ಶನಿವಾರ, ಮೇ 15, 2021
23 °C

ಹಲವು ನಾಯಕರು ರಾಮುಲು ಪಕ್ಷದತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ವಿಧಾನಸಭೆಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾಗಬಹುದು ಎನ್ನುವ ಲೆಕ್ಕಾಚಾರ ನಡೆಸಿರುವ ಜಿಲ್ಲೆಯ ರಾಜಕಾರಣಿಗಳು, ಗಟ್ಟಿ ನೆಲೆಯ ಹುಡುಕಾಟದಲ್ಲಿ ನಿರತರಾಗಿದ್ದು, ಪಕ್ಷಾಂತರ ಕಾಲ ಆರಂಭವಾಗಿದೆ. ಜಿಲ್ಲೆಯ ಪ್ರಭಾವಿ ಜೆಡಿಎಸ್ ಮುಖಂಡ ಶಂಕ್ರಣ್ಣ ವಣಿಕ್ಯಾಳ ಹಾಗೂ ಅವರ ಬೆಂಬಲಿಗರು ಬಿಎಸ್‌ಆರ್ ಪಕ್ಷಕ್ಕೆ ಸೇರ್ಪಡೆ ಆಗುವ ಮೂಲಕ ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಬರೆದಂತಾಗಿದೆ.

 

ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಂಕ್ರಣ್ಣ ವಣಿಕ್ಯಾಳ, ಭಾರವಾದ ಮನಸ್ಸಿನಿಂದಲೇ ಜೆಡಿಎಸ್ ರಾಜೀನಾಮೆ ನೀಡುತ್ತಿದ್ದು, ಹಿಂದುಳಿದ ವರ್ಗಗಳ ನಾಯಕ ಬಿ. ಶ್ರೀರಾಮುಲು ಅವರ ಬಿಎಸ್‌ಆರ್ ಪಕ್ಷಕ್ಕೆ ಸೇರ್ಪಡೆ ಆಗುವುದಾಗಿ ತಿಳಿಸಿದರು.ಜೆಡಿಎಸ್ ಪಕ್ಷದ ನಾಯಕರು ಉತ್ತರ ಕರ್ನಾಟಕ ಹಾಗೂ ಅದರಲ್ಲಿಯೂ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಈ ಭಾಗದ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ. ಅಲ್ಲದೇ ಪಕ್ಷದ ಜಿಲ್ಲಾ ಘಟಕದಲ್ಲಿನ ಆಂತರಿಕ ಕಚ್ಚಾಟದಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.ಜಯಪ್ರಕಾಶ ಚಳವಳಿ ನಂತರ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಪ್ರವೇಶ ಆರಂಭಿಸಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ರಾಮಕೃಷ್ಣ ಹೆಗಡೆಯವರ ಲೋಕ ಜನಶಕ್ತಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಅವಿಭಜಿತ ಗುಲ್ಬರ್ಗ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಕಳೆದ 35 ವರ್ಷಗಳಿಂದ ರಾಜಕೀಯ ಜೀವನ ನಡೆಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿನ ಆಂತರಿಕ ಕಚ್ಚಾಟ ಹೆಚ್ಚಾಗುತ್ತಿದ್ದು, ಉತ್ತರ ಕರ್ನಾಟಕಕ್ಕೆ ಪ್ರಾಶಸ್ತ್ಯ ನೀಡದೇ ಇರುವುದರಿಂದ ಜೆಡಿಎಸ್ ಪಕ್ಷ ಅಧೋಗತಿಗೆ ಇಳಿದಿದೆ ಎಂದು ವಿಷಾದಿಸಿದರು.ಜೆಡಿಎಸ್ ನಾಯಕರು ಮೈಸೂರು ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದರಿಂದಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಶ್ರೀರಾಮಲು ಪ್ರಭಾವಿ ನಾಯಕರಾಗಿದ್ದಾರೆ. ಅಲ್ಲದೇ ಅಭಿವೃದ್ಧಿ ಮಾಡುವ ಇಚ್ಚಾಶಕ್ತಿ ಅವರಲ್ಲಿದೆ. ಅವರನ್ನು ಬೆಂಬಲಿಸುವ ಮೂಲಕ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ಏ.24 ರಂದು ಬಸವಕಲ್ಯಾಣದಿಂದ ಆರಂಭವಾಗುವ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ತಾವು ಅಧಿಕೃತವಾಗಿ ಬಿಎಸ್‌ಆರ್ ಪಕ್ಷಕ್ಕೆ ಸೇರ್ಪಡೆ ಆಗಲಿರುವುದಾಗಿ ಸ್ಪಷ್ಟಪಡಿಸಿದರು.ತಮ್ಮ ಜೊತೆ ಅವದ್ ಬಿನ್ ಚಾವೂಸ್, ಚುನ್ನುಮಿಯಾ, ಚೆನ್ನಾರೆಡ್ಡಿ, ಅನಿಲರಾಜ ತುಂಬಗಿ, ಸೋಫಿಸಾಬ ಜಮಾದಾರ, ಬಾದಲ್, ದೇವಿಂದ್ರಕುಮಾರ, ಶರಭನಗೌಡ ಮುಂತಾದವರು ಬಿಎಸ್‌ಆರ್ ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂದ ಅವರು, ಇನ್ನೂ ಹಲವು ನಾಯಕರು ಬಿಎಸ್‌ಆರ್ ಪಕ್ಷದತ್ತ ಮುಖ ಮಾಡಿದ್ದು, ಶೀಘ್ರದಲ್ಲಿಯೇ ಸ್ಪಷ್ಟ ಚಿತ್ರಣ ಹೊರಹೊಮ್ಮಲಿದೆ ಎಂದರು. ಈ ಭಾಗದ ಮೂರು ಜಿಲ್ಲೆಗಳಲ್ಲಿ ರಾಜಕೀಯ ಸ್ನೇಹಿತರಿದ್ದು, ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಬಿಎಸ್‌ಆರ್ ಪಕ್ಷವನ್ನು ಸಂಘಟಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಯಾದಗಿರಿ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ವಿಫಲವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬಿಎಸ್‌ಆರ್ ಪಕ್ಷದಿಂದ ಈ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ರೂಪಿಸುವುದಾಗಿ ತಿಳಿಸಿದರು.ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಸ್ಥಗಿತಗೊಂಡಿದೆ. ಬರಗಾಲದಿಂದ ಜನತೆ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.ಬಿಎಸ್‌ಆರ್ ಪಕ್ಷದ ಕೋರ್ ಕಮಿಟಿ ಸದಸ್ಯ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾತನಾಡಿ, ಜಿಲ್ಲಲೆಯ ಹಿರಿಯ ರಾಜಕಾರಣಿ ವಣಿಕ್ಯಾಳ ಅವರು ಬಿಎಸ್‌ಆರ್ ಪಕ್ಷಕ್ಕೆ ಸೇರ್ಪಡೆ ಆಗಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಬಸವಕಲ್ಯಾಣದಿಂದ ಆರಂಭವಾಗುವ ಶ್ರೀರಾಮುಲು ಪಾದಯಾತ್ರೆ ಕಾರ್ಯಕ್ರಮವನ್ನು ಹಿರಿಯ ಸ್ವಾತಂತ್ರ ಹೋರಾಟಗಾರರಾದ ವಿದ್ಯಾಧರ ಗುರೂಜೀ ಉದ್ಘಾಟಿಸಲಿದ್ದು, ಪಾದಯಾತ್ರೆಯುದ್ದಕ್ಕೂ ಆಯಾ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುವ ಮೂಲಕ ಗೌರವಿಸಲಾಗುವುದು ಎಂದು ಹೇಳಿದರು.ವೈ.ಎನ್.ಗೌಡರ್, ನಂದಕುಮಾರ ಮಾಲಿಪಾಟೀಲ್, ದಿಗಂಬರರಾವ ಬೆಳಮಗಿ, ಕಲ್ಯಾಣರಾವ ಅಂಬಲಗಿ ಮುಂತಾದವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.