ್ಬ ಕ್ಯಾಲೆಂಡರಿನ ಲೆಕ್ಕದ ಪ್ರಕಾರ ಮುಗಿದಿದೆ. ಆದರೆ, ನಮ್ಮ ಗಣಕದೊಂದಿಗೇ ತಳುಕು ಹಾಕಿಕೊಂಡ ಬೆನಕನೆಂಬ ಈ ಆದಿಲೇಖಕ ಸಾವಧಾನ, ಜೀವನ ಪ್ರೀತಿ, ಸರಳತೆಗಳಂತಹ ತನ್ನ ಗುಣವಿಶೇಷಗಳಿಂದ ಎಲ್ಲ ಕಾಲದಲ್ಲೂ ನಮ್ಮೊಂದಿಗೆ ಸಂವಾದಿಸುತ್ತಲೇ ಇರುತ್ತಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry