ಮಂಗಳವಾರ, ಅಕ್ಟೋಬರ್ 15, 2019
28 °C

ಹರಿಹರ: ಆಡಂಬರ ಬೇಡ, ಸರಳ ವಿವಾಹ ಆದರ್ಶವಾಗಲಿ

Published:
Updated:

ಹರಿಹರ: ಸರಳ ವಿವಾಹಗಳೇ ಆದರ್ಶ ವಿವಾಹಗಳು ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.ನಗರದ ಮಹಾತ್ಮಗಾಂಧಿ ಮೈದಾನದಲ್ಲಿ ತಾಲ್ಲೂಕು ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಭಾನುವಾರ ನಡೆದ `ರೈತ ಸಮಾವೇಶ ಹಾಗೂ ಸರಳ ವಿವಾಹ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದ ವಿವಿಧ ಭಾಗಗಳಲ್ಲಿ ಸಂಘ ವತಿಯಿಂದ ಸುಮಾರು 40 ಸಾವಿರ ಜೋಡಿ ಸರಳ ವಿವಾಹಗಳು ನಡೆದಿವೆ. ವಿವಾಹ ಪೂರ್ವ ವಧು- ವರರ ರಾಶಿ, ನಕ್ಷತ್ರ, ಜಾತಕ ನೋಡುವ ಬದಲು ರಕ್ತ ಪರೀಕ್ಷೆ ಮಾಡಿಸಿ ಸಂಬಂಧಗಳನ್ನು ಗಟ್ಟಿಗೊಳಿಸಿರಿ. ದೇಶದಲ್ಲಿ 24 ಕೋಟಿ ಜನ ಪ್ರತಿದಿನ ಹಸಿವಿನಿಂದ ನರಳುತ್ತಿದ್ದಾರೆ. ಯಾವುದೇ ಬೆಳೆ ಬೆಳೆಯಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಪ್ರತಿಷ್ಠೆಯ ಹೆಸರಿನಲ್ಲಿ ತಿನ್ನುವ ಪದಾರ್ಥಗಳನ್ನು ಅನವಶ್ಯಕವಾಗಿ ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದರು.ಧರ್ಮದ ಹೆಸರಿನಲ್ಲಿ ಅನೇಕ ರೀತಿಯ ಅತ್ಯಾಚಾರ ನಡೆಯುತ್ತಿವೆ. ಮಡೆಸ್ನಾನ ಮೂರ್ಖತನದ ಪರಮಾವಧಿ. ಜನ ಜಾಗೃತರಾಗದೇ ಇದಕ್ಕೆ ಪರಿಹಾರವಿಲ್ಲ ಎಂದು ಹೇಳಿದರು.ನಂಜುಂಡಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ಪ್ರಸ್ತುತ ಮದುವೆಗಳು ಆಡಂಬರ ಬಿಂಬಿಸುವ ಹಾಗೂ ವ್ಯವಹಾರಿಕ ಸಂಬಂಧಗಳನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿವೆ. ಮದುವೆಯ ಉದ್ದೇಶ ಆತ್ಮ ಸ್ಥೈರ್ಯ ತುಂಬುವ ಸದುದ್ದೇಶ ಹೊಂದಿರಬೇಕು. ಪ್ರೇಮ ವಿವಾಹಗಳಿಂದ ಜಾತ್ಯತೀತ ನಾಡನ್ನು ಕಟ್ಟಬಹುದು ಎಂದರು.

ಸರಳ ವಿವಾಹದಲ್ಲಿ 14 ಜತೆ ವಿವಾಹಗಳು ಜರುಗಿದವು. ಕೆ.ಎಸ್. ಪುಟ್ಟಣ್ಣಯ್ಯ ನೂತನ ವಧು-ವರರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.ಹಿರೇಕಲ್ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೇವಿನಹಳ್ಳಿ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮಿ, ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಡಿಯಾಲ ಹೊಸಪೇಟೆಯ ಜಗದೀಶ್ವರ ಸ್ವಾಮೀಜಿ, ಎಚ್.ಆರ್. ಹನುಮಂತಪ್ಪ, ಬಾವಿಮನಿ ಪುಟ್ಟವೀರಪ್ಪ, ಕುಪ್ಪಿನಕೇರಿ ವೀರಣ್ಣ, ಗೋಪಾಲ್ ಪವಾರ್, ಬಸವಣ್ಣೆಪ್ಪ, ಕೆ.ಬಿ. ಶೇಜಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

Post Comments (+)