ಹರಿಯಿತು ಹರ್ಷದ ಹೊನಲು

7

ಹರಿಯಿತು ಹರ್ಷದ ಹೊನಲು

Published:
Updated:ಬೆಂಗಳೂರು: ನೂರು ಕನಸುಗಳನ್ನು ಹೊತ್ತು ಬಂದ ‘ಹೊಸ ವರ್ಷ’ವನ್ನು ರಾಜಧಾನಿಯ ಜನರು ಪಟಾಕಿ ಬಾಣ- ಬಿರುಸುಗಳೊಂದಿಗೆ ಅದ್ಧೂರಿ ಮತ್ತು ಆತ್ಮೀಯತೆಯಿಂದ ಆಹ್ವಾನಿಸಿದರು.

‘ವೆಲ್‌ಕಮ್ ಟು ನ್ಯೂ ಇಯರ್’ ಎಂದು ಹರ್ಷದಿಂದ ಕೆಲವರು ಕೂಗಿ ಕುಪ್ಪಳಿಸಿದರೆ, ಮತ್ತೆ ಕೆಲವರು ‘ಬಾಯ್ ಬಾಯ್ 2010’ ಎಂದು ಕೂಗುತ್ತಾ ಹಳೆ ವರ್ಷಕ್ಕೆ ಆತ್ಮೀಯವಾಗಿ ಬೀಳ್ಕೊಟ್ಟರು.ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ ಮುಂತಾದೆಡೆ ಅದಾಗಲೇ ಬಾರ್ ಅಂಡ್ ರೆಸ್ಟೋರೆಂಟ್, ಪಬ್, ಡಿಸ್ಕೊ ಥೆಕ್‌ಗಳಲ್ಲಿ ಸೇರಿದ್ದ ಯುವಕ ಯುವತಿಯರ ಪಡೆ ಮಧ್ಯರಾತ್ರಿ ಸರಿಯಾಗಿ 12 ಗಂಟೆ ಆಗುತ್ತಿದ್ದಂತೆ ಹೊರಗೆ ಬಂದು ಕುಣಿದು ಕುಪ್ಪಳಿಸಿತು. ಪರಸ್ಪರರು ಆಲಂಗಿಸಿಕೊಂಡು ಶುಭಾಶಯ ಕೋರಿದರು. ಹೊಸ ವರ್ಷ ಸಂತಸ ಸಮೃದ್ಧಿ ಮತ್ತು ಯಶಸ್ಸು ತರಲೆಂದು ಅವರು ಹಾರೈಸಿದರು.ಇವೆಲ್ಲಕ್ಕೂ ಭಿನ್ನ ಎಂಬಂತೆ ಕೆಲವರು ಕಾರಿನ ಮೇಲೆ ಕುಳಿತು ಚಲಿಸಿ ರಸ್ತೆಯಲ್ಲಿದ್ದವರಿಗೆಲ್ಲ ಶುಭಾಶಯ ಕೋರಿದರು. ‘ಹೊಸ ವರ್ಷದಲ್ಲಿರಲಿ ಹರ್ಷ, ನಮಗಾಗಿ ಬಂದಿದೆ ಇನ್ನೊಂದು ವರ್ಷ, ಹೊಸ ಸಂವತ್ಸರ ಆಗು ನೀ ಸಮೃದ್ಧಿಯ ಆಗರ’ ಹೀಗೆ ಬಗೆ ಬಗೆಯ ಬರಹಗಳಿದ್ದ ಬ್ಯಾನರ್‌ಗಳನ್ನು ಜನರು ಪ್ರದರ್ಶಿಸಿದರು. ಇದೇ ವೇಳೆ ಯುವಕ ಯುವತಿಯರು ಆತ್ಮೀಯರಿಗೆ ಮೊಬೈಲ್‌ನಿಂದ ಎಸ್‌ಎಂಎಸ್ ಕಳುಹಿಸಿ ಶುಭ ಕೋರುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.ಬಾರ್, ಪಬ್ ಮತ್ತು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕೆಲ ಕಾಲ ವಿದ್ಯುತ್ ದೀಪಗಳನ್ನು ಆರಿಸಿದರು. ನಂತರ ಒಮ್ಮೆಲೇ ಜೋರು ಸಂಗೀತ ಮತ್ತು ಝಗಮಗಿಸುವ ದೀಪಗಳ ಮೂಲಕ ನೂತನ ವರ್ಷವನ್ನು ಬರಮಾಡಿಕೊಳ್ಳಲಾಯಿತು.ನಗರದ ಮನೆಗಳಲ್ಲೂ ಹೊಸ ವರ್ಷದ ಸಂಭ್ರಮ ಮೇರೆ ಮೀರಿತ್ತು. ಸ್ನೇಹಿತರು, ಸಂಬಂಧಿಕರು ಎಲ್ಲರೂ ಒಂದೆಡೆ ಸೇರಿ ಕೇಕ್ ಕತ್ತರಿಸಿ ಮತ್ತು ಸಿಹಿ ತಿಂಡಿ ವಿತರಿಸಿ ಸಂತೋಷಪಟ್ಟರು.ನ್ಯೂಲುಕ್: ಪ್ರತಿ ವರ್ಷದಂತೆ ಈ ವರ್ಷವೂ ಬ್ರಿಗೇಡ್ ರಸ್ತೆ ದೀಪಾಲಂಕಾರದಿಂದ ಝಗಮಗಿಸುತ್ತಿತ್ತು. ರಸ್ತೆ ಉದ್ದಕ್ಕೂ ಮಾಡಿದ್ದ ವಿಶೇಷ ವಿದ್ಯುತ್ ದೀಪಾಲಂಕಾರ ಮನ ಸೆಳೆಯುತ್ತಿತ್ತು. ಹತ್ತಾರು ಬಣ್ಣದ ವಿದ್ಯುತ್ ದೀಪಗಳು ‘ಜೀವನದಲ್ಲಿ ಮುಂದೆ ಹಲವು ಸಂಭ್ರಮಗಳಿವೆ’ ಎಂಬುದರ ಸಂಕೇತದಂತಿದ್ದವು. ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಜನ ದಟ್ಟಣೆ ಇತ್ತು. ಈ ಗುಂಪಿನಲ್ಲೇ ನಡೆದ ನೃತ್ಯ ವಿನೂತನವಾಗಿತ್ತು. ಮಧ್ಯರಾತ್ರಿ ಒಂದು ಗಂಟೆಯವರೆಗೂ ಹೊಸ ವರ್ಷಾಚರಣೆ ಸಂಭ್ರಮ ಮುಂದುವರೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry