ಹರಿ ಹರಿ...

7

ಹರಿ ಹರಿ...

Published:
Updated:

ಅರಳು ಹುರಿದಂತೆ ಮಾತನಾಡುವ ಹರಿಪ್ರಿಯಾ ಅಚ್ಚಕನ್ನಡದ ಹುಡುಗಿ. ಬೇರು ಚಿಕ್ಕಬಳ್ಳಾಪುರದಲ್ಲಿದೆ, ಕವಲುಗಳು ಬೆಂಗಳೂರಿನಲ್ಲಿ. ಸಿನಿಮಾ ಗುಂಗಿನಲ್ಲಿ ಚೆನ್ನೈ, ಹೈದರಾಬಾದ್ ಎಂದು ಹಾರುವುದಿದೆ.

 

ಅಂದಹಾಗೆ, ಬೊಗಸೆಕಂಗಳ ಈ ಚೆಲುವೆ ಪಿಯುಸಿ ಮೊದಲ ವರ್ಷದಲ್ಲಿದ್ದಾಗಲೇ ಸಿನಿಮಾ ಕರೆಗೆ ಓಗೊಟ್ಟಳು. ತುಳು ಚಿತ್ರ `ಬದಿ~ ಮೊದಲ ಅನುಭವ.ಆಮೇಲೆ, `ಮನಸುಗಳ ಮಾತು ಮಧುರ~ ಎನ್ನುವ ಕನ್ನಡ ಸಿನಿಮಾ. `ವಸಂತಕಾಲ~, `ಈ ಸಂಭಾಷಣೆ~, `ಕಳ್ಳರ ಸಂತೆ~- ಹೀಗೆ ಅವಕಾಶಗಳೇನೊ ದೊರೆತವು. ವಿವಾದಗಳೂ ಬೆನ್ನಿಗಿದ್ದವು. `ಚೆಲುವೆಯೇ ನಿನ್ನೇ ನೋಡಲು~ ಮತ್ತು `ಮಳೆ ಬರಲಿ ಮಂಜೂ ಇರಲಿ~ ಸಿನಿಮಾದಲ್ಲಿ ಬಹುತಾರೆಗಳ ನಡುವೆ ನಟಿಸಿ ಸೈ ಎನಿಸಿಕೊಂಡರು.

 

`ಸಾಗರ್~, `ಸೂಪರ್ ಶಾಸ್ತ್ರಿ~, `ಕಿಲಾಡಿ ಕಿಟ್ಟಿ~ ಚಿತ್ರಗಳಲ್ಲಿ ನಟಿಸಿರುವ ಹರಿಪ್ರಿಯಾಗೆ, ರವಿಚಂದ್ರನ್‌ರ ಮಹತ್ವಾಕಾಂಕ್ಷೆಯ `ಮಂಜಿನಹನಿ~ಯ್ಲ್ಲಲಿ ಮಂಜಿನಂಥ ಒಳ್ಳೆಯ ಪಾತ್ರವಂತೆ.ತೆಲುಗು - ತಮಿಳು ಚಿತ್ರಗಳಲ್ಲೂ ಅದೃಷ್ಟಪರೀಕ್ಷೆ ನಡೆಸಿರುವ ಹರಿಪ್ರಿಯಾಳ ಮೊದಲ ಹೆಸರು ಶ್ರುತಿ. ತೆಲುಗು ಆಕೆಯ ಮನೆಭಾಷೆ. ಕನ್ನಡ ಎಂದರೆ ಸಿಕ್ಕಾಪಟ್ಟೆ ಇಷ್ಟವಂತೆ ಹಾಗೂ ಕನ್ನಡ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಸಿಕ್ಕಾಪಟ್ಟೆ ಗೌರವವಂತೆ.ತಮಿಳಲ್ಲೊಂದು ಕಾಲು, ತೆಲುಗಿನಲ್ಲಿ ಇನ್ನೊಂದು ಕಾಲು ಇಟ್ಟಿದ್ದರೂ, ಕೊನೆಗೆ ಕನ್ನಡದಲ್ಲೇ ನೆಲೆ ಕಂಡುಕೊಳ್ಳಬೇಕು ಎನ್ನುವುದು ಆಕೆಯ ಮನದಾಸೆ. ಹರಿಪ್ರಿಯಾಳ ಉಳಿದ ವೃತ್ತಾಂತ ಕೆಳಗಿನ ಮಾತುಕತೆಯಲ್ಲಿ.ಕನ್ನಡದಲ್ಲಿ ಅವಕಾಶಗಳು ಹೇಗಿವೆ?

ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿ ಬಂದ ನಂತರ ಕನ್ನಡದಲ್ಲಿ ನನ್ನ ನಿರೀಕ್ಷೆಗೆ ತಕ್ಕ ಅವಕಾಶಗಳು ಬರುತ್ತಿವೆ.ಈವರೆಗೆ ನಟಿಸಿದ ಪಾತ್ರಗಳು ಖುಷಿ ಕೊಟ್ಟಿವೆಯಾ?

ಕಾಲೇಜು ಹುಡುಗಿ, ಹಳ್ಳಿಹುಡುಗಿ, ಕಾಲ್ ಸೆಂಟರ್ ಉದ್ಯೋಗಿ, ಹೋಮ್ಲಿ, ಬಬ್ಲಿ, ಪ್ರಬುದ್ಧ ಹುಡುಗಿ- ಹೀಗೆ ವೈವಿಧ್ಯದ ಪಾತ್ರಗಳನ್ನು ಮಾಡಿರುವೆ. `ಕಿಲಾಡಿ ಕಿಟ್ಟಿ~ಯಲ್ಲಿ ಕಾಮಿಡಿ ಪಾತ್ರ ಮಾಡುತ್ತಿರುವೆ.ನೀವು ಮಾಡಬೇಕೆಂದು ಇಷ್ಟಪಡುವ ಪಾತ್ರ ಯಾವುದು?


`ರಂಗೀಲಾ~ ಚಿತ್ರದಲ್ಲಿ ಊರ್ಮಿಳಾ ನಟಿಸಿದ ಪಾತ್ರ. ಅದು ನಟಿಯೊಬ್ಬಳ ಬದುಕಿನ ಪಾತ್ರ. ಆ ಪಾತ್ರದಷ್ಟೇ ಆ ಸಿನಿಮಾದ ಕತೆಯೂ ಚೆನ್ನಾಗಿದೆ.ಪರಭಾಷೆಯ ಸಿನಿಮಾಗಳ ಕಡೆ ಮುಖ ಮಾಡಲು ಕಾರಣ?

`ಈ ಸಂಭಾಷಣೆ~ ಸಿನಿಮಾ ಮಾಡುವಾಗಲೇ `ಕನಗವೇಗಲ್ ಕಾಕಾ~ ಸಿನಿಮಾದಿಂದ ಕರೆ ಬಂತು. ಹೋಗಿ ನಟಿಸಿದೆ. ನಂತರ `ವಲ್ಲ ಕೋಟೈ~, `ಮುರನ್~- ಹೀಗೆ ಅವಕಾಶಗಳು ಬರುತ್ತಾ ಹೋದವು.ತೆಲುಗಿನಲ್ಲಿ `ತಕಿಟ ತಕಿಟ~ ನಟಿಸಿದ ನಂತರ `ಪಿಲ್ಲ ಜಮೀನ್ದಾರ್~ನಲ್ಲಿ ಅವಕಾಶ ಸಿಕ್ಕಿತು. ಸ್ಕ್ರಿಪ್ಟ್ ಚೆನ್ನಾಗಿತ್ತು ಮತ್ತು ನನ್ನ ಪಾತ್ರಕ್ಕೂ ಸ್ಕೋಪ್ ಇದ್ದ ಕಾರಣ ನಟಿಸಿದೆ.`ಮಂಜಿನ ಹನಿ~ ಸಿನಿಮಾದಲ್ಲಿ ನಿಮ್ಮದು ನಾಯಕಿ ಪಾತ್ರವೇ?

ಗೊತ್ತಿಲ್ಲ. ಎರಡು ವರ್ಷಗಳ ನಂತರ ನಾನು `ಮಂಜಿನ ಹನಿ~ಗೆ ಸೇರ್ಪಡೆಯಾದೆ. ರವಿಚಂದ್ರನ್ ಅವರು `ನಿನಗಾಗಿ ಒಂದು ಒಳ್ಳೆಯ ಪಾತ್ರ ಇದೆ~ ಎಂದು ಹೇಳಿ ಕರೆದರು, ಹೋಗಿ ಮಾಡಿ ಬಂದೆ, ಅಷ್ಟೇ. ನನಗೆ ಚಿತ್ರದ ಸಂಪೂರ್ಣ ಕತೆ ಗೊತ್ತಿಲ್ಲ.

ಸಿನಿಮಾಗೆ ಬರುವ ಮುಂಚೆ ಅಥವಾ ನಂತರ ನಟನೆಗಾಗಿ ತರಬೇತಿ ಪಡೆದದ್ದು ಇದೆಯಾ?

ಇಲ್ಲ. ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿದ ಕಾರಣ ತರಬೇತಿಗೆ ಸಮಯ ಇರಲಿಲ್ಲ. ಉತ್ತಮ ನಿರ್ದೇಶಕರ ಕೈಕೆಳಗೆ ಕೆಲಸ ಮಾಡಿದ್ದರಿಂದ ಅಭಿನಯ ಕಲಿತೆ. ಕಲಿಯುತ್ತಲೇ ಇದ್ದೇನೆ.ಒಂದು ಸಿನಿಮಾ ಒಪ್ಪಿಕೊಳ್ಳುವಾಗ ಯಾವ ಯಾವ ಅಂಶಗಳನ್ನು ಗಮನಿಸುತ್ತೀರಿ?

ಕತೆ, ಉತ್ತಮ ನಿರೂಪಣೆ ಮಾಡುವ ನಿರ್ದೇಶಕರು, ಕಮರ್ಷಿಯಲ್ಲಾಗಿ ಹೆಸರು ಮಾಡಿದ ಹೀರೋ ಮತ್ತು ನನ್ನ ಪಾತ್ರ.ಎಕ್ಸ್‌ಪೋಸ್ ಮತ್ತು ಗ್ಲಾಮರ್ ಬಗ್ಗೆ ನಿಮ್ಮ ಅಭಿಪ್ರಾಯ?

ಕಲಾವಿದರು ಎಂದ ಮೇಲೆ ಪಾತ್ರಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಪಾತ್ರಕ್ಕೆ ಸೂಕ್ತ ಎನಿಸಿದರೆ ಗ್ಲಾಮರ್, ಎಕ್ಸ್‌ಪೋಸ್ ತಪ್ಪಲ್ಲ.`ಚೆಲುವೆಯೇ ನಿನ್ನ ನೋಡಲು~ ಮತ್ತು `ಮಳೆ ಬರಲಿ ಮಂಜೂ ಇರಲಿ~ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದೀರಿ. ಯಾಕೆ?

ನನ್ನ ಅಭಿನಯ ಪ್ರತಿಭೆ ಸಾಬೀತುಪಡಿಸಲು ಆ ಚಿತ್ರಗಳನ್ನು ಒಪ್ಪಿಕೊಂಡೆ. ಪರಭಾಷೆಯವರಿಗಿಂತ ಕನ್ನಡದ ನಟಿಯರು ಕಡಿಮೆಯಲ್ಲ ಎಂದು ಆ ಚಿತ್ರಗಳ ವಿಮರ್ಶೆಗಳಲ್ಲಿ ಬಂದಿತ್ತು. ಅದನ್ನು ನೋಡಿ ತುಂಬಾ ಖುಷಿಯಾಯ್ತು.ಪುಟ್ಟ ಪಾತ್ರವಾದರೂ ಅದರಲ್ಲಿ ನನ್ನ ನಟನೆ ಸಾಬೀತುಮಾಡಲು ಅವಕಾಶ ಸಿಕ್ಕಿತ್ತು. ಅದರಿಂದ ನನಗೆ ಅನುಕೂಲವೇ ಆಯಿತು.ನಿಮ್ಮ ಸಿನಿಮಾಗಳಿಗೆ ನೀವೇ ಡಬ್ ಮಾಡುವಿರಾ?

ತೆಲುಗು ತಮಿಳು ಸಿನಿಮಾಗಳಿಗೆ ಮಾಡಿಲ್ಲ. ಕನ್ನಡದಲ್ಲಿ ಶ್ರೀಮುರಳಿ ಜೊತೆ ನಟಿಸಿರುವ `ನಂದೇ~ ಚಿತ್ರಕ್ಕೆ ಡಬ್ ಮಾಡಿರುವೆ.ಗಾಸಿಪ್ ಕಾಲಂನಲ್ಲಿ ಹೆಸರು ಬಂದಾಗ ಏನನ್ನಿಸಿತ್ತು?

ಮುಂಚೆ ಅಳುತ್ತಿದ್ದೆ. ಇದೀಗ ಕೇರ್ ಮಾಡಲ್ಲ. ಪ್ರಬುದ್ಧವಾಗಿ ಯೋಚಿಸ್ತೀನಿ.ಕೈಬಿಟ್ಟ ಚಿತ್ರಗಳ ಬಗ್ಗೆ?

ಮುಮ್ಮುಟ್ಟಿ ಜೊತೆಗೆ `ಶಿಕಾರಿ~ ಚಿತ್ರದಲ್ಲಿ ನಟಿಸಬೇಕಿತ್ತು. ಅದು ಡೇಟ್ ಸಮಸ್ಯೆಯಿಂದ ಕೈ ತಪ್ಪಿದ್ದು ಬೇಸರ ತಂದಿದೆ. ಹೀಗೆ ಡೇಟ್ ಸಮಸ್ಯೆಯಿಂದ ಕೆಲವು ಇಷ್ಟವಾದ ಸಿನಿಮಾಗಳಲ್ಲಿ ನಟಿಸಲು ಆಗಲಿಲ್ಲ.ಬಾಲಿವುಡ್‌ನಿಂದ ಅವಕಾಶ ಬಂದರೆ?

ಸ್ಕ್ರಿಪ್ಟ್ ಚೆನ್ನಾಗಿದ್ದರೆ ನಟಿಸುವೆ. ಹರಿಪ್ರಿಯಾ ಬಾಲಿವುಡ್‌ಗೆ ಹೋದ್ಲು ಬಂದ್ಲು ಎನಿಸಿಕೊಳ್ಳಲು ಇಷ್ಟವಿಲ್ಲ.ಬಿಡುವಿನಲ್ಲಿ ಏನು ಮಾಡ್ತೀರಿ?

ಕುದುರೆ ಸವಾರಿ. ಪಿಟೀಲು ನುಡಿಸಲು ಇಷ್ಟ. ಮೈಕಟ್ಟು ಕಾಪಾಡಿಕೊಳ್ಳಲು ಜಿಮ್‌ಗೆ ಹೋಗ್ತೀನಿ. ಬ್ಯಾಡ್ಮಿಂಟನ್ ಆಡ್ತೀನಿ. ಡಯಟ್ ಅಂತ ನಿರ್ದಿಷ್ಟವಾಗಿ ಏನನ್ನೂ ಮಾಡಲ್ಲ.

                  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry