ಗುರುವಾರ , ನವೆಂಬರ್ 14, 2019
18 °C
ಅನರ್ಹರ ಪಾಲಾದ ಬಸವ ಇಂದಿರಾ ವಸತಿ ಯೋಜನೆ

ಹರಸೂರ ಗ್ರಾ.ಪಂ.-`ಮಾಹಿತಿ ಖ್ಯಾತೆ'

Published:
Updated:

ಗುಲ್ಬರ್ಗ: `ಬಸವ ಇಂದಿರಾ ಗ್ರಾಮೀಣ ವಸತಿ ಯೋಜನೆ'ಗೆ ಆಯ್ಕೆ ಮಾಡಿರುವ ಫಲಾನುಭವಿಗಳ ಅರ್ಹತಾ ವಿವರ ನೀಡುವಂತೆ ತಾಲ್ಲೂಕಿನ ಹರಸೂರ ಗ್ರಾಮ ಪಂಚಾಯಿತಿಯಿಂದ ಪರಿಪರಿಯಾಗಿ ಮಾಹಿತಿ ಕೋರಿದರೂ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಎರಡು ವರ್ಷದಿಂದ ಮಾಹಿತಿ ಆಯೋಗಕ್ಕೆ ಮನವಿ, ಮೇಲ್ಮನವಿ ಮಾಡುತ್ತ ಕಾಲ ಕಳೆಯುತ್ತಿವೆ.2010-11ನೇ ಸಾಲಿಗೆ ಹರಸೂರ ಗ್ರಾಮ ಪಂಚಾಯಿತಿಯಲ್ಲಿ 115 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ನಿಜವಾದ ಗುಡಿಸಲು ವಾಸಿಗಳಿಗೆ ಮನೆ ಸಿಕ್ಕಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರ ಸಂಬಂಧಿಕರಿಗೆ ಮನೆ ಹಂಚಿಕೆಯಾಗಿದೆ ಎಂದು ಗ್ರಾಮ ಪಂಚಾಯಿತಿ ವಾಪ್ತಿಯ ಕೇರೂರ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಸಾಮಾಜಿಕ ಕಾರ್ಯಕರ್ತ ಶೇಖ್ ಶೆಫಿ  2011ರಲ್ಲಿ ಗ್ರಾಮ ಪಂಚಾಯಿತಿಯಿಂದ ಫಲಾನುಭವಿಗಳ ವಿವರ ಒದಗಿಸುವಂತೆ ಮಾಹಿತಿ ಹಕ್ಕು ನಿಯಮದಡಿಯಲ್ಲಿ ಅರ್ಜಿ ಸಲ್ಲಿಸಿದರು.ಬೆಂಗಳೂರಿನಲ್ಲಿರುವ ಮಾಹಿತಿ ಆಯೋಗಕ್ಕೆ ಇಲ್ಲಿಯವರೆಗೂ ಎರಡು ಬಾರಿ ಮೇಲ್ಮನವಿ ಸಲ್ಲಿಕೆಯಾಗಿದೆ. ಆದರೆ ಗ್ರಾಮ ಪಂಚಾಯಿತಿಯಿಂದ ಸೂಕ್ತ ವಿವರ ಮಾತ್ರ ದೊರೆಯುತ್ತಿಲ್ಲ. ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾ ಪಂಚಾಯಿತಿ ಕೂಡಾ `ಅದೇ ರಾಗ ಅದೇ ಹಾಡು' ಹೇಳುತ್ತಿದೆ.ನವೆಂಬರ್ 6, 2012ರಲ್ಲಿ ವಿಚಾರಣೆ ಕೈಗೆತ್ತಿಕೊಂಡಿದ್ದ ಆಯೋಗವು, ಖುದ್ದಾಗಿ ಫಲಾನುಭವಿಗಳ ಮಾಹಿತಿ ಪರಿಶೀಲನೆಗೆ ಅರ್ಜಿದಾರರಿಗೆ ಅವಕಾಶ ನೀಡಬೇಕೆಂದು ಆದೇಶಿಸಿತ್ತು. ಸರ್ಕಾರಿ ಉದ್ಯೋಗದಲ್ಲಿದ್ದವರು, ಸ್ವಂತ ಮನೆ ಇದ್ದವರು ಫಲಾನುಭವಿಗಳ ಪಟ್ಟಿಯಲ್ಲಿರುವುದು, ಎಂಟು ಫಲಾನುಭವಿಗಳು ಜಾತಿ ಪ್ರಮಾಣಪತ್ರ ಹಾಗೂ ಆದಾಯ ಪ್ರಮಾಣಪತ್ರ ಲಗತ್ತಿಸದಿರುವುದನ್ನು ಶೆಫಿ ಪತ್ತೆ ಮಾಡಿ, ಈ ಬಗ್ಗೆ ಜನವರಿ 21, 2013ರಂದು ಎರಡನೇ ಬಾರಿ ಮೇಲ್ಮನವಿ ಸಲ್ಲಿಸಿ ಮಾಹಿತಿ ಹಕ್ಕು ಆಯೋಗದ ಗಮನ ಸೆಳೆದರು.ಶೆಫಿ ಅವರ ಮನವಿಯಲ್ಲಿ ಪುರಸ್ಕರಿಸಿದ ರಾಜ್ಯ ಮಾಹಿತಿ ಹಕ್ಕು ಆಯೋಗವು, 15 ದಿನಗಳಲ್ಲಿ ಎಲ್ಲ ಫಲಾನುಭವಿಗಳ ಪ್ರಮಾಣಪತ್ರಗಳ ನಕಲುಗಳನ್ನು ಶೆಫಿ ಅವರಿಗೆ ಒದಗಿಸಬೇಕು. ಅನರ್ಹ ಫಲಾನುಭವಿಗಳನ್ನು  ಆಯ್ಕೆ ಮಾಡಿದ್ದರೆ, ಈ ಬಗ್ಗೆ ಮಾಹಿತಿ ಹಕ್ಕು ಆಯೋಗಕ್ಕೆ ವಿವರ ಸಲ್ಲಿಸಬೇಕೆಂದು ಫೆಬ್ರುವರಿ 12, 2013ರಂದು ಜಿಲ್ಲಾ ಪಂಚಾಯಿತಿಗೆ ನಿರ್ದೇಶಿಸಿತು. ಇದೇ ವೇಳೆ, ಅರ್ಜಿದಾರರಿಗಾದ ಮಾನಸಿಕ ಸಂಕಷ್ಟಕ್ಕೆ ಜಿಲ್ಲಾ ಪಂಚಾಯಿತಿ ಸಾಧಿಲ್ವಾರು ನಿಧಿಯಿಂದ ಶೆಫಿ ಅವರಿಗೆ ರೂ 1000 ಪರಿಹಾರ ಒದಗಿಸಬೇಕೆಂದು ಆಯೋಗವು ಯೋಜನಾ ಅಭಿವೃದ್ಧಿ ಅಧಿಕಾರಿ ವಸಂತ ಕುಲಕರ್ಣಿ ಅವರಿಗೆ ಸೂಚಿಸಿದೆ.`ಆದೇಶ ಹೊರಬಿದ್ದು ಒಂದೂವರೆ ತಿಂಗಳಾದರೂ ಗ್ರಾಮ ಪಂಚಾಯಿತಿಯಿಂದ ಯಾವುದೇ ಮಾಹಿತಿ ಕಳುಹಿಸಲಾಗಿಲ್ಲ. ಹೀಗಾಗಿ ಬಸವ ಇಂದಿರಾ ವಸತಿ ಯೋಜನೆಗೆ ಅನರ್ಹರನ್ನು ಆಯ್ಕೆ ಮಾಡಿರುವುದನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಒಪ್ಪಿಕೊಂಡಂತಾಗಿದೆ. ಆದೇಶ ನೀಡಿದ 15 ದಿನಗಳಲ್ಲಿ ಡಿಡಿ ಮೂಲಕ ಹಣ ಪಾವತಿಸುವಂತೆ ಸೂಚಿಸಿದ್ದರೂ ಜಿಲ್ಲಾ ಪಂಚಾಯಿತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ' ಎನ್ನುವುದು ಶೆಫಿ ವಿವರ.

ಮುಂದಿನ ವಿಚಾರಣೆಯನ್ನು ಜುಲೈ 5, 2013ಕ್ಕೆ ಆಯೋಗವು ನಿಗದಿ ಮಾಡಿದೆ.

ಪ್ರತಿಕ್ರಿಯಿಸಿ (+)