ಸೋಮವಾರ, ಮೇ 17, 2021
28 °C

ಹರಿಕಥೆಗೆ ಮೆರುಗು ತಂದವರು...

-ಕೆ.ಆರ್.ಜಯಸಿಂಹ Updated:

ಅಕ್ಷರ ಗಾತ್ರ : | |

ಹರಿಕಥೆಗೆ ಮೆರುಗು ತಂದವರು...

ಹಿಂದೆ ಹಬ್ಬ ಹರಿದಿನ, ಜಾತ್ರಾ ಮಹೋತ್ಸವದಲ್ಲಿ ಹರಿಕಥೆ ಪಾರಾಯಣ ಮುಂಚೂಣಿಯಲ್ಲಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ಹರಿಕಥೆ ನಡೆಯುವ ಸ್ಥಳಕ್ಕೆ ಜನತೆ ತಂಡೋಪತಂಡವಾಗಿ ಧಾವಿಸಿ ಬರುತ್ತಿದ್ದರು. ಆದರೆ ಆಧುನಿಕತೆ ಬಿರುಗಾಳಿಗೆ ಸಿಕ್ಕಿ ಹರಿಕಥೆಯಂತಹ ಜನಪದ ಕಲೆಗಳ ವೈಭವ, ಸಂಸ್ಕೃತಿ ಬಿಂಬಿಸುವ ಕಲಾ ಪ್ರಕಾರಗಳು ಕಾಲ ಚಕ್ರದಲ್ಲಿ ಕಣ್ಮರೆಯಾಗುತ್ತಿವೆ. ಕಲಾವಿದರು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಇಂಥ ಹರಿಕಥೆಯನ್ನು ಜೀವಂತವಾಗಿಡುವ ಕೆಲಸವನ್ನು ಇಂದಿಗೂ ಬಾಲರಾಜು ಮಾಡುತ್ತಾ ಬಂದಿದ್ದಾರೆ. ಬಾಲ್ಯದಿಂದಲೇ ಹರಿಕಥೆ ಪಾರಾಯಣವನ್ನು ನರನಾಡಿಗಳಲ್ಲಿ ಜೀರ್ಣಿಸಿಕೊಂಡಿದ್ದ ಪಾವಗಡ ತಾಲ್ಲೂಕಿನ ದೊಡ್ಡಹಳ್ಳಿಯ ಬಾಲರಾಜು ಅವರಿಗೆ ತಂದೆ ಲಿಂಗರಾಜು ಅವರೇ ಗುರು. ವಂಶ ಪಾರಂಪರ್ಯವಾಗಿ ಕಲೆಯನ್ನು ಉಳಿಸಿ, ಬೆಳಸುತ್ತಿರುವ ಇವರ ಕುಟುಂಬಕ್ಕೆ ಹರಿಕಥಾ ಪಾರಾಯಣವೇ ಜೀವನಾಧಾರ.ತೆಲುಗು, ಕನ್ನಡ ಎರಡೂ ಭಾಷೆಗಳಲ್ಲೂ ಬಾಲರಾಜ್ ಪಾರಾಯಣ ಮಾಡಬಲ್ಲರು. ತಾಲ್ಲೂಕಿನಲ್ಲಿ ಮಾತ್ರವಲ್ಲದೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಆಂಧ್ರಪ್ರದೇಶದ ಮೂಲೆ ಮೂಲೆಗಳಲ್ಲೂ ಹರಿಕಥಾ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.ವೃತ್ತಿಯಲ್ಲಿ ಹರಿಕಥಾ ಭಾಗವತರಾದ ಬಾಲರಾಜು ಅವರು ಪ್ರವೃತ್ತಿಯಲ್ಲಿ ರಂಗಕಲಾವಿದ ಹಾಗೂ ಸಂಗೀತಗಾರ. ಕೃಷ್ಣ, ನಾರದ, ಅಭಿಮನ್ಯು, ಅರ್ಜುನ, ಪ್ರಹ್ಲಾದ ಮುಂತಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಬಲ, ಸಿತಾರ್ ಹಾರ್ಮೋನಿಯಂ ಮುಂತಾದ ಸಂಗೀತ ಸಾಧನಗಳನ್ನೂ ಸರಾಗವಾಗಿ ನುಡಿಸಬಲ್ಲರು.ಕುರುಕ್ಷೇತ್ರ, ಶ್ರೀಕೃಷ್ಣ ಸಂಧಾನ, ದಾನ ವೀರಶೂರ ಕರ್ಣ ಮುಂತಾದ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ಅವರು ನಿರ್ದೇಶಿಸಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾದ ಧಾರವಾಹಿಗಳ್ಲ್ಲಲಿ ನಟಿಸಿದ್ದಾರೆ. ಕೆಲವು ಹಾಡುಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸಹ ಗುರುತಿಸಿಕೊಂಡಿದ್ದಾರೆ.ಸಾಂಪ್ರದಾಯಿಕ ಹಾಗೂ ಪುರಾಣಗಾಥೆಗಳನ್ನು ಪಾರಾಯಣ ಮಾಡುವ ಜತೆಗೆ ಪ್ರಸಕ್ತ ಸಾಮಾಜಿಕ ವಿದ್ಯಾಮಾನಗಳನ್ನು ಆಧರಿಸಿ ವಿಶೇಷ ಹರಿಕಥಾ ರೂಪಕ ರಚಿಸಿ, ನಿರ್ದೇಶಿಸಿ ಅಳಿಯುತ್ತಿರುವ ಹರಿಕಥೆಗೆ ಆಧುನಿಕತೆಯ ಮೆರುಗನ್ನು ನೀಡಿ ಕಲೆ ಉಳಿಸುವ ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ. ಇಂದಿರಾಗಾಂಧಿ ಚರಿತ್ರೆ, ವೈ.ಎಸ್.ರಾಜಶೇಖರರೆಡ್ಡಿ, ಶ್ರಿರಾಮರೆಡ್ಡಿ ಚರಿತ್ರೆ ಮುಂತಾದವು ಇವರು ರಚಿಸಿರುವ ವಿಶೇಷ ಹರಿಕಥೆಗಳು.ಕಲಾ ಸಾಧನೆಗೆ ಬೆಂಗಳೂರಿನ ಆಧ್ಯಾತ್ಮಿಕ ಕೇಂದ್ರ `ಹರಿಕಥಾ ವಿದ್ವಾನ್', ಕೋಲಾರ ಜ್ಲ್ಲಿಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ `ಪೌರಾಣಿಕ ನಾಟಕ ವಿದ್ವಾನ್' ಎಂಬ ಬಿರುದು ನೀಡಿ ಸನ್ಮಾನಿಸಿವೆ.`ಹರಿಕಥೆಯನ್ನು ಆಸ್ವಾದಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಸರ್ಕಾರದಿಂದ ಈವರೆಗೂ ಮಾಸಾಶನವಾಗಲಿ, ಮತ್ತಿತರ ಸವಲತ್ತಾಗಲಿ ಮಂಜೂರಾಗಿಲ್ಲ. ಕಲೆ ನೆರಳಲ್ಲೆ ಬದುಕುವ ಕಲಾವಿದರಿಗೆ ಸರ್ಕಾರ ಅಗತ್ಯ ನೆರವು ನೀಡಬೇಕು ಎನ್ನುತ್ತಾರೆ ಬಾಲರಾಜು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.