ಹರ್ಷಲ್ ಬಿರುಗಾಳಿಗೆ ಆತಿಥೇಯರು ತತ್ತರ

7
ರಣಜಿ: ಕರ್ನಾಟಕಕ್ಕೆ ಫಾಲೋಆನ್, ಕುನಾಲ್ ಶತಕ

ಹರ್ಷಲ್ ಬಿರುಗಾಳಿಗೆ ಆತಿಥೇಯರು ತತ್ತರ

Published:
Updated:
ಹರ್ಷಲ್ ಬಿರುಗಾಳಿಗೆ ಆತಿಥೇಯರು ತತ್ತರ

ಹುಬ್ಬಳ್ಳಿ: ಸೋಮವಾರದ  ಸುಡುಬಿಸಿಲಿನಲ್ಲಿ ಬೆಂಕಿಯುಂಡೆಗಳನ್ನು ಎಸೆದ ಮಧ್ಯಮ ವೇಗಿ ಹರ್ಷಲ್ ಪಟೇಲ್ ಕರ್ನಾಟಕ ತಂಡದ `ಹರ್ಷ'ವನ್ನು ಕಿತ್ತುಕೊಂಡು, ಇನಿಂಗ್ಸ್ ಹಿನ್ನಡೆಯ ಬಿಸಿ ಮುಟ್ಟಿಸಿದರು!ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ತ್ತಿರುವ ರಣಜಿ ಟ್ರೋಫಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ    ಹರ್ಷಲ್ ಪಟೇಲ್ (21-1-79-5) ಶಿಸ್ತಿನ ಬೌಲಿಂಗ್ ಮುಂದೆ ಆತಿಥೇಯ ತಂಡದ ಅನುಭವಿ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಮರೆತಂತೆ ಕಂಡುಬಂದಿತು. ಇದರಿಂದಾಗಿ ಹರಿಯಾಣ ತಂಡವು ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿ, ಕರ್ನಾಟಕಕ್ಕೆ ಫಾಲೋ ಆನ್ ನೀಡಿತು.ಭಾನುವಾರ ಹರಿಯಾಣ ತಂಡವು ಮೊದಲ ಇನಿಂಗ್ಸ್‌ನಲ್ಲಿ ನೀಡಿದ್ದ 587 ರನ್‌ಗಳ ಗುರಿಗೆ ಉತ್ತರವಾಗಿ, ಕರ್ನಾಟಕ ಕೇವಲ 272 ರನ್ ಗಳಿಸಿ, 315 ರನ್ನುಗಳ ಹಿನ್ನಡೆ ಅನುಭವಿಸಿತು. 437 ರನ್ ಗಳಿಸಿದ್ದರೆ ಫಾಲೋಆನ್ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಇಡೀ ಇನಿಂಗ್ಸ್‌ನಲ್ಲಿ ಒಂದೇ ಒಂದು ವೈಡ್‌ಬಾಲ್ ಹಾಕದ ಹರಿಯಾಣದ ಬೌಲಿಂಗ್ ಮುಂದೆ ಆತಿಥೇಯರು ಶರಣಾದರು.ಆದರೆ ತಮ್ಮ ಜೀವನದ ಮೂರನೇ ರಣಜಿ ಪಂದ್ಯ ಆಡುತ್ತಿರುವ ಕುನಾಲ್ ಕಪೂರ್  (106; 6268ನಿಮಷ; 202ಎಸೆತ, 10ಬೌಂಡರಿ, 1ಸಿಕ್ಸರ್) ಚೊಚ್ಚಲ ಶತಕ ಮಾತ್ರ ಮೈದಾನಕ್ಕೆ ಆಗಮಿಸಿದ್ದ ಎರಡು ಸಾವಿರಕ್ಕೂ ಹೆಚ್ಚು ಜನರ ಮನದಲ್ಲಿ ಅಚ್ಚೊತ್ತಿತು. ಅರ್ಧಶತಕ ಗಳಿಸಿದ ರಾಬಿನ್ ಉತ್ತಪ್ಪ (51; 59ಎಸೆತ, 101ನಿಮಿಷ, 7ಬೌಂಡರಿ) ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಇನಿಂಗ್ಸ್ ಕಟ್ಟುವಂತಹ ಆಟವಾಡಲೇ ಇಲ್ಲ. ಅನುಭವಿ ಆಟಗಾರರೆಲ್ಲರೂ ವೇಗವಾಗಿ ರನ್ ಗಳಿಸುವ ಗುರಿಯಿಂದ ಬ್ಯಾಟ್ ಬೀಸಿ ವಿಕೆಟ್ ತೆತ್ತರು. ಆದರೆ ಕುನಾಲ್ ಮಾತ್ರ ಕೊನೆಯವರೆಗೂ ನಿಂತು ಶತಕ ಗಳಿಸಿದರು. ಫಾಲೋಆನ್ ಸ್ವೀಕರಿಸಿ ಎರಡನೇ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ದಿನದಾಟದ ಅಂತ್ಯಕ್ಕೆ 16 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 63 ರನ್ ಗಳಿಸಿದೆ.  ಪಂದ್ಯದ ಕೊನೆಯ ದಿನವಾದ ಮಂಗಳವಾರ ಮೊದಲ ಇನಿಂಗ್ಸ್‌ನ ಬಾಕಿಯ  252 ರನ್‌ಗಳನ್ನು ಲೆಕ್ಕ ಚುಕ್ತಾ ಮಾಡಿ, ಒಂದು ಅಂಕ ಪಡೆಯುವ ಅವಕಾಶ ಉಳಿದಿದೆ.  ಇದಕ್ಕೂ ಮುನ್ನವೇ ಆಲೌಟ್ ಆಗಿಬಿಟ್ಟರೆ, ಹರಿಯಾಣಕ್ಕೆ ಬೋನಸ್ ಅಂಕದೊಂದಿಗೆ ಗೆಲುವು ಒಲಿಯುತ್ತದೆ. ಹರ್ಷಲ್ ಬಿರುಗಾಳಿ: ಪಂದ್ಯದ ಆರಂಭಕ್ಕೂ ಮುನ್ನ ಫೆವರಿಟ್ ಆಗಿದ್ದ ಸ್ಟುವರ್ಟ್ ಬಿನ್ನಿ ಬಳಗವು  ಮಂಗಳವಾರದ ಕ್ರಿಸ್‌ಮಸ್ ಹಬ್ಬದಂದು ಗೆಲುವಿನ ಸಿಹಿ ಸವಿಯುವ ಇರಾದೆಯಲ್ಲಿತ್ತು. ಟಾಸ್ ಗೆದ್ದು ಫೀಲ್ಡಿಂಗ್‌ಗೆ ಇಳಿದ ಆತಿಥೇಯರು ಹರಿಯಾಣ ತಂಡವನ್ನು (167ಕ್ಕೆ 7) ಸಂಕಷ್ಟಕ್ಕೂ ತಳ್ಳಿದ್ದರು. ಆದರೆ, ಅಮಿತ್ ಮಿಶ್ರಾ ಮತ್ತು ಜಯಂತ್ ಯಾದವ್ ಅವರ ದ್ವಿಶತಕಗಳ ದಾಖಲೆ ಕರ್ನಾಟಕದ ಗೆಲುವಿನ ಕನಸನ್ನು ಮಂಕಾಗಿಸಿತು. ಇನಿಂಗ್ಸ್ ಮುನ್ನಡೆಯ ಮೂರು ಅಂಕಗಳನ್ನಾದರೂ ಗಳಿಸುವ ಆಸೆಗೂ ಹರ್ಷಲ್ ಪಟೇಲ್ ತಣ್ಣೀರು ಸುರಿದರು. ನಿನ್ನೆ ದಿನದಾಟದ ಅಂತ್ಯಕ್ಕೆ 11 ರನ್ ಗಳಿಸಿದ್ದ ಕರ್ನಾಟಕದ ಆರಂಭಿಕ ಆಟಗಾರರಾದ  ಉತ್ತಪ್ಪ  ಮತ್ತು ಕೆ.ಎಲ್. ರಾಹುಲ್ (15; 46ನಿ, 27ಎಸೆತ, 1ಬೌಂಡರಿ) ಸೋಮವಾರ ಉತ್ತಮ ಆರಂಭ ನೀಡಿದರು. ಆದರೆ ಹತ್ತನೇ ಓವರ್‌ನಲ್ಲಿ  ಪಟೇಲ್ ಮೊದಲ ಆಘಾತ ನೀಡಿದರು. ಮೈಸೂರಿನಲ್ಲಿ ಶತಕ ಗಳಿಸಿದ್ದ ರಾಹುಲ್, ಹರ್ಷಲ್ ಎಸೆತವನ್ನು ಪಾಯಿಂಟ್‌ನತ್ತ ಹೊಡೆಯುವ ಯತ್ನದಲ್ಲಿ ಅಭಿಮನ್ಯು ಖೋಡ್‌ಗೆ ಸುಲಭ ಕ್ಯಾಚ್ ನೀಡಿದರು.ನಂತರ ಬಂದ ಕುನಾಲ್ ಕಪೂರ್ ಕೂಡ ಬಿರುಸಿನ ಆಟಕ್ಕೆ ನಿಂತರು. 17ನೇ ಓವರ್‌ನಲ್ಲಿ ಪಟೇಲ್ ಎಸೆತವನ್ನು ಸಿಕ್ಸರ್ ಎತ್ತಿದರು.  ಇನ್ನೊಂದು ಬದಿಯಲ್ಲಿದ್ದ ರಾಬಿನ್,  ಮಿಶ್ರಾ ಓವರ್‌ನಲ್ಲಿ ಸತತ ಎರಡು ಬೌಂಡರಿ ಗಳಿಸುವ ಮೂಲಕ ಅರ್ಧಶತಕದ ಗಡಿ ದಾಟಿದರು. ಸ್ವಲ್ಪ ಹೊತ್ತಿನ ನಂತರ ಮಿಶ್ರಾ ಓವರ್‌ನಲ್ಲಿಯೇ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಮನೀಷ್ ಪಾಂಡೆ ಕೂಡ ಬೇಗನೇ ನಿರ್ಗಮಿಸಿದರು. ಮೈಸೂರಿನಲ್ಲಿ ದ್ವಿಶತಕ ಸಿಡಿಸಿದ್ದ ಸಿ.ಎಂ. ಗೌತಮ್ ಆಗಮಿಸಿ, ಕುನಾಲ್ ಕಪೂರ್ ಜೊತೆಗೆ ಜೊತೆಯಾಟ ಕುದುರಿಸಿದ್ದರು. ಇದರಿಂದಾಗಿ ಊಟದ ವೇಳೆಗೆ ತಂಡದ ಮೊತ್ತ 138ಕ್ಕೆ ಮುಟ್ಟಿತ್ತು.  ವಿರಾಮದ ನಂತರದ ಎರಡನೇ ಓವರ್‌ನಲ್ಲಿ ಪಟೇಲ್ ಎಸೆತಕ್ಕೆ ಎಲ್‌ಬಿಡಬ್ಲ್ಯು ಆದ ಗೌತಮ್ ಹೊರ ನಡೆದರು. ನಂತರ ಬಂದ ನಾಯಕ ಸ್ಟುವಟ್ ಬಿನ್ನಿ (22; 20ಎಸೆತ, 2ಬೌಂಡರಿ) ಕುನಾಲ್ ಜೊತೆಗೆ 5ನೆ ವಿಕೆಟ್‌ಗೆ 56 ರನ್ ಸೇರಿಸಿದರು. ಜೋಗಿಂದರ್ ಬೌಲಿಂಗ್‌ನಲ್ಲಿ ಬಿನ್ನಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಗಣೇಶ್ ಸತೀಶ್ ಬದಲಿಗೆ ಸ್ಥಾನ ಪಡೆದಿರುವ ಅಮಿತ್ ವರ್ಮಾ ಮೂರು ರನ್ ಗಳಿಸಿ ಜೋಗಿಂದರ್ ಬೌಲಿಂಗ್‌ನಲ್ಲಿಯೇ ವಿಕೆಟ್‌ಕೀಪರ್ ಸೈನಿಗೆ ಕ್ಯಾಚಿತ್ತರು.   ಕುನಾಲ್ ಜೊತೆಗೆ ಸೇರಿದ ಎಸ್.ಎಲ್. ಅಕ್ಷಯ್  ಮೊತ್ತವನ್ನು 200ರ ಗಡಿ ದಾಟಿಸಿದರು. ಎಂಟು ರನ್ ಗಳಿಸಿದ್ದ ಅಕ್ಷಯ್, ಎದೆಯುದ್ದ ಪುಟಿದ ಎಸೆತವನ್ನು ಹೊಡೆಯುವ ಯತ್ನದಲ್ಲಿ ಗಲ್ಲಿ ಫೀಲ್ಡರ್ ರಾಹುಲ್ ದಲಾಲ್‌ಗೆ ಕ್ಯಾಚ್ ನೀಡಿ, ಹರ್ಷಲ್ ಪಟೇಲ್‌ಗೆ ಮೂರನೇ ವಿಕೆಟ್ ಆದರು.ನಂತರದ ಎಸೆತದಲ್ಲಿ `ಬೆಳಗಾವಿ ಹುಡುಗ' ರೋನಿತ್ ಮೋರೆಯ ಆಫ್‌ಸ್ಟಂಪ್ ಕಿತ್ತ ಪಟೇಲ್ ಹ್ಯಾಟ್ರಿಕ್ ಗಳಿಸುವ ಹಾದಿಯಲ್ಲಿದ್ದರು. ಆದರೆ ಅದಕ್ಕೆ ಕೆ.ಪಿ. ಅಪ್ಪಣ್ಣ ಅವಕಾಶ ಕೊಡಲಿಲ್ಲ. ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಹೊಡೆದು, 17 ರನ್‌ಗಳಿಸಿದರು. ಆದರೆ ಅವರೂ ಪಟೇಲ್ ಬೌಲಿಂಗ್‌ನಲ್ಲಿ ದಲಾಲ್ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ 98 ರನ್ ಗಳಿಸಿದ್ದ ಕುನಾಲ್ ನಂತರದ ಓವರ್‌ನಲ್ಲಿ 2 ರನ್ ಗಳಿಸಿ ಚೊಚ್ಚಲ ಶತಕ ದಾಖಲಿಸಿದರು.

ಸ್ಕೋರ್ ವಿವರ :

ಹರಿಯಾಣ ಪ್ರಥಮ ಇನಿಂಗ್ಸ್ 176.4 ಓವರ್‌ಗಳಲ್ಲಿ 9 ವಿಕೆಟ್‌ಗೆ 587 ಡಿಕ್ಲೇರ್ಡ್‌

ಕರ್ನಾಟಕ ಪ್ರಥಮ ಇನಿಂಗ್ಸ್ 70.4 ಓವರ್‌ಗಳಲ್ಲಿ 272ಕೆ.ಎಲ್. ರಾಹುಲ್ ಸಿ ಅಭಿಮನ್ಯು ಬಿ ಹರ್ಷಲ್  15ರಾಬಿನ್ ಉತ್ತಪ್ಪ ಎಲ್‌ಬಿಡಬ್ಲ್ಯು ಬಿ ಮಿಶ್ರಾ  51ಕುನಾಲ್ ಕಪೂರ್ ಸ್ಟಂಪ್ಡ್/ ನಿತಿನ್ ಸೈನಿ ಬಿ ಅಮಿತ್ ಮಿಶ್ರಾ  106ಮನೀಶ್ ಪಾಂಡೆ ಬಿ ಮಿಶ್ರಾ  07ಸಿ.ಎಂ. ಗೌತಮ್ ಎಲ್‌ಬಿಡಬ್ಲ್ಯು ಬಿ ಹರ್ಷಲ್  21ಸ್ಟುವರ್ಟ್ ಬಿನ್ನಿ ಎಲ್‌ಬಿಡಬ್ಲ್ಯು ಬಿ ಜೋಗಿಂದರ್ ಶರ್ಮಾ  22ಅಮಿತ್ ವರ್ಮಾ ಸಿ ನಿತಿನ್‌ಸೈನಿ ಬಿ ಜೋಗಿಂದರ್ ಶರ್ಮಾ  03ಎಸ್.ಎಲ್. ಅಕ್ಷಯ್ ಸಿ ರಾಹುಲ್ ದಲಾಲ್ ಬಿ ಹರ್ಷಲ್ ಪಟೇಲ್  08ರೋನಿತ್ ಮೋರೆ ಬಿ ಹರ್ಷಲ್ ಪಟೇಲ್  00ಕೆ.ಪಿ. ಅಪ್ಪಣ್ಣ ಸಿ ರಾಹುಲ್ ದಲಾಲ್ ಬಿ ಹರ್ಷಲ್ ಪಟೇಲ್  17ಎಚ್.ಎಸ್. ಶರತ್ ಔಟಾಗದೇ  08ಇತರೆ: 14 (ಬೈ 5, ಲೆಗ್‌ಬೈ 3, ನೋಬಾಲ್ 6)ವಿಕೆಟ್ ಪತನ: 1-43 (9.1, ರಾಹುಲ್), 2-83 (20.4, ಉತ್ತಪ್ಪ), 3-96 (24.4 ಪಾಂಡೆ), 4-134 (34.1 ಗೌತಮ್), 5-190 (45.1 ಬಿನ್ನಿ), 6-198 (49.5, ವರ್ಮಾ), 7-227 (59.4 ಅಕ್ಷಯ್), 8-227 (59.5, ಮೋರೆ), 9-256 (67.6 ಅಪ್ಪಣ್ಣ), 10-272 (70.4, ಕಪೂರ್).ಬೌಲಿಂಗ್ ವಿವರ: ಮೋಹಿತ್ ಶರ್ಮಾ 14-1-65-0, ಹರ್ಷಲ್ ಪಟೇಲ್ 21-1-79-5 (ನೋಬಾಲ್ 2), ಜೋಗಿಂದರ್ ಶರ್ಮಾ 13-4-21-2, ಜಯಂತ್ ಯಾದವ್ 3-0-20-0, ಅಮಿತ್ ಮಿಶ್ರಾ 19.4-0-79-3 (ನೋಬಾಲ್ 4)ಕರ್ನಾಟಕ ದ್ವಿತೀಯ ಇನಿಂಗ್ಸ್ 16 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 63ಕೆ.ಎಲ್. ರಾಹುಲ್ ಬ್ಯಾಟಿಂಗ್  24ರಾಬಿನ್ ಉತ್ತಪ್ಪ ಬ್ಯಾಟಿಂಗ್  37ಇತರೆ: 2 (ನೋಬಾಲ್ 1, ವೈಡ್ 1)

ಬೌಲಿಂಗ್ ವಿವರ: ಮೋಹಿತ್ ಶರ್ಮಾ 7-2-37-0 (ವೈಡ್ 1, ನೋಬಾಲ್ 1), ಜೋಗಿಂದರ್ ಶರ್ಮಾ 5-0-16-0, ಹರ್ಷಲ್ ಪಟೇಲ್ 3-1-6-0, ಅಭಿಮನ್ಯು ಖೋಡ್ 1-0-4-0.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry