ಹಲವು ಕನಸು, ಕೆಲವು ನನಸು..

ಸೋಮವಾರ, ಮೇ 27, 2019
33 °C

ಹಲವು ಕನಸು, ಕೆಲವು ನನಸು..

Published:
Updated:

ಚಿಕ್ಕಬಳ್ಳಾಪುರ: 2007ರ ಆಗಸ್ಟ್ 23. ಚಿಕ್ಕಬಳ್ಳಾಪುರ ಪಾಲಿಗೆ ವಿಶಿಷ್ಟ ದಿನ. ಇದೇ ಸುದಿನದಂದು ಈ ಭಾಗದ ಜನರ ಬಹುವರ್ಷಗಳ ಕನಸು ನನಸಾಗಿತ್ತು. ದಶಕಗಳಿಂದ ನಡೆಸಲಾಗಿದ್ದ ಹೋರಾಟ ಫಲ ಕೊಟ್ಟಿತ್ತು. ಕೋಲಾರ ಜಿಲ್ಲೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರೂ ಭೌಗೋಳಿಕವಾಗಿ ಪ್ರತ್ಯೇಕಗೊಂಡು ಚಿಕ್ಕಬಳ್ಳಾಪುರ ಅಂದು ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತ್ತು. ಕೋಲಾರದೊಂದಿಗೆ ಗುರುತಿಸಲ್ಪಡುತ್ತಿದ್ದ ಆರು ತಾಲ್ಲೂಕುಗಳೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪುಗೊಂಡಿತ್ತು. ಹಲವು ಆಶೋತ್ತರಗಳಿಗೂ ಕಾರಣವಾಯಿತು.ಆದರೆ ವರ್ಷಗಳು ಕಳೆದಂತೆ ನಿರೀಕ್ಷಿತ ಬದಲಾವಣೆ ಅಥವಾ ಅಭಿವೃದ್ಧಿಯಾಗಲಿ ಕಂಡು ಬರಲಿಲ್ಲ ಎಂದು ಸ್ವತಃ ಜನರೇ ಬೇಸರ ವ್ಯಕ್ತಪಡಿಸುತ್ತಾರೆ. ನೂತನ ಜಿಲ್ಲೆಗೆ ಐದು ವರ್ಷ ಕಡಿಮೆ ಅವಧಿಯಾಗಿದ್ದರೂ ಶೇ 70ರ ಪ್ರಮಾಣದಲ್ಲಿಯಾದರೂ ಅಭಿವೃದ್ಧಿಯಾಬೇಕಿತ್ತು ಎಂದು ಅವರು ಅಭಿಪ್ರಾಯ ಪಡುತ್ತಾರೆ. ಏಕಕಾಲಕ್ಕೆ ಅಸ್ತಿತ್ವಕ್ಕೆ ಬಂದ ರಾಮನಗರ ಜಿಲ್ಲೆಯು ಅತ್ತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದರೆ, ಇತ್ತ ರಾಜಧಾನಿಯಿಂದ ಕೇವಲ 60 ಕಿ.ಮೀ.ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯು ಆಮೆವೇಗದಲ್ಲಿ ಸಾಗಿದೆ ಎಂಬ ಹತಾಸೆ ಜಿಲ್ಲೆಯ ಜನರಲ್ಲಿದೆ.ನೀರು ಮತ್ತು ನೀರಾವರಿ ಸಮಸ್ಯೆಯನ್ನು ತೀವ್ರ ಸ್ವರೂಪದಲ್ಲಿ ಎದುರಿಸುತ್ತಿರುವ ಜಿಲ್ಲೆಯು ಅಗತ್ಯಕ್ಕೆ ತಕ್ಕಂತೆ ಸಕಲ ಸೌಕರ್ಯಗಳನ್ನು ಪಡೆದುಕೊಂಡಿದ್ದರೆ, ಈ ವೇಳೆಗೆ ಮಾದರಿ ಜಿಲ್ಲೆಯಾಗಬೇಕಿತ್ತು ಎಂದು ಜಿಲ್ಲೆಯ ಜನರು ಪ್ರತಿಪಾದಿಸುತ್ತಾರೆ. ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಆಶ್ವಾಸನೆ ಮತ್ತು ಭರವಸೆಗಳ ಮೇರೆಗೆ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗಿದ್ದರೆ, ಬರ ಪರಿಸ್ಥಿತಿಯಲ್ಲೂ ಸಹ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದ ವಾದವನ್ನೂ ಅವರು ಮಾಡುತ್ತಾರೆ.ಐದು ವರ್ಷಗಳು ಕಳೆದರೂ ಸರ್ಕಾರದ ಬಹುತೇಕ ಇಲಾಖೆಗಳ ಕಚೇರಿಗಳು ಇನ್ನೂ ಬಾಡಿಗೆ ಕಟ್ಟಡಗಳಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಆಯಾ ಕಚೇರಿಗಳಲ್ಲಿನ ಬಹುತೇಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿ ನೆಲೆಗೊಳ್ಳದೇ ಬೆಂಗಳೂರಿನಿಂದ ಸಂಚರಿಸುತ್ತಾರೆ. ನೂತನ ಜಿಲ್ಲಾಡಳಿತ ಕಾರ್ಯನಿರ್ವಹಣೆ ಆರಂಭಿಸಿದ ದಿನದಿಂದ ಇಲ್ಲಿಯವರೆಗೆ ಜಿಲ್ಲಾ ಕಾರಾಗೃಹ, ಪ್ರಾದೇಶಿಕ ಸಾರಿಗೆ ಕಚೇರಿಯ ನೂತನ ಕಟ್ಟಡಗಳು ಮಾತ್ರವೇ ನಿರ್ಮಾಣಗೊಂಡಿದ್ದು, ಕೆಲ ಕಟ್ಟಡಗಳು ಇನ್ನೂ ನಿರ್ಮಾಣ ಹಂತದಲ್ಲಿವೆ.`ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಬದಲಾದರೂ ಜಿಲ್ಲೆ ಮಾತ್ರ ಯಥಾಸ್ಥಿತಿ ಉಳಿದುಕೊಂಡಿದೆ. ಜಿಲ್ಲೆಗೆ ಆಗಾಗ್ಗೆ ಭೇಟಿ ನೀಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರು ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ. ಮಾದರಿ ಜಿಲ್ಲೆಯನ್ನಾಗಿಸುತ್ತೇವೆ.ಅದಕ್ಕೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಬೇಕು ಎಂದು ರಾಜಕೀಯ ಮುಖಂಡರು ನೇರವಾಗಿ ಕೇಳುತ್ತಾರೆ. ಅವರ ಅಭ್ಯರ್ಥಿಗಳ ಪರ ಮತ ಚಲಾಯಿಸಿದರೆ ಮಾತ್ರವೇ ಜಿಲ್ಲೆಯ ಅಭಿವೃದ್ಧಿ. ಇಲ್ಲವಾದರೆ, ಜಿಲ್ಲೆಯ ಸ್ಥಿತಿ ಅಧೋಗತಿ ಎಂಬ ಧೋರಣೆಯನ್ನು ರಾಜಕೀಯ ಮುಖಂಡರು ಅನುಸರಿಸುವಾಗ ನೈಜ ಕಾಳಜಿ, ಕಳಕಳಿ ಮತ್ತು ಪ್ರಾಮಾಣಿಕತೆಯಿಂದ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯ~ ಎಂದು ರೈತ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ ಪ್ರಶ್ನಿಸುತ್ತಾರೆ.`ಚಿಕ್ಕಬಳ್ಳಾಪುರ ಜಿಲ್ಲೆ ಎಂದ ಕೂಡಲೇ ಇಲ್ಲಿನ ಅಭಿವೃದ್ಧಿ ಕಾರ್ಯಗಳು ನೆನಪಿಗೆ ಬರಬೇಕು. ಜನರಿಗೆ ಸೌಕರ್ಯ ಸಿಕ್ಕಿರುವುದು ಗೊತ್ತಾಗಬೇಕು. ಆದರೆ ಜಿಲ್ಲೆಯೆಂದ ಕೂಡಲೇ ಇಲ್ಲಿನ ನೀರು ಮತ್ತು ನೀರಾವರಿ ಸಮಸ್ಯೆ ಗೋಚರವಾಗುತ್ತದೆ. ದಶಕದಿಂದ ನಡೆಯುತ್ತಿರುವ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಇನ್ನೂ ಫಲ ಕೊಡದಿರುವುದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಮತ್ತು ಕೊಳವೆಬಾವಿಗಳು ಬತ್ತುತ್ತಿರುವುದು ನೆನಪಿಗೆ ಬಾರದೇ ಇರುವುದಿಲ್ಲ. ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯಿಂದ ಜಿಲ್ಲೆಯು ಪಾರಾಗುವುದೇ ಕಷ್ಟ. ಅಭಿವೃದ್ಧಿಯ ಮೂಲ ಮತ್ತು ಜೀವಸೆಲೆಗಳೇ ಜೀವ ಪಡೆಯದಿರುವಾಗ ಜಿಲ್ಲೆಯು ಪ್ರಗತಿ ಸಾಧಿಸುವುದಾದರೂ ಹೇಗೆ~ ಎಂದು ವಿಷಾದಿಸುತ್ತಾರೆ. `ಅಭಿವೃದ್ಧಿಗೆ  ಕಾಲಾವಕಾಶ ಬೇಕು~

ಎಲ್ಲ ಸಮಸ್ಯೆಗಳನ್ನು ಕಡಿಮೆ ಅವಧಿಯಲ್ಲಿ ಬಗೆಹರಿಸಲು ಆಗುವುದಿಲ್ಲ. ಜಿಲ್ಲೆಯು ಅಭಿವೃದ್ಧಿಯಾಗದೇ ಸಂಪೂರ್ಣವಾಗಿ ಹಿಂದುಳಿದಿದೆ ಎಂದು ನೇರವಾಗಿ ಹೇಳಲಾಗುವುದಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹಂತ ಹಂತವಾಗಿ ಪ್ರಗತಿ ಕಾರ್ಯಗಳು ನಡೆಯುತ್ತಿರುವುದನ್ನು ಕಡೆಗಣಿಸಲಾಗುವುದಿಲ್ಲ. ನೂತನ ಕಟ್ಟಡಗಳ ನಿರ್ಮಾಣ ಕಾರ್ಯಗಳು ಅಷ್ಟೇ ಅಲ್ಲ, ಇತರ ಕಾಮಗಾರಿಗಳು ಸಹ ಮುಂದುವರಿದಿವೆ~ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದರು.`ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧಗಳ ನಿರ್ಮಾಣ ಮತ್ತು ನವೀಕರಣ ಕೈಗೆತ್ತಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಅತ್ಯುತ್ತಮ ಮಾದರಿಯ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. 24 ಗ್ರಾಮ ಪಂಚಾಯಿತಿ  ಕಟ್ಟಡಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ವಸತಿ ಸೌಲಭ್ಯಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸರ್ವಶಿಕ್ಷಣ ಅಭಿಯಾನ, ಆರೋಗ್ಯ ಜಾಗೃತಿ, ಗ್ರಾಮ ನೈರ್ಮಲ್ಯ ಮುಂತಾದ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ~ ಎಂದು ಅವರು ಹೇಳಿದರು.`ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಡಿ ವಿವಿಧ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರದ ವತಿಯಿಂದ ಕೃಷಿಕರಿಗೆ ಹೆಚ್ಚುವರಿ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಹೊಸ ಜಿಲ್ಲೆಯಾಗಿರುವ ಕಾರಣ ಎಲ್ಲವೂ ಸುಸ್ಥಿತಿಗೆ ಬರಲು ಸ್ವಲ್ಪ ಸಮಯ ಬೇಕಾಗಬಹುದು. ಆದರೆ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿದ್ದಲ್ಲಿ, ಯಾವ ಪ್ರಗತಿ ಕಾರ್ಯವೂ ಕಷ್ಟವಾಗುವುದಿಲ್ಲ~ ಎಂದು ಅವರು ತಿಳಿಸಿದರು.ಉತ್ಸವಕ್ಕೆ ಬರದ ಬರೆ.....

ಪ್ರತಿ ವರ್ಷ ಆಗಸ್ಟ್ 23 ಸಮೀಪಿಸುತ್ತಿದ್ದಂತೆ ಜಿಲ್ಲೆಯಾದ್ಯಂತ ಅದರಲ್ಲೂ ಚಿಕ್ಕಬಳ್ಳಾಪುರದಲ್ಲಿ ಒಂದು ರೀತಿಯ ಸಂಚಲನ ಕಂಡು ಬರುತಿತ್ತು. ಜಿಲ್ಲೆಯು ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಕಾಣಸಿಗುತಿತ್ತು. ಆದರೆ ಈ ಬಾರಿ ಅಂತಹ ಸಡಗರ-ಸಂಭ್ರಮಗಳೇನೂ ಇಲ್ಲ. ಕಳೆದ ಸಲದಂತೆ ಈ ಬಾರಿಯೂ ನಂದಿ ಉತ್ಸವ ನಡೆಯುವ ಸಾಧ್ಯತೆ ಕಡಿಮೆಯಿದೆ. ಕಾರಣ ಬರ ತಂದ ಆತಂಕ. 2010ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿ ಖಾನ್ ಅವರ ನೇತೃತ್ವದಲ್ಲಿ ನಂದಿ ಉತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿತ್ತು.ಉತ್ಸವದ ಉದ್ಘಾಟನೆಗೆ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲಭ್ಯವಾಗದ ಕಾರಣ ನಂದಿ ಉತ್ಸವ ನಡೆಯಲಿಲ್ಲ. ಕಳೆದ ವರ್ಷ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆಯವರು ನಂದಿ ಉತ್ಸವ ಆಚರಣೆ ಬಗ್ಗೆ ಭರವಸೆ ನೀಡಿದ್ದರು. ಆದರೆ ಆಗಲೂ ನಂದಿ ಉತ್ಸವ ನಡೆಯಲಿಲ್ಲ. ಈ ಬಾರಿಯೂ ಬರದಿಂದ ಉತ್ಸವದ ಗುಣಲಕ್ಷಣಗಳು ಕಾಣಸಿಗುತ್ತಿಲ್ಲ.

ಈಡೇರದ ಭರವಸೆ, ಜಾರಿಯಾಗದ ಕ್ರಮ

-  ನೆನಗುದಿಗೆಯಲ್ಲಿ ಶಾಶ್ವತ ನೀರಾವರಿ ಯೋಜನೆ

- ವಿಸ್ತರಣೆ ಕಾಣದ ರಸ್ತೆಗಳು

-  ತೆರವಾಗದ ಒತ್ತುವರಿ ಪ್ರದೇಶ

- ಕಾಯಕಲ್ಪ ಕಾಣದ ಗ್ರಾಮಗಳು

-  ಜಿಲ್ಲೆಗೆ ಬೇಕಿದೆ ಹೊಸ ಬಸ್ ನಿಲ್ದಾಣ

- ನಿರ್ಮಾಣಗೊಳ್ಳದ ನೂತನ ಜಿಲ್ಲಾ ಆಸ್ಪತ್ರೆ

- ಗ್ರಾಮೀಣ ಪ್ರದೇಶಕ್ಕೆ ಬಸ್ ಸೌಕರ್ಯ

ಹಿನ್ನಡೆಯಲ್ಲೂ ಕೊಂಚ ಸಮಾಧಾನ

- ತಾಲ್ಲೂಕುಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ

- ನೂತನ ಜಿಲ್ಲಾಧಿಕಾರಿ, ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಕ್ರಮ

- ಚಿಕ್ಕಬಳ್ಳಾಪುರದಲ್ಲಿ ಅಂಬೇಡ್ಕರ್ ಭವನ, ಈಜುಕೊಳ 

- ನಂದಿ ಬೆಟ್ಟದ ಅಭಿವೃದ್ಧಿ ಕಾಮಗಾರಿ

- ಸರ್ಕಾರಿ ವಸತಿ ಶಾಲೆ, ಹಾಸ್ಟೆಲ್ ಆರಂಭ

- ರೈಲು ನಿಲ್ದಾಣದ ಅಭಿವೃದ್ಧಿಗೆ ಚಾಲನೆ

- ರೈಲು ಹಳಿ ವಿಸ್ತರಣೆಗೆ ಕ್ರಮ 

- ಕಾಂಕ್ರೀಟ್ ರಸ್ತೆ ಕಂಡ ಗ್ರಾಮಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry