ಶನಿವಾರ, ನವೆಂಬರ್ 23, 2019
17 °C
2008ರ ಐಪಿಎಲ್ ವೇಳೆ ನಡೆದ ಘಟನೆ ಕೆದಕಿದ ವೇಗಿ ಶ್ರೀಶಾಂತ್

ಹರಭಜನ್ ವಿರುದ್ಧ `ಶ್ರೀ' ಮತ್ತೆ ಅಶಾಂತ

Published:
Updated:

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ವೇಗಿ ಶ್ರೀಶಾಂತ್ 2008ರ ಐಪಿಎಲ್ ಟೂರ್ನಿ ವೇಳೆ ನಡೆದ ಘಟನೆಯನ್ನು ಮತ್ತೆ ಕೆದಕಿದ್ದಾರೆ. ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಐಪಿಎಲ್ ಆರನೇ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರ ಆಡುತ್ತಿರುವ ಕೇರಳದ ಶ್ರೀಶಾಂತ್, 2008ರ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದರು. ಆ ವೇಳೆ ಭಜ್ಜಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು.ಉಭಯ ತಂಡಗಳ ನಡುವೆ ಮೊಹಾಲಿಯಲ್ಲಿ ನಡೆದ ಪಂದ್ಯದ ವೇಳೆ ಹರಭಜನ್ ಅವರು ಶ್ರೀಶಾಂತ್ ಕಪಾಳಕ್ಕೆ ಹೊಡೆದಿದ್ದಾಗಿ ಹೇಳಲಾಗಿತ್ತು. ಕ್ರೀಡಾಂಗಣದಲ್ಲೇ ಶ್ರೀಶಾಂತ್ ಅಳುತ್ತಿದ್ದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆದರೆ, ಶ್ರೀಶಾಂತ್‌ಗೆ ಹೊಡೆದ ದೃಶ್ಯ ಎಲ್ಲೂ ಬಿಡುಗಡೆಯಾಗಿರಲಿಲ್ಲ.ಪ್ರಸ್ತುತ ಐಪಿಎಲ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶ್ರೀಶಾಂತ್ ಆ ಘಟನೆಯ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. `ಹರಭಜನ್ ತಮ್ಮ ಕೆನ್ನೆಗೆ ಹೊಡೆದಿಲ್ಲ, ಬದಲಾಗಿ ಮೊಣಕೈಯಿಂದ ತಿವಿದಿದ್ದಾರೆ' ಎಂದು ಹೇಳುವ ಜೊತೆಗೆ ಅವರು ನಂಬಿದವರ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ' ಎಂದು ಗಂಭೀರ ಆರೋಪ ಮಾಡಿದ್ದಾರೆ.`ಟೂರ್ನಿಯ ಸಂದರ್ಭ ಈ ರೀತಿಯ ಘಟನೆ ನಡೆಯುತ್ತದೆ ಎಂದು ಕೆಲವರು ನನಗೆ ಮುನ್ನೆಚ್ಚರಿಕೆ ನೀಡಿದ್ದರು. ಬಳಿಕ ಈ ಘಟನೆಯಲ್ಲಿ ನನ್ನದೇ ತಪ್ಪು ಎಂದು ಹೇಳುವಂತೆ ಒತ್ತಾಯ ಮಾಡಲಾಗಿತ್ತು. ನನ್ನ ಬೆಂಬಲಕ್ಕೆ ಯಾರೂ ಬರಲಿಲ್ಲ. ಹೀಗಾಗಿ ಕ್ರೀಡಾಂಗಣದಲ್ಲಿ ನಾನು ಅಸಹಾಯಕನಾಗಿ ಕಣ್ಣೀರಿಟ್ಟೆ' ಎಂದು ಟ್ವಿಟರ್‌ನಲ್ಲಿ ಅವರು ಹೇಳಿಕೊಂಡಿದ್ದಾರೆ.`ಘಟನೆ ನಡೆದ ತಕ್ಷಣ ಮಾತನಾಡಲು ಹೆದರಿದ್ದೆ. ಆದರೆ, ನಿಜ ವಿಚಾರ ಏನೆಂಬುದು ಬಹಿರಂಗವಾಗಬೇಕು ಎಂದು ಈಗ ಬಯಸಿದ್ದೇನೆ. ಪಂದ್ಯದ ಬಳಿಕ ಹರಭಜನ್ ಅವರನ್ನು ಅಭಿನಂದಿಸಲು ಹೋಗಿದ್ದೆ. ಅಷ್ಟಕ್ಕೇ ತಾಳ್ಮೆ ಕಳೆದುಕೊಂಡು ಮೊಣಕೈಯಿಂದ ನನಗೆ ತಿವಿದರು. ಪ್ರಕರಣದ ತನಿಖೆ ಮಾಡಿದ ನಿವೃತ್ತ ನ್ಯಾಯಮೂರ್ತಿ ಸುಧೀರ್ ನಾನಾವತಿ ಅವರಿಗೂ ಇದು ಪೂರ್ವ ಯೋಜಿತ ಕೃತ್ಯ ಎಂದು ಗೊತ್ತಿದೆ' ಎಂದು ಶ್ರೀಶಾಂತ್ ದೂರಿದ್ದಾರೆ.2008ರಲ್ಲಿ ಈ ಘಟನೆ ನಡೆದಾಗ ಹರಭಜನ್ ಅವರನ್ನು ಟೂರ್ನಿಯ ಉಳಿದ ಪಂದ್ಯಗಳಿಂದ ನಿಷೇಧಿಸಿ, ಶ್ರೀಶಾಂತ್‌ಗೆ ಎಚ್ಚರಿಕೆ ನೀಡಲಾಗಿತ್ತು. ತನಿಖೆಯ ಬಳಿಕ ಪ್ರತಿಕ್ರಿಯಿಸಿದ್ದ ಮ್ಯಾಚ್ ರೆಫರಿ ಫಾರೂಖ್ ಎಂಜಿನಿಯರ್ ಮತ್ತು ಐಪಿಎಲ್‌ನ ಅಂದಿನ ಅಧ್ಯಕ್ಷ ಲಲಿತ್ ಮೋದಿ, ಹರಭಜನ್ ಯಾವುದೇ ಪ್ರಚೋದನೆ ಇಲ್ಲದೇ ಹೊಡೆದಿದ್ದಾಗಿ ಹೇಳಿದ್ದರು.`ಐದು ವರ್ಷಗಳ ಹಿಂದಿನ ಘಟನೆಯನ್ನು ಎಲ್ಲರೂ ಈಗ ಮರೆತಿರುವಾಗ ಮತ್ತೆ ನೆನಪಿಸುವುದು ಸರಿಯಲ್ಲ. ಆದರೂ, ಆ ಘಟನೆಯ ವಿಡಿಯೊವನ್ನು ಬಹಿರಂಗ ಪಡಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ' ಎಂದೂ ಮೋದಿ ತಿಳಿಸಿದ್ದಾರೆ.ಗುರುವಾರ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಮಾತಿನ ಚಕಮಕಿಯನ್ನು ಆಂಗ್ಲ ಪತ್ರಿಕೆಯೊಂದು `ಕೆನ್ನೆಗೆ ಹೊಡೆದ ಪ್ರಕರಣ'ಕ್ಕೆ ಹೋಲಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀಶಾಂತ್ ಟ್ವಿಟರ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಏಪ್ರಿಲ್ 17ರಂದು ಜೈಪುರದಲ್ಲಿ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣೆಸಲಿದ್ದು, ಶ್ರೀಶಾಂತ್ ಮತ್ತು ಭಜ್ಜಿ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಪ್ರತಿಕ್ರಿಯಿಸಿ (+)