ಹರಪನಹಳ್ಳಿ ಪುರಸಭೆ: ಆಪರೇಷನ್ ಕಮಲ ಯಶಸ್ವಿ

7

ಹರಪನಹಳ್ಳಿ ಪುರಸಭೆ: ಆಪರೇಷನ್ ಕಮಲ ಯಶಸ್ವಿ

Published:
Updated:

ಹರಪನಹಳ್ಳಿ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪುರಸಭೆಯ 2ನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಭಿನ್ನಮತೀಯ ಗುಂಪಿನ ಮೆಹಬೂಬ್ ಸಾಬ್ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಏಕೈಕ ಸದಸ್ಯೆ ಸುಮಿತ್ರಾ ಬಾಪೂಜಿ ಮಂಗಳವಾರ ನಡೆದ ಚುನಾವಣೆಯಲ್ಲಿ ವಿಜೇತರಾಗುವುದರ ಮೂಲಕ ಪುರಸಭೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ತನ್ನ ‘ಕೇಸರಿ ಪತಾಕೆ’ ಹಾರಿಸಿದೆ.ಅಧ್ಯಕ್ಷ ಸ್ಥಾನ ‘ಸಾಮಾನ್ಯ’ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ ಮಹಿಳೆ’ ಮೀಸಲಾತಿ ಹೊಂದಿತ್ತು. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಪಟೇಲ್ ಬೆಟ್ಟನಗೌಡ ಹಾಗೂ ಶುಕ್ರುಸಾಬ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕವಿತಾ ಸುರೇಶ್ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನ ಭಿನ್ನಮತೀಯ ಗುಂಪಿನಿಂದ ಅಧ್ಯಕ್ಷ ಸ್ಥಾನಕ್ಕೆ ಮೆಹಬೂಬ್ ಸಾಬ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸುಮಿತ್ರಾ ಬಾಪೂಜಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ನಿಷ್ಟರ ಗುಂಪಿನಿಂದ ನಾಮಪತ್ರ ಸಲ್ಲಿಸಿದ್ದ ಶುಕ್ರುಸಾಬ್ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಇಬ್ಬರೂ ಕಣದಲ್ಲಿ ಉಳಿದರು. ಕೊನೆ ಘಳಿಗೆವರೆಗೂ ಯಾರೂ ಕಣದಿಂದ ಹಿಂದೆ ಸರಿಯದ ಕಾರಣ ಆಯ್ಕೆ ಪ್ರಕ್ರಿಯೆಯನ್ನು ಬಲಾಬಲಕ್ಕೆ ಹಾಕಲಾಯಿತು.ಒಟ್ಟು 27ಸದಸ್ಯ ಬಲವುಳ್ಳ ಪುರಸಭೆಯಲ್ಲಿ 11 ಕಾಂಗ್ರೆಸ್ ಹಾಗೂ 15 ಜೆಡಿಎಸ್ ಸದಸ್ಯರು ಹಾಗೂ ಬಿಜೆಪಿಯ ಏಕೈಕ ಸದಸ್ಯ ಆಯ್ಕೆಯಾಗಿದ್ದರು. ಹಿರಿಯ ಮುಖಂಡ ಎಂ.ಪಿ. ಪ್ರಕಾಶ್ ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಚಿಹ್ನೆ ಅಡಿಯಲ್ಲಿ ಆಯ್ಕೆಯಾಗಿದ್ದ ಎಲ್ಲಾ 15 ಮಂದಿ ಸದಸ್ಯರು ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾದ್ದರಿಂದ ಕಾಂಗ್ರೆಸ್ ಬಲ 26ಕ್ಕೆ ಏರಿತು. ಹಾಗಾಗಿ, ಮೊದಲ ಅವಧಿಯ ಆಡಳಿತ ಚುಕ್ಕಾಣಿಯನ್ನು ಕಾಂಗ್ರೆಸ್ ನಡೆಸಿತು.ಈ ಮಧ್ಯೆ ಕಾಂಗ್ರೆಸ್‌ನಲ್ಲಿ ಬಂಡಾಯದ ಹೊಗೆ ಕಾಣಿಸಿಕೊಂಡಿತು. ಒಬ್ಬರು-ಮತ್ತೊಬ್ಬರನ್ನು ಎತ್ತಿಕಟ್ಟುವ, ಪರಸ್ಪರ ಕಾಲೆಳೆಯುವ ಕಾಯಕದಲ್ಲಿ ತೊಡಗಿಸಿಕೊಂಡರು. ಯಾವಾಗ ಕಾಂಗ್ರೆಸ್ ಅರಮನೆಯಲ್ಲಿ ಬಂಡಾಯದ ಹೊಗೆ ಕಾಣಿಸಿಕೊಂಡಿತೊ, ಬಿಜೆಪಿ 11ಮಂದಿ ಭಿನ್ನಮತೀಯ ಕಾಂಗ್ರೆಸ್ ಸದಸ್ಯರಿಗೆ ಗಾಳ ಹಾಕಿತು ಎನ್ನಲಾಗಿದೆ.   ಕಾಂಗ್ರೆಸ್ ನಿಷ್ಠ ಗುಂಪಿನ ಸಂಖ್ಯೆ 15ಕ್ಕೆ ಕುಸಿಯಿತು. ಈ ನಡುವೆ ನಿಷ್ಠರ ಗುಂಪಿನ ನಾಲ್ವರು ಹಾಗೂ ಭಿನ್ನಮತೀಯ ಗುಂಪಿನ ಒಬ್ಬ ಸದಸ್ಯೆ ಶೇ. 18ರ ಅನುದಾನ ದುರ್ಬಳಕೆ ಆರೋಪದ ಅಡಿಯಲ್ಲಿ ಅನರ್ಹತೆ ಹೊಂದಿದ್ದಾರೆ. ಹಾಗಾಗಿ, ಕಾಂಗ್ರೆಸ್ ಸದಸ್ಯರ ಸಂಖ್ಯೆ 11 ಹಾಗೂ ಭಿನ್ನಮತೀಯ ಗುಂಪಿನ ಸಂಖ್ಯಾಬಲ 10 ಮತ್ತು ಏಕೈಕ ಬಿಜೆಪಿ ಸದಸ್ಯೆ ಸೇರಿದರೆ ಭಿನ್ನರ ಗುಂಪು 11ಕ್ಕೆ ಏರಿತು.

 

ಭಿನ್ನಮತೀಯ ಗುಂಪಿನ ಮಹಬೂಬ್‌ಸಾಬ್ ಹಾಗೂ ಬಿಜೆಪಿಯ ಸುಮಿತ್ರಾ ಅವರು ಕ್ರಮವಾಗಿ ಭಿನ್ನಮತೀಯ 10ಮಂದಿ ಸದಸ್ಯರು ಮತ್ತು ಶಾಸಕ ಹಾಗೂ ಸಂಸದರ ಮತ ಸೇರಿದಂತೆ ಒಟ್ಟು 13ಮತಗಳನ್ನು ಪಡೆಯುವ ಮೂಲಕ ವಿಜಯದ ನಗೆ ಬೀರಿದರು. ಕಾಂಗ್ರೆಸ್ ನಿಷ್ಠರ ಗುಂಪಿನಿಂದ ಸ್ಪರ್ಧೆಗೆ ಧುಮುಕ್ಕಿದ್ದ ಪಟೇಲ್ ಬೆಟ್ಟನಗೌಡ ಹಾಗೂ ಕವಿತಾ ಸುರೇಶ್ ತಲಾ 10 ಮತಗಳ ನ್ನು ಪಡೆದು ಪರಾಭವಗೊಂಡರು. ಇದೇ ಗುಂಪಿನ ಒಬ್ಬ ಸದಸ್ಯ ವಿದೇಶ ಪ್ರವಾಸದಲ್ಲಿರುವುದರಿಂದ ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ.ಬಿಜೆಪಿ ಬೆಂಬಲಿತ ಭಿನ್ನರ ಗುಂಪು ಆಯ್ಕೆಯಾಗುತ್ತಿದ್ದಂತೆಯೇ ಪುರಸಭೆಯ ಅಕ್ಕಪಕ್ಕದಲ್ಲಿ ನೆರೆದಿದ್ದ ಅಭಿಮಾನಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಪೊಲೀಸ್ ಬಿಗಿ ಭದ್ರತೆ: ಚುನಾವಣೆಯ ಹಿನ್ನೆಲೆಯಲ್ಲಿ ಪುರಸಭೆಯ ಸುತ್ತ 200ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.ಪುರಸಭೆ ಕಚೇರಿಯ ಮೂರು ಬಾಗಿಲುಗಳ ಪೈಕಿ ಮುಂಭಾಗದ ಬಾಗಿಲನ್ನು ಮಾತ್ರ ತೆರೆಯಲಾಗಿತ್ತು. ಅದರ ಮುಂದೆಯೂ ಕಟ್ಟಿಗೆ ಕಂಬಗಳಿಂದ ಒಬ್ಬರು ಮಾತ್ರ ಸಾರಾಗವಾಗಿ ಹೋಗಲು ಅವಕಾಶವಿತ್ತು. ಎದುರಿನ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 2 ತುಕಡಿ, 2ವಾಹನಗಳು, ಹರಪನಹಳ್ಳಿ, ಜಗಳೂರು ಉಪ ವಿಭಾಗ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.ಗ್ರಾಮಾಂತರ ಅಪರ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್, ಡಿವೈಎಸ್‌ಪಿ ಅನಿತಾ ಬಿ. ಹದ್ದಣ್ಣವರ್, ವರಿಷ್ಠಾಧಿಕಾರಿ ಕಚೇರಿಯ ಡಿವೈಎಸ್‌ಪಿ ನಾಗರಾಜ ಸೇರಿದಂತೆ ಹಲವರು ಮೊಕ್ಕಾಂ ಹೂಡಿದ್ದರು.ಬಿಜೆಪಿ ತೆಕ್ಕೆಗೆ

ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದ ಸ್ಥಳೀಯ ಪುರಸಭೆಯಲ್ಲಿ ಏಕೈಕ ಸದಸ್ಯರನ್ನು ಹೊಂದಿದ್ದ ಬಿಜೆಪಿ ‘ಆಪರೇಷನ್ ಕಮಲ’ ಮೂಲಕ ಮಂಗಳವಾರ ನಡೆದ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.ರಾಜ್ಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಿ ಸಚಿವ ಎಂದೇ ಬಿಂಬಿತರಾಗಿರುವ ಹಾಗೂ ವಿಧಾನಸಭೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಆಪರೇಷನ್ ಕಮಲದ ಮೂಲಕ ತಮ್ಮ ಅಧಿಪತ್ಯ ಸ್ಥಾಪಿಸಿರುವ ಬಳ್ಳಾರಿ ರೆಡ್ಡಿ ಸಹೋದರ ಪೈಕಿ ಹಿರಿಯರಾದ ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ಅವರ ಸ್ವಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರ ಎದುರಾಳಿ ಕಾಂಗ್ರೆಸ್ ಪಕ್ಷದ ಕೈಯಲ್ಲಿತ್ತು.ಪುರಸಭೆಯ ಅಧಿಕಾರವನ್ನು ಹೇಗಾದರೂ ಸರಿ, ತಮ್ಮ ಕೈವಶ ಮಾಡಿಕೊಳ್ಳಬೇಕೆಂದು ಸಚಿವ ರೆಡ್ಡಿ ಹಲವು ಬಾರಿ ಪ್ರಯತ್ನಿಸಿ ವಿಫಲವಾಗಿದ್ದರು ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದವು. ಆದರೂ, ಅದು ಸಾಧ್ಯವಾಗಿರಲಿಲ್ಲ. ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಹೊಗೆ ಯಾವಾಗ ಕಾಣಿಸಿಕೊಂಡಿತೊ, ಅಂತಹದೊಂದು ಅವಕಾಶಕ್ಕಾಗಿ ಕಾದ ಬಿಜೆಪಿ ತಡಮಾಡದೇ ಭಿನ್ನಮತೀಯ ಕಾಂಗ್ರೆಸ್ ಸದಸ್ಯರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ ಉಂಟು ಮಾಡಿತು.ಕೇವಲ ಭಿನ್ನಮತೀಯ ಬಣಕ್ಕೆ ಸೇರಿದ 10-11ಮಂದಿ ಸದಸ್ಯರಿಂದ ಅಧಿಕಾರ ದಕ್ಕಿಸಿಕೊಳ್ಳಲು ಸುಲಭವಾಗಿರಲೂ ಇಲ್ಲ. ಈ ನಡುವೆ, ಉಪಾಧ್ಯಕ್ಷ ಎಚ್.ಕೆ. ಹಾಲೇಶ್ ಸೇರಿದಂತೆ ಐವರು ಸದಸ್ಯರು ಶೇ. 18ರ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಆರೋಪದ ಪ್ರಕರಣ ದಿನಕಳೆದಂತೆ ಗಂಭೀರ ಸ್ವರೂಪ ಪಡೆಯಿತು. ಇದಕ್ಕೆ ಸಚಿವರೂ ‘ಸಾಥ್’ ನೀಡಿದ್ದಾರೆ ಎಂಬ ಮಾತುಗಳು ರಾಜಕೀಯ ಅಂತರಂಗದಲ್ಲಿ ಮಾರ್ಧನಿಸತೊಡಗಿತು.ಹಲವು ಬಾರಿ ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದ ಕಟಕಟೆಯಲ್ಲಿ ವಾದ-ಪ್ರತಿವಾದಗಳು ನಡೆದು ಅಂತಿಮವಾಗಿ ಫೆ. 7ರಂದು ಐವರು ಸದಸ್ಯರ ಸದಸ್ಯತ್ವ ಅನರ್ಹ ಪ್ರಕರಣ, ಬಿಜೆಪಿ ಆಳ್ವಿಕೆಗೆ ರಾಜಮಾರ್ಗವಾಗಿ ಪರಿಣಮಿಸಿತು.ಒಂದೆಡೆ ಪಕ್ಷದಲ್ಲಿ ಬಂಡೆದ್ದ ಭಿನ್ನಮತೀಯರು. ಇನ್ನೊಂದೆಡೆ ಐವರು ಸದಸ್ಯರ ಸದಸ್ಯತ್ವ ಅನರ್ಹ ಇಂತಹ ಸಂಕಷ್ಟದ ಸ್ಥಿತಿಯಲ್ಲಿ ತೊಳಲಾಡುತ್ತಿದ್ದ ಕಾಂಗ್ರೆಸ್ ಪಕ್ಷ ನಿಸ್ಸಹಾಯಕ ಸ್ಥಿತಿ ತಲುಪಿತು. ಯಾವಾಗ ಕಾಂಗ್ರೆಸ್ ಪಾಳೆಯದಲ್ಲಿ ನಿಶ್ಯಕ್ತಿ ಕಾಣಿಸಿಕೊಳ್ಳತೊಡಗಿತೊ? ಅವಕಾಶಕ್ಕಾಗಿ ಕಾಯುತ್ತಿದ್ದ ಕಾಂಗ್ರೆಸ್ ಭಿನ್ನಮತೀಯ ಸದಸ್ಯ ಮಹಬೂಬ್ ಸಾಬ್ ಎಂಬುವರನ್ನು ‘ಆಪರೇಷನ್ ಕಮಲ’ದ ಮೂಲಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪುರಸಭೆಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಬಿಜೆಪಿಯಿಂದ ಆಯ್ಕೆಯಾಗಿದ್ದ ಸುಮಿತ್ರಾ ಬಾಪೂಜಿ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವುದರೊಂದಿಗೆ ಪುರಸಭೆಯ ಮೇಲೆ ‘ಕೇಸರಿ ಧ್ವಜ’ ಹಾರಿಸಿತು.‘ಮಾದರಿ ಪಟ್ಟಣ’ ಗುರಿ

 ಪಟ್ಟಣದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ, ರಸ್ತೆ ಅಭಿವೃದ್ಧಿ ಹಾಗೂ ಬೀದಿದೀಪಗಳ ಅಳವಡಿಕೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ನೂತನ ಅಧ್ಯಕ್ಷ-ಉಪಾಧ್ಯಕ್ಷರು ಶ್ರಮಿಸುವಂತೆ ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ಕರೆ ನೀಡಿದರು.ಮಂಗಳವಾರ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಕುಂದುಕೊರತೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಬೇಕು. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿ ವಾರ್ಡ್‌ಗಳಲ್ಲಿಯೂ ಅಭಿವೃದ್ಧಿ ಕಾರ್ಯ ಕೈಗೊಂಡು ಪಟ್ಟಣವನ್ನು ‘ಮಾದರಿ ಪಟ್ಟಣ’ ಎಂಬ ಹೆಗ್ಗಳಿಕೆ ಕಾರಣರಾಗುವಂತೆ ಸೂಚಿಸಿದರು.ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನ ಸಮರ್ಪಕವಾಗಿ ವಿನಿಯೋಗಿಸಿಕೊಂಡು ಪ್ರಾಮಾಣಿಕತೆ ಯೊಂದಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕರೆ ನೀಡಿದರು.ಪಕ್ಷದ ಹಿರಿಯ-ಕಿರಿಯ ಮುಖಂಡರು ಹಾಗೂ ಸದಸ್ಯರ ಅಭಿಮತ ಪಡೆದು ಪಟ್ಟಣದ ಸಮಗ್ರ ಅಭಿವೃದ್ಧಿ ಪಡಿಸಲು ನೂತನ ಅಧ್ಯಕ್ಷ-ಉಪಾಧ್ಯಕ್ಷರು ಶ್ರಮಿಸಿ ಎಂದು ಶುಭ ಹಾರೈಸಿದರು.ಅಧ್ಯಕ್ಷ ಮೆಹಬೂಬ್‌ಸಾಬ್ ಹಾಗೂ ಉಪಾಧ್ಯಕ್ಷೆ ಸುಮಿತ್ರಾ ಬಾಪೂಜಿ ಮಾತನಾಡಿ, ಸಚಿವರು ಹಾಗೂ ಸಂಸದರ ಮಾರ್ಗದರ್ಶನ ಹಾಗೂ ಎಲ್ಲಾ ಸದಸ್ಯರ ಸಹಕಾರ ಮತ್ತು ಪಕ್ಷದ ಹಿರಿಯ-ಕಿರಿಯ ಕಾರ್ಯಕರ್ತರ ಸಲಹೆ ಪರಿಗಣಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಸದಸ್ಯರಾದ ಅಬ್ದುಲ್ ರಹೆಮಾನ್, ಜಾಫರ್‌ಸಾಬ್, ಹುಲುಮನಿ ಬುಡೇನ್‌ಸಾಬ್, ಸುಭಾನ್‌ಸಾಹೇಬ್, ಉದ್ದಾರ ದೀಪಾ, ಅಪ್ಸರಾಬಿ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry