ಭಾನುವಾರ, ಡಿಸೆಂಬರ್ 8, 2019
19 °C

ಹಮಾಲರ ಕಾಲೊನಿ ಕಂಚಿನ ಪ್ರತಿಮೆ!

Published:
Updated:
ಹಮಾಲರ ಕಾಲೊನಿ ಕಂಚಿನ ಪ್ರತಿಮೆ!

ಅದು ಹುಬ್ಬಳ್ಳಿಯ ಎಪಿಎಂಸಿ ಆವರಣದ ಹಮಾಲರ ಕಾಲೊನಿ. ಯಾವುದೇ ಮೂಲ ಸೌಕರ್ಯಗಳಿಲ್ಲದ ಈ ಕಾಲೊನಿಯ ಡಬ್ಬಿಗಳಂತಹ ಮನೆಗಳಲ್ಲಿ ಬದುಕುವ ಜನ, ಹೊಟ್ಟೆ ಹೊರೆಯಲು ನಿತ್ಯವೂ ಹೆಣಗಾಡುತ್ತಾರೆ. ಎಪಿಎಂಸಿಯಲ್ಲಿ ಹಮಾಲಿ ಸಿಕ್ಕರೆ ಮಾತ್ರ ಇಲ್ಲಿಯ ಜನರ ಬದುಕಿನ ಜಟಕಾ ಬಂಡಿ ಓಡಬೇಕು. ಇಲ್ಲದಿದ್ದರೆ ಅಂದಿನ ಆದಾಯಕ್ಕೆ ಖೋತಾ ಬಿತ್ತು ಎಂತಲೇ ಲೆಕ್ಕ.

ಸಮಸ್ಯೆಗಳ ಕೆಸರಲ್ಲಿ ಬಿದ್ದಿರುವ ಇಂತಹ ಕಾಲೊನಿಯಲ್ಲಿ ಕ್ರೀಡಾ ಕುಸುಮವೊಂದು ಅರಳಿ ನಿಂತಿದ್ದು, ತನ್ನ ಸಾಧನೆಯ ಪರಿಮಳವನ್ನು ಹರಡುತ್ತಿದೆ. ಆ ಪ್ರತಿಭೆಯೇ ಶ್ರೇಷ್ಠ ದೇಹದಾರ್ಢ್ಯ ಪಟು ಕೃಷ್ಣ ಚಿಕ್ಕತುಂಬಳ.

ತಮ್ಮ ಮನೆಯಲ್ಲಿ ಇಡಲಾಗದಷ್ಟು ಟ್ರೋಫಿ-ಪದಕಗಳನ್ನು ಗೆದ್ದು ತಂದಿರುವ ಕೃಷ್ಣ, ಈಚೆಗೆ ಗ್ವಾಲಿಯರ್‌ನಲ್ಲಿ ನಡೆದ 51ನೇ ಹಿರಿಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 85 ಕೆಜಿ ವಿಭಾಗದಲ್ಲಿ ಬಂಗಾರದ ನಗುವನ್ನೇ ಚೆಲ್ಲಿ ಬಂದಿದ್ದಾರೆ. ಮೈಸೂರು ದಸರಾ ಕ್ರೀಡಾಕೂಟದಲ್ಲಿ ಮೂರು ಸಲ ಪ್ರಶಸ್ತಿ ಪಡೆದಿರುವ ಕೃಷ್ಣ, ಹುಬ್ಬಳ್ಳಿಯಲ್ಲೇ ನಡೆದಿದ್ದ ದಕ್ಷಿಣ ಭಾರತ ಚಾಂಪಿಯನ್‌ಷಿಪ್‌ನಲ್ಲಿ ಅತ್ಯುತ್ತಮ ಪೋಸರ್ ಆಗಿ ಹೊರಹೊಮ್ಮಿದ್ದರು.

`ಜೂನಿಯರ್ ಮಿ. ಇಂಡಿಯಾ~ ಪ್ರಶಸ್ತಿಯನ್ನೂ ತಮ್ಮ ಬತ್ತಳಿಕೆಯಲ್ಲಿ ಹೊಂದಿರುವ ಈ ದೇಹದಾರ್ಢ್ಯಪಟು, ನಾಲ್ಕು ಬಾರಿ ರಾಜ್ಯ ಚಾಂಪಿಯನ್ ಆಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಕಳೆದ ಮೂರು ವರ್ಷಗಳಿಂದ ಮೊದಲ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ.

ನವನಗರದ ಸಾಯಿ ಜಿಮ್‌ನಲ್ಲಿ ಕಳೆದ ಐದು ವರ್ಷಗಳಿಂದ ತರಬೇತಿ ಪಡೆಯುತ್ತಿರುವ ಕೃಷ್ಣ, ದೇಹ ಕಟ್ಟುವ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದು ತೀರಾ ಆಕಸ್ಮಿಕವಾಗಿ. ಭಾರದ ವಸ್ತುಗಳನ್ನು ಹೊತ್ತು ಹುರಿಗೊಂಡಿದ್ದ ದೇಹವನ್ನೇ ಕ್ರೀಡೆಗೆ ಒಗ್ಗುವಂತೆ ಮಾಡಿದರು. ಹುಬ್ಬಳ್ಳಿಯ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಓದುತ್ತಿರುವ ಈ ಅಜಾನುಬಾಹು, ಜಾಧವ್ ಸೋದರರಾದ ಪ್ರಮೋದ್ ಮತ್ತು ವಿನೋದ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ನಿತ್ಯ ಆರು ಗಂಟೆ ವರ್ಕ್ ಔಟ್ ಮಾಡುವ ಈ ಹುಡುಗ, ಆರ್ಥಿಕ ಮುಗ್ಗಟ್ಟಿನ ನಡುವೆಯೂ ದೊಡ್ಡ ಎತ್ತರಕ್ಕೆ ಬೆಳೆದಿದ್ದು, ಲೆಕ್ಕವಿಲ್ಲದಷ್ಟು ಪ್ರಶಸ್ತಿ ಹೊತ್ತು ತಂದಿದ್ದಾರೆ.

ಹಮಾಲಿ ಕೆಲಸ ಮಾಡುವ ರಾಮಣ್ಣ, ಐದು ಮಕ್ಕಳ ದೊಡ್ಡ ಸಂಸಾರವನ್ನು ಹೊಂದಿದ್ದರೂ ಮಗನ ಉತ್ಸಾಹಕ್ಕೆ ಅಡ್ಡಿ ಬಂದಿಲ್ಲ. ತಮ್ಮ ಸಂಪಾದನೆಯಲ್ಲಿ ಸಾಧ್ಯವಾದಷ್ಟು ಹಣ ಉಳಿಸಿ, ಮಗನ ಖರ್ಚಿಗೆ ಕೊಡುತ್ತಿದ್ದಾರೆ.

ಕೃಷ್ಣ ಎದೆ ಸೆಟಿಸಿ ನಿಂತರೆ ಸಾಕು, ಭವ್ಯವಾದ ಕಂಚಿನ ಪುತ್ಥಳಿಯಂತೆ ಕಂಗೊಳಿಸುತ್ತಾರೆ. ದೇಹದ ನರನಾಡಿಗಳೆಲ್ಲ ಬೆಳಕಿನ ಹೊಳೆಯಲ್ಲಿ ಮಿರಿ-ಮಿರಿ ಮಿಂಚುತ್ತವೆ. ತಮ್ಮ ಅಂಗ ಸೌಷ್ಟವವನ್ನು ಕಾಯ್ದುಕೊಳ್ಳಲು ಕೃಷ್ಣ ಅವರಿಗೆ ಪ್ರತಿನಿತ್ಯ 40 ಮೊಟ್ಟೆ, ಒಂದು ಕೆಜಿ ಚಿಕನ್, ಒಂದು ಕೆಜಿ ಹಣ್ಣು, 25 ಚಪಾತಿ ಹಾಗೂ ಒಂದು ಲೀಟರ್ ಹಾಲು ಬೇಕು. ಒಂದೂ ದಿನ ತಪ್ಪಿಸದಂತೆ ಇಷ್ಟೆಲ್ಲವನ್ನು ಹೊಂದಿಸಿಕೊಳ್ಳುವುದು ಈ ಬಡ ಕುಟುಂಬದ ಕ್ರೀಡಾ ಪ್ರತಿಭೆಗೆ ಅಸಾಧ್ಯವಾಗಿದೆ.

`ಯಾವುದೇ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬೇಕಾದರೆ ಪಕ್ಕದ ಅಂಗಡಿಯಲ್ಲಿ ಉದ್ರಿ ಲೆಕ್ಕದಲ್ಲಿ ಬೇಕಾದ ಪದಾರ್ಥ ತರುತ್ತೇನೆ. ಪ್ರಶಸ್ತಿ ಗೆದ್ದುಬಂದ ನಂತರ ಸಿಕ್ಕ ದುಡ್ಡಿನಲ್ಲಿ ಸಾಲ ತೀರಿಸುತ್ತೇನೆ. ಹಣಕಾಸಿನ ತೊಂದರೆ ಎಷ್ಟೇ ಆದರೂ ಟೂರ್ನಿಯಲ್ಲಿ ಪಾಲ್ಗೊಳ್ಳದೆ ಬಿಟ್ಟಿಲ್ಲ. ಮನೆ ಮಂದಿಯ ಸಹಕಾರವೂ ಚೆನ್ನಾಗಿದೆ~ ಎಂದು ಕೃಷ್ಣ ಹೇಳುತ್ತಾರೆ.

ಸದ್ಯ ಈ ದೇಹದಾರ್ಢ್ಯಪಟು ಅಮೃತಸರ್‌ನಲ್ಲಿ ನಡೆಯಲಿರುವ ಅಂತರ ವಿಶ್ವವಿದ್ಯಾಲಯ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ಗಾಗಿ ತಯಾರಿ ನಡೆಸುತ್ತಿದ್ದಾರೆ. ತಾವು ಓದುತ್ತಿರುವ ಆಕ್ಸ್‌ಫರ್ಡ್ ಕಾಲೇಜಿನಿಂದ ಕೃಷ್ಣ ಅವರಿಗೆ ಒಂದಿಷ್ಟು ನೆರವಿನಹಸ್ತ ಸಿಕ್ಕಿದೆ. ಸರ್ಕಾರದಿಂದ ಯಾವುದೇ ಧನಸಹಾಯ ಇದುವರೆಗೆ ಈ ಹುಡುಗನಿಗೆ ಸಿಕ್ಕಿಲ್ಲ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಯೋಜನೆಗಳ ಲಾಭವೂ ಇವರನ್ನು ಮುಟ್ಟಿಲ್ಲ. ಹಲವು ಕಚೇರಿಗಳ ಬಾಗಿಲನ್ನು ಕೃಷ್ಣ ಬಡಿದು ಬಂದಿದ್ದಾರೆ. ಭರವಸೆ ಸಿಕ್ಕಿದೆಯೇ ವಿನಾ ನೆರವು ದೊರೆತಿಲ್ಲ.

ಅಂದಹಾಗೆ, ಕೃಷ್ಣ, ಕೋಟೆ, ಮರ್ಯಾದೆ ರಾಮಣ್ಣ, ಪೊಲೀಸ್ ಸ್ಟೋರಿ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇದರಿಂದ ಅವರಿಗೆ ಹೆಚ್ಚಿನದೇನೂ ಪ್ರಯೋಜನವಾಗಿಲ್ಲ. ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಹಾಗೂ ಉನ್ನತ ಸಾಧನೆ ಮಾಡಬೇಕು ಎಂಬ ಹಂಬಲದಲ್ಲಿರುವ ಕೃಷ್ಣ ಅವರಿಗೆ ಸಹಾಯ ಹಸ್ತ ನೀಡುವವರು ಅಗತ್ಯವಾಗಿ ಬೇಕಿದ್ದಾರೆ. ಆಸಕ್ತರು ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ಸಂಖ್ಯೆ: 9900223016.

ಪ್ರತಿಕ್ರಿಯಿಸಿ (+)