ಮಂಗಳವಾರ, ಜೂಲೈ 7, 2020
22 °C

ಹರ್ಷಿಕಾ ಹಾದಿ

ಎಚ್.ಎಸ್.ರೋಹಿಣಿ Updated:

ಅಕ್ಷರ ಗಾತ್ರ : | |

ಹರ್ಷಿಕಾ ಹಾದಿ

ಅಪ್ಪಟ ಕನ್ನಡತಿ ಹರ್ಷಿಕಾ ಪೂಣಚ್ಚ ಮುಗ್ಧ ನಗುವಿನ ಚೆಲುವೆ. ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವ ಈ ಕೊಡಗಿನ ಚೆಲುವೆ ಹರುಷದ ಚಿಲುಮೆಯಂಥ ನಗೆ ಉಕ್ಕಿಸುತ್ತಾ ಮಾತಿಗೆ ಕುಳಿತರು.ಯಾವ ಸಿನಿಮಾದಲ್ಲಿ ನಟಿಸುತ್ತಿರುವಿರಿ?

ಪರಿ ಮತ್ತು ಅದ್ವೈತ ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ‘ಪರಿ’ಯಲ್ಲಿ ನನ್ನದು ಶ್ರೀಮಂತನ ಮಗಳ ಪಾತ್ರ. ‘ಅದ್ವೈತ’ದಲ್ಲಿ ಗಂಭೀರ ಹುಡುಗಿಯ ಪಾತ್ರ. ಸದ್ಯಕ್ಕೆ ‘ಮುರುಳಿ ಮೀಟ್ಸ್ ಮೀರಾ’, ‘ಕ್ರೇಜಿ ಕೃಷ್ಣ’, ‘ಸೈಕಲ್’ ಬಿಡುಗಡೆಗೆ ಸಿದ್ಧವಾಗಿವೆ.ಮೊದಲ ಚಿತ್ರ ‘ಪಿಯುಸಿ’ಯ ನೆನಪು ಬರುವುದೇ?

ಖಂಡಿತವಾಗಿಯೂ. ನನ್ನನ್ನು ನಟಿಯಾಗಿ ರೂಪಿಸಿದ ಚಿತ್ರ ಅದು. ಅದರಲ್ಲಿ ನನಗೆ ವಯಸ್ಸಿಗೆ ತಕ್ಕ ಪಾತ್ರ ಸಿಕ್ಕಿತ್ತು. ನನಗಾಗ 17 ವರ್ಷ. ನಾನೂ ಫಸ್ಟ್ ಪಿಯುಸಿ ಓದುತ್ತಿದ್ದೆ.ಈಗ ಏನು ಓದುತ್ತಿರುವಿರಿ?

ಕ್ರೇಂಬ್ರಿಜ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿದ್ದೇನೆ. ನಟಿಯಾದ ನಂತರ ಗೆಳತಿಯರ ನೋಟ ಬದಲಾಗಿದೆಯೇ?

ನಾನು ಗೆಳತಿಯರೊಂದಿಗೆ ಇರುವಾಗ ನಟಿ ಎಂದು ಬೀಗುವುದಿಲ್ಲ. ಮೇಕಪ್ ಇಲ್ಲದಾಗ ಮತ್ತು ಮೇಕಪ್ ಹಾಕಿದಾಗ ನಾನು ಬೇರೆ ಬೇರೆ ರೀತಿ ಕಾಣಿಸುತ್ತೇನೆ. ಅದೇ ಪ್ಲಸ್ ಪಾಯಿಂಟ್. ಆದ್ದರಿಂದ ಗೆಳತಿಯರೊಂದಿಗೆ ಸುತ್ತಲು ಅನುಕೂಲಕರವಾಗಿದೆ. ಜನ ನನ್ನನ್ನು ಅಷ್ಟಾಗಿ ಗುರುತಿಸುವುದಿಲ್ಲ. ಕೆಲವರು ಮಾತ್ರ ಗುರುತಿಸಿ ಮಾತನಾಡಿಸಿದಾಗ ಖುಷಿಯಾಗುತ್ತದೆ.‘ಪಿಯುಸಿ’ಯಲ್ಲಿ ಮುಗ್ಧ ಹುಡುಗಿಯಾಗಿ ನಟಿಸಿದ ನಂತರ ‘ಜುಗಾರಿ’ಯಲ್ಲಿ ಗಂಭೀರ ಪಾತ್ರ ಒಪ್ಪಿಕೊಳ್ಳಲು ಕಾರಣ?

ಅದು ನನ್ನ ವಯಸ್ಸಿಗಿಂತ ಹತ್ತು ವರ್ಷ ದೊಡ್ಡ ವಯಸ್ಸಿನ ವಕೀಲೆಯ ಪಾತ್ರ. ಇದುವರೆಗೂ ನನಗೆ ತುಂಬಾ ಟಫ್ ಎನಿಸಿದ ಪಾತ್ರ ಅದು. ಅದನ್ನು ಚೆನ್ನಾಗಿ ನಿಭಾಯಿಸಿದ ಸಮಾಧಾನ ನನಗಿದೆ.

ಇದುವರೆಗೂ ಯಾವ ಯಾವ ರೀತಿಯ ಪಾತ್ರ ಮಾಡಿರುವಿರಿ?

ತುಂಬಾ ವಿಭಿನ್ನ ಎನಿಸುವ ಪಾತ್ರಗಳು ನನಗೆ ಸಿಕ್ಕವು. ಮೇಕಪ್ ಹಾಕದೇ ನಟಿಸಿದ ‘ತಮಸ್ಸು’ ಚಿತ್ರದ ಮುಸ್ಲಿಂ ಹುಡುಗಿ ಪಾತ್ರ, ‘5 ಈಡಿಯಟ್ಸ್’ ಚಿತ್ರದ ಹಾಸ್ಯ ಪಾತ್ರ, ‘ನಾರಿಯ ಸೀರೆ ಕದ್ದ’ ಚಿತ್ರದ ಬಬ್ಲಿ ಪಾತ್ರ, ‘ಜಾಕಿ’ ಚಿತ್ರದ ಯಶೋದ ಪಾತ್ರ ಹೀಗೆ ನಾನು ಭಿನ್ನ ಭಿನ್ನ ಪಾತ್ರಗಳನ್ನು ಆರಿಸಿಕೊಂಡೆ.ಮೊದಲ ಚಿತ್ರಕ್ಕೆ ನಾಯಕಿಯಾಗಿದ್ದ ನೀವು ‘ಜಾಕಿ’ ಚಿತ್ರದ ಪಾತ್ರ ಯಾಕೆ ಒಪ್ಪಿಕೊಂಡಿರಿ?

ನಿರ್ದೇಶಕ ಸೂರಿ ಅವರು ಚಿತ್ರದಲ್ಲಿ ನಿಮ್ಮದೇ ಪ್ರಮುಖ ಪಾತ್ರ ಎಂದು ಹೇಳಿದ್ದರು. ಚಿತ್ರದಲ್ಲಿ ನಾನು ನಟಿಸಿದ ಯಶೋದ ಪಾತ್ರ ನಾಯಕಿಗಿಂತಲೂ ಹೆಚ್ಚು ಮುಖ್ಯವಾದ ಪಾತ್ರ. ಚಿತ್ರದ ಕತೆ ಆ ಪಾತ್ರವನ್ನೇ ಸುತ್ತಿಕೊಂಡಿದೆ. ಚಿತ್ರ ಬಿಡುಗಡೆಯಾದ ನಂತರ ನಾಯಕಿಗಿಂತಲೂ ನನ್ನ ಪಾತ್ರ ಎಲ್ಲರ ಮೆಚ್ಚುಗೆ ಪಡೆಯಿತು. ಅದು ನನಗೆ ಬ್ರೇಕ್ ನೀಡಿದ ಮತ್ತು 100 ದಿನ ಓಡಿದ ನನ್ನ ಮೊದಲ ಚಿತ್ರ.‘ಜಾಕಿ’ ನಂತರದ ಅವಕಾಶಗಳು ಹೇಗಿವೆ?

ಅದ್ಭುತವಾಗಿದೆ. ‘ಜಾಕಿ’ಗಿಂತ ಮುಂಚೆ ನನಗೆ ಎರಡನೇ ನಾಯಕಿಯ ಪಾತ್ರಗಳಿಗೆ ಅವಕಾಶಗಳು ಬರುತ್ತಿದ್ದವು. ಇದೀಗ ಸೋಲೊ ನಾಯಕಿಯಾಗಿ ನಟಿಸಲು ಅವಕಾಶಗಳು ಬರುತ್ತಿವೆ.ನಟನೆ ನಿಮಗೆ ಹವ್ಯಾಸವೇ? ವೃತ್ತಿಯೇ?

ಸಿನಿಮಾ ನನಗೆ ಹವ್ಯಾಸ. ನಂಬರ್ ಒನ್ ಆಗಲೇಬೇಕು ಎಂದುಕೊಂಡು ಏನು ಬೇಕಾದರೂ ಮಾಡಲು ಸಿದ್ಧವಾಗುವ ಮನಸ್ಥಿತಿ ನನಗಿಲ್ಲ. ಅದರಿಂದಲೇ ನಾನು ಕಂಫರ್ಟಬಲ್ ಆಗಿದ್ದೇನೆ. ನಾನು ಎಂಜಿನಿಯರ್, ವೃತ್ತಿಪರ ಹುಡುಗಿ. ಡೀಸೆಂಟಾಗಿ ಹೇಗೆ ಇರಬೇಕೆಂದು ನನಗೆ ಗೊತ್ತು. ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸುವುದು ನನ್ನ ಮುಖ್ಯ ಗುರಿ.ಸಿನಿಮಾರಂಗದಲ್ಲಿ ಆದ ಕೆಟ್ಟ ಅನುಭವ?

ಅವರ ಹೆಸರು ಬೇಡ. ಒಂದು ಸೀಡಿ ತಂದುಕೊಟ್ಟು ಅಲ್ಲಿರುವ ಬೀಚ್ ಸಾಂಗ್‌ನಂತೆ ಡ್ರೆಸ್ ಮಾಡಿಕೊಳ್ಳಬೇಕು ಎಂದು ಹೇಳಿದರು. ನಾನು ಅದನ್ನು ನಿರಾಕರಿಸಿದೆ. ಗ್ಲಾಮರ್ ಎಂದರೆ ನನ್ನ ಪ್ರಕಾರ ಕಂಫರ್ಟಬಲ್ ಎನಿಸುವ ಉಡುಪುಗಳನ್ನು ಹಾಕಿಕೊಳ್ಳುವುದು. ಅನ್‌ಕಂಫರ್ಟ್ ಎನಿಸುವ ಮತ್ತು ನನಗೆ ಹೊಂದಿಕೆಯಾಗದೇ ಇರುವ ಉಡುಪುಗಳನ್ನು ತೊಡಲು ನನಗಿಷ್ಟವಿಲ್ಲ.ಮನೆಯಲ್ಲಿ ಬೆಂಬಲ ಹೇಗಿದೆ?

ನಾನು ನೃತ್ಯ ಕಲಿಯುವ ಆಸೆ ವ್ಯಕ್ತಪಡಿಸಿದಾಗ ತಂದೆ-ತಾಯಿ ಒಲ್ಲೆ ಎನ್ನಲಿಲ್ಲ. ಶಾಸ್ತ್ರೀಯ ನೃತ್ಯದೊಂದಿಗೆ ಪಾಶ್ಚಿಮಾತ್ಯ ನೃತ್ಯವನ್ನೂ ಕಲಿತುಕೊಂಡೆ. ಅದರಿಂದ ನನಗೆ ಎಲ್ಲಾ ರೀತಿಯ ನೃತ್ಯ ಕೊಂಚ ಮಟ್ಟಿಗೆ ಲೀಲಾಜಾಲ. ನಟಿಯಾಗಬಯಸಿದಾಗಲೂ ತಂದೆ-ತಾಯಿ ಒಪ್ಪಿದರು.ನೀವು ನಟನೆಯನ್ನು ಕಲಿತದ್ದು ಹೇಗೆ?

ನಟನೆ ಕಲಿತರೆ ಬರುವುದಿಲ್ಲ. ನಮ್ಮೊಳಗಿನಿಂದ ಅದು ಬರಬೇಕು. ಎಲ್ಲೋ ನಟನಾ ಶಾಲೆಯಲ್ಲಿ ಕಲಿತು ಅದರ ಪ್ರಯೋಗವನ್ನು ತೆರೆಯ ಮೇಲೆ ಮಾಡಿದರೆ ಅದು ಅನುಕರಣೆಯಂತೆ ಕಾಣುತ್ತದೆ. ನಮ್ಮೊಳಗೆ ನಟಿಸುವ ತುಡಿತ ಇದ್ದು, ಅದು ಹೊರಬಂದಾಗ  ಮಾತ್ರ ಅದು ಸಹಜ ಎನಿಸುತ್ತದೆ. ಹರ್ಷಿಕಾ ಇವರಂತೆ ನಟಿಸುತ್ತಾರೆ; ಇವರಂತೆ ಕಾಣುತ್ತಾರೆ ಎನಿಸಿಕೊಳ್ಳಲು ನನಗಿಷ್ಟವಿಲ್ಲ. ಹರ್ಷಿಕಾಗೆ ಪ್ರತ್ಯೇಕ ಶೈಲಿ ಇದೆ ಎನಿಸಿಕೊಳ್ಳುವಾಸೆ ನನಗೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.