ಹರಿಹರೇಶ್ವರ ರಥ, ಮೈಲಾರಲಿಂಗೇಶ್ವರ ಕಾರ್ಣೀಕ

7

ಹರಿಹರೇಶ್ವರ ರಥ, ಮೈಲಾರಲಿಂಗೇಶ್ವರ ಕಾರ್ಣೀಕ

Published:
Updated:

ಹರಿಹರ: ನಗರದಲ್ಲಿ ಮಂಗಳವಾರ ಕ್ಷೇತ್ರನಾಥ ಹರಿಹರೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.ರಥೋತ್ಸವದ ಅಂಗವಾಗಿ ಕಳೆದ ಐದು ದಿನಗಳಿಂದ ಹರಹರೇಶ್ವರಸ್ವಾಮಿಗೆ ವಿವಿಧ ಅಭಿಷೇಕ, ಪೂಜೆ, ಹೋಮ, ಹವನ, ಜಪ, ಹಾಗೂ ವಿವಿಧ ಉತ್ಸವಗಳು ನಡೆದವು.ಮಂಗಳವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಿಂದ ಅಭಿಷೇಕ, ಅಲಂಕಾರ, ಪೂಜೆ, ಜಪ, ಆವಾಹಿತ ದೇವತೆಗಳ ಪೂಜೆ, ಪೂರ್ಣಾಹುತಿ ನಡೆಯಿತು. ನಂತರ, ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ದೇವಸ್ಥಾನದಿಂದ ರಥ ಸ್ಥಾನದವರೆಗೆ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ತರಲಾಯಿತು.ಬೆಳಿಗ್ಗೆ 9.40ಕ್ಕೆ ಹರಿಹರೇಶ್ವರಸ್ವಾಮಿಯ ರಥಾರೋಹಣ ಕಾರ್ಯ ನಡೆಯಿತು. ರಥದ ಬಳಿ ಸೇರಿದ ಭಕ್ತಸ್ತೋಮ, `ಗೋವಿಂದ... ಗೋವಿಂದಾ... ಹರಹರ ಮಹಾದೇವ~ ಎಂಬ ಉದ್ಘೋಷಗಳನ್ನು ಹೇಳಿ ಭಕ್ತಿಭಾವ ಮೆರೆದರು.ಪೂಜೆ ಹಾಗೂ ಮಹಾಮಂಗಳಾರಾತಿ ನಡೆಯಿತು. ಭಕ್ತರು ಸಂತೋಷ ಹಾಗೂ ಉತ್ಸಾಹಗಳಿಂದ ರಥವನ್ನು ಎಳೆಯಲು ಆರಂಭಿಸಿದರು. ದಾಸರು ಶಂಖ ಜಾಗಟೆಗಳ ಸದ್ದು ಮಾಡುತ್ತಾ ಗೋವಿಂದನ ಸ್ಮರಣೆಯೊಂದಿಗೆ ರಥದೊಂದಿಗೆ ಓಡಿದರು.ರಥ ಸ್ಥಾನದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ರಥ  ಚಲಿಸಿತು. ವೃತ್ತದಲ್ಲಿ ನೆರೆದ ಭಾರಿ ಜನ ಸಮೂಹ ರಥದ ಕಳಸಕ್ಕೆ ಬಾಳೆಹಣ್ಣುಗಳನ್ನು ತೂರಿ ತಮ್ಮ ಇಷ್ಟಾರ್ಥಗಳನ್ನು ಭಿನ್ನವಿಸಿಕೊಂಡರು. ರಥದಲ್ಲಿ ಅರ್ಚಕರು ಉತ್ಸವಮೂರ್ತಿ ತಿರುಗಿಸಿ ಇಟ್ಟು ಮತ್ತೊಮ್ಮೆ ಪೂಜೆ ಸಲ್ಲಿಸಿದರು. ಪುನಃ ಭಕ್ತರು ರಥವನ್ನು ಎಳೆದುಕೊಂಡು ರಥ ಸ್ಥಾನದವರೆಗೆ ಹೋದರು. ರಥಬೀದಿಯಲ್ಲಿ ನಡೆದ ರಥೋತ್ಸವ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.ರಥೋತ್ಸವದ ನಂತರ ಭಕ್ತರಿಗೆ ಹಣ್ಣು-ಕಾಯಿ ಸಮರ್ಪಿಸಿ ಪೂಜೆ ಮಾಡಿಸುವ ತವಕವಿದ್ದರೆ, ಮಕ್ಕಳಿಗೆ ಜಾತ್ರೆಯಲ್ಲಿ ಆಟಿಕೆ ಕೊಳ್ಳವ ಅವಸರ. ಮಹಿಳೆಯರಿಗೆ ಮನೆಯಲ್ಲಿ ವಿಶೇಷ ಅಡುಗೆ ಸಿದ್ಧಪಡಿಸುವ ಧಾವಂತ. ನಗರದ ಎಲ್ಲೆಡೆ ಹಬ್ಬದ ಸಡಗರ ಎದ್ದು ಕಾಣುತ್ತಿತ್ತು. ರಥೋತ್ಸವದ ಅಂಗವಾಗಿ ವಿವಿಧ ಸಂಘ- ಸಂಸ್ಥೆಗಳು ಮಜ್ಜಿಗೆ, ಪಾನಕ ವಿತರಣೆ ಹಾಗೂ ಅನ್ನ ದಾಸೋಹ ನಡೆಸಿದವು.ರಥೋತ್ಸವದಲ್ಲಿ ಶಾಸಕ ಬಿ.ಪಿ. ಹರೀಶ್, ಜಿ.ಪಂ. ಅಧ್ಯಕ್ಷ ಎಸ್.ಎಂ. ವೀರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್, ನಗರಸಭೆ ಅಧ್ಯಕ್ಷೆ ರಾಧಾಸಿ.ಎನ್. ಹುಲಿಗೇಶ್, `ದೂಡಾ~ ಸದಸ್ಯ ಐರಣಿ ನಾಗರಾಜ್, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ತಹಶೀಲ್ದಾರ್ ಜಿ. ನಜ್ಮಾ, ಸಿಪಿಐ ನಾಗೇಶ್ ಐತಾಳ್, ತಾ.ಪಂ. ಇಒ ಎಚ್.ಎನ್. ರಾಜ್, ಮುಜರಾಯಿ ಶಿರಸ್ತೇದಾರ್ ಎಸ್. ರವಿ. ಕಾರ್ಯ ನಿರ್ವಾಹಕಿ ಸಂಗೀತಾ ಕೆ. ಜೋಷಿ, ಕಾರ್ಯದರ್ಶಿ ಎಚ್. ವೆಂಕಟೇಶ್, ನಗರಸಭೆ ಎಇಇ ಮಹಮದ್ ಗೌಸ್, ಸಹಾಯಕ ಎಂಜಿನಿಯರ್ ಸಿ.ಬಿ. ಮಾಲತೇಶ್ ಹಾಜರಿದ್ದರು.ಮೈಲಾರಲಿಂಗೇಶ್ವರ ಕಾರ್ಣೀಕ

ಹರಪನಹಳ್ಳಿ: `ಅಂಬ್ಲಿ ರಾಶಿ-ಮುತ್ತಿನ ಗಿಣಿ ಸಂತೃಪ್ತಿಯಾದಿತಲೇ ಪರಾಕ್~ ಇದು ತಾಲ್ಲೂಕಿನ ದೊಡ್ಡ ಮೈಲಾರದ ಮೈಲಾರಲಿಂಗೇಶ್ವರನ ಜಾತ್ರೆಯ ಈ ಬಾರಿಯ ಕಾರ್ಣೀಕದ ಉಕ್ತಿ.ಭಾರತ ಹುಣ್ಣಿಮೆ ಅಂಗವಾಗಿ ಮಂಗಳವಾರ ಸಹಸ್ರಾರು ಭಕ್ತಾದಿಗಳ ನಡುವೆ ಬಿಲ್ಲನ್ನೇರಿದ ಗೊರವಪ್ಪ `ಸದ್ದಲೇ~ ಎಂದಾಗ ಒಂದು ಕ್ಷಣ ಎಲ್ಲವೂ ನಿಶ್ಯಬ್ದ. ನಂತರ ಕಾರಣಿಕದ `ಉಕ್ತಿ~ಯನ್ನು ನುಡಿದ ಗೊರವಪ್ಪ ಕೆಳಗೆ ಬೀಳುತ್ತಾನೆ.ಒಕ್ಕಲುತನ ಸಂಸ್ಕೃತಿಯ ವಿಶಿಷ್ಟ ಆಚರಣೆಯ ದೊಡ್ಡ ಮೈಲಾರದ ಜಾತ್ರೆಯ ಕುರಿತು ಹಲವು ದಂತಕಥೆಗಳಿವೆ.

`ಮಣಿ~ ಮತ್ತು `ಮಲ್ಲಾಸೂರ~ರೆಂಬ ರಾಕ್ಷಸರು ಈ ಪ್ರದೇಶದ ಪ್ರಜೆಗಳಿಗೆ ನಾನಾ ರೀತಿಯ ಹಿಂಸೆ ಕೊಡುತ್ತಿದ್ದರು.ಹೀಗಾಗಿ, ಪ್ರಜಾಪೀಡಕ ರಾಕ್ಷಸರನ್ನು ಸಂಹರಿಸಲು ಹಾಗೂ ರಾಕ್ಷಸರ ಅಟ್ಟಹಾಸದಿಂದ ಪ್ರಜೆಗಳನ್ನು ಸಂರಕ್ಷಿಸಲು ಮೈಲಾರ ಲಿಂಗಸ್ವಾಮಿ ಪ್ರತ್ಯಕ್ಷನಾದ ಎಂಬ ಪ್ರತೀತಿ ಇಲ್ಲಿನ ಜನರಲ್ಲಿದೆ.ಈ ಪ್ರದೇಶದಲ್ಲಿ ಸ್ವಾಮಿಯ ಕೈಗೆ ಸಿಕ್ಕ ಮಣಿ ರಾಕ್ಷಸನನ್ನು ಕೊಂದು, ಮಲ್ಲಾಸೂರನನ್ನು ಬೆನ್ನಟ್ಟಿಹೋದ ಮೈಲಾರಲಿಂಗ, ಮೂರು ದಿನಗಳ ನಂತರ ಹೂವಿನಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ಮಲ್ಲಾಸೂರನನ್ನು ಮುಗಿಸಿದ ಎಂಬುದು ಜನರ ಮನಸಲ್ಲಿ ಹಾಸುಹೊಕ್ಕಿರುವ ಭಾವನೆ.ಆ ಹಿನ್ನೆಲೆಯಲ್ಲಿ ಮೊದಲಿಗೆ ಈ ಪ್ರದೇಶದಲ್ಲಿರುವ ನೆಲೆಸಿರುವ ಮೈಲಾರಲಿಂಗನ ಜಾತ್ರೆ ನಡೆಯುತ್ತದೆ. ಬಳಿಕ ಹೂವಿನಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ನಡೆಯುತ್ತದೆ ಎಂಬುದು ಜನರ ನಂಬಿಕೆ.ಪಟ್ಟಣಕ್ಕೆ ಹೊಂದಿಕೊಂಡಿರುವ ಎರಡು ಗುಡ್ಡಗಳ ನಡುವೆ ನೆಲೆಸಿರುವ ಮೈಲಾರಲಿಂಗ, ಭಾರತ ಹುಣ್ಣಿಮೆಯಂದು ನಡೆಯುವ ಜಾತ್ರೆಗೂ ಮುನ್ನ ಮಣಿಯನ್ನು ಸಂಹಾರ ಮಾಡಲು ಬೆನ್ನಟ್ಟಿದ ಬೆಟ್ಟ ಏರುತ್ತಾನೆ. ದೇವರ ಗದ್ದುಗೆಯ ಪಾದತಲದಲ್ಲಿದ್ದ ಗೊರವರು ಒಂಬತ್ತು ದಿನಗಳ ಉಪವಾಸ ಸೇವೆ ಮಾಡುವ ಸಂಪ್ರದಾಯ ಇಂದಿಗೂ ನಡೆದುಬಂದಿದೆ.ಕೈಯಲ್ಲಿ ಪಂಜು ಹಿಡಿದು, ಢಮರುಗ ಬಾರಿಸುತ್ತ, ಚಾವಟಿಯ ಬೀಸುತ್ತ ಕರಿಗಂಬಳಿ ಹೆಗಲಮೇಲೆ ಹೊದ್ದ ಗೊರವಪ್ಪಗಳು `ಏಳು ಕೋಟಿ ಏಳು ಕೋಟಿಗೋ... ಛಾಂಗಭಲೋ/ ಛಾಂಗಭಲೋ...ಏಳು ಕೋಟಿ ಏಳು ಕೋಟಿಗೋ...~ ಎನ್ನುತ್ತಾ ಧಾರ್ಮಿಕ ಪೂಜಾ ವಿಧಿ- ವಿಧಾನಗಳನ್ನು ಪೂರೈಸಿ ಬೆಟ್ಟದ ಮೇಲಿರುವ ದೇವರನ್ನು ಕರೆ ತರುತ್ತಾರೆ.ಮೆರವಣಿಗೆಯ ಮೂಲಕ ಬೆಟ್ಟದಿಂದ ಬಂದಿಳಿದ ಸ್ವಾಮಿ, ಗೊರವಪ್ಪ ವೇಷದಲ್ಲಿ ತನ್ನ ದೇವಸ್ಥಾನದ ಮುಂಭಾಗದಲ್ಲಿರುವ ಕಟ್ಟೆಯ ಬಳಿ ಕಾರ್ಣೀಕ ನುಡಿದು ಕೆಳಗೆ ಬೀಳುತ್ತಾನೆ. ಕಾರ್ಣೀಕದ ಉಕ್ತಿಯನ್ನು ನುಡಿದ ಗೊರವಪ್ಪ ಭಕ್ತರು ಕಂಬಳಿಯ ಹಾಸಿಗೆಯ ಮೇಲೆ ಕೆಳಗೆ ಬೀಳುತ್ತಿದ್ದಂತಿಯೇ, ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.   ಕಾರ್ಣೀಕ ಪ್ರಸಕ್ತ ವರ್ಷದ ಮಳೆ, ಬೆಳೆ ಹಾಗೂ ನಾಡಿನಾದ್ಯಂತ ನಡೆಯುವ ಭವಿಷ್ಯ ನಿರ್ಧರಿಸುತ್ತದೆ ಎಂಬುದು ನಂಬಿಕೆ.ವಂಶಪಾರಂಪರ‌್ಯ ಧರ್ಮದರ್ಶಿಗಳಾದ ಪಿ. ದತ್ತಾತ್ರೇಯ, ನಾಗೇಶ್ವರರಾವ್, ಮಾರ್ತಾಂಡರಾವ್, ಪುರಸಭಾ ಸದಸ್ಯರಾದ ಎಚ್.ಕೆ. ಹಾಲೇಶ್, ಗುಡಿ ನಾಗರಾಜ್, ಜಿ.ಪಂ. ಮಾಜಿ ಸದಸ್ಯ ನಿಚ್ಚವ್ವನಹಳ್ಳಿ ಪರಶುರಾಮಪ್ಪ ಸೇರಿದಂತೆ ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry