ಗುರುವಾರ , ಅಕ್ಟೋಬರ್ 17, 2019
21 °C

ಹರಿದು ಬಂದ ಯುವಸಾಗರ

Published:
Updated:

ಮಂಗಳೂರು:  ಜಿಲ್ಲೆಯ ಜನತೆ ಹಾಗೂ ವಿದ್ಯಾರ್ಥಿ ಸಮೂಹ ಗುರುವಾರ ಬರುವುದನ್ನೇ ಕಾತುರದಿಂದ ಕಾಯುತ್ತಿದ್ದಂತೆ ಇತ್ತು. ಸಂಜೆ ಆಗುತ್ತಿದ್ದಂತೆಯೇ ದಶ ದಿಕ್ಕುಗಳಿಂದ ತಂಡೊಪತಂಡವಾಗಿ ಮಂಗಳಾ ಕ್ರೀಡಾಂಗಣದ ಕಡೆಗೆ ಧಾವಿಸಲಾರಂಭಿಸಿದರು. ವಿದ್ಯಾರ್ಥಿ ಸಮೂಹದ ಉಮೇದು ಜೋರಾಗಿತ್ತು.ಸಂಜೆ 4 ಗಂಟೆ ಆಗುವಷ್ಟರಲ್ಲಿಯೇ ವಿದ್ಯಾರ್ಥಿ ಸಮೂಹ ಗ್ಯಾಲರಿಯಲ್ಲಿ ಆಯಕಟ್ಟಿನ ಜಾಗ ಆಕ್ರಮಿಸಿಯಾಗಿತ್ತು. ಅಲ್ಲಿ ಸಂಗೀತ, ಹಾಡು, ಮಾತಿನ ಚಟಾಕಿ ಕಳೆ ಏರಲಾರಂಭಿಸಿತ್ತು. ಐದು ಗಂಟೆ ವೇಳೆಗೆ ಗ್ಯಾಲರಿ ಮುಕ್ಕಾಲು ಭಾಗ ತುಂಬಿತ್ತು. ಕ್ರೀಡಾಂಗಣದಲ್ಲಿ ಪಥಸಂಚಲನ ಆರಂಭವಾಗುವ ಹೊತ್ತಿಗೆ ಗ್ಯಾಲರಿ ತುಂಬಿ ತುಳುಕಿತ್ತು.

 

ಸಭಾಂಗಣದ ಕುರ್ಚಿಗಳು ಅರ್ಧದಷ್ಟು ಖಾಲಿ ಇದ್ದರೂ ಗ್ಯಾಲರಿಯಲ್ಲಿ ಹಾಗೂ ಕ್ರೀಡಾಂಗಣದಲ್ಲಿ ಭರ್ತಿ ಜನವಿತ್ತು. ಗಣ್ಯರು, ಸ್ಪರ್ಧಿಗಳು ಹಾಗೂ ಪ್ರತಿನಿಧಿಗಳಿಗೆ ಮೀಸಲಿಟ್ಟ ಜಾಗದಲ್ಲಿ ಕುಳಿತುಕೊಳ್ಳಲು ದೊಡ್ಡ ತಂಡ  ಮುಂದಾಯಿತು. ಪೊಲೀಸರು ತಡೆ ಒಡ್ಡಿದರು.ಪಥ ಸಂಚಲನದ ತಂಡಗಳು ಎದುರಿನಲ್ಲಿ ಹಾದುಹೋಗುವಾಗ ಗ್ಯಾಲರಿಯಲ್ಲಿದ್ದ ಯುವಪಡೆಯೂ ಹೆಜ್ಜೆ ಹಾಕಲಾರಂಭಿಸಿತು. ಸಾಂಸ್ಕೃತಿಕ ತಂಡಗಳ ಪ್ರದರ್ಶನಕ್ಕೆ ಪ್ರತಿಸ್ಪಂದನ ದೊಡ್ಡ ಮಟ್ಟದಲ್ಲೇ ಇತ್ತು. ಏಳು ಗಂಟೆ ವರೆಗೆ ಸಂಭ್ರಮದಲ್ಲಿ ಜನತೆ ಮಿಂದೆದ್ದರು. ಪಥಸಂಚಲನ ಮುಕ್ತಾಯಗೊಂಡ ಕೂಡಲೇ ಗ್ಯಾಲರಿಯಲ್ಲಿದ್ದ ಮಂದಿಗೆ ಒಬ್ಬೊಬ್ಬರೇ ಮನೆಯತ್ತ ಚಿತ್ತ ಹರಿಸಿದ್ದರು.

 

ಉದ್ಘಾಟಕರ ಭಾಷಣ ಮುಕ್ತಾಯಗೊಳ್ಳುವ ಹೊತ್ತಿಗೆ ಗ್ಯಾಲರಿ ಮುಕ್ಕಾಲು ಭಾಗ ಖಾಲಿಯಾಗಿತ್ತು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆ ಎಂದು ಕಾರ್ಯಕ್ರಮ ನಿರೂಪಕರು ಘೋಷಿಸಿದರೂ ತೆರಳಲು ಉದ್ಯುಕ್ತರಾಗಿದ್ದ ಮಂದಿಯ ಮನಸ್ಸು ಬದಲಾಗಲಿಲ್ಲ.25 ಸಾವಿರ ಮಂದಿ:  ಯುವಜನರ ಈ ಮಹಾಮೇಳದಲ್ಲಿ ಪಾಲ್ಗೊಂಡ ಜನರ ಸಂಖ್ಯೆ 25 ಸಾವಿರ ದಾಟಿತ್ತು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುವುದು ಕಷ್ಟ ಎಂಬ ಹೆದರಿಕೆಯಲ್ಲಿದ್ದ ಸಂಘಟಕರ ಆತಂಕ ಸಂಜೆ ವೇಳೆಗೆ ದೂರವಾಯಿತು.ಸಮಾರಂಭ ಗಂಟೆ ವಿಳಂಬ:  ನೆಹರು ಮೈದಾನದಿಂದ ಸಾಗಿ ಬಂದ ಮೆರವಣಿಗೆ ಐದು ಗಂಟೆಗೆ ಮಂಗಳಾ ಕ್ರೀಡಾಂಗಣಕ್ಕೆ ತಲುಪಿಯಾಗಿತ್ತು. ಮೆರವಣಿಗೆಯಲ್ಲಿ ಸಾಗಿ ಬಂದಿದ್ದ 50 ಜಾನಪದ ಕಲಾ ತಂಡಗಳು ಹಾಗೂ 35 ರಾಜ್ಯಗಳ ಸ್ಪರ್ಧಿಗಳು ಒಂದು ಗಂಟೆ ಕಾಲ ಕರಾವಳಿ ಉತ್ಸವ ಮೈದಾನದಲ್ಲಿ ಕಾಯಬೇಕಾಯಿತು.ಉದ್ಘಾಟನಾ ಸಮಾರಂಭದ ಗಣ್ಯರು ಮಂಗಳಾ ಕ್ರೀಡಾಂಗಣ ಪ್ರವೇಶಿಸುವಾಗ ಸಂಜೆ ಐದೂವರೆ ದಾಟಿತ್ತು. ಕೊನೆಗೆ ಪಥಸಂಚಲನ ಆರಂಭಗೊಂಡಿದ್ದು ಆರು ಗಂಟೆ ಹೊತ್ತಿಗೆ. ಏಳು ಗಂಟೆವರೆಗೆ ಪಥ ಸಂಚಲನದ ಬೆಡಗು ಬಿನ್ನಾಣ. ಆದರೆ ವೇಳಾಪಟ್ಟಿಯಲ್ಲಿದ್ದಂತೆ 8.30ರ ವೇಳೆಗೆ ಉದ್ಘಾಟನಾ ಸಮಾರಂಭ ಮುಕ್ತಾಯಗೊಂಡಿತ್ತು. ಜನಪ್ರತಿನಿಧಿಗಳಿಂದಾಗಿ ವಿಳಂಬವಾಗಿದೆ ಎಂಬ ದೂರು ಕ್ರೀಡಾಂಗಣದಲ್ಲಿ ಕೇಳಿ ಬಂತು.ನೀರು ಸಿಗದಿದ್ದಾಗ: ಮೆರವಣಿಗೆಯಲ್ಲಿ ಸಾಗಿ ಬಂದ ತಂಡಗಳು ಹಾಗೂ ವಿದ್ಯಾರ್ಥಿಗಳು ಕುಡಿಯಲು ನೀರು ಸಿಗದೆ ಬೇಸರಪಟ್ಟುಕೊಂಡರು. ಕೂಡಲೇ ಸ್ಪಂದಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯರ ಸಹಕಾರ ಪಡೆದು ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಇಂತಹ ವಿಚಾರಗಳೇ ಜಿಲ್ಲೆಗೆ ಕೆಟ್ಟ ಹೆಸರು ತಂದು ಕೊಡುತ್ತದೆ. ಆಗ ಉಳಿದ ಉತ್ತಮ ವ್ಯವಸ್ಥೆ ಕಣ್ಣಿಗೆ ಕಾಣುವುದಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಾಕನ್, ಮೊಯಿಲಿ ಜನ್ಮದಿನ: ಮಹಾ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನದಂದೇ ಕೇಂದ್ರ ಸಚಿವ ಅಜಯ್ ಮಾಕನ್ ಹಾಗೂ ಎಂ. ವೀರಪ್ಪ ಮೊಯಿಲಿ ಅವರ ಜನ್ಮದಿನ. ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಈ ವಿಷಯ ಬಹಿರಂಗಪಡಿಸಿ ಶುಭಾಶಯ ಕೋರಿದರು. ಹೆಗ್ಗಡೆ ಅವರ ಮಾತು ಕೇಳುತ್ತಾ ಗಂಭೀರವಾಗಿ ಕುಳಿತಿದ್ದ ಇಬ್ಬರ ಮೊಗದಲ್ಲೂ ಮುಗುಳ್ನಗು. ಮುಖ್ಯಮಂತ್ರಿ ಇಬ್ಬರನ್ನು ಅಭಿನಂದಿಸಿದರು.

Post Comments (+)