ಹರಕೆ ಈಡೇರಿಸುವ ದಕ್ಷಿಣಮುಖಿ ಶ್ರೀ ಜಾಗೃತಿ ಮಾರುತಿ

7

ಹರಕೆ ಈಡೇರಿಸುವ ದಕ್ಷಿಣಮುಖಿ ಶ್ರೀ ಜಾಗೃತಿ ಮಾರುತಿ

Published:
Updated:

ಅಕ್ಕಲಕೋಟ: ಮಹಾರಾಷ್ಟ್ರದಲ್ಲಿದ್ದರೂ ಅಕ್ಕಲಕೋಟದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಚರಿತ್ರೆ ಕರ್ನಾಟಕಕ್ಕೆ ಸೇರಿದೆ. ಶಾತವಾಹನರಾದಿಯಾಗಿ ಕನ್ನಡದ ಎಲ್ಲ ಅರಸು ಮನೆತನಗಳು ಈ ಪ್ರದೇಶವನ್ನು ಆಳಿವೆ. ಸ್ವಾಮಿ ಸಮರ್ಥರ ಪಾದಸ್ಪರ್ಶದಿಂದ ಅಕ್ಕಲಕೋಟ ತಾಲ್ಲೂಕಿನ ಗೌಡಗಾವ(ಬು)ದಲ್ಲಿರುವ ದಕ್ಷಿಣಮುಖಿ ಶ್ರೀ ಜಾಗೃತಿ ಮಾರುತಿ ಕ್ಷೇತ್ರವ ಪಾವನ ಎನಿಸಿದೆ.12ನೇ ಶತಮಾನದಲ್ಲಿ ಗಜೇಶ ಮಸಣಯ್ಯ ಮತ್ತು ಮಸಣಮ್ಮ ದಂಪತಿಯು ತಾಲ್ಲೂಕಿನ ಕರಜಗಿಯಲ್ಲಿ ಆಗಿ ಹೋದ ಮಹಾನ ಶರಣ ಶರಣೆಯರು. ಅಕ್ಕಲಕೋಟದಿಂದ 11 ಕಿ.ಮೀ. ಹಾಗೂ ರೈಲು ನಿಲ್ದಾಣದಿಂದ 2 ಕಿ.ಮೀ. ಅಂತರದಲ್ಲಿರುವ ಚಿಕ್ಕ ಗ್ರಾಮವೇ ಗೌಡಗಾವ (ಬು).ಸುಮಾರು 400 ವರ್ಷಗಳ ಹಿಂದೆ ಇಲ್ಲಿ ಸಮರ್ಥ ರಾಮದಾಸ ಸ್ವಾಮೀಜಿಯವರು ಮಾರುತಿಯನ್ನು ಪ್ರತಿಷ್ಠಾಪಿಸಿ ಬಂದ ಭಕ್ತರ ಬೇಡಿಕೆ ಈಡೇರಿಸುವ ಹನುಮಂತ ಎಂದು ಹರಸಿದರು. ಅಂದಿನಿಂದ ಇಂದಿನವರೆಗೆ ಭಕ್ತಿಯಿಂದ ನಡೆದುಕೊಳ್ಳುವ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿರುವುದರಿಂದ ಭಕ್ತರ ದಂಡ ಇತ್ತ ಹರಿದುಬರುತ್ತಿದೆ.ರಾಮದಾಸ ಸ್ವಾಮಿ: ರಾಮದಾಸ ಸ್ವಾಮಿ (ಕ್ರಿ.ಶ. 1608-1681) ಛತ್ರಪತಿ ಶಿವಾಜಿ ಮಹಾರಾಜರಿಗೆ ಧರ್ಮಗುರುಗಳಾಗಿದ್ದವರು. ಅವರು ಮಹಾಬಲ ಹನುಮಂತನ ಪರಮ ಭಕ್ತರಾಗಿದ್ದರು. ಮಹಾರಾಷ್ಟ್ರದ ಮೂಲೆ ಮೂಲೆಯಲ್ಲಿ ಅವರು ಹನುಮಂತನಿಗಾಗಿ ಪ್ರಸಿದ್ಧವಾದ 11 ಮಂದಿರಗಳನ್ನು  ನಿರ್ಮಿಸಿದ್ದರು. ಅಂಥ ಮಂದಿರಗಳಲ್ಲಿ ಈ ಮಂದಿರ ಮಹತ್ವದ್ದು.ದಕ್ಷಿಣ ದಿಕ್ಕನ್ನು ಪವಿತ್ರ ಎಂದು ಭಾವಿಸದ ಜನರಿಗೆ ಮಾರುತಿ `ನಾನು ಎಲ್ಲವನ್ನೂ ಮೆಟ್ಟಿ ನಿಲ್ಲಬಲ್ಲೆ' ಎಂಬ ಸಂದೇಶ ನೀಡುವ ಮೂಲಕ ದಕ್ಷಿಣಾಭಿಮುಖವಾಗಿ ನಿಂತಿದ್ದಾನೆ ಎಂದು ಭಕ್ತರು ಹೇಳುತ್ತಾರೆ. ಶಿರದಲ್ಲಿ ಜುಟ್ಟು, ಏಕನೇತ್ರ ಏಕಮುಖಿ, ಗದಾಧಾರಿ, ಶರೀರಕ್ಕೆ ಸುತ್ತಿಕೊಂಡ ವಕ್ರಾಕಾರದ ಬಾಲ- ಇದು ಇಲ್ಲಿನ ಹನುಮಂತನ ಮೂರ್ತಿಯ ವೈಶಿಷ್ಟ್ಯ.ಮಂದಿರದ ಕಟ್ಟಡ: ಮಾರುತಿ ಮಂದಿರದ ಕಟ್ಟಡ ವಿಶಿಷ್ಟ. ಇದನ್ನು ಹೇಮಾಡ ಪಂಥೀಯ ಪದ್ಧತಿಯಲ್ಲಿ ನಿರ್ಮಿಸಲಾಗಿದೆ. ಆರು ಸಾವಿರ ಚದರಡಿಯ ಭವ್ಯ ಕಟ್ಟಡವನ್ನು ಸುಣ್ಣ ಮತ್ತು ಮರಳಿನಲ್ಲಿ ಕಟ್ಟಿದ್ದು ಸಿಮೆಂಟ್ ಬಳಸಿಲ್ಲ. ಅಲ್ಲಲ್ಲಿ ಆಕರ್ಷಕ ಕೆತ್ತನೆ ಕೆಲಸ ಮಾಡಲಾಗಿದೆ. ಮಂದಿರದ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ರಾಮ ಮತ್ತು ಸೀತಾ ಮಾತೆಯನ್ನು ಹೊತ್ತುಕೊಂಡ ಮಾರುತಿಯ ಭವ್ಯ ಶಿಲಾಮೂರ್ತಿಯು ಆಕರ್ಷಿಸುತ್ತದೆ. “ಗೌಡಗಾವ ಮಾರುತಿ ಜಾಗೃತ ಮಾರುತಿ” ಎಂದು ಭಕ್ತಿಯಿಂದ ಆರಾಧಿಸುವ ಭಕ್ತರು, ವೃತ ಮಾಡಿ ಇಷ್ಟಾರ್ಥ ಸಾಧಿಸಿಕೊಳ್ಳುತ್ತಿರುವುದಾಗಿ ನುಡಿಯುತ್ತಾರೆ.ಬರುವುದು ಹೇಗೆ?: ಗುಲ್ಬರ್ಗ ರೈಲು ನಿಲ್ದಾಣದಿಂದ ಅಕ್ಕಲಕೋಟ ಸ್ಟೇಶನ್‌ಗೆ ಬರಲು ಸಾಕಷ್ಟು ರೈಲುಗಳಿವೆ. ಇಲ್ಲಿಂದ ಎರಡು ಕಿ.ಮೀ. ಅಂತರದ ಗೌಡಗಾವಕ್ಕೆ   ವಾಹನಗಳ ಮೂಲಕ ಬರಬಹುದು. ಮಂದಿರ ಸಮಿತಿಯಿಂದ ಜಾಗೃತ ಮಾರುತಿಗೆ ಭಕ್ತರ ಹೆಸರಲ್ಲಿ ಪೂಜೆ- ಅರ್ಚನೆ, ಅಭಿಷೇಕ, ಹೋಮ-ಹವನ, ಮಹಾರುದ್ರಾಭಿಷೇಕ ಸೇರಿದಂತೆ ಎಲೆಪೂಜೆ, ಶನಿಪೂಜೆ ಮಾಡಲಾಗುತ್ತದೆ. ಹನುಮಾನ ಜಯಂತಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ.ಕಾರ್ಯಾಧ್ಯಕ್ಷ ಶ್ರಿಕಾಂತ ಖಾನಾಪುರೆ ನೇತೃತ್ವದಲ್ಲಿ ಮಂದಿರ ಸಮಿತಿ ಬಡವರಿಗೆ ಬಟ್ಟೆ, ಚಾದರ, ಬಡವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ರಕ್ತದಾನ, ರೋಗ ತಪಾಸಣಾ ಶಿಬಿರ ಏರ್ಪಡಿಸುತ್ತಿದೆ. ಭಕ್ತರ ಸೇವೆಗಾಗಿ ಅನ್ನಛತ್ರ ಮಂಡಳಿಯ ಸುಸಜ್ಜಿತ ಕಟ್ಟಡ ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆ ಇದೆ.ಸ್ವತಃ ಎಂಜಿನಿಯರ್ ಆದ ಶ್ರಿಕಾಂತ ಖಾನಾಪುರೆ ನೇತೃತದಲ್ಲಿ ಭವ್ಯವಾದ ಭಕ್ತ ನಿವಾಸ ಮತ್ತು ಅನ್ನಛತ್ರದ ಬೃಹತ್ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಸೊಲ್ಲಾಪುರದ ಖ್ಯಾತ ಎಂಜಿನಿಯರ್ ಕೇದಾರ ಬಿರಾದಾರು ಉಚಿತವಾಗಿ ಕಟ್ಟಡದ ನಿರ್ವಹಣೆ ಮಾಡುತ್ತಿದ್ದಾರೆ. ಭಕ್ತರು ದೇಣಿಗೆ ನೀಡಲು ಮಂದಿರ ಸಮಿತಿಯ 09422458898 ಮೊಬೈಲ್ ಸಂಪರ್ಕಿಸಲು ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry