ಶುಕ್ರವಾರ, ನವೆಂಬರ್ 22, 2019
25 °C
ನಾಮಪತ್ರ ಸಲ್ಲಿಕೆ ಅಂತ್ಯ; ಕುತೂಹಲಕ್ಕೆ ತೆರೆ

ಹಲವರ ಪಕ್ಷಾಂತರ, ಅಂತಿಮವಾಗಿ ಕಣದಲ್ಲಿ ಉಳಿಯುವವರು ಯಾರು?

Published:
Updated:

ದಾವಣಗೆರೆ: ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಉಮೇದುವಾರಿಕೆ ಸಲ್ಲಿಸುವ ಮೂಲಕ ಬುಧವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತ್ಯಗೊಂಡಿತು.ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿಎಸ್ ಅಭ್ಯರ್ಥಿಗಳು ತಮ್ಮ ಅಪಾರ ಬೆಂಬಲಿಗರು, ಕಾರ್ಯಕರ್ತರ ಮೂಲಕ ಆಗಮಿಸಿದರೆ, ಹಲವಾರು ಪಕ್ಷೇತರ ಅಭ್ಯರ್ಥಿಗಳು ಸದ್ದಿಲ್ಲದೇ ಬಂದು ನಾಮಪತ್ರ ಸಲ್ಲಿಸಿದರು. ದಾವಣಗೆರೆ ದಕ್ಷಿಣದ ಕ್ಷೇತ್ರದ ಕೆಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಾಗಿ ಅಚ್ಚರಿಯ ಆದರೆ, ನಿರೀಕ್ಷಿತ ಬೆಳವಣಿಗೆಯಲ್ಲಿ ಬಿ.ಎಂ. ಸತೀಶ್ (ಕೆಜೆಪಿ), ಸೈಯದ್ ಸೈಫುಲ್ಲಾ (ಜೆಡಿಎಸ್) ನಾಮಪತ್ರ ಸಲ್ಲಿಸಿ ತಮ್ಮ ಈ ಹಿಂದಿನ ಪಕ್ಷಗಳ  ಮುಖಂಡರ ವಿರುದ್ಧ  ಹತಾಶೆ ವ್ಯಕ್ತಪಡಿಸಿ ಹರಿಹಾಯ್ದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅಭ್ಯರ್ಥಿಗಳು ಈ ವಲಸಿಗರ ಮೇಲೆ ವಾಗ್ದಾಳಿ ನಡೆಸಿದರು.ಇತ್ತ ಪಿಬಿ ರಸ್ತೆಯಲ್ಲಿ ಹಳೆ ಬಸ್‌ನಿಲ್ದಾಣದಿಂದ ರೇಣುಕ ಮಂದಿರದವರೆಗೆ ಪೊಲೀಸರು ಬ್ಯಾರಿಕೇಡ್ ಬಳಸಿ ಸಂಚಾರ ಸ್ಥಗಿತಗೊಳಿಸಿದರು. ಸಂಚಾರ ಅಸ್ತವ್ಯಸ್ತಗೊಂಡು ಕಳೆದ ಸೋಮವಾರ (ಏ. 15)ದಂತೆ ಇಂದೂ ಸಹ ಪ್ರಯಾಣಿಕರು, ತೀವ್ರ ತೊಂದರೆ ಅನುಭವಿಸಬೇಕಾಯಿತು. ಬಸ್‌ಗಳು ಮಾರ್ಗ ಬದಲಿಸಿ ಸಂಚರಿಸಿದವು. ಹೈಸ್ಕೂಲ್ ಮೈದಾನದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸಿದವು.ಬೆಳಿಗ್ಗೆ 11ರ ವೇಳೆಗೆ ದಾವಂಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ. ರವೀಂದ್ರನಾಥ್ ತಮ್ಮ ನೂರಾರು ಬೆಂಬಲಿಗರ ಜತೆ ತೆರೆದ ವಾಹನದಲ್ಲಿ ಆಗಮಿಸಿದರು. ಬಳಿಕ ಬಿ. ಲೋಕೇಶ್ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್, ಬಿಜೆಪಿಯಿಂದ ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳೇ ಮತ್ತೊಂದು ಬಾರಿ ಬೆಂಬಲಿಗರೊಂದಿಗೆ ಸಲ್ಲಿಸಿದ್ದು ಬಿಟ್ಟರೆ ಹೊಸತೇನೂ ಇರಲಿಲ್ಲ. ಮಾಯಕೊಂಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಎಚ್. ಆನಂದಪ್ಪ, ಬಿ. ಶ್ರೀನಿವಾಸ್, ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಡಾ.ವೈ. ರಾಮಪ್ಪ, ದಾವಣಗೆರೆ ಉತ್ತರ ಕ್ಷೇತ್ರದಿಂದ  ಕೆಜೆಪಿ ಅಭ್ಯರ್ಥಿ ಬಿ.ಎಸ್. ಜಗದೀಶ್, ಜೆಡಿಎಸ್‌ನಿಂದ ಸಂಗನಗೌಡ್ರು, ಪಕ್ಷೇತರರಾಗಿ ಜಮೀಲ್ ಅಹಮದ್ ಬಳ್ಳಾರಿ ಇಂದು ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರು.ಕಾಂಗ್ರೆಸ್ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಮಧ್ಯಾಹ್ನ 2.40ರ ವೇಳೆಗೆ ಅಪಾರ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಆಗಮಿಸಿದರು. ಇದೇ ಪ್ರಮಾಣದ ಜನಸಂದಣಿ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಸೈಯದ್ ಸೈಫುಲ್ಲಾ ಅವರ ಜತೆಗೂ ಇತ್ತು. ಮಾಯಕೊಂಡದ ಪಕ್ಷೇತರ ಅಭ್ಯರ್ಥಿ ಆನಂದಪ್ಪ ಅವರ ಜತೆಗೂ ಅಭಿಮಾನಿಗಳು ಕಡಿಮೆಯಿರಲಿಲ್ಲ. ನಾಸಿಕ್ ಡೋಲು, ಕಾರ್ಯಕರ್ತರ ಕೇಕೆ, ಹಾರಾರ್ಪಣೆ ಒಬ್ಬ ಅಭ್ಯರ್ಥಿಗಿಂತ ಇನ್ನೊಬ್ಬರನ್ನು ಮೀರಿಸುವಂತಿತ್ತು.

ಪ್ರತಿಕ್ರಿಯಿಸಿ (+)