ಬುಧವಾರ, ಮೇ 12, 2021
25 °C

ಹಮಾರಾ ಶೆಲ್ಟರ್ಸ್‌ಗೆ ಬಿಬಿಎಂಪಿ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಲ್ಲೇಶ್ವರದಲ್ಲಿ ಸ್ವಸ್ತಿಕ್ ಮೆಟ್ರೊ ರೈಲು ನಿಲ್ದಾಣ ಕಾಮಗಾರಿಗೆ ಭೂಕಬಳಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮಂತ್ರಿ ಡೆವಲಪರ್ಸ್‌ನ ಅಂಗಸಂಸ್ಥೆ ಹಮಾರಾ ಶೆಲ್ಟರ್ಸ್‌ಗೆ ಕಾರಣ ಕೇಳಿ ಬಿಬಿಎಂಪಿ ಮೂರು ನೋಟಿಸ್‌ಗಳನ್ನು ನೀಡಿದೆ. ಸರ್ಕಾರಿ ಜಮೀನು ಒತ್ತುವರಿ, ಅಕ್ರಮವಾಗಿ ಟಿಡಿಆರ್ ಪಡೆದಿರುವುದು ಹಾಗೂ ಜಕ್ಕರಾಯನ ಕೆರೆಯ ಒಂದು ಭಾಗವನ್ನು ಒತ್ತುವರಿ ಮಾಡಿಕೊಂಡಿರುವ ಸಂಬಂಧ ನೋಟಿಸ್ ನೀಡಲಾಗಿದೆ.`ನಿರ್ಮಾಣ, ಕಾರ್ಯಾಚರಣೆ ಹಾಗೂ ವರ್ಗಾವಣೆ~ ಆಧಾರದ ಮೇಲೆ ಮಂತ್ರಿ ಡೆವಲಪರ್ಸ್‌ ಜತೆಗೆ 99 ವರ್ಷಗಳ ಒಪ್ಪಂದಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿತ್ತು. ಆದರೆ ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ಒಟ್ಟು 5.04 ಎಕರೆ ಭೂಮಿಯಲ್ಲಿ  2 ಎಕರೆ ಭೂಮಿ `ಮಂತ್ರಿ~ಗೆ ಸೇರಿದ್ದಾಗಿರದೆ ಅದು ರೈಲ್ವೆ ಇಲಾಖೆ, ಸರ್ಕಾರಿ ಜಮೀನು ಹಾಗೂ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಪ್ರದೇಶವಾಗಿದೆ ಎಂದು ಪಾಲಿಕೆ ತಿಳಿಸಿದೆ.ಇನ್ನೊಂದು ವಂಚನೆ: ಪಾಲಿಕೆ ಮೂಲಗಳು ತಿಳಿಸಿರುವ ಪ್ರಕಾರ ಅಂಗಸಂಸ್ಥೆ ಮತ್ತೊಂದು ಭಾರಿ ವಂಚನೆಯಲ್ಲಿ ತೊಡಗಿತ್ತು. ಸರ್ಕಾರಿ ಜಮೀನನ್ನು ವಶಪಡಿಸಿಕೊಂಡ ಸಂಸ್ಥೆ ನಂತರ `ರಸ್ತೆ~ ಅಭಿವೃದ್ಧಿಗಾಗಿ ಆ ಜಮೀನನ್ನು ಪಾಲಿಕೆ ವಶಕ್ಕೆ ನೀಡಿ ಟಿಡಿಆರ್ ಪಡೆದಿತ್ತು. ಅದೇ `ರಸ್ತೆ~ಯನ್ನು ಬಿಎಂಆರ್‌ಸಿಎಲ್‌ಗೆ ಮಾರಾಟ ಮಾಡಿತ್ತು.

1975ರಲ್ಲಿ ನಡೆಸಲಾದ ಸರ್ವೆ ವೇಳೆ ಕೆರೆ ಪ್ರದೇಶ, ರಸ್ತೆ ಹಾಗೂ ಸರ್ಕಾರಿ ಭೂಮಿಯನ್ನು ಕೈ ಬಿಟ್ಟಿರುವ ಸಂಬಂಧ ನಗರ ಸರ್ವೆ ಇಲಾಖೆ (ಸಿಎಸ್‌ಡಿ)ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಬಿಬಿಎಂಪಿ ಸರ್ಕಾರವನ್ನು ಕೋರಿದೆ. `ಈ ಜಮೀನುಗಳ ಬಗ್ಗೆ ಗ್ರಾಮ ನಕ್ಷೆಯಲ್ಲಿ ಮಾಹಿತಿ ಇದೆ. ಆದರೆ ಸಿಎಸ್‌ಡಿ 1975ರಲ್ಲಿ ನಡೆಸಿದ ಸರ್ವೆಯಲ್ಲಿ ಈ ಪ್ರಮುಖ ಜಮೀನುಗಳ ಕುರಿತು ಮಾಹಿತಿ ಇಲ್ಲ. ಈ ನಿರ್ಲಕ್ಷ್ಯ ಅಕ್ಷಮ್ಯ ಅಪರಾಧ. ಅಂದು ಕೃತ್ಯದಲ್ಲಿ ಭಾಗಿಯಾದ ಅಧಿಕಾರಿಗಳು ಬದುಕುಳಿದಿದ್ದರೆ ಅವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ~ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.`ಜಕ್ಕರಾಯನ ಕೆರೆ ಭಾಗ ತೆರವುಗೊಳಿಸಿಲ್ಲ~

ಸ್ವಸ್ತಿಕ್ ಮೆಟ್ರೊ ರೈಲು ನಿಲ್ದಾಣಕ್ಕಾಗಿ ಮಂತ್ರಿ ಡೆವಲಪರ್ಸ್‌ ಒತ್ತುವರಿ ಮಾಡಿಕೊಂಡಿದ್ದ ಭೂಮಿಯನ್ನು ಇತ್ತೀಚೆಗೆ ತೆರವುಗೊಳಿಸಿದ್ದ  ರೈಲ್ವೆ ಇಲಾಖೆ ಅದೇ ರೀತಿ ಒತ್ತುವರಿಯಾದ ಜಕ್ಕರಾಯನಕೆರೆಯ ಭಾಗವನ್ನು ತೆರವುಗೊಳಿಸಿಲ್ಲ ಎಂದು ಪಾಲಿಕೆ ಮೂಲಗಳು ತಿಳಿಸಿವೆ.`ಪ್ರಜಾವಾಣಿ~ ವರದಿ ಆಧರಿಸಿ ರೈಲ್ವೆ ಇಲಾಖೆ ಮಲ್ಲೇಶ್ವರದಲ್ಲಿ ಮಂತ್ರಿ ಡೆವಲಪರ್ಸ್‌ ಒತ್ತುವರಿ ಮಾಡಿಕೊಂಡ ಜಮೀನಿನಲ್ಲಿ ತೆರವು ಕಾರ್ಯಾಚರಣೆ ನಡೆಸಿತ್ತು. ಆದರೆ ಅದೇ ಸಂಸ್ಥೆಯಿಂದ ಒತ್ತುವರಿಯಾದ ಜಕ್ಕರಾಯನಕೆರೆ ಪ್ರದೇಶವನ್ನು ತೆರವುಗೊಳಿಸಿರಲಿಲ್ಲ.ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುವಾಂಕರ್ ಬಿಸ್ವಾಸ್, `ಇಲಾಖೆಯ ಎಂಜಿನಿಯರಿಂಗ್ ವಿಭಾಗ ವಶಪಡಿಸಿಕೊಂಡ ಜಮೀನಿನ ಬಗ್ಗೆ ನಿಗಾ ವಹಿಸಿದೆ. ರೈಲ್ವೆ ಆಸ್ತಿಯನ್ನು ಕಬಳಿಸಲು ಯಾವುದೇ ಅವಕಾಶ ನೀಡುವುದಿಲ್ಲ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.