ಶನಿವಾರ, ಜೂನ್ 19, 2021
21 °C
ಚಿಕ್ಕಅಂಕನಹಳ್ಳಿಯಲ್ಲಿ ಉತ್ತೂರಮ್ಮ ದೇಗುಲ ಉದ್ಘಾಟನೆ

ಹರಿದು ಬಂದ ಭಕ್ತಸಾಗರ: ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಗಡಿ ಭಾಗದ ಚಿಕ್ಕಅಂಕನಹಳ್ಳಿಯಲ್ಲಿ ಜೀರ್ಣೋದ್ಧಾರಗೊಂಡ ಪುರಾತನ ಉತ್ತೂರಮ್ಮ (ವಲ್ಮೀಕಾಂಬ) ದೇವಾಲಯ ಉದ್ಘಾಟನೆ ಹಾಗೂ ವಿಗ್ರಹ ಪುನರ್‌ ಪ್ರತಿಷ್ಠಾಪನೆ ಕಾರ್ಯ ಬುಧವಾರ ಸಡಗರ, ಸಂಭ್ರಮದಿಂದ ನಡೆಯಿತು.ಗ್ರಾಮದ ಹೊರ ವಲಯದಲ್ಲರುವ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬ್ರಾಹ್ಮೀ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ, ಕುಂಭಾಭಿಷೇಕ, ಅಲಂಕಾರ ನಿರೀಕ್ಷಣೆ, ರಂಭಾವೃಕ್ಷ ಛೇದನ, ಸವತ್ಸಧೇನು ದರ್ಶನ, ನಿವೇದನೆ ಜರುಗಿದವು.ಇದಕ್ಕೂ ಮುನ್ನ ಅಂಕುರಾರ್ಪಣೆ, ಜಲಾಧಿವಾಸ, ಕಲಶ ಸ್ಥಾಪನೆ, ಮೃತ್ಯುಂಜಯ ಹೋಮ, ನವರತ್ನ ನ್ಯಾಸ, ಅಷ್ಟಬಂಧ, ರಕ್ಷಾಪೂಜೆ, ಪಂಚಗವ್ಯ, ಪ್ರತಿಮಾಶುದ್ಧಿ, ಯಾಗಶಾಲಾ ಪ್ರವೇಶ, ಪರ್ಯಗ್ನೀಕರಣ, ಗಣಹೋಮ ನಡೆದವು. ದೇಗುಲದ ಆವರಣದಲ್ಲಿ ನಿರ್ಮಿಸಿದ್ದ ಯಾಗಶಾಲೆಯಲ್ಲಿ ಮಂಗಳ ವಾದ್ಯ, ವೇದ ಘೋಷಗಳೊಡನೆ ಪೂರ್ಣಾಹುತಿ ನಡೆಯಿತು.ಮೈಸೂರು, ಬೆಂಗಳೂರು, ಚಾಮರಾಜನಗರ ಇತರ ಜಿಲ್ಲೆಗಳಿಂದ ಆಗಮಿಸಿದ್ದ ಅಪಾರ ಭಕ್ತರು ಉತ್ತೂರಮ್ಮನಿಗೆ ಪೂಜೆ ಸಲ್ಲಿಸಿದರು. ಹರಕೆ ಹೊತ್ತವರು ಮುಡಿಸೇವೆ ಅರ್ಪಿಸಿದರು. ಧೂಪ, ದೀಪದ ಸೇವೆಗಳು ಜರುಗಿದವು. ಮೈಸೂರಿನ ಪ್ರೊ.ಮಲ್ಲಣ್ಣ ಮತ್ತು ತಂಡ ಲಲಿತ ಸಹಸ್ರ ನಾಮಾರ್ಚನೆಗಳು ನಡೆಸಿತು.ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಹಣ್ಣು ಮಾಗುವುದು, ಬೀಜ ಮೊಳೆಯುವುದು, ಹಸು ಹಾಲು ಹಿಂಡುವುದು, ಹೂ ಸುಗಂಧ ಸೂಸುವುದಕ್ಕೆ ದೈವೀ ಶಕ್ತಿಯೇ ಸಾಕ್ಷಿ. ದೈವೀಶಕ್ತಿ ಎಲ್ಲರ ಅಂತಃಕರಣದಲ್ಲಿದೆ. ಪ್ರಾಣಿಗಳಿಗಳಿಗಿಂತ ಭಿನ್ನನಾದ ಮಾನವ ಆತ್ಮ ಶಾಂತಿಗಾಗಿ ದೇವರಲ್ಲಿ ನಂಬಿಕೆ ಇಡಬೇಕು. ಉಂಡು ಜೀವಿಸುವುದಕ್ಕಾಗಿ ಬದುಕಬಾರದು. ಐಹಿಕ ಸುಖಕ್ಕಾಗಿ ನಿಜವಾದ ಆನಂದವನ್ನು ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾ.ಪಂ. ಸದಸ್ಯ ಪುಟ್ಟಸ್ವಾಮಿ, ದೇವಾಲಯ ಸೇವಾ ಸಮಿತಿ ಅಧ್ಯಕ್ಷ ರಾಮೇಗೌಡ, ಡಿ.ಸಿ. ಚನ್ನೇಗೌಡ, ಜೆಡಿಎಸ್‌ ಮುಖಂಡ ರಾಜಣ್ಣ ಉಪಸ್ಥಿತರಿದ್ದರು. ಸಾಧಕರನ್ನು ಸನ್ಮಾನಿಸಲಾಯಿತು.ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಉತ್ತೂರಮ್ಮನ ಮಹಿಮೆ ಕುರಿತ ‘ಸ್ವರ–ಸಂಗಮ’ ಆಡಿಯೋ ಮತ್ತು ವಿಡಿಯೋ ಸಿಡಿ ಬಿಡುಗಡೆ ಮಾಡಲಾಯಿತು. ಮಂಗಳವಾರ ರಾತ್ರಿ ದಕ್ಷಯಜ್ಞ ನಾಟಕ ಪ್ರದರ್ಶನಗೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.