ಮಂಗಳವಾರ, ಏಪ್ರಿಲ್ 20, 2021
32 °C

ಹಲವು ಅರ್ಥಗಳ ಒಂಟಿ ಹೆಣ್ಣು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾರ್ ಆಡಳಿತಕ್ಕೆ ರಷ್ಯ ಒಳಪಟ್ಟ ದಿನಗಳವು. ಅಲ್ಲಿನ ರಾಜಕೀಯ ಪರಿಸ್ಥಿತಿ ಹೀನಾಯ ಮಟ್ಟಕ್ಕೆ ತಲುಪಿತ್ತು. ಇಂಥ ಹೊತ್ತಿನಲ್ಲಿ ಕಲಾವಿದ ಐಸಾಕ್ ಲೆವಿಟನ್ ಪ್ರಕೃತಿಯನ್ನು ಭಾವನಾತ್ಮಕವಾಗಿ ಮುಟ್ಟಲು ಹೊರಟ.



ತನ್ನಂತೆ ಕಣ್ಣೀರಿಡುತ್ತಿರುವವರಿಗೆ ಸಾಕ್ಷಿಯಾಗಿ ನಿಂತ ಪ್ರಕೃತಿ ಅವನ ಧ್ಯಾನದ ಕೇಂದ್ರವಾಯಿತು. ವಿಷಾದದ ಅಭಿವ್ಯಕ್ತಿಯಾಗಿ ಗಿಡ ಮರ ಹೂ ಬಳ್ಳಿಗಳು ಸೃಷ್ಟಿಯಾದವು. ಇಂಥ ಪ್ರಕೃತಿ ಪ್ರಿಯ ಕಲಾವಿದನ ಕುಂಚದಲ್ಲಿ ಒಮ್ಮೆಯಾದರೂ ಮಾನವಾಕೃತಿ ಮೂಡಿತ್ತೇ? ಹೌದು.



ಅದು ಸಾಧ್ಯವಾದದ್ದು ಕೇವಲ ಒಂದೇ ಒಂದು ಬಾರಿ. ನಿಸರ್ಗದ ಮಧ್ಯೆ ನಡೆಯುತ್ತಿರುವ ಹೆಣ್ಣು ಮಗಳೊಬ್ಬಳ ಚಿತ್ರಣವನ್ನು ಆತ ನೀಡಿದ್ದಾನೆ. ಆ ಕಲಾಕೃತಿಯ ಹೆಸರೇ `ಆಟಮ್ ಡೇ ಇನ್ ಸಾಕೊಲ್‌ನಿಕಿ~.



ಏರು ಯೌವ್ವನದ ಕಣ್ಣಲ್ಲಿ ಪ್ರಕೃತಿಯನ್ನು ನೋಡಿದ ಲೆವಿಟನ್‌ನ ಕೃತಿ ಅತ್ಯಂತ ಪ್ರಬುದ್ಧವಾಗಿದೆ. ಸಂಜೆಯ ಪರಿಸರ ಅದು. ಇಕ್ಕೆಲಗಳಲ್ಲಿಯೂ ಆಗಸಕ್ಕೆ ಚಾಚಿಕೊಂಡ ಕಾಡು. ಮಧ್ಯೆ ಮಧ್ಯೆ ಬಂಗಾರ ಬಣ್ಣದ ಗಿಡಗಳ ಸಾಲು. ಅನಂತಕ್ಕೆ ಚಾಚಿಕೊಂಡಂತಿರುವ ಹಾದಿ.

 

ಕೆಳಗಿನ ಹಾದಿಯಂತೆಯೇ ನೆತ್ತಿಯ ಮೇಲೂ ಒಂದು ಹಾದಿಯಿದೆ. ಅದು ಆಗಸದ ಹಾದಿ. ಅದರ ಒಂದು ಬದಿಗೆ ಯುವತಿ ನಡೆದು ಬರುತ್ತಿದ್ದಾಳೆ. ಒಂಟಿ ಹಾದಿ, ಒಂಟಿ ಹುಡುಗಿ... ಬದುಕಿನ ಒಂಟಿತನ ಅಥವಾ ಬಯಸಿದ ಏಕಾಂಗಿತನದ ಪ್ರತೀಕದಂತಿವೆ ಎರಡೂ.



ಒಂದೆರಡು ನಿಮಿಷ ಚಿತ್ರವನ್ನು ಧ್ಯಾನಿಸುತ್ತಿದ್ದಂತೆಯೇ ಅದು ಇಡಿಯಾಗಿ ನೋಡುಗರನ್ನು ತನ್ನೊಳಗೆ ಸೆಳೆಯತೊಡಗುತ್ತದೆ. ಇಡೀ ಚಿತ್ರ ನೀರವತೆಯ ಮೂಲಕವೇ ಆಕರ್ಷಿಸುತ್ತದೆ. ಮೌನ ಮಲ್ಲಿಗೆಯಾಗಿ ಅರಳುತ್ತದೆ.



ಕಲಾಕೃತಿಯ ಕೇಂದ್ರ ಬಿಂದು ಯುವತಿಯೊಬ್ಬಳ ನಡಿಗೆ. ಕಲಾವಿದನತ್ತಲೇ ನಡೆದು ಬರುತ್ತಿರುವಂತೆ ಕಾಣುವ ಆಕೆಯ ಭಂಗಿ ಅನೇಕ ಅರ್ಥಗಳನ್ನು ಹೊಮ್ಮಿಸುತ್ತದೆ. ಒಂದೆಡೆ ಏಕಾಂಗಿತನ, ಮತ್ತೊಂದೆಡೆ ನಿರ್ಭಿಡೆಯ ಹೆಜ್ಜೆಗಳು, ಮತ್ತೊಂದೆಡೆ ಯೋಚನಾ ಮಗ್ನಳಾಗಿರುವಂತೆ ಕಾಣುವ ಆಕೆಯ ಮುಖ. ಸುತ್ತಲಿನ ಪ್ರಕೃತಿ ಸ್ಫುರಿಸುವ ಭಾವವನ್ನೇ ಆಕೆಯಲ್ಲಿಯೂ ಕಲಾವಿದ ಕಂಡಿದ್ದಾನೆ.



ಯಾಕೆ ಒಬ್ಬಂಟಿ ಹುಡುಗಿಯನ್ನು ಆತ ಚಿತ್ರಿಸಿದ? ಯಾಕೆ ಆತನ ಇತರ ಕೃತಿಗಳಲ್ಲಿ ಮನುಷ್ಯಾಕೃತಿ ಕಾಣಿಸುವುದಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಆತನ ಹಿನ್ನೆಲೆಯನ್ನು ಇನ್ನಷ್ಟು ಗಮನಿಸಬೇಕು. ಹರಯದ ವೇಳೆಗೆ ಲೆವಿಟನ್ ಅನೇಕ ಸಂಕಷ್ಟಗಳನ್ನು ಎದುರಿಸಿದ್ದ.



ಅದರ ಜತೆಗೆ ಆತನನ್ನು ಬಾಧಿಸಿದ್ದು ಒಂಟಿ ಬದುಕು. ಎಲ್ಲರಂತೆ ಹುಡುಗಿಯೊಬ್ಬಳ ಕೈ ಹಿಡಿಯಬೇಕು ಎಂಬ ಆತನ ಅಪೇಕ್ಷೆ ಈಡೇರಲಿಲ್ಲ. ಅದು ಅವನೊಳಗೆ ಆಳವಾಗಿ ಬೇರೂರಿತ್ತೇ ಎಂಬ ಅನುಮಾನ ಕಲಾಕೃತಿ ನೋಡುವಾಗ ಉದ್ಭವಿಸುತ್ತದೆ.



ಕೃತಿಯಲ್ಲಿರುವ ಹುಡುಗಿಯ ಬಗ್ಗೆ ಆತನಿಗೆ ಗೌರವ ಇರಬಹುದು, ಪ್ರೀತಿ ಇರಬಹುದು. ಆ ಗೌರವಭರಿತ ಪ್ರೀತಿಯೇ ಆಕೆಗೆ ವಿಶಿಷ್ಟ ಸ್ಥಾನ ಕಲ್ಪಿಸಿರಬಹುದು. ಲೆವಿಟನ್ ಸೃಜಿಸಿದ ಏಕೈಕ ಹೆಣ್ಣು, ಏಕೈಕ ವ್ಯಕ್ತಿ ಎಂಬ ಹೆಚ್ಚುಗಾರಿಕೆ ಆಕೆಯದು.



ಒಂದರ್ಥದಲ್ಲಿ ಲೆವಿಟನ್‌ನ ಅಪಾರ ಕೀಳರಿಮೆ, ನಾಚಿಕೆಯ ಸ್ವಭಾವವನ್ನು ತೊಡೆದು ಹಾಕಿದ್ದು ಅವನ ಕಲಾಕೃತಿಗಳು. ರಾಜಕೀಯ ಕಾರಣಕ್ಕೆ ಎಲ್ಲ ಯಹೂದಿಗಳನ್ನು ಮಾಸ್ಕೋದಿಂದ ಹೊರ ಹಾಕಲಾಯಿತು. ಯಹೂದಿಯಾದ ಯುವ ಲೆವಿಟನ್ ಕನಸುಗಳು ಕೂಡ ಅದರೊಂದಿಗೆ ಭಗ್ನವಾದವು.



ಹರಕಲು ಬಟ್ಟೆ, ಬರಿದಾದ ಪಾದಗಳು ಆತನೊಳಗೆ ಎಷ್ಟು ಕೀಳರಿಮೆ ಮೂಡಿಸಿದ್ದವು ಎಂದರೆ ಆತನಿಗೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ಈತನ ಗುರು ಅಲೆಕ್ಸಿ ಸಾವ್ರಸೋವ್ `ಸೂರ್ಯನ ಬೆಳಕು ಕಾಣದೆ ನಿನ್ನ ಕಲೆ ಅಸಹ್ಯವಾಗಿದೆ~ ಎಂದು ಗುಡುಗಿದರು. ಆ ಘಟನೆಯ ಬಳಿಕವಷ್ಟೇ ಲೆವಿಟನ್ ಮನೆಯ ಹೊಸ್ತಿಲು ದಾಟಿದ್ದ!

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.