ಹಲವು ಅಚ್ಚರಿಗಳ `ಧಾರವಾಡ ಓಪನ್'

7

ಹಲವು ಅಚ್ಚರಿಗಳ `ಧಾರವಾಡ ಓಪನ್'

Published:
Updated:

ಟೆನಿಸ್ ಅನೇಕ ಅಚ್ಚರಿಗಳ ಕ್ರೀಡೆ. ಟೂರ್ನಿಯ `ನೆಚ್ಚಿನ ಆಟಗಾರರು' ಎಂದು ಕರೆಸಿಕೊಳ್ಳುವವರು ಮೊದಲ ಸುತ್ತಿನಲ್ಲೇ ನಿರ್ಗಮಿಸಿ ನಿರಾಸೆ ಮೂಡಿಸುವುದು, ರ‌್ಯಾಂಕಿಂಗ್ ಪಟ್ಟಿಯಲ್ಲಿ ಹೆಸರೇ ಗಿಟ್ಟಿಸಿಕೊಳ್ಳದ ಆಟಗಾರನೊಬ್ಬ ಅಗ್ರ ಶ್ರೇಯಾಂಕಿತರಿಗೆ ಮಣ್ಣು ಮುಕ್ಕಿಸುವುದು.... ಇದೆಲ್ಲ ಟೆನಿಸ್ ಟೂರ್ನಿಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಧಾರವಾಡದಲ್ಲಿ ನಡೆದ ಕಳೆದ ಎರಡು ಎಟಿಪಿ ಟೂರ್ನಿಗಳಲ್ಲೂ ಇಂತಹ ಅನೇಕ ಅಚ್ಚರಿಯ ಫಲಿತಾಂಶಗಳು ಹೊರಹೊಮ್ಮಿದ್ದವು. ಈ ಬಾರಿಯ ಐಟಿಎಫ್ ಟೂರ್ನಿ ಸಹ ಇದಕ್ಕೆ ಹೊರತಾಗಿರಲಿಲ್ಲ.ಇದೇ ತಿಂಗಳ 10ರಿಂದ 15ರವರೆಗೆ ಧಾರವಾಡದ  ರಾಜಾಧ್ಯಕ್ಷ ಕ್ರೀಡಾಂಗಣದಲ್ಲಿ ನಡೆದ ಪುರುಷರ ಐಟಿಎಫ್ ಟೂರ್ನಿಯು ಅನೇಕ ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾಯಿತು. ಅಗ್ರ ಶ್ರೇಯಾಂಕಿತರು ಟೂರ್ನಿಯ ಅರ್ಧದಲ್ಲೇ ನಿರ್ಗಮಿಸಿದರು. ಶ್ರೇಯಾಂಕ ರಹಿತರು ಪ್ರಶಸ್ತಿಯ ಸನಿಹಕ್ಕೆ ಬಂದರು.ಟೂರ್ನಿಯಲ್ಲಿ ಸ್ಥಿರತೆ ಕಾಯ್ದುಕೊಂಡ ಏಕೈಕ ಆಟಗಾರ ಸನಮ್ ಸಿಂಗ್. ದಾವಣಗೆರೆಯಲ್ಲಿ ಪ್ರಶಸ್ತಿ ಎತ್ತಿಹಿಡಿದು ವಿಶ್ವಾಸದಲ್ಲಿದ್ದ ಚಂಡಿಗಢದ ಈ ಹುಡುಗ ಅದೇ ಪ್ರದರ್ಶನವನ್ನು ಮುಂದುವರಿಸಿದರು. ತಾವಾಡಿದ ಐದು ಪಂದ್ಯಗಳಲ್ಲೂ ಎಲ್ಲಿಯೂ ಎದುರಾಳಿಗೆ ಗೆಲುವಿನ ಅವಕಾಶವನ್ನೇ ಅವರು ಬಿಟ್ಟುಕೊಡಲಿಲ್ಲ. ಚಾಂಪಿಯನ್ ಒಬ್ಬನ ಆಟ ಹೇಗಿರಬಹುದು ಎಂಬುದನ್ನು ಸನಮ್ ಅಂಕಣದಲ್ಲಿ ತೋರಿಸಿಕೊಟ್ಟರು.ಅಚ್ಚರಿಯ ಪ್ರದರ್ಶನ ನೀಡಿದ್ದು ತಮಿಳುನಾಡಿನ ರಾಮ್‌ಕುಮಾರ್ ರಾಮನಾಥನ್. ಮೊದಲ ಸುತ್ತಿನಿಂದ ಆರಂಭಗೊಂಡು ಫೈನಲ್‌ವರೆಗೆ ಅವರ ವಿಜಯದ ಓಟ ಸ್ಮರಣೀಯ. ಕೇವಲ 17ರ ಹರೆಯದ ಈ ಹುಡುಗ ಪಂದ್ಯದಿಂದ ಪಂದ್ಯಕ್ಕೆ ಪುಟಿದೆದ್ದರು. ಖ್ಯಾತನಾಮರಿಗೆ ಪೆಟ್ಟು ನೀಡಿದರು.ಆರಂಭದಲ್ಲಿ ಅಮೆರಿಕಾದ ಕಂಡಾಲ್  ವಿಲಿಯಮ್ಸರಿಗೆ ಆಘಾತ ನೀಡಿದ ಈತ, ಮುಂದಿನ ಹಂತದಲ್ಲೇ ನಾಲ್ಕನೇ ಶ್ರೇಯಾಂಕದ ವಿಜಯಂತ್ ಮಲಿಕ್‌ಗೆ ಮನೆಯ ಹಾದಿ ತೋರಿಸಿದರು. ಮಲಿಕ್ ಗಾಯದ ಕಾರಣ ನೀಡಿ ಪಂದ್ಯದ ಅರ್ಧದಲ್ಲೇ ಹೊರನಡೆದರಾದರೂ ಅದಾಗಲೇ ರಾಮ್‌ಕುಮಾರ್ ಮುನ್ನಡೆಯಲ್ಲಿದ್ದರು. ಸೆಮಿಫೈನಲ್‌ನಲ್ಲಿನ ಅವರ ಹೋರಾಟ ಕೂಡ ಅಷ್ಟೇ ರೋಮಾಂಚಕವಾಗಿತ್ತು. ಇನ್ನೇನು ಸೋತೆಹೋಗುತ್ತೇನೆ ಎಂಬ ಹೊತ್ತಲ್ಲೂ ತಾಳ್ಮೆ ಕಳೆದುಕೊಳ್ಳದ ಹುಡುಗ ಗೆಲುವನ್ನು ತಮ್ಮತ್ತ ಸೆಳೆದುಕೊಂಡರು.ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ 1036ನೇ ರ‌್ಯಾಂಕಿಂಗ್‌ನಲ್ಲಿರುವ ರಾಮ್ ತಮ್ಮ ಈ ಗೆಲುವುಗಳಿಂದಾಗಿ   ರ‌್ಯಾಂಕಿಂಗ್ ಪಟ್ಟಿಯಲ್ಲಿ ಮುಂದಕ್ಕೆ ಜಿಗಿಯುವ ವಿಶ್ವಾಸ ವ್ಯಕ್ತಪಡಿಸಿದರು.ಸಿಂಗಲ್ಸ್ ವಿಭಾಗದಲ್ಲಿ ಟೂರ್ನಿಯ ಉದ್ದಕ್ಕೂ ವಿಜೃಂಭಿಸಿದ್ದು ಜರ್ಮನಿಯ ಟಾರ್ಸ್ಟನ್ ವಿಟೊಸ್ಕಾ. ಅನೇಕ ಸವಾಲುಗಳನ್ನು ಮೆಟ್ಟಿನಿಂತ ಅವರು ಅಷ್ಟೇ ಉತ್ತಮವಾಗಿ ಪ್ರದರ್ಶನ ನೀಡಿದರು.ಅರ್ಹತಾ ಸುತ್ತಿನಿಂದ ಟೂರ್ನಿ ಪ್ರವೇಶಿಸಿದ, ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ 1502ನೇ ಸ್ಥಾನದಲ್ಲಿರುವ ವಿಟೊಸ್ಕಾ ಮೊದಲ ಸುತ್ತಿನಲ್ಲೇ ಎಂಟನೇ ಶ್ರೇಯಾಂಕದ ಅಶ್ವಿನ್ ರಾಘವನ್‌ರನ್ನು, ಮುಂದಿನ ಸುತ್ತಿನಲ್ಲಿ ರ‌್ಯಾಂಕಿಂಗ್‌ನಲ್ಲಿ ತಮಗಿಂತ ಸಾಕಷ್ಟು ಮುಂದಿರುವ ಹಾಲೆಂಡ್‌ನ ಜೊರೊನ್ ಬರ್ನಾಡ್‌ರನ್ನು ಪರಾಭವಗೊಳಿಸಿದರು.ಟಾರ್ಸ್ಟನ್‌ಗೆ ನಿಜವಾದ ಸವಾಲು ಎದುರಾದದ್ದು ಕ್ವಾರ್ಟರ್ ಫೈನಲ್‌ನಲ್ಲಿ. ಅಲ್ಲಿ ಅವರ ಎದುರಾಳಿಯಾಗಿ ಸೆಣೆಸಿದ್ದು ಟೂರ್ನಿಯ ಅಗ್ರ ಶ್ರೇಯಾಂಕದ ಆಟಗಾರ ಶ್ರೀರಾಮ್ ಬಾಲಾಜಿ. ಆದರೆ ಟಾರ್ಸ್ಟನ್ ಎದುರು ಬಾಲಾಜಿ ಮಂಕಾದರು. ಟೆನಿಸ್ ಆಟಗಾರನ ಸ್ವಭಾವಗಳಾದ ಸಿಟ್ಟು, ನಿರಾಸೆ ಎಲ್ಲವನ್ನೂ ಟಾರ್ಸ್ಟನ್ ಅಂಕಣದಲ್ಲಿ ಹೊರಗೆಡವುತ್ತಿದ್ದ ಪರಿಯೇ ವಿಶೇಷವಾಗಿತ್ತು.ದಾವಣಗೆರೆಯಲ್ಲಿ ನಡೆದ ಐಟಿಎಫ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತ ತಲುಪಿದ್ದ ಟಾರ್ಸ್ಟನ್ ಇಲ್ಲಿಯೂ ಅದೇ ಹಂತದಲ್ಲಿ ಮುಗ್ಗರಿಸಿ ಹೊರನಡೆದದ್ದು ಮಾತ್ರ ಪುನರಾವರ್ತನೆಯಂತಿತ್ತು.ಡಬಲ್ಸ್ ವಿಭಾಗದಲ್ಲಿ ಕೂಡ ಇಂತಹದ್ದೇ ಅಚ್ಚರಿಯ ಫಲಿತಾಂಶಗಳು ಹೊರಬಂದವು. ಅಗ್ರ ಶ್ರೇಯಾಂಕಿತರಾದ ಎನ್. ಪ್ರಶಾಂತ್ ಹಾಗೂ ಅರುಣ್‌ಪ್ರಕಾಶ್ ರಾಜಗೋಪಾಲ್ ಕ್ವಾರ್ಟರ್ ಫೈನಲ್‌ನಲ್ಲೇ ನಿರ್ಗಮಿಸಿದರು. ಶ್ರೇಯಾಂಕ ರಹಿತ ಜೋಡಿಗಳಾದ ಅಮೃತ್ ನರಸಿಂಹನ್-ಮೈಕಲ್ ಶಬಾಜ್ ಹಾಗೂ ಭಾರತದ ಅಜಯ್ ಸೆಲ್ವರಾಜ್, ಅಶ್ವಿನ್ ವಿಜಯರಾಘವನ್ ಫೈನಲ್‌ನಲ್ಲಿ ಸೆಣಸಿದರು.ಇಷ್ಟೆಲ್ಲ ಅಚ್ಚರಿಗಳನ್ನು ಒಳಗೊಂಡ ಐಟಿಎಫ್ ಪ್ರೇಕ್ಷಕರನ್ನು ಮಾತ್ರ ತನ್ನತ್ತ ಸೆಳೆಯಲಿಲ್ಲ. ಟೆನಿಸ್ ಸಂಸ್ಥೆ ಸದ್ದೇ ಇಲ್ಲದೇ ಟೂರ್ನಿ ಆರಂಭಿಸಿ ಹಾಗೆಯೇ ಮುಗಿಸಿತು. ಪ್ರಚಾರವೇ ಇಲ್ಲದೇ ಪ್ರೇಕ್ಷಕರು ಇತ್ತ ಮುಖ ಮಾಡಲಿಲ್ಲ. ಹೀಗಾಗಿ ಈ ಕ್ರೀಡೆಯ ಸೊಬಗು ಸವಿಯಲು ಹೆಚ್ಚು ಮಂದಿ ಇರಲಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry