ಹರಿಯದ ನೀರು: ಮುಗಿಯದ ಗೋಳು

7

ಹರಿಯದ ನೀರು: ಮುಗಿಯದ ಗೋಳು

Published:
Updated:

ಯಾದಗಿರಿ: ಸಮೀಪದ ಖಾನಾಪುರ ಕ್ಯಾಂಪಿನಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಹಲವು ಕಚೇರಿಗಳಿದ್ದು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ಕಚೇರಿಗಳು ಪಾಳು ಬಿದ್ದು ಬಿಕೋ ಎನ್ನುತ್ತಿವೆ.ಕೃಷ್ಣಾ ಭಾಗ್ಯ ಜಲ ನಿಗಮದ ಸನ್ನತಿ ಬ್ಯಾರೇಜ್ ಉಪ ವಿಭಾಗ, ನಂ.10 ಉಪ ವಿಭಾಗ, ಪಾಲನೆ ಮತ್ತು ಪೋಷಣೆ ವಿಭಾಗ ಹೀಗೆ ಇನ್ನೂ ಮೂರ‌್ನಾಲ್ಕು ಕಚೇರಿಗಳಲ್ಲಿ ಅಧಿಕಾರಿಗಳು ಕಚೇರಿಗೆ ಬರದೇ ಶಹಾಪುರ, ಭೀಮರಾಯನಗುಡಿ, ಗುಲ್ಬರ್ಗ, ಬೆಂಗಳೂರಿನಲ್ಲಿ ಇದ್ದು ಕಚೇರಿಯ ಕೆಲಸಗಳು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಚೇರಿಗಳು ಬಿಕೋ ಎನ್ನುತ್ತಿವೆ ಎಂದು ರೈತರು ದೂರಿದ್ದಾರೆ.ಕೆಬಿಜೆಎನ್‌ಎಲ್ ಸಿಬ್ಬಂದಿಗಳಿಗಾಗಿ ಪ್ರತಿ ತಿಂಗಳ ಲಕ್ಷಾಂತರ ಹಣ ಸಂಬಳ, ಓಡಾಡಲು ದುಬಾರಿ ವಾಹನಗಳು, ವಾಸಿಸಲು ವಸತಿ ಗೃಹ ಹೀಗೆ ಎಲ್ಲ ಸೌಲಭ್ಯಗಳನ್ನು ಖಾನಾಪುರದ ಕ್ಯಾಂಪಿನಲ್ಲಿ ಮಾಡಲಾಗಿದೆ. ಆದರೆ ಈ ಸೌಲಭ್ಯಗಳಿದ್ದರೂ, ಅಧಿಕಾರಿಗಳು ಕಚೇರಿಯ ಕೇಂದ್ರಸ್ಥಾನದಲ್ಲಿ ಇರದೇ ದೂರದ ನಗರಗಳಲ್ಲಿಯೇ ವಾಸಿಸುತ್ತಿದ್ದಾರೆ. ರೈತರ ಕಾಲುವೆ ನೀರಿನ ಸಮಸ್ಯೆ ಮತ್ತು ಇತರ ಸಮಸ್ಯೆಗಳನ್ನು ಹೊತ್ತು ತಂದರೆ, ಕಚೇರಿಯಲ್ಲಿ `ಸಾಹೇಬ್ರ್ ಇಲ್ಲ...~ಎಂದು ಅಲ್ಲಿ ಸಿಬ್ಬಂದಿ ಬೇಜಬ್ದಾರಿಯಿಂದ ಉತ್ತರ ನೀಡಿ ರೈತರನ್ನು ಕಳುಹಿಸುತ್ತಾರೆ.ರೈತರ ಸಮಸ್ಯೆಗಳಿಗಾಗಿ ಹಲವು ವರ್ಷಗಳಿಂದ ಕ್ಯಾಂಪಿನಲ್ಲಿ ಅನೇಕ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಕಚೇರಿಗಳಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಹೀಗೆ ಅನೇಕ ಅಧಿಕಾರಿಗಳು ಆಗೊಮ್ಮೆ, ಈಗೊಮ್ಮೆ ಕಚೇರಿಗೆ ಬಂದು, ತಕ್ಷಣವೇ ಅಲ್ಲಿಂದ ತೆರಳುತ್ತಾರೆ.ಪಾಲನೆ ಮತ್ತು ಪೋಷಣೆ ವಿಭಾಗ ಕಚೇರಿಯ ವ್ಯಾಪ್ತಿಯ ದೋರನಳ್ಳಿ, ಹತ್ತಿಗುಡೂರ, ವಡಗೇರಾ, ಖಾನಾಪುರ ಸೇರಿದಂತೆ ಹಲವು ಉಪವಿಭಾಗಗಳ ಪ್ರಮುಖ ಕಚೇರಿ ಹೊಂದಿದೆ. ಕಾಲುವೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳು ಖಾನಾಪುರದಲ್ಲಿ ನಡೆಯುತ್ತವೆ. ಪ್ರಮುಖ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದ್ದರೂ, ಭರ್ತಿ ಆಗುತ್ತಿಲ್ಲ. ಭೀಮರಾಯನಗುಡಿಯಲ್ಲಿನ ಅಧಿಕಾರಿಗಳೇ ಪ್ರಭಾರ ವಹಿಸಿಕೊಂಡಿದ್ದಾರೆ. ಅಲ್ಲಿಂದಲೇ ಇಲ್ಲಿನ ಕೆಲಸಗಳನ್ನು ನಿರ್ವಹಿಸುತ್ತಾರೆ. ಹೀಗಾಗಿ ರೈತರ ಸಮಸ್ಯೆಗಳು ನಿವಾರಣೆ ಆಗುತ್ತಿಲ್ಲ ಎಂಬುದು ರೈತರ ಅಳಲು.ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಗಳಿವೆ. ಭೀಮರಾಯನಗುಡಿ, ಹುಣಸಗಿ, ನಾರಾಯಣಪುರ, ಆಲಮಟ್ಟಿಯ ಕಚೇರಿಗಳ ಉನ್ನತ ಅಧಿಕಾರಿಗಳು ಯಾದಗಿರಿಯಲ್ಲಿ ರೈಲು ಇಳಿದು ವಾಹನಗಳಲ್ಲಿ ಖಾನಾಪುರ ಕಚೇರಿಯ ಮುಂಭಾಗದಿಂದಲೇ ಸಂಚರಿಸುತ್ತಾರೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಸಿಇಒ, ಸೇರಿದಂತೆ ಅನೇಕ ಉನ್ನತಾಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಲೇ ಇರುತ್ತಾರೆ.ಒಮ್ಮೆಯೂ ಈ ಕಚೇರಿಗಳಿಗೆ ಭೇಟಿ ನೀಡುವ ಗೋಜಿಗೆ ಹೋಗಿಲ್ಲ.

ಪ್ರತಿ ವರ್ಷ ಬೆಳೆ ಬಂದಾಗ ಕಾಲುವೆ ಕೊನೆ ಭಾಗದ ರೈತರಿಗೆ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಆಗ ರೈತರು ಕಚೇರಿಗಳ ಮುಂದೆಪ್ರತಿಭಟನೆ, ಹೋರಾಟಗಳು ಸಾಮಾನ್ಯವಾಗುತ್ತವೆ. ಇದಕ್ಕೂ ಜಗ್ಗದ ಅಧಿಕಾರಿಗಳು, ಇಲ್ಲಿಗೆ ಬಂದು ರೈತರ ಸಮಸ್ಯೆ ನಿವಾರಿಸುವ ಗೋಜಿಗೆ ಹೋಗುವುದಿಲ್ಲ. ಖಾನಾಪುರ ಕಚೇರಿಗಳು ಅಧಿಕಾರಿಗಳು ಇಲ್ಲದೆ ಬಿಕೋ ಎನ್ನುತ್ತಿದ್ದು, ಕಾಲುವೆಯ ಕೊನೆಯ ಭಾಗಕ್ಕೆ ನೀರು ಹರಿಯದೇ ರೈತರು ಮಾತ್ರ ಸಂಕಷ್ಟ ಪಡುವುದು ನಿರಂತರವಾಗಿ ನಡೆದೇ ಇದೆ. ಕೂಡಲೇ ಈ ಸಮಸ್ಯೆಯನ್ನು ನಿವಾರಣೆ ಮಾಡಬೇಕು. ಅಧಿಕಾರಿಗಳು ಇಲ್ಲಿಂದಲೇ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ರೈತರು ಒತ್ತಾಯಿಸುತ್ತಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry