ಮಂಗಳವಾರ, ಸೆಪ್ಟೆಂಬರ್ 29, 2020
27 °C

ಹಲಗೂರು: ದೂರು ನೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲಗೂರು: ದೂರು ನೂರು

ಹಲಗೂರು: ವಾಣಿಜ್ಯನಗರಿ ಹಲಗೂರು ಪುರಾಣ ಪ್ರಸಿದ್ಧ ಸ್ಥಳ. ಪಟ್ಟಣ ಪಂಚಾಯಿತಿಯ ಅರ್ಹತೆ ಇದ್ದರೂ, ಗ್ರಾಮ ಪಂಚಾಯಿತಿ ಹೊಂದಿರುವ ಗ್ರಾಮವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ.

10 ಸಾವಿರ ಜನಸಂಖ್ಯೆ ದಾಟಿರುವ ಹಲಗೂರಿನಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಗ್ರಾಮದ ವಿವಿಧ ಬಡಾವಣೆಗಳಲ್ಲಿ ವ್ಯವಸ್ಥಿತ ರಸ್ತೆ, ಚರಂಡಿ, ನೀರು ಪೂರೈಕೆ ಇಲ್ಲದೇ ಜನರು ಪರಿತಪಿಸುವಂತಾಗಿದೆ. ಇದ್ದ ಚರಂಡಿಗಳೂ ಹೂಳುಮಯವಾಗಿವೆ. ಕಾಲುದಾರಿಗಳೇ ಪ್ರಮುಖ ರಸ್ತೆಗಳಾಗಿವೆ. ಇಲ್ಲಿನ ಕಸ ವಿಲೇವಾರಿ ಸಮಸ್ಯೆಯಾಗಿದೆ.

ಅಂಗಡಿ ಬೀದಿಗಳಲ್ಲಿ ತಿರುಗಿದರೆ ಕಸದ ಗುಡ್ಡೆಗಳು ಕಾಣಿಸುತ್ತವೆ. ಆಗೊಮ್ಮೆ-ಈಗೊಮ್ಮೆ ಕಸ ತೆಗೆದರೂ ವ್ಯವಸ್ಥಿತ ಯೋಜನೆ ಇಲ್ಲದ ಪರಿಣಾಮ ಜನರು ತೊಂದರೆ ಎದುರಿಸುವಂತಾಗಿದೆ. ಸಾರ್ವಜನಿಕ ಶೌಚಾಲಯದ ಕೊರತೆ ಎದ್ದು ಕಾಣುತ್ತದೆ. ಹಲಗೂರು ವೃತ್ತ ಮತ್ತು ಬಸ್ ನಿಲ್ದಾಣದಲ್ಲಿ ಬಿಟ್ಟರೆ ಬೇರೆಡೆ ಬಯಲೇ ಶೌಚಾಲಯಗಳಾಗಿವೆ. ಹಲಗೂರು ವೃತ್ತದ ಶೌಚಾಲಯ ನಿರ್ವಹಣೆಯ ಕೊರತೆ ಪರಿಣಾಮ ರೋಗಗಳ ತಾಣವಾಗಿದೆ.

ನೀರಿನ ಸಮಸ್ಯೆಯೂ ಗ್ರಾಮವನ್ನು ಕಾಡುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಅಂಗಡಿ ಮುಂಗಟ್ಟುಗಳು ರಸ್ತೆಯನ್ನು ಅತಿಕ್ರಮಿಸಿಕೊಂಡ ಪರಿಣಾಮ ಪುಟ್‌ಪಾತ್ ಕಾಣೆಯಾಗಿದೆ. ವಾಹನಗಳ ನಡುವೆ ಜನರು ನುಸುಳಿ ಹೋಗಬೇಕಾಗಿದೆ. ಗ್ರಾಮದ ಸುತ್ತಲಿನಲ್ಲಿ ಪ್ರವಾಸಿ ತಾಣಗಳಿದ್ದು, ರಸ್ತೆಗಳು ತುಂಬಾ ಇಕ್ಕಟ್ಟಾಗಿವೆ. ರಸ್ತೆ ಅಗಲೀಕರಣ ಸುದ್ದಿ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಬಳಿಕ ತಣ್ಣಗಾಗುತ್ತದೆ. ಪ್ರಯಾಣಿಕರ ತಂಗುದಾಣ ವ್ಯಾಪಾರಸ್ಥರ ಕೇಂದ್ರವಾಗಿವೆ.

ಹಲಗೂರು ಕೆರೆ ಅಭಿವೃದ್ಧಿ ಸರಿಯಾಗಿ ಆಗಿಲ್ಲ. ಒತ್ತುವರಿ ತೆರವಿನಲ್ಲಿ ಲೋಪಗಳಾಗಿವೆ. ಕೆರೆಗೆ ನೀರು ಹರಿಸುವ ಯೋಜನೆ ಮಾಡಿಲ್ಲ. ವ್ಯವಸಾಯಕ್ಕಷ್ಟೆ ಅಲ್ಲದೆ ನಿತ್ಯಕರ್ಮಗಳಿಗೂ ಕೆರೆ ಆಶ್ರಯಿಸಿರುವವರು ಹೆಚ್ಚಿದ್ದಾರೆ. ನೀರಿಲ್ಲದ ಪರಿಣಾಮ ಜನರು ಸಂಕಟ ಎದುರಿಸುತ್ತಿದ್ದಾರೆ.

ಸಾರ್ವಜನಿಕ ಸ್ಮಶಾನ ಇಲ್ಲ. ಸ್ವಂತ ಜಾಗವಿದ್ದರೂ ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಉಳಿದವರ ತೊಂದರೆ ಹೇಳ ತೀರದು. ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸಬೇಕು ಎನ್ನುತ್ತಾರೆ ನಿವೃತ್ತ ಶಿಕ್ಷಕ ತಿಮ್ಮಪ್ಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.