ಶುಕ್ರವಾರ, ನವೆಂಬರ್ 15, 2019
22 °C
ಮಲೆನಾಡಿನಲ್ಲಿ ಹಿಂದೆಂದೂ ಕಂಡರಿಯದ ಸಂಗತಿ... ಈ ಬೇಸಗೆಯಲ್ಲಿ ಹೆಚ್ಚು ಬರಿದು

ಹರಿವು ನಿಲ್ಲಿಸಿದ ಮಲೆನಾಡಿನ ಜೀವನದಿ ತುಂಗೆ...

Published:
Updated:

ತೀರ್ಥಹಳ್ಳಿ: ಮಲೆನಾಡಿನ ಜೀವನದಿ ತುಂಗೆ ತನ್ನ ಹರಿವನ್ನು ನಿಲ್ಲಿಸಿದ್ದಾಳೆ. ಒಡಲನ್ನು ಬರಿದು ಮಾಡಿಕೊಂಡು ರಣ ಬಿಸಿಲಿಗೆ ಮೈ ಒಡ್ಡಿದ್ದಾಳೆ.  ಬೇಸಗೆಯಲ್ಲಿ ಸಹಜವಾಗಿ ಸೊರಗುವ ನದಿ ಅದೇಕೋ ಈ ಬೇಸಗೆಯಲ್ಲಿ ಹೆಚ್ಚು ಬರಿದಾಗಿದ್ದಾಳೆ!ಬಿಸಿಲಿಗೆ ನೀರು ಬಿಟ್ಟ ಹೆಬ್ಬಂಡೆಗಳು ಭಯ ಹುಟ್ಟಿಸುತ್ತಿವೆ. ಅಲ್ಲಲ್ಲಿ ಒರತೆ ನೀರನ್ನು ಹಿಡಿದಿಟ್ಟುಕೊಂಡ ಹೊಂಡಗಳು ಚಲನೆ ಕಳೆದುಕೊಂಡಿವೆ. ಸುತ್ತಲೂ ಹರಡಿರುವ ಸಕ್ಕರೆ ಮರಳು ಕಳ್ಳಕಾಕರ ಪಾಲಾಗುತ್ತಿದೆ.  ನದಿ ಈ ಪರಿ ಬತ್ತಿದ್ದನ್ನು ನಾವು ಎಂದೂ ಕಂಡಿರಲಿಲ್ಲ ಎನ್ನುತ್ತಾರೆ ನದಿ ತಟದ ಜನರು.ಹಿಡಿದಿಟ್ಟ ನೀರಲ್ಲಿನ ಮೀನುಗಳು ಚಡಪಡಿಸುತ್ತಿವೆ. ನೀರಂಚಿಗೆ ಸರಿದರೂ ಅವು ಹದ್ದಿನ ಪಾಲಾಗುವ ಭೀತಿಯಲ್ಲಿರುವುದು ಒಂದೆಡೆಯಾದರೆ ಆಹಾರದ ಕೊರತೆಗೆ ಸಿಲುಕಿವೆ. ಯಾರಾದರೂ ಕಿಡಿಗೇಡಿಗಳು ವಿಷಚೆಲ್ಲಿ, ಡೈನಾಮೇಟ್ ಸಿಡಿಸಿ  ನಮ್ಮನ್ನು ಸಾಯಿಸಬಹುದು ಎಂಬ ಭೀತಿಯಲ್ಲಿ ತಳಸೇರಿದ ಮೀನುಗಳು ತಳಮಳಿಸುತ್ತಿವೆ.ಹೌದು, ಈ ರೀತಿ ತುಂಗಾ ನದಿ ಯಾವಾಗಲೂ ಬಿತ್ತದ್ದಿಲ್ಲ. ಏಪ್ರಿಲ್ ಕಳೆಯುವ ಹೊತ್ತಿನಲ್ಲಿಯೇ ತಳ ಸೇರಿದ ನೀರನ್ನು ಗಮನಿಸಿದರೆ ಸದ್ಯ ಮಳೆಯಾಗದೇ ಇದ್ದರೆ ಅಲ್ಲಲ್ಲಿ ನೆಲೆ ನಿಂತ ನೀರೂ ಕೂಡ ಬತ್ತಿ ಬರಿದಾಗಲಿದೆ. ನದಿಯ ಇಕ್ಕೆಲಗಳಲ್ಲಿ ಅರಳಿ ನಿಂತ ಅಡಿಕೆ ತೋಟಗಳಿಗೆ ವಿದ್ಯುತ್ ಸರಬರಾಜಾದಾಗಲೆಲ್ಲ ಒಂದೇ ಸಮನೆ ನೀರೆತ್ತುವ ಪಂಪುಗಳು ನದಿಯನ್ನು ಬತ್ತಿಸಲು ಕಾರಣವಾಗಿವೆ.

ಶೃಂಗೇರಿಯ ಗಂಗಡಿಕಲ್ಲಿನಲ್ಲಿ ಹುಟ್ಟಿದ ತುಂಗೆ ತೀರ್ಥಹಳ್ಳಿ ದಾಟಿ ಗಾಜನೂರು ಆಣೆಕಟ್ಟೆಯ ಮೂಲಕ ಬಯಲುಸೀಮೆಯ ಜಮೀನಿಗೆ ನೀರುಣಿಸುವಳು. ಗಾಜನೂರಿನ ಆಣೆಕಟ್ಟೆಯಲ್ಲಿ ಶೇಖರಣೆಗೊಳ್ಳುವ ನೀರು ತೂದೂರಿನ ತನಕ ಹಿನ್ನೀರಾಗಿ ಸಂಗ್ರಹಗೊಳ್ಳುತ್ತದೆ. ಇದರ ಹರಿವೇನಿದ್ದರೂ ತೂದೂರಿನ ತನಕವಷ್ಟೇ. ಆದರೆ, ತುಂಗೆ ಈಗ ತನ್ನ ಹುಟ್ಟಿನಲ್ಲಿಯೇ ಬರಿದಾಗಿದ್ದಾಳೆ!ನದಿಯಂಚಿನ ಲಕ್ಷಕ್ಕೂ ಹೆಚ್ಚಿನ  ಪಂಪ್‌ಸೆಟ್‌ಗಳು ಒಂದೇ ಸಮನೆ ಶಬ್ಧ ಮಾಡುತ್ತಾ ನೀರೆತ್ತುತ್ತಿವೆ. ಆದರೆ, ದಡಸೇರಿದ ನೀರು ಅಂತರ್ಜಲದ ಮೂಲಕ ನದಿ ಸೇರಬೇಕು.  ಅದು ಹಾಗಾಗುತ್ತಿಲ್ಲ. ನದಿ ಸೆರಗಿನಿಂದ ದೂರದ ಭೂಮಿಯಲ್ಲಿ ಅಡಿಕೆ ತೋಟ ಮಡುವ ವ್ಯಾಮೋಹದಿಂದಾಗಿ ಹತ್ತಾರು ಕಿಲೋಮೀಟರ್‌ವರೆಗೆ ನೀರನ್ನು ಕೊಂಡೊಯ್ಯಲಾಗುತ್ತಿದೆ. ಸಾಂಪ್ರದಾಯಿಕವಾಗಿ ತಂಪಿನ ಜಾಗದಲ್ಲಿ ಅಡಿಕೆ ಬೆಳೆಯುತ್ತಿದ್ದ ರೈತರು ಬರಡು ಭೂಮಿಗೆ ನೀರನ್ನು ಹರಿಸಿ ಅಡಿಕೆ ಬೆಳೆಯಲು ಮುಂದಾಗಿರುವುದೂ ಕೂಡ ಜೀವ ನದಿ ಬತ್ತಲು ಕಾರಣವಾಗಿದೆ.ಮಾನವನ ಹಸ್ತಕ್ಷೇಪದಿಂದ ನದಿ ನಲುಗಿದೆ. ಮರಳು ಗಣಿಗಾರಿಕೆಯಿಂದ ಮರಳಿನ ರಾಶಿಯಲ್ಲಿ ಶೇಖರಣೆಗೊಳ್ಳುವ ನೀರು ಈಗ ಇಲ್ಲದಂತಾಗಿದೆ. ನದಿ ದಡದ ಬೆಟ್ಟಗುಡ್ಡಗಳಲ್ಲಿ ಬೀಳುತ್ತಿದ್ದ ನೀರಿನ ಇಂಗುವಿಕೆ ಕಡಿಮೆಯಾಗಿದೆ. ಹಿಂದಿನ ಕಾಲದ ಮಳೆಗಾಲದಲ್ಲಿ ಶುದ್ಧವಾಗಿ ಹರಿಯುತ್ತಿದ್ದ ನೀರು ಈಗ ಕೆಂಪಾಗಿ ಹರಿಯವಂತಾಗಿದೆ. ಅಕಾಲಿಕ ಮಳೆ ಬೀಳದೇ ಇರುವುದರಿಂದ ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಹರಿಸುವ ನೀರಿನ ಪ್ರಮಾಣ ಹೆಚ್ಚಾಗಿದೆ.ಮತ್ತೆ ತುಂಗೆ ತುಂಬಲು ಮಳೆ ಬೀಳಬೇಕು. ಅಂಥ ಮಳೆಗೆ ಜೂನ್ ಮಧ್ಯಭಾಗದವರೆಗೆ ಕಾಯಬೇಕು. ಅಲ್ಲಿತನಕ ತುಂಗೆಯ ಒಡಲು ತಳಮಳಿಸುತ್ತಿದೆ. ಈಗ ತುಂಗೆ ಅಕ್ಷರಶಃ ಸ್ಥಬ್ಧವಾಗಿದ್ದಾಳೆ.

-ಶಿವಾನಂದ ಕರ್ಕಿ.

ಪ್ರತಿಕ್ರಿಯಿಸಿ (+)