ಹಲವು ಬಜೆಟ್‌ಗಳು ಬೇಡ

7

ಹಲವು ಬಜೆಟ್‌ಗಳು ಬೇಡ

Published:
Updated:

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಳೆದ ವರ್ಷ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ರೈತರಿಗೆ ಭಾರೀ ಅನುಕೂಲ ಮಾಡಿಕೊಡುವ `ಪ್ರಹಸನ~ ಮಾಡಿದ್ದರು.. ಅದರಿಂದ ರೈತರಿಗೆ ಕಿಂಚಿತ್ತೂ ಪ್ರಯೋಜನ ಆಗಲಿಲ್ಲ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ  ಬಜೆಟ್‌ನಲ್ಲಿ ತೆಗೆದಿರಿಸಿದ್ದ ಕೋಟ್ಯಂತರ ರೂಪಾಯಿ ಹಣ ಏನಾಯಿತು? ಈಗ ಮುಖ್ಯಮಂತ್ರಿ ಸದಾನಂದ ಗೌಡರ ಸರ್ಕಾರ `ಯುವ ಬಜೆಟ್~ ಮಂಡಿಸಲು ಮುಂದಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಅದಕ್ಕಾಗಿ ಯುವಜನರಿಂದ ಸಲಹೆ, ಸೂಚನೆಗಳನ್ನು  ಸಂಗ್ರಹಿಸುತ್ತಿದೆಯಂತೆ. ಪ್ರತಿ ವರ್ಷ ಒಂದೊಂದು ಕ್ಷೇತ್ರಕ್ಕೆ ಪ್ರತ್ಯೇಕ  ಬಜೆಟ್ ಮಂಡಿಸುತ್ತ  ಹೋದರೆ ಬಜೆಟ್‌ಗಳ ಬಾಲ ಬೆಳೆಯುತ್ತಾ ಹೋಗುತ್ತದೆಯೇ ವಿನಾ ಏನೂ ಪ್ರಯೋಜನವಿಲ್ಲ.ವಿವಿಧ ಕ್ಷೇತ್ರಗಳಿಗೆ ಕೊಡುವ ಹಣವನ್ನು ಪ್ರತ್ಯೇಕ ಬಜೆಟ್ ಹೆಸರಿನಲ್ಲಿ ಕೊಡುವುದರಿಂದ ಏನಾದೀತು? ಬಿಜೆಪಿ ಸರ್ಕಾರಕ್ಕೆ ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರಾಜ್ಯದ ಜನರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಕುಡಿಯುವ ನೀರು, ವಿದ್ಯುತ್, ಬಡತನ, ನಿರುದ್ಯೋಗದಂತಹ ಹಲವು ಪ್ರಮುಖ ಸಮಸ್ಯೆಗಳಿವೆ. ಗ್ರಾಮೀಣ ಬಡಜನರಿಗೆ ಎರಡು ಹೊತ್ತಿನ ಊಟಕ್ಕೂ ಗತಿ ಇಲ್ಲ. ವಿದ್ಯಾವಂತ ಯುವಕರಿಗೆ ಮಾಡಲು ಕೆಲಸವಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದಗಳಿಗೆ ನೇಮಕಾತಿ ಆಗುತ್ತಿಲ್ಲ.ಈ ಸಮಸ್ಯೆಗಳಿಗೆ ಗಮನ ಕೊಡದೆ ಸರ್ಕಾರ ಕೃಷಿ, ಯುವ ಬಜೆಟ್ ಮಂಡಿಸುವುದಾಗಿ ಹೇಳುತ್ತ ಜನರ ಕಿವಿಯಲ್ಲಿ ಹೂ ಇಡುವ ಕೆಲಸ ಮಾಡುತ್ತಿದೆ. ಇದರಿಂದ ಯಾರಿಗೂ ಯಾವುದೇ ಪ್ರಯೋಜನ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry