ಭಾನುವಾರ, ಜುಲೈ 25, 2021
21 °C

ಹರಿದ್ವಾರದಲ್ಲಿ ಸುರಕ್ಷಿತವಾಗಿದ್ದ ಮೈಸೂರು ನಿವಾಸಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಉತ್ತರಾಖಂಡದ ಹರಿದ್ವಾರ ಯಾತ್ರೆಗೆ ಹೋಗಿದ್ದ 45 ಮಂದಿ ಮೈಸೂರು ನಿವಾಸಿಗಳು ಮಂಗಳವಾರ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ನಗರ ರೈಲು ನಿಲ್ದಾಣಕ್ಕೆ ಬಂದಿಳಿದರು. ಹರಿದ್ವಾರದಲ್ಲಿ ಗಂಗಾ ನದಿ ಉಕ್ಕಿಹರಿಯುತ್ತಿದ್ದರೂ ತಾವು ಸುರಕ್ಷಿತ ಪ್ರದೇಶದಲ್ಲಿದ್ದರಿಂದ ಹೆಚ್ಚಿನ ತೊಂದರೆಯೇನೂ ಆಗಲಿಲ್ಲ ಎಂದು ಯಾತ್ರಾರ್ಥಿಗಳು ತಿಳಿಸಿದರು.`ಜೂ.6ರಂದು ಮೈಸೂರಿನಿಂದ ಹೊರಟು ಬೆಂಗಳೂರಿಗೆ ಬಂದಿವು. ಇಲ್ಲಿಂದ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ದೆಹಲಿಗೆ ಹೊರಟೆವು. ಜೂ.8ರಂದು ದೆಹಲಿ ತಲುಪಿ ಅಲ್ಲಿಂದ ನೇಪಾಳದ ಕಡೆಗೆ ಹೊರಟೆವು. ನೇಪಾಳದಲ್ಲಿ ಬಂದ್ ಇದೆಯೆಂಬ ವಿಷಯ ಮಾರ್ಗ ಮಧ್ಯೆ ತಿಳಿಯಿತು.ಹೀಗಾಗಿ ನೇಪಾಳಕ್ಕೆ ಹೋಗಲಾಗಲಿಲ್ಲ. ಅಲ್ಲಿಂದ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಜೂ.19ಕ್ಕೆ ಹರಿದ್ವಾರಕ್ಕೆ ಹೋದೆವು. ಆ ಹೊತ್ತಿಗಾಗಲೇ ಹರಿದ್ವಾರ ಭಾಗದಲ್ಲಿ ಮಳೆ ಹೆಚ್ಚಾಗಿತ್ತು. ಗಂಗೆಯಲ್ಲಿ ಪ್ರವಾಹ ಹೆಚ್ಚಾಗಿದ್ದರೂ ನಾವು ತಂಗಿದ್ದ ಪ್ರದೇಶದಲ್ಲಿ ಯಾವುದೇ ತೊಂದರೆಯಾಗಲಿಲ್ಲ' ಎಂದು ಮೈಸೂರಿನ ಚಾಮುಂಡಿಪುರಂ ನಿವಾಸಿ ರಾಜೇಶ್ವರಿ ತಿಳಿಸಿದರು.`ನಾವು ಹರಿದ್ವಾರದಲ್ಲಿದ್ದಾಗ ಕೇದಾರನಾಥದಲ್ಲಿ ಭೀಕರ ಪ್ರವಾಹ ಉಂಟಾಗಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿಯಿತು. ಇದರಿಂದ ನಾವು ಕೂಡಾ ಅಪಾಯಕ್ಕೆ ಸಿಲುಕಿರಬಹುದು ಎಂದು ಮೈಸೂರಿನಲ್ಲಿದ್ದ ಕುಟುಂಬ ಸದಸ್ಯರು ಗಾಬರಿಗೊಂಡಿದ್ದರು. ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿ ನಮಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದೆವು' ಎಂದು ಯಾತ್ರಾರ್ಥಿ ಶುಭಾ ಹೇಳಿದರು.`ಗಂಗೆಯಲ್ಲಿ ಪ್ರವಾಹ ಹೆಚ್ಚಾಗಿತ್ತು. ಆದರೆ, ಹರಿದ್ವಾರದಲ್ಲಿ ನದಿ ವಿಸ್ತಾರವಾಗಿ ಹರಿಯುವುದಿಂದ ಹೆಚ್ಚು ಹಾನಿಯಾಗಿರಲಿಲ್ಲ. ಮಾರ್ಗ ಮಧ್ಯೆ ನಾವು ಕೂಡಾ ಅಪಾಯಕ್ಕೆ ಸಿಲುಕಬಹುದೇನೋ ಎಂಬ ಆತಂಕ ಇತ್ತು. ಆದರೆ, ದೆಹಲಿ ಸೇರಿದ ನಂತರ ಗಾಬರಿ ದೂರಾಯಿತು. ಭಾನುವಾರ (ಜೂ.23) ದೆಹಲಿಯಿಂದ ಹೊರಟೆವು' ಎಂದು ಮತ್ತೊಬ್ಬ ಯಾತ್ರಾರ್ಥಿ ಪಚ್ಚೆಲಕ್ಷ್ಮಮ್ಮಣ್ಣಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.