ಮಂಗಳವಾರ, ಜನವರಿ 28, 2020
25 °C

ಹರಿಹರ: ಸರ್ಕಾರಿ ಶಾಲೆಯ ಬಾಗಿಲಿಗೆ ಬೆಂಕಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ನಗರದ ಪಿ.ಬಿ. ರಸ್ತೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕರ ಕೊಠಡಿ ಬಾಗಿಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಡುವ ಯತ್ನ ನಡೆಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.ಶಾಲೆಯ ಆವರಣದಲ್ಲಿ ನಿತ್ಯ ಬೆಳಗ್ಗೆ ಮದ್ಯದ ಖಾಲಿಯಾದ ಬಾಟಲ್‌ ಹಾಗೂ ಲೋಟ, ಊಟ ಮಾಡಿದ ಬಿಸಾಕಿದ ಪ್ಲಾಸ್ಟಿಕ್ ತಟ್ಟೆದೊರೆಯುತ್ತಿದ್ದವು. ಕೆಲವೊಮ್ಮೆ ಇದರ ಜತೆಗೆ  ಹಾಗೂ ಸಿಗರೇಟ್ ಪ್ಯಾಕ್‌, ಮೂಳೆ ತುಂಡು ಹಾಗೂ ಸಾಂಬಾರನ್ನು ಗೋಡೆಗೆ ಬಳಿದು ಗೋಡೆಗಳನ್ನು ವಿಕೃತಿಗೊಳಿಸುತ್ತಿದ್ದರು. ಇದರ ಬಗ್ಗೆ ದೂರು ನೀಡದೇ ನಾವೇ ತೊಳೆದು ಸ್ವಚ್ಛಗೊಳಿಸುತ್ತಿದ್ದೆವು ಎಂದು ಶಾಲೆ ಮುಖ್ಯ ಶಿಕ್ಷಕ ಕೆ. ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.ಮಂಗಳವಾರ ಬೆಳಗ್ಗೆ ಶಾಲೆಗೆ ಬಂದಾಗ ನನ್ನ ಕೊಠಡಿ ಬಾಗಿಲಿಗೆ ಬೆಂಕಿ ಹಚ್ಚಿದ್ದು, ಕಂಡು ಬಂದಿದೆ. ಕೊಠಡಿಯ ಬಾಗಿಲುಗಳು ಕಬ್ಬಿಣದಿಂದ ತಯಾರಿಸಲಾಗಿದ್ದರಿಂದ, ಅವು ಬೆಂಕಿಯ ಜಳಕ್ಕೆ ಕರಕಲಾಗಿವೆ. ಅಕಸ್ಮಾತ್ ಅದೇನಾದರೂ, ಕಟ್ಟಿಗೆಯ ಬಾಗಿಲಾಗಿದ್ದರೆ, ಸುಟ್ಟೇ ಹೋಗುತ್ತಿತ್ತು. ವಿದ್ಯಾರ್ಥಿಗಳು ಹಾಗೂ ಶಾಲೆಗೆ ಸಂಬಂಧಿಸಿ ಮುಖ್ಯ ದಾಖಲೆಗಳು ಈ ಕೊಠಡಿಯಲ್ಲಿರುತ್ತವೆ. ಶಾಲೆಗೆ ಇದಕ್ಕೆ ಸೂಕ್ತ ರಕ್ಷಣೆಯ ಅಗತ್ಯವಿದೆ ಎಂದು ಅಳಲು ತೋಡಿಕೊಂಡರು.ಸೋಮವಾರ ತಡರಾತ್ರಿ ಇಲ್ಲಿಗೆ ಆಗಮಿಸಿದ ಕಿಡಿಗೇಡಿಗಳು, ಶಾಲೆಯ ಬಾಗಿಲು ಒಡೆಯುವ ಉದ್ದೇಶದಿಂದ ಅದಕ್ಕೆ ಬೆಂಕಿ ಹಾಕಿರಬಹುದು. ಈ ಕೊಠಡಿಯಲ್ಲಿ ಮಕ್ಕಳಿಗೆ ವಿತರಿಸುವ ಸಮವಸ್ತ್ರಗಳ ಹಾಗೂ ಉಚಿತ ಪಠ್ಯಪುಸ್ತಕಗಳ ದಾಸ್ತಾನು ಇದೆ. ಅಪ್ಪಿತಪ್ಪಿ ಅದಕ್ಕೆ ಬೆಂಕಿ ತಗುಲಿದ್ದರೆ, ದೊಡ್ಡ ಪ್ರಮಾಣದ ನಷ್ಟವಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.

ಈ ಘಟನೆಯ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ತಿಳಿಸಿದ್ದೇನೆ. ಅವರ ಒಪ್ಪಿಗೆ ಪಡೆದು ನಂತರ, ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ಮಲ್ಲಿಕಾರ್ಜುನ ಅವರನ್ನು ಸಂಪರ್ಕಿಸಿದಾಗ, ಶಾಲೆಯ ಬಾಗಲಿಗೆ ಬೆಂಕಿ ಹಾಕಿದ ಘಟನೆ  ಗಮನಕ್ಕೆ ಬಂದಿದೆ. ರಾತ್ರಿ ಪಾಳಿಯ ಕಾವಲುಗಾರರನ್ನು ನೇಮಕ ಮಾಡಿಕೊಳ್ಳಲು ಪರವಾನಗಿ ಇಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಶಾಲೆಯ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದ್ದೇನೆ ಎಂದರು.ನಗರದ ಪಿ.ಬಿ. ರಸ್ತೆಯಲ್ಲಿ ಬದಿಯಲ್ಲಿರುವ ಶಾಲೆಯ ಆವರಣ ನಿತ್ಯವೂ ದುಷ್ಕರ್ಮಿಗಳ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದು ಆತಂಕದ ಸಂಗತಿಯಾಗಿದೆ.ನಗರದ ಶಾಲಾ, ಕಾಲೇಜಿನ ಆವರಣಗಳು, ಎಪಿಎಂಸಿ ಮಾರುಕಟ್ಟೆ ಹಾಗೂ ಸರ್ಕಾರಿ ಕಟ್ಟಡಗಳು ರಾತ್ರಿಯಾಗುತ್ತಿದ್ದಂತೆ ಕಿಡಿಗೇಡಿಗಳ ಮೋಜಿನ ತಾಣವಾಗುತ್ತಿವೆ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿಕ್ರಿಯಿಸಿ (+)