ಹರೆಯದ ದಿನಗಳಲ್ಲಿ ಸಿಂಹಾಸನವೇರಿದ ಯುವಕರು

ಸೋಮವಾರ, ಮೇ 20, 2019
30 °C

ಹರೆಯದ ದಿನಗಳಲ್ಲಿ ಸಿಂಹಾಸನವೇರಿದ ಯುವಕರು

Published:
Updated:

ಚಂದ್ರಗುಪ್ತ ಮೌರ್ಯ

ನಿಜವಾದ ಅರ್ಥದಲ್ಲಿ ಭಾರತದ ಮೊದಲ ಚಕ್ರವರ್ತಿ ಮತ್ತು ಸಾಮ್ರಾಟ ಚಂದ್ರಗುಪ್ತ ಮೌರ್ಯ (ಕ್ರಿ.ಪೂ. 340 ರಿಂದ 298).  ಬೃಹತ್ `ಮೌರ್ಯ~ ಸಾಮ್ರಾಜ್ಯ ಸ್ಥಾಪನೆಗೆ ಕಾರಣನಾದವ. ಅದಕ್ಕೆ ಮಹಾಮಂತ್ರಿ ಚಾಣಕ್ಯನ ತಂತ್ರ ಜೊತೆಗಿತ್ತು.ಈಗಿನ ಬಿಹಾರ ರಾಜ್ಯದಲ್ಲಿ ಬರುವ ಮಗಧ ರಾಜಧಾನಿಯಾಗಿಸಿಕೊಂಡು ಆಳುತ್ತಿದ್ದ ನಂದ ದೊರೆಗಳ ಅಧಿಕಾರ ನಡೆಸುತ್ತಿದ್ದರು. ಆಡು ಕಾಯುತ್ತ ಆಟವಾಡಿಕೊಂಡಿದ್ದ ಹುಡುಗ ಚಂದ್ರಗುಪ್ತನನ್ನು ಕರೆತಂದು ದೊರೆಯಾಗಿ ಮಾಡಿದವ ಚಾಣಕ್ಯ.

 

20ನೇ ವಯಸ್ಸಿಗೇ ಪ್ರಬಲ ನಂದರನ್ನು ಹಾಗೂ ಅಲೆಕ್ಸಾಂಡರ್‌ನ ನಂತರ ಅವನ ಆಡಳಿತಾಧಿಕಾರಿಯಾಗಿದ್ದ ಸೆಲ್ಯೂಕಸ್ ನಿಕಟರ್‌ನನ್ನು ನಿಯಂತ್ರಿಸಿದ ಹಿರಿಮೆ ಅವನದು.ಪೂರ್ವದಲ್ಲಿ ಅಸ್ಸಾಂನಿಂದ ಹಿಡಿದು ಪಶ್ಚಿಮದಲ್ಲಿ ಬಲೂಚಿಸ್ತಾನದ ಹಾಗೂ ದಕ್ಷಿಣದ ದಖನ್ ಪ್ರಸ್ತಭೂಮಿಯವರೆಗೆ ಸಾಮ್ರಾಜ್ಯ ವಿಸ್ತರಿಸಿದ್ದ. ಚಂದ್ರಗುಪ್ತ 42ನೇ ವಯಸ್ಸಿನಲ್ಲಿಯೇ ಜೈನಧರ್ಮದಲ್ಲಿ ಆಸಕ್ತಿ ತಳೆದು ರಾಜ್ಯ ತ್ಯಾಗ ಮಾಡಿದ. ತನ್ನ ಪುತ್ರ ಬಿಂದುಸಾರನಿಗೆ ಪಟ್ಟಾಭಿಷೇಕ ಮಾಡಿ ಗುರು ಭದ್ರಬಾಹು ಮುನಿಗಳ ಜೊತೆಗೆ ದಕ್ಷಿಣದ ಕಡೆಗೆ ಪ್ರಯಾಣ ಬೆಳೆಸಿದ. ಈಗ `ಶ್ರವಣಬೆಳಗೊಳ~ ಎಂದು ಕರೆಯಲಾಗುವ ಪ್ರದೇಶದಲ್ಲಿ ಅನ್ನ ನೀರು ತೊರೆದು `ಸಲ್ಲೇಖನ~ ವ್ರತ ಸ್ವೀಕರಿಸಿದ. ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿ `ಚಂದ್ರಗುಪ್ತ ಬಸದಿ~ ಇದೆ.

ಅಲೆಕ್ಸಾಂಡರ್

ಇಡೀ ಭೂಮಂಡಲವನ್ನೇ ಗೆಲ್ಲಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ದಂಡಯಾತ್ರೆ ಹೊರಟವನು ಗ್ರೀಕ್‌ನ ದೊರೆ ಅಲೆಕ್ಸಾಂಡರ್ (ಕ್ರಿ.ಪೂ. 356- 323). ಸಾಮ್ರಾಜ್ಯ ವಿಸ್ತರಣೆಗಾಗಿ ಪೂರ್ವದ ದೇಶಗಳ ಕಡೆಗೆ ಹೊರಟ `ಸೋಲರಿಯದ ವೀರ~ನ ಸಾಧನೆ ಅಸಾಧಾರಣ. ಕದನದಲ್ಲಿ ಎಲ್ಲರನ್ನೂ ಸೋಲಿಸುತ್ತ ತನ್ನ ಆಡಳಿತಕ್ಕೆ ಸೇರಿಸುತ್ತ ಹೊರಟವ ಅಲೆಕ್ಸಾಂಡರ್.

 

ತನ್ನ 30ನೇ ವಯಸ್ಸಿಗಾಗಲೇ ಇಡೀ ಜಗತ್ತಿನಲ್ಲಿ ಅತಿದೊಡ್ಡ ಸಾಮ್ರಾಜ್ಯ ಸ್ಥಾಪಿಸಿದ್ದ. ಅತಿದೊಡ್ಡ ಸಾಮ್ರಾಜ್ಯ ಪರ್ಷಿಯಾ ಮತ್ತು ಏಷ್ಯಾದ ಬಹುತೇಕ ಎಲ್ಲ ದೇಶಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದ್ದ. ಅಲೆಕ್ಸಾಂಡರ್ 16ನೇ ವಯಸ್ಸಿನವರೆಗೆ ಅರಿಸ್ಟಾಟಲ್‌ನ ಬಳಿ ಶಿಕ್ಷಣ ಪಡೆದ.ಆಡಳಿತ, ಪ್ರಭುತ್ವ. ಕಾವ್ಯ, ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಅರಿಸ್ಟಾಟಲ್‌ನ ಮಾರ್ಗದರ್ಶನದಲ್ಲಿ ಬೆಳೆದ ಅಲೆಕ್ಸಾಂಡರ್‌ನಿಗೆ ಹರಯದ ದಿನಗಳಲ್ಲಿಯೇ ಸೂಕ್ತ ಮಾರ್ಗದರ್ಶನ ದೊರೆತಿತ್ತು. ಜಗತ್ತನ್ನು ಗೆಲ್ಲುವ ಆಸೆಯಿಂದ ಹೊರಟ ಅಲೆಕ್ಸಾಂಡರ್ ಸಿಂಧು ನದಿಯ ಕಣಿವೆಯನ್ನು ದಾಟುತ್ತಿದ್ದಂತೆಯೇ ತನ್ನದೇ ಸೈನ್ಯದಲ್ಲಿನ ಬಂಡಾಯ ಎದುರಿಸಬೇಕಾಯಿತು.

 

ದಂಡಯಾತ್ರೆಯನ್ನು ಅರ್ಧಕ್ಕೇ ನಿಲ್ಲಿಸಿ ಹೊರಟ ಅಲೆಕ್ಸಾಂಡರ್ ತನ್ನ ತಾಯ್ನಾಡು ತಲುಪುವ ಮುನ್ನವೇ ಬ್ಯಾಬಿಲೋನಿಯಾದಲ್ಲಿ 32ನೇ ವಯಸ್ಸಿನಲ್ಲಿಯೇ ಅಸಹಜ ರೀತಿಯಲ್ಲಿ ಅಸು ನೀಗಿದ.

ಟಿಪ್ಪು ಸುಲ್ತಾನ್

ಮೈಸೂರು ಸಂಸ್ಥಾನದಲ್ಲಿ ಮಿಲಿಟರಿ ಅಧಿಕಾರಿಯಾಗಿದ್ದ ಹೈದರಾಲಿ ನಂತರದ ದಿನಗಳಲ್ಲಿ ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿಸಿಕೊಂಡು ಆಡಳಿತ ನಡೆಸಲು ಆರಂಭಿಸಿದ್ದ.ಹೈದರಾಲಿಯ ಪುತ್ರ ಟಿಪ್ಪು ಸುಲ್ತಾನ್ (1782-1799) ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸೆಡ್ಡು ಹೊಡೆದು ನಿಂತ ಅಪ್ರತಿಮ ಹೋರಾಟಗಾರ. ಕನಸುಗಾರ ದೊರೆ ಟಿಪ್ಪುವಿನ ಅವಧಿಯಲ್ಲಿ ದೂರದೃಷ್ಟಿ ಮತ್ತು ಆಡಳಿತ ಕೌಶಲ್ಯ ಹೊಸ ಶಕೆ ಆರಂಭಕ್ಕೆ ಕಾರಣವಾಗಿತ್ತು.

 

ರೇಷ್ಮೆ ಬೆಳೆಯುವುದಕ್ಕೆ ಆದ್ಯತೆ ನೀಡಿದ್ದ ಟಿಪ್ಪುಗೆ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ `ರಾಕೆಟ್~ ಬಳಸಿದ ಹೆಗ್ಗಳಿಕೆ ಸಲ್ಲುತ್ತದೆ. `ಮೈಸೂರು ಹುಲಿ~ ಎಂಬ ಖ್ಯಾತಿಗೆ ಪಾತ್ರನಾಗಿದ್ದ ಟಿಪ್ಪು ಬ್ರಿಟಿಷ್‌ರ ಸಾಮ್ರಾಜ್ಯ ವಿಸ್ತರಣೆಯ ದಾಹಕ್ಕೆ ತಡೆ ಒಡ್ಡುವುದಕ್ಕಾಗಿ ಫ್ರಾನ್ಸ್‌ನ ದೊರೆ ಪ್ರಬಲ ನೆಪೋಲಿಯನ್ ಜೊತೆ ಸಂಪರ್ಕ ಕಲ್ಪಿಸಲು ಪ್ರಯತ್ನಿಸಿದ್ದ.ಎರಡನೇ ಆಂಗ್ಲೋ-ಮೈಸೂರು ಯದ್ಧದಲ್ಲಿ ಬ್ರಿಟಿಷರಿಗೆ ಸೋಲಿನ ರುಚಿ ಉಣಿಸಿದ್ದ ಟಿಪ್ಪು ನಂತರದ ದಿನಗಳಲ್ಲಿ ನೆರೆಯ ರಾಜ್ಯದ ದೊರೆಗಳು ಬ್ರಿಟಿಷರ ಜೊತೆ ಸೇರಿದ್ದರಿಂದ ಹಿನ್ನೆಡೆ ಅನುಭವಿಸಬೇಕಾಯಿತು. ಸ್ವತಃ ತನ್ನ ಮಕ್ಕಳನ್ನೇ ಒತ್ತೆ ಇಡುವ ಸ್ಥಿತಿ ನಿರ್ಮಾಣವಾದರೂ ಹಿಂದೇಟು ಹಾಕಲಿಲ್ಲ. ತನ್ನದೇ ಆಸ್ಥಾನದ ವಂಚಕರು ಕೈ ಜೋಡಿಸಿದ್ದರಿಂದ ಹಿಮ್ಮೆಟ್ಟಿದ ಟಿಪ್ಪು ತನ್ನ 48ನೇ ವಯಸ್ಸಿನಲ್ಲಿ ರಣರಂಗದಲ್ಲಿ ಹೋರಾಡುತ್ತಲೇ ಅಸು ನೀಗಿದ.ಹುಮಾಯೂನ್

ಭಾರತದ ಮೇಲೆ ದಂಡೆತ್ತಿ ಬಂದು ಮೊಗಲ್ ಸಾಮ್ರಾಜ್ಯ ಸ್ಥಾಪಿಸಿದ ಬಾಬರನ ಪುತ್ರ ಹುಮಾಯೂನ್. ನಸೀರುದ್ದೀನ್ ಮಹಮೂದ್ ಹುಮಾಯೂನ್ ಹುಟ್ಟಿದ್ದು ಕಾಬೂಲ್‌ನಲ್ಲಿ (1508). ಬಾಬರ್‌ನ ನಂತರ ತನ್ನ 22ನೇ ವಯಸ್ಸಿನಲ್ಲಿಯೇ (1530) ದೆಹಲಿಯ ಸಿಂಹಾಸನ ಏರಿದ ಹುಮಾಯೂನ್ ತನ್ನ ಔದಾರ್ಯದ ಕಾರಣದಿಂದ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯುವುದು ಸಾಧ್ಯವಾಗಲಿಲ್ಲ.ಶೇರ್ ಶಹಾ ಸೂರಿಯ ಕೈಯಲ್ಲಿ ಸೋಲುಂಡು ತಲೆ ಮರೆಸಿಕೊಂಡು ಓಡಾಡಬೇಕಾಯಿತು. ಅದೇ ದಿನಗಳಲ್ಲಿಯೇ ಅಕ್ಬರ್ ಹುಟ್ಟಿದ. ನಂತರ ಪರ್ಷಿಯನ್ ಸೈನ್ಯದ ನೆರವಿನಿಂದ ದೆಹಲಿಯನ್ನು ಮರಳಿ ಪಡೆದ ಹುಮಾಯೂನ್ ಪರ್ಷಿಯಾದ ಕಲೆ, ಸಂಸ್ಕೃತಿ ಭಾರತದಲ್ಲಿ ನೆಲೆಸುವಂತಾಗಲು ಕಾರಣನಾದ.ಪೋರ್ಚುಗೀಸರಿಗೆ ವ್ಯಾಪಾರ ನಡೆಸಲು ಅನುವು ಮಾಡಿಕೊಟ್ಟ ಹುಮಾಯೂನ್ ತಂದೆ ಹಾಕಿಕೊಟ್ಟ ಸಾಮ್ರಾಜ್ಯವನ್ನು ವಿಸ್ತರಿಸಿದ್ದ. ದೈವಭಕ್ತನಾಗಿದ್ದ ಈತ ಮಸೀದಿಯಿಂದ ನಮಾಜ್‌ನ ಕರೆ ಕೇಳಿದಾಗಲೆಲ್ಲ ಮಂಡಿಯೂರಿ ಗೌರವ ಸೂಚಿಸುವ ಪರಿಪಾಠ ಇಟ್ಟುಕೊಂಡಿದ್ದ.1556ರ ಜನವರಿ 27ರಂದು ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಗ್ರಂಥಾಲಯದ ಮೆಟ್ಟಿಲು ಇಳಿಯುವ ಸಂದರ್ಭದಲ್ಲಿ ನಮಾಜ್‌ನ ಕರೆ ಕೇಳಿಸಿತು. ಮಂಡಿಯೂರಿದ ಹುಮಾಯೂನ್‌ನ ಕಾಲಿಗೆ ನಿಲುವಂಗಿ ಸಿಲುಕಿದ್ದರಿಂದ ಮೆಟ್ಟಿಲಿನಿಂದ ಉರುಳಿ ಬಿದ್ದು ಗಾಯಗೊಂಡ. ಅದಾದ ಹದಿಮೂರು ದಿನಗಳ ನಂತರ ಹುಮಾಯೂನ್ ಮೃತಪಟ್ಟ. ಅವನ ನಂತರ 13 ವಯಸ್ಸಿನ ಅಕ್ಬರ್ ಸಿಂಹಾಸನ ಏರಿದ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry