ಹರಿಸಿಂಗ್ ವರದಿ ಸಲ್ಲಿಕೆಗೆ ಭೈರಪ್ಪ ಆಗ್ರಹ

7

ಹರಿಸಿಂಗ್ ವರದಿ ಸಲ್ಲಿಕೆಗೆ ಭೈರಪ್ಪ ಆಗ್ರಹ

Published:
Updated:

ಗುಲ್ಬರ್ಗ: ಕೇಂದ್ರ ಸರ್ಕಾರವು 6ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು 9 ತಿಂಗಳಲ್ಲಿ ಪರಿಷ್ಕರಿಸಿ ವರದಿ ನೀಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್ ಅಧ್ಯಕ್ಷತೆಯಲ್ಲಿ ನೇಮಿಸಿದ್ದ `ಅಧಿಕಾರಿಗಳ ವೇತನ ಸಮಿತಿ~ಯು ಕೂಡಲೇ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ ಶುಕ್ರವಾರ ಇಲ್ಲಿ ಆಗ್ರಹಿಸಿದರು.ಇದೇ 25ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಿತಿ ಸಭೆ ನಡೆಯಲಿದೆ. ಅದರೊಳಗೆ ಹರಿಸಿಂಗ್ ಅವರ ವರದಿ ಸಲ್ಲಿಕೆಯಾಗಬೇಕು. ಇಲ್ಲದಿದ್ದರೆ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಿನ ಯೋಜನೆಗಳನ್ನು ಸಮಿತಿ ಸಭೆಯಲ್ಲಿ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ರಾಜ್ಯದಲ್ಲಿ ಆರು ಕೋಟಿ ಜನಸಂಖ್ಯೆ ಇದ್ದು, 5.53 ಲಕ್ಷ ನೌಕರರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. 1.2 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಸರ್ಕಾರವು ಭರ್ತಿ ಮಾಡುತ್ತಿಲ್ಲ. `ನಾಗರಿಕ ಸನ್ನದು~ ಜಾರಿ ಮಾಡುತ್ತಿರುವುದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ನೌಕರರು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಕರೆ ನೀಡಲಾಗಿದೆ ಎಂದರು.ಜನರಿಗೆ ನಿಗದಿತ ಸಮಯದಲ್ಲಿ ಸೇವೆ ಒದಗಿಸಲು ಹುದ್ದೆಗಳು ಖಾಲಿ ಇರುವ ಕಚೇರಿಗಳಲ್ಲಿ ನೌಕರರ ಮೇಲೆ ಒತ್ತಡ ಉಂಟಾಗಲಿದೆ. ನಾಗರಿಕ ಸನ್ನದು ಜಾರಿಗೆ ಮುಂಚೆಯೆ 6ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ, ಖಾಲಿ ಹುದ್ದೆ ಭರ್ತಿ ಮಾಡಬೇಕು ಎಂದು ತಿಳಿಸಿದರು.ರಾಜಕಾರಣಿಗಳು, ಸಾರ್ವಜನಿಕರು ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ನಡೆಸುವ ಪ್ರಸಂಗಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಸರ್ಕಾರಿ ನೌಕರನನ್ನು ಮಾತ್ರ ಕಾನೂನಿನ ಚೌಕಟ್ಟಿಗೆ ಒಳಪಡಿಸದೆ, ದೌರ್ಜನ್ಯ ನಡೆಸಿದವರ ಮೇಲೂ ಕಾನೂನು ಕ್ರಮ ಜರುಗಿಸುವಂತಾಗಬೇಕು.

 

ನೌಕರರಿಗೆ ನೀಡುತ್ತಿರುವ ಆರೋಗ್ಯ ಯೋಜನೆಯನ್ನು ಮಾರ್ಪಾಡುಗೊಳಿಸಿ, ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸುವ ನಿಟ್ಟಿನಲ್ಲಿ ನೂತನ ಯೋಜನೆಯನ್ನು ರೂಪಿಸಬೇಕು ಎಂದು ಹೇಳಿದರು.ಖಾಯಂ ಹುದ್ದೆಗಳಿಗೆ ಹೊರ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ಸರ್ಕಾರದ ಕ್ರಮ ಸರಿಯಲ್ಲ. ಅನಿವಾರ್ಯ ಇರುವ ಕಡೆಗಳಲ್ಲಿ ಹೊರಗುತ್ತಿಗೆ ಮೇಲೆ ನೌಕರರನ್ನು ನೇಮಕ ಮಾಡಿಕೊಂಡರೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.ತಾರತಮ್ಯ ನೀತಿ ಅನುಸರಿಸುವುದರಿಂದ ನೌಕರಿ ಮಾಡುವ ಕಚೇರಿಗಳ ಪರಿಸರವು ಸ್ನೇಹಮಯವಾಗಿ ಉಳಿಯುವುದಿಲ್ಲ. ಹೊರಗುತ್ತಿಗೆ ನೌಕರರನ್ನು ಹೀನಾಯವಾಗಿ ದುಡಿಸಿಕೊಂಡು ಕೊನೆಗೆ ಕೈಬಿಡುವ ಪದ್ಧತಿಯನ್ನು ನೌಕರರ ಸಂಘ ಖಂಡಿಸುತ್ತದೆ ಎಂದು ತಿಳಿಸಿದರು.ನೌಕರರ ಸಂಘದ ಗುಲ್ಬರ್ಗ ಘಟಕದ ಅಧ್ಯಕ್ಷ ಬಿ.ಎಸ್. ದೇಸಾಯಿ, ಯೋಗಾನಂದ, ಶ್ರೀನಿವಾಸ,  ಚೌಡಯ್ಯ, ಮೆಹಬೂಬ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry