ಹಲವರು ಅಸ್ವಸ್ಥ: ಡೆಂಗೆ ಜ್ವರ ಶಂಕೆ

ಸೋಮವಾರ, ಜೂಲೈ 22, 2019
24 °C

ಹಲವರು ಅಸ್ವಸ್ಥ: ಡೆಂಗೆ ಜ್ವರ ಶಂಕೆ

Published:
Updated:

ಸಿರುಗುಪ್ಪ: ತಾಲ್ಲೂಕಿನ ಗಡಿಭಾಗದ ನಾಗರಹಾಳು ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಗ್ರಾಮದ ಅನೇಕರು ಜ್ವರದಿಂದ ಬಳಲುತ್ತಿದ್ದು ನಾಲ್ಕಕ್ಕೂ ಅಧಿಕ ಜನರಿಗೆ ಡೆಂಗೆ ಜ್ವರ ಎಂದು ಭಾನುವಾರ ಶಂಕೆ ವ್ಯಕ್ತವಾಗಿದೆ.

ಡೆಂಗೆ ಎಂದು ರಕ್ತದ ಪರೀಕ್ಷೆಯಿಂದ ದೃಢಪಟ್ಟು ಬಳ್ಳಾರಿಯ ವಿಮ್ಸನಲ್ಲಿ ಒಬ್ಬರು, ಮೂರು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಗ್ರಾಮದ ಒಂದೇ ಕುಟುಂಬದ ಮೇಘನಾಥ (20) ಎಂಬವರು   ವಿಮ್ಸ ಆಸ್ಪತ್ರೆಯಲ್ಲಿ, ಚಂದ್ರು ಎಂಬವರು ಖಾಸಗಿಯ ಆಶಾ ನರ್ಸಿಂಗ್ ಹೋಂ ಮತ್ತು ಎಚ್.ಅವಿನಾಶ ಎಂಬವರು ಬಿ.ಕೆ.ಎಸ್ ಆಸ್ಪತ್ರೆಯಲ್ಲಿ ಮತ್ತು ಆದವಾನಿಯಲ್ಲಿ ಯಂಕಪ್ಪ ಎಂಬವರು ದಾಖಲಾಗಿ ಡೆಂಗೆ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಗ್ರಾಮದ ಗಿರೀಶ್‌ಗೌಡ ಭಾನುವಾರ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಅನೇಕರು ಜ್ವರದಿಂದ ಬಳಲುತ್ತಿದ್ದು, ಸಮೀಪದ ಆಂಧ್ರದ ಆದವಾನಿ ಮತ್ತು ಸಿರುಗುಪ್ಪದ ಖಾಸಗಿ ಚಿಕಿತ್ಸಾಲಯಗಳಲ್ಲಿ ಅನೇಕರು ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿಸಿದ ಅವರು, ಕೆಲವರ ರಕ್ತ ಪರೀಕ್ಷೆಯನ್ನು ಮಾಡಿಸಿದಾಗ ಡೆಂಗೆ ಜ್ವರವೆಂದು ಖಾಸಗಿ ವೈದ್ಯರು ದೃಢಪಡಿಸಿದ್ದಾರೆ. ಗ್ರಾಮದಲ್ಲಿ ಜನರು ಭಯಭೀತರಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಗ್ರಾಮ ಪಂಚಾಯ್ತಿಯವರಾಗಲಿ,, ಆರೋಗ್ಯ ಇಲಾಖೆಯವರಾಗಲೀ ಸೊಳ್ಳೆಗಳ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಗೌಡ ದೂರಿದರು.ನಾಗರಹಾಳು ಗಡಿಭಾಗದ ಹಳ್ಳಿಯಾಗಿದ್ದು ಈ ಗ್ರಾಮಕ್ಕೆ ಬಸ್ಸಿನ ಸೌಕರ್ಯವಿಲ್ಲ, ಆರೋಗ್ಯ ಸಿಬ್ಬಂದಿ ವಾರಕ್ಕೊಮ್ಮೆ ಕಾಟಾಚಾರಕ್ಕೆ ಭೇಟಿ ಕೊಡುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry